ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, August 30, 2020

Mahabharata Tatparya Nirnaya Kannada 18122_18128

 

ತದಾssಸೀನ್ಮುದ್ಗಲೋ ನಾಮ ಮುನಿಸ್ತಪಸಿ ಸಂಸ್ಥಿತಃ ।

ಚಕಮೇ ಪುತ್ರಿಕಾಂ ಬ್ರಹ್ಮೇತ್ಯಶೃಣೋತ್ ಸ ಕಥಾನ್ತರೇ ॥೧೮.೧೨೨॥

 

ಆಗ ಮುದ್ಗಲ ಎಂಬ ಹೆಸರಿನ ಮುನಿಯು ತಪಸ್ಸಿನಲ್ಲಿ ಸ್ಥಿತನಾಗಿದ್ದ. ಉಪನಿಷತ್ತಿನ ಯಾವುದೋ ಒಂದು ಕಥೆಯನ್ನು ಕೇಳುವಾಗ ‘ಬ್ರಹ್ಮನು ತನ್ನ ಮಗಳನ್ನೇ ಬಯಸಿದ’ ಎನ್ನುವುದನ್ನು ಆತ ಕೇಳಿದ.

 

ಅಪಾಹಸತ್ ಸೋsಬ್ಜಯೋನಿಂ ಶಶಾಪೈನಂ ಚತುರ್ಮ್ಮುಖಃ ।

ಭಾರತ್ಯಾದ್ಯಾಃ ಪಞ್ಚ ದೇವೀರ್ಗ್ಗಚ್ಛ ಮಾನಿನ್ನಭೂತಯೇ ॥೧೮.೧೨೩॥

 

ಮಗಳನ್ನೇ ಬಯಸಿದ ಬ್ರಹ್ಮ ಎನ್ನುವ ಪರಿಹಾಸ್ಯದಿಂದ ಮುದ್ಗಲನು ಗಟ್ಟಿಯಾಗಿ ನಕ್ಕನಂತೆ. ಆಗ  ಬ್ರಹ್ಮದೇವರು ಅವನಿಗೆ ಶಾಪಕೊಟ್ಟರು. ‘ನಾನೇ ಧರ್ಮದಲ್ಲಿ ನಡೆಯುತ್ತಿದ್ದೇನೆ ಎನ್ನುವ  ದಾರ್ಢ್ಯದಿಂದ ನೀನು ಹೀಗೆ ಅಪಹಾಸ್ಯ ಮಾಡಿರುವುದರಿಂದ, ಭಾರತೀ ಮೊದಲಾದ ಐದು ಜನ ದೇವಿಯರನ್ನು ನಿನ್ನ ಪಥನಕ್ಕಾಗಿ ಸೇರು’ ಎನ್ನುವ ಶಾಪ.

 

ಇತೀರಿತಸ್ತಂ ತಪಸಾ ತೋಷಯಾಮಾಸ ಮುದ್ಗಲಃ ।

ಶಾಪಾನುಗ್ರಹಮಸ್ಯಾಥ ಚಕ್ರೇ ಕಞ್ಜಸಮುದ್ಭವಃ ॥೧೮.೧೨೪॥

 

ಈರೀತಿಯಾಗಿ ಹೇಳಲ್ಪಟ್ಟ ಮುದ್ಗಲನು ಬ್ರಹ್ಮದೇವರನ್ನು ತಪಸ್ಸಿನಿಂದ ತೃಪ್ತಿಪಡಿಸಿದ. ತದನಂತರ ಬ್ರಹ್ಮದೇವರು ಅವನಿಗೆ ಶಾಪಾನುಗ್ರಹವನ್ನು ಮಾಡಿದರು.

 

ನ ತ್ವಂ ಯಾಸ್ಯಸಿ ತಾ ದೇವೀರ್ಮ್ಮರುತಸ್ತ್ವಚ್ಛರೀರಗಃ ।

ಯಾಸ್ಯತಿ ತ್ವಂ ಸದಾ ಮೂರ್ಚ್ಛಾಂ ಗತೋ ನೈವ ವಿಬುದ್ಧ್ಯಸೇ ॥೧೮.೧೨೫॥

 

ನಚ ಪಾಪಂ ತತಸ್ತೇ ಸ್ಯಾದಿತ್ಯುಕ್ತೇ ಚೈನಮಾವಿಶತ್ ।

ಮಾರುತೋsಥೇನ್ದ್ರಸೇನಾಂ ಚ ಗೃಹೀತ್ವಾsಥಾಭವದ್ ಗೃಹೀ ॥೧೮.೧೨೬॥

 

‘ನೀನು ಆ ದೇವಿಯರನ್ನು ಹೊಂದುವುದಿಲ್ಲ. ಏಕೆಂದರೆ ಮುಖ್ಯಪ್ರಾಣನು ನಿನ್ನ ಶರೀರದಲ್ಲಿದ್ದು ಅವರನ್ನು ಹೊಂದುತ್ತಾನೆ. ನೀನು ಸದಾ ಮೂರ್ಛೆಯನ್ನು ಹೊಂದಿ ಏಳುವುದೇ ಇಲ್ಲಾ ಮತ್ತು ನಿನಗೆ ಯಾವ ಪಾಪವೂ ಬರುವುದಿಲ್ಲ’. ಈರೀತಿಯಾಗಿ ಹೇಳಲು ಮುಖ್ಯಪ್ರಾಣನು ಮುದ್ಗಲನ ದೇಹವನ್ನು ಪ್ರವೇಶಿಸಿದ.  ಅಂತವನು ಇಂದ್ರಸೇನೆಯನ್ನು ಮದುವೆಯಾಗಿ ಗೃಹಸ್ಥನಾದ.

