ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, August 2, 2020

Mahabharata Tatparya Nirnaya Kannada 17202_17212

ತತಃ ಪುರಾ ಸ್ಯಮನ್ತಕಂ ಹ್ಯವಾಪ ಸೂರ್ಯ್ಯಮಣ್ಡಲೇ

ಸ್ಥಿತಾದ್ಧರೇಃ ಸ ಸತ್ರಜಿತ್ ಸದಾsತ್ರ ಕೇಶವಾರ್ಚ್ಚಕಃ ॥೧೭.೨೦೨ ॥

 

ಇದಕ್ಕೂ ಮೊದಲು, ಸದಾ, ಸೂರ್ಯಮಂಡಲದಲ್ಲಿ ಕೇಶವನನ್ನು ಪೂಜಿಸುವ ಸತ್ರಜಿತ್ ಎಂಬ ಯಾದವನು, ಸೂರ್ಯಮಂಡಲದಲ್ಲಿರುವ ನಾರಾಯಣನಿಂದ  ಸ್ಯಮನ್ತಕಮಣಿಯನ್ನು ಪಡೆದಿದ್ದನು.

 

ಸದಾsಸ್ಯ ವಿಷ್ಣುಭಾವಿನೋsಪ್ಯತೀವ ಲೋಭಮಾನ್ತರಮ್ ।

ಪ್ರಕಾಶಯನ್ ರಮಾಪತಿರ್ಯ್ಯಯಾಚ ಈಶ್ವರೋ ಮಣಿಮ್ ॥೧೭.೨೦೩॥

 

ಸತ್ರಜಿತ್ ವಿಷ್ಣುಭಕ್ತನಾದರೂ ಕೂಡಾ,  ಅವನ ಒಳಗಡೆ ಇರುವ ಲೋಭತನವನ್ನು  ಎಲ್ಲರಿಗೂ ತೋರಿಸುವುದಕ್ಕಾಗಿ, ಜಗದೊಡೆಯನಾದ ರಮಾಪತಿಯು ಅವನಲ್ಲಿ ಸ್ಯಮನ್ತಕಮಣಿಯನ್ನು ಕೇಳಿದನು.  

 

ಸ ತಂ ನ ದತ್ತವಾಂಸ್ತತೋsನುಜೋ ನಿಬದ್ಧ್ಯ ತಂ ಮಣಿಮ್ ।

ವನಂ ಗತಃ ಪ್ರಸೇನಕೋ ಮೃಗಾಧಿಪೇನ ಪಾತಿತಃ ॥೧೭.೨೦೪॥

 

ಸತ್ರಜಿತ್ ಸ್ಯಮನ್ತಕಮಣಿಯನ್ನು ಶ್ರೀಕೃಷ್ಣನಿಗೆ ಕೊಡಲಿಲ್ಲ. ಮುಂದೊಂದುದಿನ ಸತ್ರಜಿತ್ ರಾಜನ  ತಮ್ಮನಾದ ಪ್ರಸೇನನು ಆ ಮಣಿಯನ್ನು ಕಟ್ಟಿಕೊಂಡು ಕಾಡಿಗೆ ತೆರಳಿದ್ದಾಗ, ಸಿಂಹದಿಂದ ಸಂಹರಿಸಲ್ಪಟ್ಟನು.  

[ಬ್ರಾಹ್ಮಪುರಾಣದಲ್ಲಿ(೧೪.೨೬-೨೭) ಈ ಕುರಿತಾದ ವಿವರಣೆ ಕಾಣಸಿಗುತ್ತದೆ:  ಕದಾಚಿನ್ಮೃುಗಯಾಂ ಯಾತಃ ಪ್ರಸೇನಸ್ತೇನ ಭೂಷಿತಃ । ಸ್ಯಮಂತಕಕೃತೇ ಸಿಂಹಾದ್ ವಧಂ ಪ್ರಾಪ ವನೇಚರಾತ್ । ಅಥ ಸಿಂಹಂ ಪ್ರಧಾವಂತಮೃಕ್ಷರಾಜೋ ಮಹಾಬಲಃ ।  ನಿಹತ್ಯ ಮಣಿರತ್ನಂ  ತದಾದಾಯ ಪ್ರಾವಿಶದ್ ಗುಹಾಮ್]

