ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, August 6, 2020

Mahabharata Tatparya Nirnaya Kannada 17228_17234

 

ತಯೋಃ ಸಹಾಯ  ಏವ ತೌ ವರಾಚ್ಛಿವಸ್ಯ ಭೂತಕೌ ।

ಅಜೇಯತಾಮವಾಪತುರ್ನ್ನಚಾನ್ಯಥಾsಮರಾವಪಿ ॥೧೭.೨೨೮॥

 

ಅವರಿಬ್ಬರ(ಹಂಸ- ಡಿಭಕರ) ಸಹಾಯಕ್ಕಾಗಿಯೇ ಈ ಭೂತಗಳು ನಿಯುಕ್ತವಾಗಿವೆ ಹಾಗೂ ಆ ರೀತಿ ಸಹಾಯ ಮಾಡುತ್ತಿರಬೇಕಾದರೆ ಯಾರೂ ನಿಮ್ಮನ್ನು ಗೆಲ್ಲದಿರಲಿ ಮತ್ತು ಯಾರಿಂದಲೂ ನಿಮ್ಮನ್ನು ಕೊಲ್ಲಲು ಸಾಧ್ಯವಾಗದಿರಲಿ  ಎಂದು ಸ್ವಯಂ ಸದಾಶಿವನೇ ಆ ಭೂತಗಳಿಗೆ ವರವನ್ನು ನೀಡಿದ್ದಾನೆ.

 

ಅಜೇಯತಾಮವದ್ಧ್ಯತಾಮವಾಪ್ಯ ತಾವುಭೌ ಶಿವಾತ್ ।

ಪಿತುಸ್ತು ರಾಜಸೂಯಿತಾಂ ಸಮಿಚ್ಛತೋ ಮದೋದ್ಧತೌ ॥೧೭.೨೨೯॥

 

ಮದದಿಂದ ದೃಪ್ತರಾದ ಈ ಸಾಲ್ವಪುತ್ರರು (ಹಂಸ- ಡಿಭಕರು), ಶಿವನಿಂದ ಅಜೇಯತ್ವವನ್ನೂ, ಅವಧ್ಯತ್ವವನ್ನೂ ಹೊಂದಿ, ತಂದೆಯ ರಾಜಸೂಯಯಾಗ ಮಾಡಬೇಕು ಎಂದು ಇಚ್ಛಿಸಿದ್ದಾರೆ.

 

(ಹಂಸ- ಡಿಭಕರು ತಂದೆಯ  ರಾಜಸೂಯಯಾಗ ಮಾಡಲು ಬಯಸಿರುವ ಹಿಂದಿನ ಉದ್ದೇಶವೇನು ?)

 

ಜರಾಸುತೋ ಗುರುತ್ವತೋ ವಿರೋದ್ಧುಮತ್ರ ನೇಚ್ಛತಿ ।

ನೃಪಾಂಸ್ತು ದೇವಪಕ್ಷಿಣೋ ವಿಜಿತ್ಯ ಕರ್ತುಮಿಚ್ಛತಃ ॥೧೭.೨೩೦॥

 

ತಮ್ಮ ಗುರುವಾಗಿರುವ ಜರಾಸಂಧನನ್ನು ಅವರು ಎಂದೂ ವಿರೋಧಮಾಡಲು ಬಯಸುವುದಿಲ್ಲ. ಆದರೆ ‘ದೇವತೆಗಳ ಪಕ್ಷದವರು’ ಎಂದು ಯಾವ ರಾಜರಿದ್ದಾರೆ, ಅವರನ್ನು ಮಾತ್ರ ಗೆದ್ದು, ಯಾಗವನ್ನು ಮಾಡಬೇಕು ಎಂದವರು ಇಚ್ಛಿಸಿದ್ದಾರೆ.

 

ಸ್ವಯಂ ಹಿ ರಾಜಸೂಯಿತಾಂ ಜರಾಸುತೋ ನ ಮನ್ಯತೇ ।

ಯತೋ ಹಿ ವೈಷ್ಣವಂ ಕ್ರತುಂ ತಮಾಹುರೀಶ ವೈದಿಕಾಃ ॥೧೭.೨೩೧॥

 

ಸ್ವಯಂ ಜರಾಸಂಧನು ಇಚ್ಛಾಪೂರ್ವಕವಾಗಿ ರಾಜಸೂಯಯಾಗ ಮಾಡುವಿಕೆಯನ್ನು ಒಪ್ಪುವುದಿಲ್ಲ. ಏಕೆಂದರೆ ಈ ಯಾಗ  ವಿಷ್ಣುಸಂಬಂಧಿಯಾದ ಯಾಗ ಎಂದು ವೈದಿಕರು ಹೇಳುತ್ತಾರೆ. (ವಿಷ್ಣುದ್ವೇಷಿಯಾದ ಜರಾಸಂಧ ವೈಷ್ಣವಯಾಗ ಮಾಡುವುದಿಲ್ಲ.) 

