ನ ಸಂಶಯಂ ಕದಾsಪ್ಯೇಷ ಧರ್ಮ್ಮೇ
ಜ್ಞಾನೇsಪಿ ವಾsಕರೋತ್ ।
ವಿದ್ಯೋಪಜೀವನಂ ನೈಷ ಚಕಾರಾsಪದ್ಯಪಿ ಕ್ವಚಿತ್ ॥೧೮.೧೧ ॥
ಭೀಮಸೇನ ಧರ್ಮದಲ್ಲಾಗಲೀ, ಜ್ಞಾನದಲ್ಲಾಗಲೀ ಯಾವಾಗಲೂ
ಸಂಶಯವನ್ನು ಮಾಡಲಿಲ್ಲ. ಈ ಭೀಮಸೇನನು ವಿದ್ಯೆಯಿಂದ ಬದುಕುವಿಕೆಯನ್ನು ಆಪತ್ಕಾಲದಲ್ಲಿಯೂ
ಮಾಡಲಿಲ್ಲ.
ಅತೋ ನ ಧರ್ಮ್ಮನಹುಷೌ ಪ್ರತ್ಯುವಾಚ ಕಥಞ್ಚನ ।
ಆಜ್ಞಯೈವ ಹರೇರ್ದ್ದ್ರೌಣೇರಸ್ತ್ರಾಣ್ಯಸ್ತ್ರೈರಶಾತಯತ್ ॥೧೮.೧೨॥
ಆ ಕಾರಣದಿಂದಲೇ ಧರ್ಮ(ಯಕ್ಷ ರೂಪಿಯಾಗಿ ಬಂದ ಧರ್ಮ) ಮತ್ತು ನಹುಷನಿಗೆ(ಅಜಗರರೂಪಿಯಾಗಿ ಬಂದ ನಹುಷನಿಗೆ) ಭೀಮಸೇನ ಉತ್ತರ ನೀಡಲಿಲ್ಲ.
(ಭೀಮಸೇನ ಅಸ್ತ್ರಯುದ್ಧವನ್ನು ಆತ್ಯಂತಿಕ ಧರ್ಮ ಎಂದು ತಿಳಿಯುವುದಿಲ್ಲ ಎಂದು ಹೇಳಲ್ಪಟ್ಟಿದೆ. ಹಾಗಿದ್ದರೆ ಆತ ಅಶ್ವತ್ಥಾಮನೊಂದಿಗೆ ಏಕೆ ಅಸ್ತ್ರಯುದ್ಧವನ್ನು ಮಾಡಿದ ಎಂದರೆ: ) ಪರಮಾತ್ಮನ ಆಜ್ಞೆಯಿಂದಲೇ ಭೀಮಸೇನ ಅಶ್ವತ್ಥಾಮನ ಅಸ್ತ್ರಗಳನ್ನು ತನ್ನ ಅಸ್ತ್ರಗಳಿಂದ ಸಂಹರಿಸಿದ(ಮ.ಭಾ.ತಾ.ನಿ. ಉಲ್ಲೇಖ: ೨೭.೮-೧೦).
[ಭೀಮ ಮತ್ತು ಅಶ್ವತ್ಥಾಮನ ನಡುವೆ ನಡೆದ ಭೀಕರವಾದ
ಅಸ್ತ್ರಯುದ್ಧದ ವಿವರವನ್ನು ದ್ರೋಣಪರ್ವದಲ್ಲಿ ಕಾಣುತ್ತೇವೆ. ಅಸ್ತ್ರಯುದ್ಧ ಮಾಡದೇ ಇದ್ದಲ್ಲಿ
ಎಲ್ಲರೂ ಭೀಮಸೇನನಿಗೆ ಅಸ್ತ್ರವಿದ್ಯೆ ತಿಳಿದೇ ಇಲ್ಲಾ ಎಂದುಕೊಳ್ಳುತ್ತಾರೆ. ಅದಕ್ಕಾಗಿ ಪರಮಾತ್ಮ ಆಜ್ಞೆ ಮಾಡಿದ, ಪರಮಾತ್ಮನ ಆಜ್ಞೆಯಂತೆ ಭೀಮಸೇನ
ಅಸ್ತ್ರಯುದ್ಧ ಮಾಡಿದ ಕೂಡಾ. ಗುರುಮುಖದಲ್ಲಿ ಭೀಮ ಅಸ್ತ್ರ ವಿದ್ಯೆಯನ್ನು ಕಲಿಯದೇ ಈ ಭೀಕರವಾದ
ಯುದ್ಧವನ್ನು ಹೇಗೆ ಮಾಡಿದ ಎನ್ನುವುದು ಇಲ್ಲಿ ನಮಗೆ ಸ್ಪಷ್ಟವಾಗುತ್ತದೆ. ಸ್ವಾಭಾವಿಕವಾಗಿಯೇ
ಭೀಮನಿಗೆ ಅಸ್ತ್ರ ವಿದ್ಯೆ ತಿಳಿದಿತ್ತು ಆದರೆ ಆತ ಅದನ್ನು ಬಳಸುತ್ತಿರಲಿಲ್ಲ ಅಷ್ಟೇ].
