ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, August 9, 2020

Mahabharata Tatparya Nirnaya Kannada 17249_17256

 

ದ್ವಿರಷ್ಟಸೇನಯಾ ಯುತೌ ಸಹೈಕಯೈವ ತೌ ನೃಪೌ ।

ಸಮೀಯತುರ್ಯ್ಯುಧೇ ಹರಿಂ ಹರಿಶ್ಚ ತೌ ಸಸಾರ ಹ ॥೧೭.೨೪೯॥

ಹೀಗೆ ಹದಿನೇಳು (೨x೮+೧) ಅಕ್ಷೋಹಿಣೀ ಸೇನೆಯೊಂದಿಗೆ ಹಂಸ-ಡಿಭಕರು ಪರಮಾತ್ಮನನ್ನು ಎದುರುಗೊಂಡರು. ಪರಮಾತ್ಮನೂ ಕೂಡಾ  ಅವರಿಬ್ಬರನ್ನು ಎದುರುಗೊಂಡ.

 

ಅಥ ದ್ವಯೋರ್ದ್ದ್ವಯೋರಭೂದ್ ರಣೋ ಭಯಾನಕೋ ಮಹಾನ್ ।

ಹರಿರ್ವಿಚಕ್ರಮೇಯಿವಾನ್ ಬಲಶ್ಚ ಹಂಸಮುದ್ಧತಮ್ ॥೧೭.೨೫೦॥

 

ತದಾsಸ್ಯ ಚಾನುಜಂ ಯಯೌ ಶಿನಿಪ್ರವೀರ ಆಯುಧೀ ।

ಗದಶ್ಚ ನಾಮತೋsನುಜೋ ಹರೇಃ ಸ ರೋಹಿಣೀಸುತಃ ॥೧೭.೨೫೧॥

 

ಪುರಾ ಸ ಚಣ್ಢಕೋ ಗಣೋ ಹರೇರ್ನ್ನಿವೇದಿತಾಶನಃ ।

ಸಮಾಹ್ವಯದ್ ರಣಾಯ ವೈ ತಯೋಃ ಸ ತಾತಮೇವ ಹಿ ॥೧೭.೨೫೨॥

 

 ಸ್ವಲ್ಪ ಹೊತ್ತಾದ ಮೇಲೆ ಇವರಿಬ್ಬರಿಗೆ ಭಯಾನಕವಾಗಿರುವ, ದೊಡ್ಡಪ್ರಮಾಣದ ಯುದ್ಧವಾಯಿತು (ದ್ವಂದ್ವಯುದ್ಧ ನಡೆಯಿತು). ಶ್ರೀಕೃಷ್ಣನು ವಿಚಕ್ರನನ್ನು ಹೊಂದಿದರೆ, ಬಲರಾಮನು ಉದ್ಧತನಾಗಿರುವ(ದುರಾಹಂಕಾರಿಯಾಗಿರುವ) ಹಂಸನನ್ನು ಎದುರುಗೊಂಡ. ಆಯುಧವನ್ನು ಹಿಡಿದಿರುವ ಸಾತ್ಯಕಿಯು ಹಂಸನ ಸಹೋದರನಾದ ಡಿಭಕನನ್ನು ಎದುರುಗೊಂಡ.

ಗದನೆನ್ನುವವನು ಶ್ರೀಕೃಷ್ಣನ ತಮ್ಮನು, ವಸುದೇವ-ರೋಹಿಣಿಯ ಮಗನು. ಇವನು ‘ಚಂಡ’ ಎಂಬ ಗಣದವನು. (ಇವನು ಶ್ರೀಹರಿಯ ಸೇವಕ, ಭಗವಂತನ ದ್ವಾರಪಾಲಕರಾದ ಚಂಡ-ಪ್ರಚಂಡರಲ್ಲಿ ಇವನು ಚಂಡ. ಭಗವಂತನ ಸೇವೆಯನ್ನು ಬಯಸಿ, ಶ್ರೀಕೃಷ್ಣನ ತಮ್ಮನಾಗಿ ಅವತರಿಸಿ ಬಂದವನು). ಅವನು ದೇವರಿಗೆ ಅನ್ನವನ್ನು ಅರ್ಪಿಸುತ್ತಿದ್ದವನು. ಅವನು ಯುದ್ಧಕ್ಕಾಗಿ ಹಂಸ-ಡಿಭಕರ ತಂದೆಯಾದ ಬ್ರಹ್ಮದತ್ತನನ್ನೇ ಕರೆದ.