 

ಇಮೌ ಪಿತುರ್ಯ್ಯಶೋs ರ್ತ್ಥಿನೌ ಪರಾಭವಾಯ ತೇ ತಥಾ ।

ಸಮಿಚ್ಛತೋsದ್ಯ ತಂ ಕ್ರತುಂ ಭವನ್ತಮೂಚತುಶ್ಚತೌ ॥೧೭.೨೩೨॥

 

ತಂದೆಯ ಕೀರ್ತಿಯನ್ನು ಇಚ್ಚಿಸುವವರಾಗಿ ಆ  ಸಾಲ್ವಪುತ್ರರು, ನಿನ್ನ ಸೋಲಿಗಾಗಿ ಈ  ಯಜ್ಞವನ್ನು ಮಾಡಬೇಕೆಂದು ಬಯಸಿದ್ದಾರೆ ಅಷ್ಟೇ. (ಕೃಷ್ಣನೊಂದಿಗೆ ಯುದ್ಧ ಮಾಡಲು ಅವರಿಗೊಂದು ನೆಪಬೇಕು. ಆ ನೆಪಕ್ಕಾಗಿ ಮತ್ತು ತಂದೆಯ ಯಶಸ್ಸಿಗಾಗಿ ಈ ಯಾಗವನ್ನು ಮಾಡಬಯಸಿದ್ದಾರೆ).

ಅವರಿಬ್ಬರೂ ನಿನಗೆ ಈ ಸಂದೇಶವನ್ನು ಕಳುಹಿಸಿದ್ದಾರೆ’ ಎಂದು ಹೇಳಿದ ಆ ಬ್ರಾಹ್ಮಣನು, ಹಂಸ- ಡಿಭಕರು ಶ್ರೀಕೃಷ್ಣನಿಗೆ ತನ್ನ ಮೂಲಕ ಕಳುಹಿಸಿರುವ ಸಂದೇಶವನ್ನು ಹೇಳುತ್ತಾನೆ :

 

ಸಮುದ್ರಸಂಶ್ರಯೋ  ಭವಾನ್ ಬಹೂನ್ ಪ್ರಗೃಹ್ಯ ಲಾವಣಾನ್ ।

ಸುಭಾರಕಾನುಪೈಹಿ ನಾವಿತಿ ಕ್ಷಮಸ್ವ ಮೇ ವಚಃ ॥೧೭.೨೩೩॥

 

‘ಸಾಗರವನ್ನೇ ಆಶ್ರಯಿಸಿಕೊಂಡಿರುವ ನೀನು, ರಾಶಿಗಟ್ಟಲೆ ಉಪ್ಪು ಮೊದಲಾದ ಹೊರೆಕಾಣಿಕೆಯೊಂದಿಗೆ  ಬಂದು ಅದನ್ನು ನಮಗೆ ಒಪ್ಪಿಸತಕ್ಕದ್ದು’ ಎಂದು ಅವರು ಹೇಳಿದ್ದಾರೆ. ಅವರ ಈ ಮಾತನ್ನು (ಪಾಪಿಷ್ಠವಾದ ಮಾತನ್ನು) ನಿನಗೆ ಹೇಳುತ್ತಿರುವ ನನ್ನನ್ನು ನೀನು ಕ್ಷಮಿಸು’ ಎಂದು ಆ ಬ್ರಾಹ್ಮಣ ಶ್ರೀಕೃಷ್ಣನಲ್ಲಿ ಪ್ರಾರ್ಥಿಸುತ್ತಾನೆ.

 

ಇತೀರ್ಯ ತಂ ನನಾಮ ಸಃ  ಪ್ರ ಚಾಹಸನ್ ಸ್ಮ ಯಾದವಾಃ ।

ಹರಿಸ್ತು ಸಾತ್ಯಕಿಂ ವಚೋ ಜಗಾದ ಮೇಘನಿಸ್ವನಃ ॥೧೭.೨೩೪॥

 

ಈರೀತಿಯಾಗಿ ಎಲ್ಲವನ್ನೂ ವಿವರಿಸಿ ಹೇಳಿದ ಆ ಬ್ರಾಹ್ಮಣನು ಮತ್ತೆ ನಮಸ್ಕರಿಸಿದನು. ಆಗ ಅಲ್ಲಿದ್ದ ಯಾದವರು ನಕ್ಕರು ಕೂಡಾ. ಪರಮಾತ್ಮನು ಮೋಡದಂತಹ ತನ್ನ ಗಂಭೀರ ವಾಣಿಯಿಂದ  ಸಾತ್ಯಕಿಯನ್ನು ಕುರಿತು ಮಾತನಾಡಿದನು:


No comments:

Post a Comment