ಅದೃಶ್ಯೋsಲಮ್ಬುಸೋ ಭಗ್ನೋ
ನಾನ್ಯತ್ರ ತು ಕಥಞ್ಚನ ।
ನಹ್ಯಸ್ತ್ರಯುದ್ಧೇ ಸದೃಶೋ ದ್ರೌಣೇರಸ್ತ್ಯರ್ಜ್ಜುನಾದೃತೇ ॥೧೮.೧೩ ॥
ಸರ್ವವಿತ್ತ್ವಂ ತತೋ
ಭೀಮೇ ಪ್ರದರ್ಶಯಿತುಮೀಶ್ವರಃ ।
ಅದಾದಾಜ್ಞಾಮಸ್ತ್ರಯುದ್ಧೇ ತಥೈವಾಲಮ್ಬುಸಂ ಪ್ರತಿ ॥೧೮.೧೪॥
ಅಲಮ್ಬುಸ ಎನ್ನುವ ಅಸುರ ಅದೃಶ್ಯನಾಗಿ ಮಾಯೆಯಿಂದ ಎಲ್ಲರನ್ನೂ
ಪೀಡಿಸುತ್ತಿದ್ದ. ಅವನನ್ನು ಭೀಮ ಅಸ್ತ್ರದಿಂದಲೇ
ಸೋಲಿಸಿದ(ಮ.ಭಾ.ತಾ.ನಿ. ಉಲ್ಲೇಖ: ೨೬.೮೩) . ಬೇರೆಲ್ಲೂ ಭೀಮ ಅಸ್ತ್ರಯುದ್ಧವನ್ನು ಮಾಡಲೇ ಇಲ್ಲ.
ಅಸ್ತ್ರಯುದ್ಧದಲ್ಲಿ ಅಶ್ವತ್ಥಾಮನಿಗೆ ಸಮನಾದವನು
ಅರ್ಜುನನನ್ನು ಬಿಟ್ಟು ಇನ್ನೊಬ್ಬ ಇರಲಿಲ್ಲ. ಹಾಗಾಗಿ ಭೀಮನ ಸರ್ವಜ್ಞತ್ವವನ್ನು ಜನರಿಗೆ ತೋರಿಸಲೆಂದೇ
ಶ್ರೀಕೃಷ್ಣನು ಅಲಮ್ಬುಸನ ಕುರಿತಾದ ಅಸ್ತ್ರ
ಯುದ್ಧಕ್ಕೆ ಆಜ್ಞೆಯನ್ನು ನೀಡಿದ. ಹಾಗಾಗಿ ಭೀಮ ಅವನೊಂದಿಗೆ ಅಸ್ತ್ರಯುದ್ಧ ಮಾಡಿದ.
[ತಾರತ್ಯಮದಲ್ಲಿ ಅಶ್ವತ್ಥಾಮ ಅರ್ಜುನನಿಗಿಂತ ಎತ್ತರದಲ್ಲಿರುವವನು. ಹೀಗಿರುವಾಗ ಹೇಗೆ ಅರ್ಜುನ ಅಶ್ವತ್ಥಾಮನಿಗೆ ಸಮನಾಗಿ ಯುದ್ಧಮಾಡಬಲ್ಲವನಾಗಿದ್ದ ಎನ್ನುವ ಪ್ರಶ್ನೆ ಇಲ್ಲಿ ಸಹಜವಾಗಿ ಮೂಡುತ್ತದೆ. ನರನ ಆವೇಶ ಇದ್ದುದರಿಂದ ಅರ್ಜುನ ರುದ್ರನ ಸಮಾನವಾದ ಬಲವುಳ್ಳವನಾದ. ಅಲ್ಲದೇ, ಎಂದೂ ಮುಗಿಯದ ಬಾಣಗಳಿರುವ ಬತ್ತಳಿಕೆ, ಹನುಮಂತನನ್ನು ಒಳಗೊಂಡ ಧ್ವಜ, ಶ್ರೇಷ್ಠವಾದ ಗಾಂಢೀವ ಧನುಸ್ಸು, ಈ ಎಲ್ಲವೂ ಇರುವುದರಿಂದ ಅರ್ಜುನನು ಅಶ್ವತ್ಥಾಮನಿಗಿಂತ ಮಿಗಿಲಾಗಿ ಕಾಣುತ್ತಾನೆ. ಇದರಿಂದಾಗಿ ಕೆಲವೊಮ್ಮೆ ಅರ್ಜುನ ಅಶ್ವತ್ಥಾಮನನ್ನು ಸೋಲಿಸುತ್ತಿದ್ದ, ಇನ್ನು ಕೆಲವೊಮ್ಮೆ ತಾನು ಸೋಲುತ್ತಿದ್ದ ಕೂಡಾ. ಈ ಕುರಿತಾದ ವಿವರಣೆಯನ್ನು, ಮಹಾಭಾರತದ ವಿರಾಟಪರ್ವದ(೬೦.೧೬-೧೭) ಮಾತಿನೊಂದಿಗೆ ನಾವು ಈಗಾಗಲೇ ಎರಡನೇ ಅಧ್ಯಾಯದಲ್ಲಿ(ಮ.ಭಾ.ತಾ.ನಿ. ಉಲ್ಲೇಖ: ೨.೧೬೮) ನೋಡಿದ್ದೇವೆ. ಹೀಗಾಗಿ ಅರ್ಜುನನದು ಆಯುಧ ನಿಮಿತ್ತ ಶ್ರೇಷ್ಠತೆಯೇ ಹೊರತು, ತಾರತಮ್ಯ ಅಥವಾ ಬಲನಿಮಿತ್ತ ಶ್ರೇಷ್ಠತೆ ಅಲ್ಲ]
