ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, August 9, 2020

Mahabharata Tatparya Nirnaya Kannada 17257_17265

 

ಸಮಸ್ತಯಾದವಾನ್ ರಣೇ ವಿಧೂಯ ತೌ ಜನಾರ್ದ್ದನಮ್ ।

ಉಪೇತ್ಯ ಚಾಂಸಗೌ ಹರೇರದಂಶತಾಂ ಸುಕರ್ಣ್ಣಕೌ ॥೧೭.೨೫೭॥

 

ಆ ಎರಡು ಭೂತಗಳು ಯುದ್ಧದಲ್ಲಿ ಎಲ್ಲಾ ಯಾದವರನ್ನೂ ಆಚೆ ಜಾಡಿಸಿ, ಪರಮಾತ್ಮನನ್ನು ಹೊಂದಿ, ಪರಮಾತ್ಮನ ಹೆಗಲಮೇಲೆ ಕುಳಿತುಕೊಂಡು ಪರಮಾತ್ಮನ ಸುಂದರವಾದ ಕಿವಿಗಳನ್ನು ಕಚ್ಚಿದವು.

 

ಸ ತೌ ಭುಜಪ್ರವೇಗತೋ ವಿಧೂಯ ಶಙ್ಕರಾಲಯೇ ।

ನ್ಯಪಾತಯದ್ ಬಲಾರ್ಣ್ಣವೋsಮಿತಸ್ಯ ಕಿಂ ತದುಚ್ಯತೇ ॥೧೭.೨೫೮॥

 

ಕೃಷ್ಣನಾದರೋ, ತನ್ನ  ಭುಜವನ್ನು ವೇಗವಾಗಿ ಜಾಡಿಸಿ, ಆ ಭೂತಗಳನ್ನು ಕೈಲಾಸದಲ್ಲಿ ಬೀಳಿಸಿದನು. ಬಲಗಳಿಗೆ ಕಡಲಿನಂತಿರುವ, ಎಣಿಯಿರದ ಬಲದವನಿಗೆ ಇದನ್ನೇನು ಅಚ್ಚರಿ ಎಂದು ಹೇಳುವುದು?    (ಭಗವಂತನ ವಿಷಯದಲ್ಲಿ ಇದೇನೂ ದೊಡ್ಡ ವಿಷಯವಲ್ಲ)

 

ಪ್ರಭಕ್ಷಯನ್ತಮೋಜಸಾ ಹಿಡಿಮ್ಬಮುದ್ಧತಂ ಬಲಮ್ ।

ಸಹೋಗ್ರಸೇನಕೋ ಯಯೌ ಪಿತಾ ಹರೇಃ ಶರಾನ್ ಕ್ಷಿಪನ್ ॥೧೭.೨೫೯॥

 

ತದನಂತರ, ಯಾದವ ಸೈನ್ಯವನ್ನು ಬಹಳ ವೇಗದಿಂದ ತಿನ್ನುತ್ತಿರುವ ದುರಾಹಂಕಾರಿ ಹಿಡಿಮ್ಬನನ್ನು, ಉಗ್ರಸೇನನಿಂದ ಕೂಡಿರುವ ಶ್ರೀಕೃಷ್ಣನ ತಂದೆಯಾದ ವಸುದೇವನು, ಬಾಣಗಳನ್ನು ಬಿಡುತ್ತಾ ಎದುರುಗೊಂಡನು. 

 

ತಯೋ ರಥೌ ಸಹಾಯುಧೌ ಪ್ರಭಕ್ಷ್ಯ ರಾಕ್ಷಸೋ ಬಲೀ ।

ಪ್ರಗೃಹ್ಯ ತಾವಭಾಷತ ಪ್ರಯಾತಮಾಶು ಮೇ ಮುಖಮ್ ॥೧೭.೨೬೦॥

 

ಅವರಿಬ್ಬರ(ಉಗ್ರಸೇನ ಹಾಗು ವಸುದೇವರ) ಆಯುಧಗಳಿಂದ ಕೂಡಿರುವ ರಥಗಳನ್ನು, ಬಲಿಷ್ಠನಾಗಿರುವ ಆ ರಾಕ್ಷಸನು ತಿಂದು, ಅವರಿಬ್ಬರನ್ನೂ ಹಿಡಿದು, ‘ಬನ್ನಿ ನನ್ನ ಮುಖಕ್ಕೆ ಎಂದು ಹೇಳಿದನು.

