ತದ್ದೇಹಗಾ ಭಾರತೀ ತು ಕೇಶವಂ ಶಙ್ಕರೇ ಸ್ಥಿತಮ್ ।
ತೋಷಯಾಮಾಸ ತಪಸಾ ಕರ್ಮ್ಮೈಕ್ಯಾರ್ತ್ಥಂ ಹಿ ಪೂರ್ವವತ್ ॥೧೮.೧೨೯॥
ಇನ್ದ್ರಸೇನೆಯ ದೇಹದಲ್ಲಿರುವ ಭಾರತಿಯಾದರೋ, ಹಿಂದಿನಂತೇ ಕರ್ಮೈಕ್ಯಾರ್ಥವಾಗಿ
ಶಙ್ಕರನ ಅಂತರ್ಯಾಮಿಯಾದ ಕೇಶವನನ್ನು ಕುರಿತು ತಪಸ್ಸನ್ನು ಮಾಡಿದಳು.
ಉಮಾದ್ಯಾ ರೌದ್ರಮೇವಾತ್ರ ತಪಶ್ಚಕ್ರುರ್ಯ್ಯಥಾ ಪುರಾ ।
ಪ್ರತ್ಯಕ್ಷೇ ಚ ಶಿವೇ ಜಾತೇ ತದ್ದೇಹಸ್ಥೇ ಚ ಕೇಶವೇ ॥೧೮.೧೩೦॥
ಪೃಥಕ್ಪೃಥಕ್ ಸ್ವಭರ್ತ್ತ್ರಾಪ್ತ್ಯೈ ತಾಃ ಪಞ್ಚಾಪ್ಯೇಕದೇಹಗಾಃ ।
ಪ್ರಾರ್ತ್ಥಯಾಮಾಸುರಭವತ್ ಪಞ್ಚಕೃತ್ವೋ ವಚೋ ಹಿ ತತ್ ॥೧೮.೧೩೧॥
ಪಾರ್ವತಿಯೇ ಮೊದಲಾದವರು ಇಲ್ಲಿ ಮೊದಲಿನಂತೆಯೇ ರುದ್ರ
ಸಂಬಂಧಿಯಾದ ತಪಸ್ಸನ್ನು ಮಾಡಿದರು. ಆಗ ಶಿವನೂ ಮತ್ತು ಅವನೊಳಗಿರುವ ಕೇಶವನೂ ಪ್ರತ್ಯಕ್ಷವಾಗಲು, ಅವರೆಲ್ಲರೂ ಕೂಡಾ ಬೇರೆ ಬೇರೆಯಾಗಿ ಇದ್ದು ‘ತಮ್ಮತಮ್ಮ ಗಂಡಂದಿರ ಪ್ರಾಪ್ತಿಗಾಗಿ ಪ್ರಾರ್ಥಿಸಿದರು.
[ಕೇಶವನಲ್ಲಿ ಭಾರತಿಯೂ, ಶಿವನಲ್ಲಿ ಉಳಿದ ನಾಲ್ವರು ಗಂಡಬೇಕೆಂದು ಕೇಳಿದರು. ಕೇಳಿದ್ದು ಒಮ್ಮೆ, ದೇಹ, ಮನಸ್ಸು, ವಾಗೀನ್ದ್ರಿಯ ಒಂದೇ.
ಆದರೆ ಅದರ ಹಿಂದಿನ ಅಭಿಮಾನ ಮಾತ್ರ ಐದು. ಹಾಗಾಗಿ
ಒಂದು ದೇಹದಿಂದ ಹೇಳಿದ ಮಾತು ಐದಾಗಿ ಕೇಳಿಸಿತು. ಬ್ರಹ್ಮವೈವರ್ತಪುರಾಣದ ಪ್ರಕೃತಿಖಂಡದಲ್ಲಿ (೧೪.೫೮) ಈಕುರಿತಾದ ವಿವರ
ಕಾಣಸಿಗುತ್ತದೆ: ‘ಪತಿಂ ದೇಹಿ ಪತಿಂ ದೇಹಿ
ಪತಿಂ ದೇಹಿ ತ್ರಿಲೋಚನ । ಪತಿಂ ದೇಹಿ ಪತಿಂ ದೇಹಿ ಪಞ್ಚವಾರಂ ಪತಿವ್ರತಾ’].