 

ತದಾ ಸ ಸತ್ರಜಿದ್ಧರಿಂ ಶಶಂಸ ಸೋದರಾನ್ತಕಮ್ ।

ಉಪಾಂಶು ವರ್ತ್ಮನಾ ತತೋ ಹರಿಃ ಸಯಾದವೋ ಯಯೌ ॥೧೭.೨೦೫॥


ಈ ಘಟನೆಯ ನಂತರ ಸತ್ರಜಿತ್ ರಾಜನು, ಶ್ರಿಕೃಷ್ಣನೇ ತನ್ನ ತಮ್ಮನನ್ನು ಕೊಂದವನು ಎಂದು ರಹಸ್ಯವಾಗಿ ಹೇಳಿದನು. ತದನಂತರ ಯಾದವರಿಂದ ಕೂಡಿಕೊಂಡ ಶ್ರೀಕೃಷ್ಣನು ಪ್ರಸೇನನು ಹೋದ ದಾರಿಯಲ್ಲಿ  ತೆರಳಿದನು.

 

[ಸತ್ರಜಿತ್ ರಾಜನು ಮೊದಲು ರಹಸ್ಯವಾಗಿಯೇ ಹೇಳಿದ್ದಾದರೂ ಕೂಡಾ,  ಕ್ರಮೇಣ ಆ ವಿಷಯ ಎಲ್ಲೆಡೆ ಪ್ರಸಾರವಾಯಿತು. ಅದಕ್ಕಾಗಿ ಶ್ರೀಕೃಷ್ಣನು ಯಾದವರೊಂದಿಗೆ ಕೂಡಿಕೊಂಡು, ಪ್ರಸೇನನ ಕುದುರೆಯ ಹೆಜ್ಜೆಗುರುತನ್ನು ಅನುಸರಿಸಿ, ಅವನು ಹೋದ ಮಾರ್ಗವಾಗಿ ತೆರಳಿದನು ಎನ್ನುವುದನ್ನು  ವಿಷ್ಣುಪುರಾಣ(೪.೧೩.೩೫-೩೮) ವಿವರಿಸುತ್ತದೆ: ಅನಾಗಚ್ಛತಿ ತಸ್ಮಿನ್ ಕೃಷ್ಣೋ ಮಣಿರತ್ನಮಭಿಲಷಿತವಾನ್ ನ ಚ ಪ್ರಾಪ್ತವಾನ್ ನೂನಮೇತದಸ್ಯ ಕರ್ಮೇತ್ಯಖಿಲ ಏವ ಯದುಲೋಕಃ  ಪರಸ್ಪರಂ  ಕರ್ಣಾಕರ್ಣ್ಯಕಥಯತ್ । ವಿದಿತಲೋಕಾಪವಾದವೃತ್ತಾಂತಶ್ಚ ಭಗವಾನ್ ಸರ್ವಯದುಸೈನ್ಯಪರಿವಾರಪರಿವೃತಃ ಪ್ರಸೇನಾಶ್ವಪದವೀಮನುಸಸಾರ’]

 

ವನೇ ಸ ಸಿಂಹಸೂದಿತಂ ಪದೈಃ ಪ್ರದರ್ಶ್ಯ ವೃಷ್ಣಿನಾಮ್ ।

ಪ್ರಸೇನಮೃಕ್ಷಪಾತಿತಂ ಸ ಸಿಂಹಮಪ್ಯದರ್ಶಯತ್ ॥೧೭.೨೦೬॥

 

ಹೆಜ್ಜೆ ಗುರುತಿನಿಂದ ಸಿಂಹದಿಂದ ಕೊಲ್ಲಲ್ಪಟ್ಟ ಪ್ರಸೇನನನ್ನು ಯಾದವರಿಗೆ ತೋರಿಸಿದ ಶ್ರೀಕೃಷ್ಣ, ಕರಡಿಯಿಂದ(ಜಾಮ್ಬವನ್ತನಿಂದ) ಸಾಯಿಸಲ್ಪಟ್ಟ ಸಿಂಹವನ್ನೂ ಕೂಡಾ ಅವರಿಗೆ ತೋರಿಸಿದ.   

