ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, August 18, 2020

Mahabharata Tatparya Nirnaya Kannada 1841_1849

 

ಅಭಿಷಿಕ್ತೇ ತದಾ ಕರ್ಣ್ಣೇ ಪ್ರಾಯಾದಧಿರಥಃ ಪಿತಾ ।

ಸರ್ವರಾಜಸದೋಮದ್ಧ್ಯೇ ವವನ್ದೇ ತಂ ವೃಷಾ ತದಾ ॥೧೮.೪೧॥

 

ಕರ್ಣನು ಅಭಿಷಿಕ್ತನಾಗಲು, ತಂದೆಯಾದ ಅಧಿರಥನು ಅಲ್ಲಿಗೆ ಬಂದನು. ಕರ್ಣನು ಸಮಸ್ತ ರಾಜರ ಸಮ್ಮುಖದಲ್ಲಿ ತಂದೆಗೆ ನಮಸ್ಕರಿಸಿದನು.

 

ತುತುಷುಃ ಕರ್ಮ್ಮಣಾ ತಸ್ಯ ಸನ್ತಃ ಸರ್ವೇ ಸಮಾಗತಾಃ ।

ಭೀಮದುರ್ಯೋಧನೌ ತತ್ರ ಶಿಕ್ಷಾಸನ್ದರ್ಶನಚ್ಛಲಾತ್ ॥೧೮.೪೨॥

 

ಸಮಾದಾಯ ಗದೇ ಗುರ್ವೀ ಸಂರಮ್ಭಾದಭ್ಯುದೀಯತುಃ ।

ದೇವಾಸುರಮನುಷ್ಯಾದಿ ಜಗದೇತಚ್ಚರಾಚರಮ್ ॥೧೮.೪೩॥

 

ಸರ್ವಂ ತದಾ ದ್ವಿಧಾ ಭೂತಂ ಭೀಮದುರ್ಯ್ಯೋಧನಾಶ್ರಯಾತ್ ।

ದೇವಾ ದೇವಾನುಕೂಲಾಶ್ಚ ಭೀಮಮೇವ ಸಮಾಶ್ರಿತಾಃ ॥೧೮.೪೪ ॥

 

ಕರ್ಣನ ಈ ನಡತೆಯನ್ನು ಕಂಡ ಎಲ್ಲಾ ಸಜ್ಜನರು ಬಹಳ ಸಂತಸಪಟ್ಟರು. ತದನಂತರ ಆ ರಂಗಮಂಚದಲ್ಲಿ ಭೀಮ ಹಾಗೂ ದುರ್ಯೋಧನ  ತಮ್ಮತಮ್ಮ ಪ್ರಾವೀಣ್ಯವನ್ನು ತೋರಿಸುವ ನೆಪದಿಂದ, ಅತ್ಯಂತ ಭಾರವಾದ ಗದೆಯನ್ನು ತೆಗೆದುಕೊಂಡು ಸಿಟ್ಟಿನಿಂದ ಎದುರುಗೊಂಡರು.

ದೇವತೆಗಳು, ಅಸುರರು, ಮನುಷ್ಯರನ್ನೇ ಮೊದಲಾಗಿ ಒಳಗೊಂಡ ಚರಾಚರ ಪ್ರಪಂಚ, ಭೀಮನ ಇಲ್ಲವೇ  ದುರ್ಯೋಧನನ ಪರ ವಹಿಸುತ್ತಾ, ಎರಡಾಗಿ ಭಾಗವಾಯಿತು (ಎರಡು ತಂಡವಾಯಿತು). ಇವರಲ್ಲಿ ದೇವತೆಗಳು ಮತ್ತು ದೇವತೆಗಳಿಗೆ ಅನುಕೂಲಕರರಾದ ಗಂಧರ್ವ ಕಿನ್ನರ ಕಿಮ್ಪುರುಷರು ಭೀಮನನ್ನು ಆಶ್ರಯಿಸಿದರು.

 

ಅಸುರಾ ಆಸುರಾಶ್ಚೈವ ದುರ್ಯ್ಯೋಧನಸಮಾಶ್ರಯಾಃ ।

ದ್ವಿಧಾಭೂತಾ ಮಾನುಷಾಶ್ಚ ದೇವಾಸುರವಿಭೇದತಃ ॥೧೮.೪೫॥

 

ಅಸುರಾಸುರರೆಲ್ಲರೂ  ದುರ್ಯೋಧನನನ್ನು ಆಶ್ರಯಿಸಿದರು. ಮನುಷ್ಯರೂ ಕೊಡಾ ಅವರವರ ಸ್ವಭಾವಕ್ಕನುಗುಣವಾಗಿ ವಿಂಗಡಣೆಯಾದರು.