ಶಿವದೇಹಸ್ಥಿತೋ ವಿಷ್ಣುರ್ಭಾರತ್ಯೈ ತು ದದೌ ಪತಿಮ್ ।
ಅನ್ಯಾಸಾಂ ಶಿವ ಏವಾಥ ಪ್ರದದೌ ಚತುರಃ ಪತೀನ್ ॥೧೮.೧೩೨॥
ರುದ್ರನ ದೇಹದಲ್ಲಿರತಕ್ಕಂತಹ ಶ್ರೀವಿಷ್ಣುವು ಮೊದಲಿನಂತೇ ಭಾರತಿಗೆ
ವರವನ್ನಿತ್ತ. ಉಳಿದವರಿಗೆ ಶಿವನೇ ನಾಲ್ಕು ಗಂಡನ್ದಿರನ್ನು ಕೊಟ್ಟ.
[ಈ ಎಲ್ಲಾ ವಿವರಗಳನ್ನೂ ಬ್ರಹ್ಮವೈವರ್ತಪುರಾಣದ ಪ್ರಕೃತಿಖಂಡದಲ್ಲಿ(೧೪.೫೯)
ಕಾಣಬಹುದು. ಶಿವಸ್ತತ್ಪ್ರಾರ್ಥನಾಂ ಶ್ರುತ್ವಾ ಸಸ್ಮಿತೋ ರಸಿಕೇಶ್ವರಃ । ಪ್ರಿಯೇ ತವ ಪ್ರಿಯಾಃ ಪಞ್ಚ ಭವನ್ತೀತಿ ವರಂ ದದೌ’].
ದೇವ್ಯಶ್ಚತಸ್ರಸ್ತು ತದಾ ದತ್ತಮಾತ್ರೇ ವರೇsಮುನಾ ।
ದೇವಾನಾಮವತಾರಾರ್ತ್ಥಂ ಪಞ್ಚ ದೇವ್ಯಃ ಸ್ಮ ಇತ್ಯಥ ॥೧೮.೧೩೩॥
ನಾಜಾನನ್ನೇಕದೇಹತ್ವಾಚ್ಚಿದ್ಯೋಗಾತ್ ಕ್ಷೀರನೀರವತ್ ।
ತಾಃ ಶ್ರುತ್ವಾ ಸ್ವಪತಿಂ ದೇವಿ ನಚಿರಾತ್ ಪ್ರಾಪ್ಸ್ಯಸೀತಿ ಚ ॥೧೮.೧೩೪॥
ವಿಷ್ಣೂಕ್ತಂ ಶಙ್ಕರೋಕ್ತಂ ಚ ಚತ್ವಾರಃ ಪತಯಃ ಪೃಥಕ್ ।
ಭವಿಷ್ಯನ್ತೀತ್ಯಥೈಕಸ್ಯಾ ಮೇನಿರೇ ಪಞ್ಚಭರ್ತ್ತೃತಾಮ್ ॥೧೮.೧೩೫॥
ವರವನ್ನು ಪಡೆಯುತ್ತಿದ್ದಂತೆಯೇ, ಭಾರತಿಯನ್ನು ಬಿಟ್ಟು ಉಳಿದ
ನಾಲ್ವರು ದೇವಿಯರಿಗೆ, ‘ದೇವತೆಗಳ ಅವತಾರಕ್ಕಾಗಿ
ಐದು ಜನ ದೇವಿಯರು ನಾವಿಲ್ಲಿ ಇದ್ದೇವೆ’ ಎನ್ನುವುದು ಮರೆತುಹೋಯಿತು. ಒಂದೇ ದೇಹ ಇದ್ದುದರಿಂದ.