 

ತತೋ ನಿಧಾಯ ತಾನ್ ಬಿಲಂ ಸ ಜಾಮ್ಬವತ್ಪರಿಗ್ರಹಮ್ ।

ವಿವೇಶ ತತ್ರ  ಸಂಯುಗಂ ಬಭೂವ ತೇನ ಚೇಶಿತುಃ ॥೧೭.೨೦೭॥

 

ತದನಂತರ ತನ್ನೊಂದಿಗೆ ಬಂದ ಯಾದವರನ್ನು ಹೊರಗೆ ನಿಲ್ಲಿಸಿ, ಜಾಂಬವಂತ ಇರುವ ಬಿಲವನ್ನು ಶ್ರೀಕೃಷ್ಣ  ಪ್ರವೇಶಮಾಡಿದ. ಅಲ್ಲಿ ಜಾಮ್ಬವಂತ ಹಾಗೂ ಶ್ರೀಕೃಷ್ಣನ ನಡುವೆ ಯುದ್ಧವಾಯಿತು.

 

ಯುಯೋಧ ಮನ್ದಮೇವ ಸಃ ಪ್ರಭುಃ ಸ್ವಭಕ್ತ ಇತ್ಯಜಃ ।

ಚಕಾರ ಚೋಗ್ರಮನ್ತತಃ ಪ್ರಕಾಶಯನ್ ಸ್ವಮಸ್ಯ ಹಿ ॥೧೭.೨೦೮॥

 

ತನ್ನ ಭಕ್ತ ಎಂದು ಶ್ರೀಕೃಷ್ಣ ಮೊದಲು ನಿಧಾನವಾಗಿ(ಮನ್ದಗತಿಯಲ್ಲಿ) ಯುದ್ಧಮಾಡಿದರೆ. ಕೊನೆಯಲ್ಲಿ ತನ್ನ ಬಲಸ್ವರೂಪವನ್ನು ಜಾಮ್ಬವನ್ತನಿಗೆ ತೋರಿಸುತ್ತಾ, ಉಗ್ರವಾಗಿ ಯುದ್ಧಮಾಡಿದನು.

  

ಸ ಮುಷ್ಟಿಪಿಷ್ಟವಿಗ್ರಹೋ ನಿತಾನ್ತಮಾಪದಂ ಗತಃ ।

ಜಗಾಮ ಚೇತಸಾ ರಘೂತ್ತಮಂ ನಿಜಂ ಪತಿಂ ಗತಿಮ್ ॥೧೭.೨೦೯॥

 

ಮುಷ್ಟಿಯ ಪೆಟ್ಟಿನಿಂದ ತತ್ತರಿಸಿದ ಜಾಮ್ಬವಂತನು, ಇನ್ನೇನು  ಸಾಯುತ್ತೇನೋ ಎಂಬ ಆತಂಕವನ್ನು  ಹೊಂದಿ, ಮನಸ್ಸಿನಲ್ಲಿಯೇ ತನ್ನ ಒಡೆಯನಾದ, ತನಗೆ ಗತಿಯನ್ನೀಯುವ ಶ್ರೀರಾಮಚಂದ್ರನನ್ನು ಸ್ಮರಣೆಮಾಡಿದನು.