 

ಜಯ ಭೀಮ ಮಹಾಬಾಹೋ ಜಯ ದುರ್ಯ್ಯೋಧನೇತಿ ಚ ।

ಹುಙ್ಕಾರಾಂಶ್ಚೈವ  ಭಿಟ್ಕಾರಾಂಶ್ಚಕ್ರುರ್ದ್ದೇವಾಸುರಾ ಅಪಿ ॥೧೮.೪೬॥

 

ಈ ಎರಡು ಗುಂಪುಗಳು ಮಹಾಬಾಹು ಭೀಮನಿಗೆ ಜಯವಾಗಲಿ, ದುರ್ಯೋಧನನಿಗೆ ಜಯವಾಗಲಿ ಎಂದು ಹುಙ್ಕಾರಗಳನ್ನೂ ಭಿಟ್ಕಾರಗಳನ್ನೂ ಮಾಡಿದರು. (ಭಲೇ, ಭೇಷ್ ಇತ್ಯಾದಿಯಾಗಿ ತಮ್ಮವರನ್ನು ಹುರಿದುಂಬಿಸಿದರು)

 

ದೃಷ್ಟ್ವಾ ಜಗತ್ ಸುಸಂರಬ್ಧಂ ದ್ರೋಣೋsಥ ದ್ವಿಜಸತ್ತಮಃ ।

ನೇದಂ ಜಗದ್ ವಿನಶ್ಯೇತ ಭೀಮದುರ್ಯ್ಯೋಧನಾಶ್ರಯಾತ್ ॥೧೮.೪೭॥

 

ಇತಿ ಪುತ್ರೇಣ ತೌ ವೀರೌ ನ್ಯವಾರಯದರಿನ್ದಮೌ ।

ಸ್ವಕೀಯಾಯಾಂಸ್ವಕೀಯಾಯಾಂ ಯೋಗ್ಯತಾಯಾಂ ನತು ಕ್ವಚಿತ್ ॥೧೮.೪೮॥

 

ಯುವಯೋಃ ಸಮ ಇತ್ಯುಕ್ತ್ವಾ ದ್ರೌಣಿರೇತೌ ನ್ಯವಾರಯತ್ ।

ದ್ರೋಣಾಜ್ಞಯಾ ವಾರಿತೌ ತೌ ಯಯತುಃ ಸ್ವಂಸ್ವಮಾಲಯಮ್ ॥೧೮.೪೯॥

 

ಈರೀತಿ ಉದ್ವೇಗದ ಸನ್ನಿವೇಶ ನಿರ್ಮಾಣವಾದಾಗ, ಬ್ರಾಹ್ಮಣಶ್ರೇಷ್ಠರಾಗಿರುವ ದ್ರೋಣಾಚಾರ್ಯರು,  ಭೀಮ ಹಾಗೂ ದುರ್ಯೋಧನರ ಆಶ್ರಯದಿಂದ ಈ ಜಗತ್ತು ನಾಶವಾಗಬಾರದು ಎಂದು, ಅಶ್ವತ್ಥಾಮನ ಮುಖೇನ, ಶತ್ರುಗಳನ್ನು ಕೊಲ್ಲಬಲ್ಲ ಅವರಿಬ್ಬರನ್ನು ತಡೆದರು. 

‘ನಿಮ್ಮ-ನಿಮ್ಮ ಯೋಗ್ಯತೆಯಲ್ಲಿ ನಿಮಗೆ ಸಮಾನರಾದವರು ಯಾರೂ ಇಲ್ಲ’ ಎಂದು ಸಮಾಧಾನ ಮಾಡಿದ ಅಶ್ವತ್ಥಾಮ ಅವರಿಬ್ಬರನ್ನು ತಡೆದ. ಹೀಗೆ ದ್ರೋಣಾಚಾರ್ಯರ ಆಜ್ಞೆಯಿಂದ ತಡೆಯಲ್ಪಟ್ಟವರಾಗಿ ಅವರಿಬ್ಬರೂ ತಮ್ಮ-ತಮ್ಮ ಬಿಡಾರಕ್ಕೆ ತೆರಳಿದರು.

No comments:

Post a Comment