ಮನಸ್ಸಿನ ಜ್ಞಾನವು ಕಲಸುಮೇಲೋಗರವಾದ್ದರಿಂದ, ಹಾಲೂ-ನೀರು
ಬೆರೆತರೆ ಯಾವುದು ಹಾಲು ಯಾವುದು ನೀರು ಎಂದು ಸ್ಫುಟವಾಗಿ ವಿಂಗಡಿಸಲು ಸಾಧ್ಯವಿಲ್ಲವೋ, ಹಾಗೇ ಅವರ
ಜ್ಞಾನವು ಕಲಸುಮೇಲೋಗರವಾಗಿತ್ತು.
[ಮಹಾಭಾರತದ ಆದಿಪರ್ವದಲ್ಲಿ(೨೧೩.೧೭) ಈಕುರಿತು ಹೇಳುತ್ತಾರೆ: ಪಞ್ಚಕೃತ್ವಸ್ತ್ವಯಾ ಚೋಕ್ತಃ ಪತಿಂ ದೇಹೀತ್ಯಹಂ ಪುನಃ । ಪಞ್ಚ ತೇ ಪತಯೋ ಭದ್ರೇ
ಭವಿಷ್ಯಂತಿ ಸುಖಾವಹಾಃ’]
‘ನಿನ್ನ ಪತಿಯನ್ನು ಹೊಂದುತ್ತೀ’ ಎಂದು ಒಂದಾವರ್ತಿ ವಿಷ್ಣುವಿನಿಂದ
ಮತ್ತು ನಾಲ್ಕಾವರ್ತಿ ಶಂಕರನಿಂದ ಕೇಳಿದ ಆ ನಾಲ್ವರು, ‘ನಮಗೆ ಪತಿಯಲ್ಲದೇ ಮತ್ತೆ ನಾಲ್ಕು ಜನ
ಗಂಡಂದಿರಗುತ್ತಾರೆ ಎಂದು ತಿಳಿದರು. ಒಟ್ಟಿನಲ್ಲಿ
ಒಬ್ಬರಿಗೆ ಐದು ಜನ ಗಂಡನ್ದಿರಾಗುತ್ತಾರೆ ಎಂದು ಅವರು ತಪ್ಪಾಗಿ ತಿಳಿದುಕೊಂಡರು.
ರುರುದುಶ್ಚೈಕದೇಹಸ್ಥಾ ಏಕೈವಾಹಮಿತಿ ಸ್ಥಿತಾಃ ।
ಅಥಾಭ್ಯಾಗಾನ್ಮಹೇನ್ದ್ರೋsತ್ರ ಸೋsಬ್ರವೀತ್ ತಾಂ ವರಸ್ತ್ರಿಯಮ್ ॥೧೮.೧೩೬॥
ಅವರೆಲ್ಲರೂ ಒಂದೇ ದೇಹದಲ್ಲಿದಿದ್ದರೂ ಕೂಡಾ, ದೇಹದಲ್ಲಿ ಒಬ್ಬಳೇ
ಇದ್ದೇನೆಂದು ಪ್ರತಿಯೊಬ್ಬರೂ(ಸರ್ವಜ್ಞಳಾದ
ಭಾರತೀದೇವಿಯನ್ನು ಬಿಟ್ಟು ಉಳಿದ ನಾಲ್ವರು) ಅಂದುಕೊಂಡರು, ಅತ್ತರೂ ಕೂಡಾ. ಹೀಗೆ ಅಳುತ್ತಿರುವಾಗ ಅಲ್ಲಿಗೆ ದೇವೇಂದ್ರನ
ಆಗಮನವಾಯಿತು. ಅವನು ಅಲ್ಲಿ ಅಳುತ್ತಿರುವ ಹೆಣ್ಣುಮಗಳನ್ನು ನೋಡಿದ.
No comments:
Post a Comment