ಇದನ್ನೂ ಮಹಾಭಾರತದಲ್ಲಿ ಹೇಳಿದ್ದಾರೆ: ‘ಇಂದ್ರಸೇನೇತಿ ವಿಖ್ಯಾತಾ ಪುರಾ ನಾಳಾಯನೀ ಶುಭಾ । ಮುದ್ಗಲಂ ಪತಿಮಾಸಾದ್ಯ ಚಚಾರ ವಿಗತಜ್ವರಾ’ (ಆದಿಪರ್ವ ೨೧೩.೩), ನಾಳಾಯನೀ ಚೇಂದ್ರಸೇನಾ ಬಭೂವ ವಶ್ಯಾ ನಿತ್ಯಂ ಮುದ್ಗಲಸ್ಯಾsಜಮೀಢ’ (ವನಪರ್ವ ೧೧೪.೨೪),  ನಾಳಾಯನೀ ಚೇಂದ್ರಸೇನಾ ರೂಪೇಣಾಪ್ರತಿಮಾ ಭುವಿ । ಪತಿಮನ್ವಚರದ್ ವೃದ್ಧಂ ಪುರಾ ವರ್ಷಸಹಸ್ರಿಣಮ್’ (ವಿರಾಟಪರ್ವ ೨೪.೨೧)    

 

ರೇಮೇ ಚ ಸ ತಯಾ ಸಾರ್ದ್ಧಂ ದೀರ್ಘಕಾಲಂ ಜಗತ್ಪ್ರಭುಃ ।

ತತೋ ಮುದ್ಗಲಮುದ್ಬೋದ್ಧ್ಯ ಯಯೌ ಚ ಸ್ವಂ ನಿಕೇತನಮ್ ॥೧೮.೧೨೭॥

 

ಅವನು ಜಗತ್ತಿಗೇ ಒಡೆಯನಾದವನಾಗಿ ಧೀರ್ಘಕಾಲ ಅವಳ ಜೊತೆಗೆ ಕ್ರೀಡಿಸಿದ. ತದನಂತರ  ಮುದ್ಗಲನನ್ನು ಎಬ್ಬಿಸಿ, ಮುಖ್ಯಪ್ರಾಣದೇವರು ಆ ದೇಹದಿಂದ ಹೊರಟುಹೋದರು.

 

ತತೋ ದೇಶಾನ್ತರಂ ಗತ್ವಾ ತಪಶ್ಚಕ್ರೇ ಸ ಮುದ್ಗಲಃ ।

ಸೇನ್ದ್ರಸೇನಾ ವಿಯುಕ್ತಾsಥ ಭರ್ತ್ತ್ರಾ ಚಕ್ರೇ ಮಹತ್ ತಪಃ ॥೧೮.೧೨೮॥

 

ಈ ಮುದ್ಗಲನು ಅಲ್ಲಿಂದ ದೇಶಾಂತರ ಹೋಗಿ, ತಪಸ್ಸನ್ನು ಮಾಡಿದ. ಆಮೇಲೆ ಆ ಇನ್ದ್ರಸೇನೆಯು ಗಂಡನಿಂದ ವಿಯೋಗ ಹೊಂದಿದವಳಾಗಿ, ಮಹತ್ತಾದ ತಪಸ್ಸನ್ನು ಮಾಡಿದಳು.

[ಮಹಾಭಾರತದ ಆದಿಪರ್ವದಲ್ಲಿ(೨೧೩.೫)  ಹೀಗಿದೆ: ‘ತತಃ ಕದಾಚಿತ್ ಧರ್ಮಾತ್ಮಾ ತೃಪ್ತಃ ಕಾಮೈರ್ವ್ಯರಜ್ಯತ । ಅನ್ವಿಚ್ಛನ್ ಪರಮಂ ಧರ್ಮಂ ಬ್ರಹ್ಮಯೋಗಪರೋsಭವತ್’.. ಇಲ್ಲಿ ಹೇಳಿದ ಬ್ರಹ್ಮಯೋಗಪರೋsಭವತ್’ ಎನ್ನುವುದಕ್ಕೆ ಆಚಾರ್ಯರು ಈ ಎಲ್ಲಾ ವ್ಯಾಖ್ಯಾನವನ್ನು ನೀಡಿರುವುದನ್ನು ನಾವು ಗಮನಿಸಬೇಕು].

No comments:

Post a Comment