 

ತದಾ ಗದಾವರಾಯುಧಃ ಸಹೈವ ಹಂಸಭೂಭೃತಾ ।

ಪ್ರಯುದ್ಧ್ಯಮಾನ ಆಯಯೌ ವಿಹಾಯ ತಂ ಹಲಾಯುಧಃ ॥೧೭.೨೬೧॥

 

ಆಗ ಹಂಸನೊಂದಿಗೆ ಯುದ್ಧಮಾಡುತ್ತಿದ್ದ ಗದೆಯನ್ನು  ಬಳಸುವ ಬಲರಾಮನು ಹಂಸನನ್ನು ಬಿಟ್ಟು, ಹಿಡಿಮ್ಬನ ಬಳಿಗೆ ಓಡಿಬಂದ.

 

ತಮಾಗತಂ ಸಮೀಕ್ಷ್ಯ ತೌ ವಿಹಾಯ ರಾಕ್ಷಸಾಧಿಪಃ ।

ಉಪೇತ್ಯ ಮುಷ್ಟಿನಾsಹನದ್ ಬಲಂ ಸ ವಕ್ಷಸಿ ಕ್ರುಧಾ ॥೧೭.೨೬೨॥

 

ಬಳಿಬಂದ ಬಲರಾಮನನ್ನು ಕಂಡ ಹಿಡಿಮ್ಬನು, ವಸುದೇವ ಮತ್ತು ಉಗ್ರಸೇನನನ್ನು ಬಿಟ್ಟು, ಸಿಟ್ಟಿನಿಂದ ಬಲರಾಮನನ್ನು  ಹೊಂದಿ, ಮುಷ್ಟಿಯಿಂದ ಅವನ ಎದೆಯಮೇಲೆ ಗಟ್ಟಿಯಾಗಿ ಹೊಡೆದನು. 

 

ಉಭೌ ಹಿ ಬಾಹುಷಾಳಿನಾವಯುದ್ಧ್ಯತಾಂ ಚ ಮುಷ್ಟಿಭಿಃ ।

ಚಿರಂ ಪ್ರಯುದ್ಧ್ಯ ತಂ ಬಲೋsಗ್ರಹೀತ್ ಸ ಜಙ್ಘಯೋರ್ವಿಭುಃ ॥೧೭.೨೬೩॥

 

ಇಬ್ಬರೂ ಕೂಡಾ ಬಲಿಷ್ಠವಾದ ಕೈಯುಳ್ಳವರು. ಅವರು ತಮ್ಮ ಕೈಗಳಿಂದಲೇ ಮುಷ್ಟಿ ಯುದ್ಧ ಮಾಡಲಾರಮ್ಭಿಸಿದರು. ಬಹಳ ಕಾಲ ಯುದ್ಧಮಾಡಿದ ಮೇಲೆ ಹಿಡಿಮ್ಬನನ್ನು ಶ್ರೇಷ್ಠನಾಗಿರುವ ಬಲರಾಮನು ತನ್ನ ತೊಡೆಗಳಲ್ಲಿ ಹಿಡಿದುಕೊಂಡನು. 

 

ಅಥೈನಮುದ್ಧೃತಂ ಬಲಾದ್ ಬಲಃ ಸ ದೂರಮಾಕ್ಷಿಪತ್ ।

ಪಪಾತ ಪಾದಯೋಜನೇ ಸ ನಾsಜಗಾಮ ತಂ ಪುನಃ ॥೧೭.೨೬೪॥

 

ವಿಹಾಯ ಸೈನಿಕಾಂಶ್ಚ ತೌ ನೃಪೌ ಯಯೌ ವನಾಯ ಸಃ ।

ನಿಹತ್ಯ ತಸ್ಯ ರಾಕ್ಷಸಾನ್ ಹಲಾಯುಧೋ ನನಾದ ಹ ॥೧೭.೨೬೫ ॥

 

ತದನಂತರ ಹಿಡಿಮ್ಬನನ್ನು ಮೇಲೆತ್ತಿದ ಬಲರಾಮನು ಅವನನ್ನು ಪಾದ-ಯೋಜನ ದೂರಕ್ಕೆ ಎಸೆದನು.  ದೂರದಲ್ಲಿ ಬಿದ್ದ ಹಿಡಿಮ್ಬನು ಮತ್ತೆ ಬಲರಾಮನನ್ನು ಕುರಿತು ಬರಲೇ ಇಲ್ಲ.

ಹಿಡಿಮ್ಬ ತನ್ನ ಸೈನಿಕರನ್ನು, ಹಂಸ-ಡಿಭಕರನ್ನೂ ಕೂಡಾ ಬಿಟ್ಟು ಕಾಡಿಗೆ ಓಡಿಹೋದ. ಬಲರಾಮನು ಅವನ ಸೈನಿಕರಾಗಿರುವ ರಾಕ್ಷಸರನ್ನು ಕೊಂದು ಘರ್ಜಿಸಿದ.

[ಈ ಹಿಡಿಮ್ಬನನ್ನೇ  ಮುಂದೆ   ಭೀಮಸೇನ ಕೊಲ್ಲುವುದು]

No comments:

Post a Comment