 

ಅಕ್ಷೋಹಿಣೀತ್ರಯಾನ್ವಿತಾಃ ಸಮಸ್ತಯಾದವಾಸ್ತದಾ ।

ತ್ರಿಲೋಚನಾನುಗೌ ಚ ತೌ ನ್ಯವಾರಯನ್ ಸರಾಕ್ಷಸೌ ॥೧೭.೨೫೩॥

 

ಅದೇ ಸಮಯದಲ್ಲಿ ಮೂರು ಅಕ್ಷೋಹಿಣೀ ಸೇನೆಯೊಂದಿಗಿನ ಯಾದವರು ಸಮಸ್ತ ರಾಕ್ಷಸ ಸೇನೆಯಿಂದ  ಕೂಡಿದ ಶಿವನ ಭೃತ್ಯರಾದ ಆ ಎರಡು ಭೂತಗಳನ್ನು ಮತ್ತು ಹಿಡಿಮ್ಬಾಸುರನನ್ನು ತಡೆದರು.

 

ಹರಿರ್ವಿಚಕ್ರಮೋಜಸಾ ಮಹಾಸ್ತ್ರಶಸ್ತ್ರವರ್ಷಿಣಮ್ ।

ವಿವಾಹನಂ ನಿರಾಯುಧಂ ಕ್ಷಣಾಚ್ಚಕಾರ ಸಾಯಕೈಃ ॥೧೭.೨೫೪॥

 

ಶ್ರೀಕೃಷ್ಣನು ಬಲದಿಂದ ಮಹಾ ಅಸ್ತ್ರ-ಶಸ್ತ್ರಗಳ ಮಳೆಗರೆಯುತ್ತಿರುವ ವಿಚಕ್ರನೆಂಬ ಅಸುರನನ್ನು ಕೆಲವೇ ಕ್ಷಣಗಳಲ್ಲಿ ತನ್ನ ಬಾಣಗಳಿಂದ  ಆಯುಧಹೀನನ್ನಾಗಿಯೂ, ವಾಹನಹೀನನನ್ನಾಗಿಯೂ ಮಾಡಿದನು.  

 

ಪುನಶ್ಚ ಪಾದಪಾನ್ ಗಿರೀನ್ ಪ್ರಮುಞ್ಚತೋsರಿಣಾsರಿಹಾ ।

ಶಿರೋ ಜಹಾರ ದೇವತಾ ವಿನೇದುರತ್ರ ಹರ್ಷಿತಾಃ ॥೧೭.೨೫೫ ॥

 

ಮತ್ತೆ ಮರಗಳನ್ನೂ, ಬಂಡೆಗಳನ್ನೂ ಎಸೆಯುತ್ತಾ ಬಂದ ಆ ರಾಕ್ಷಸನ(ವಿಚಕ್ರನ) ತಲೆಯನ್ನು, ಶತ್ರುಸಂಹಾರಕ ಪರಮಾತ್ಮನು ತನ್ನ ಚಕ್ರದಿಂದ ಕತ್ತರಿಸಿದನು. ಆಗ ದೇವತೆಗಳು ಹರ್ಷದಿಂದ ಕೂಡಿ, ಗಟ್ಟಿಯಾಗಿ ಸಿಂಹನಾದ ಮಾಡಿದರು.

 

ಪ್ರಸೂನವರ್ಷಿಭಿಃ ಸ್ತುತಶ್ಚತುರ್ಮ್ಮುಖಾದಿಭಿಃ ಪ್ರಭುಃ ।

ಸಸಾರ ತೌ ಹರಾನುಗೌ ಪ್ರಭಕ್ಷಕೌ ಸ ಸಾತ್ತ್ವತಾಮ್ ॥೧೭.೨೫೬ ॥

 

ಹೂಗಳ ಮಳೆಗರೆಯುವ ಚತುರ್ಮುಖ ಮೊದಲಾದವರಿಂದ ಸ್ತೋತ್ರಮಾಡಲ್ಪಟ್ಟ ಸರ್ವಸಮರ್ಥನಾದ ಶ್ರೀಕೃಷ್ಣನು,  ಯಾದವರನ್ನು ಭಕ್ಷಣೆ ಮಾಡುವ, ಸದಾಶಿವನಿಗೆ ಸಂಬಂಧಪಟ್ಟ ಭೂತಗಳನ್ನು ಎದುರುಗೊಂಡ.

No comments:

Post a Comment