 

ಸ್ಮೃತಿಂ ಗತೇ ತು ರಾಘವೇ ತದಾಕೃತಿಂ ಯದೂತ್ತಮೇ ।

ಸಮಸ್ತಭೇದವರ್ಜ್ಜಿತಾಂ ಸಮೀಕ್ಷ್ಯ ಸೋsಯಮಿತ್ಯವೇತ್ ॥೧೭.೨೧೦॥

 

ರಾಮಚಂದ್ರನ ಸ್ಮೃತಿಯನ್ನು ಹೊಂದುತ್ತಿರುವಂತೆಯೇ, ಅದೇ ರೀತಿಯಾದ ಆಕೃತಿಯನ್ನು ಕೃಷ್ಣನಲ್ಲಿ ಭೇದವೇ ಇಲ್ಲದಂತೆ ಕಂಡ ಜಾಮ್ಬವನ್ತನು,  ‘ಅವನೇ ಇವನು’  ಎನ್ನುವ ಸತ್ಯವನ್ನು ತಿಳಿದನು.

[ಇದನ್ನು ವಿಷ್ಣುಪುರಾಣದಲ್ಲಿ(೪.೧೩.೫೩) ವಿವರಿಸಿರುವುದನ್ನು ಕಾಣಬಹುದು: ಅವಶ್ಯಂ ಭವತಾsಸ್ಮತ್ಸ್ವಾಮಿನಾ ರಾಮೇಣೇವ ನಾರಾಯಣಸ್ಯ ಸಕಲಜಗತ್ಪರಯಾಣಸ್ಯಾಂಶೇನ ಭಗವತಾ ಭವಿತವ್ಯಮಿತ್ಯುಕ್ತಸ್ತಸ್ಮೈ ಭಗವಾನಖಿಲಾವನಿಭಾರಾವತರಣಾರ್ಥಮವತರಣಮಾಚಚಕ್ಷೇ]

 

ತತಃ ಕ್ಷಮಾಪಯನ್ ಸುತಾಂ ಪ್ರದಾಯ ರೋಹಿಣೀಂ ಶುಭಾಮ್ ।

ಮಣಿಂ ಚ ತಂ ನುನಾವ ಸಃ ಪ್ರಪನ್ನ ಆಶು ಪಾದಯೋಃ ॥೧೭.೨೧೧॥

 

ಶ್ರೀರಾಮನೇ ತನ್ನೆದುರು ನಿಂತಿರುವ ಶ್ರೀಕೃಷ್ಣ ಎಂದು ತಿಳಿದ ತಕ್ಷಣ, ಕೃಷ್ಣನಲ್ಲಿ ಕ್ಷಮೆ ಬೇಡಿದ ಜಾಮ್ಬವನ್ತ,  ರೋಹಿಣಿ ಎಂಬ ಹೆಸರಿನ ತನ್ನ ಮಗಳನ್ನು ಕೃಷ್ಣನಿಗೆ ಕೊಟ್ಟು, ಸ್ಯಮಂತಕ ಮಣಿಯನ್ನೂ ಕೂಡಾ ಕೊಟ್ಟು, ಪರಮಾತ್ಮನ ಪಾದದಲ್ಲಿ ಬಿದ್ದು ಸ್ತೋತ್ರಮಾಡಿದ.  

 

ವಿಧಾಯ ಚಕ್ರದಾರಿತಂ ಸುಜೀರ್ಣ್ಣದೇಹಮಸ್ಯ ಸಃ ।

ಯುವಾನಮಾಶು ಕೇಶವಶ್ಚಕಾರ ವೇದನಾಂ ವಿನಾ ॥೧೭.೨೧೨॥

 

ಕೃಷ್ಣನು ಮುಪ್ಪಾನುಮುಪ್ಪಾದ ಜಾಮ್ಬವಂತನ ದೇಹವನ್ನು ತನ್ನ ಚಕ್ರದಿಂದ ಸೀಳಿ, ಯಾವುದೇ ನೋವುಂಟುಮಾಡದೇ ಅವನನ್ನು ಯುವಕನನ್ನಾಗಿ ಮಾಡಿದನು.


No comments:

Post a Comment