ಪ್ರತ್ಯಕ್ಷೀಭೂತದೇವೇಷು ಬನ್ಧುಜ್ಯೇಷ್ಠೇಷು ವಾ ನತಿಮ್ ।
ಮರ್ಯ್ಯಾದಾಸ್ಥಿತಯೇsಶಾಸದ್ ಭಗವಾನ್ ಪುರುಷೋತ್ತಮಃ ॥೧೮.೧೫॥
ತತ್ರಾಪಿ ವಿಷ್ಣುಮೇವಾಸೌ ನಮೇನ್ನಾನ್ಯಂ ಕಥಞ್ಚನ ।
ಆಜ್ಞಯೈವಾಸ್ತ್ರದೇವಾಂಶ್ಚ ಪ್ರೇರಯಾಮಾಸ ನಾರ್ತ್ಥನಾತ್ ॥೧೮.೧೬॥
ಪ್ರತ್ಯಕ್ಷೀಭೂತದೇವತೆಗಳಲ್ಲಾಗಲೀ, ಜ್ಯೇಷ್ಠ ಬಂಧುಬಾಂಧವರಲ್ಲಾಗಲೀ,
ಲೋಕದ ನಿಯಮಕ್ಕನುಗುಣವಾಗಿ ನಮಸ್ಕಾರವನ್ನು ದೇವರ
ಆಜ್ಞೆಯಂತೆ ಭೀಮಸೇನ ಪಾಲಿಸುತ್ತಿದ್ದ.
ಅವರಲ್ಲಿಯೂ ಕೂಡಾ ನಾರಾಯಣನನ್ನೇ ಭೀಮಸೇನ ನಮಸ್ಕರಿಸುತ್ತಿದ್ದನೇ
ಹೊರತು ಬೇರೆಯವರನ್ನಲ್ಲ. ಅಸ್ತ್ರದೇವತೆಗಳನ್ನು ಆಜ್ಞೆಯಿಂದ ಪ್ರೇರಿಸಿದನೇ ಹೊರತು ಬೇಡಿಕೊಳ್ಳಲಿಲ್ಲ.
ಅನ್ವೇನಮೇವ ತದ್ಧರ್ಮ್ಮೇ ಕೃಷ್ಣೈಕಾ ಸಂಸ್ಥಿತಾ ಸದಾ ।
ಧೃತರಾಷ್ಟ್ರಾದಪಿ ವರಂ ತತೋ ನಾsತ್ಮಾರ್ತ್ಥಮಗ್ರಹೀತ್ ॥೧೮.೧೭॥
ನಾಶಪದ್ ಧಾರ್ತ್ತರಾಷ್ಟ್ರಾಂಶ್ಚ ಮಹಾಪದ್ಯಪಿ ಸಾ ತತಃ ।
ನ ವಾಚಾ ಮನಸಾ ವಾsಪಿ ಪ್ರತೀಪಂ ಕೇಶವೇsಚರತ್ ॥೧೮.೧೮॥
ಭೀಮಸೇನನನ್ನು ಅನುಸರಿಸಿ ದ್ರೌಪದಿಯೊಬ್ಬಳೇ ಸದಾ ಶುದ್ಧ-ಭಾಗವತ
ಧರ್ಮದಲ್ಲಿದ್ದಳು. ಆಕಾರಣದಿಂದಲೇ ಧೃತರಾಷ್ಟ್ರನಿಂದಲೂ ಕೂಡಾ ಅವಳು ತನಗಾಗಿ ವರವನ್ನು
ಸ್ವೀಕರಿಸಲಿಲ್ಲ.
ಸಭೆಯ ಮಧ್ಯದಲ್ಲಿ ವಸ್ತ್ರಾಪಹಾರದಂತಹ ಮಹಾ ಆಪತ್ತಿನಲ್ಲಿಯೂ
ಕೂಡಾ ಆಕೆ ದುರ್ಯೋಧನಾದಿಗಳನ್ನು ಶಪಿಸಲಿಲ್ಲ. ಮಾತಿನಿಂದಾಗಲೀ ಮನಸ್ಸಿನಿಂದಾಗಲೀ ಆಕೆ ಎಂದೂ ಪರಮಾತ್ಮನಲ್ಲಿ
ವಿರೋಧವನ್ನು ಮಾಡಲಿಲ್ಲ.
No comments:
Post a Comment