ಯಾಜೋಪಯಾಜಾವಾನೀಯಾಥಾರ್ಬುದೇನ ಗವಾಂ ನೃಪಃ ।
ಚಕಾರೇಷ್ಟಿಂ ತು ತದ್ಭಾರ್ಯ್ಯಾ ದ್ವಿಜಾಭ್ಯಾಮತ್ರ ಚಾsಹುತಾ ॥೧೮.೯೭ ॥
ದ್ರುಪದನು ಹತ್ತುಕೋಟಿ ಗೋವುಗಳಿಂದ ಯಾಜ ಹಾಗೂ ಉಪಯಾಜರನ್ನು ಕರೆತಂದು, ಯಾಗವನ್ನು ಮಾಡಿದನು. ಆ ಸಂದರ್ಭದಲ್ಲಿ ದ್ರುಪದನ
ಹೆಂಡತಿಯು ಯಾಜೋಪಯಾಜರಿಂದ ಕರೆಯಲ್ಪಟ್ಟಳು.
[ಮಹಾಭಾರತದ ಆದಿಪರ್ವದಲ್ಲಿ(೧೪೯.೪೧) ಈ ಕುರಿತ ವಿವರವನ್ನು
ಕಾಣಬಹುದು. ‘ತತ್ ಕರ್ಮ ಕುರುಮೇ ಯಾಜ
ವಿತರಾಮ್ಯರ್ಬುದಂ ಗವಾಮ್’] .
ದ್ರುಪದಾತ್ ಸುತಲಬ್ಧ್ಯರ್ತ್ಥಮ್ ಸಾsಹಙ್ಕಾರಾದ್ ವ್ಯಳಮ್ಬಯತ್ ।
ಕಿಮೇತಯೇತ್ಯವಜ್ಞಾಯ ತಾವುಭೌ ವಿಪ್ರಸತ್ತಮೌ ॥೧೮.೯೮ ॥
ಅಜುಹ್ವತಾಂ ತತ್ ಪುತ್ರಾರ್ತ್ಥಂ ಪತ್ನ್ಯಾಃ ಪ್ರಾಶ್ಯಂ ಹವಿಸ್ತದಾ ।
ಹುತೇ ಹವಿಷಿ ಮನ್ತ್ರಾಭ್ಯಾಂ ವೈಷ್ಣವಾಭ್ಯಾಂ ತದೈವ ಹಿ ॥೧೮.೯೯ ॥
ದೀಪ್ತಾಙ್ಗಾರನಿಭೋ ವಹ್ನಿಃ ಕುಣ್ಡಮದ್ಧ್ಯಾತ್ ಸಮುತ್ಥಿತಃ ।
ಕಿರೀಟೀ ಕುಣ್ಡಲೀ ದೀಪ್ತೋ ಹೇಮಮಾಲೀ ವರಾಸಿಮಾನ್ ॥೧೮.೧೦೦ ॥
ರಥೇನಾsದಿತ್ಯವರ್ಣ್ಣೇನ ನದನ್
ದ್ರುಪದಮಾದ್ರವತ್ ।
ಧೃಷ್ಟತ್ವಾದ್ ದ್ಯೋತನತ್ವಾಚ್ಚ ಧೃಷ್ಟದ್ಯುಮ್ನ ಇತೀರಿತಃ ॥೧೮.೧೦೧ ॥
ಮುನಿಭಿರ್ದ್ದ್ರುಪದೇನಾಪಿ ಸರ್ವವೇದಾರ್ತ್ಥತತ್ವವಿತ್ ।
ಅನ್ವೇನಂ ಭಾರತೀ ಸಾಕ್ಷಾದ್ ವೇದಿಮದ್ಧ್ಯಾತ್ ಸಮುತ್ಥಿತಾ ॥೧೮.೧೦೨ ॥
ದ್ರುಪದನಿಂದ, ಮಗನನ್ನು ಪಡೆಯುವ ಸಲುವಾಗಿ ಕರೆದರೂ, ಅವಳು ಅಹಂಕಾರದಿಂದ ವಿಳಂಬ ಮಾಡಿದಳು. ಆಗ,
‘ಇವಳಿಂದೇನು ಪ್ರಯೋಜನ’ ಎಂದು ಆಕೆಯನ್ನು ನಿರ್ಲಕ್ಷಿಸಿದ ಆ ಯಾಜೋಪಯಾಜರು,
ಮಕ್ಕಳನ್ನು ಪಡೆಯುವುದಕ್ಕಾಗಿ ಹೆಂಡತಿಯಿಂದ ಕುಡಿಯಬೇಕಾಗಿದ್ದ ಹವಿಸ್ಸನ್ನು ಬೆಂಕಿಯಲ್ಲೇ
ಹೋಮಮಾಡಿದರು. ಹೀಗೆ ವೈಷ್ಣವ ಮಂತ್ರಗಳಿಂದ ಆ ಹವಿಸ್ಸು ಹೋಮಿಸಲ್ಪಡುತ್ತಿರಲು, ಬೆಂಕಿಯಂತೆ ಹೊಳೆಯುತ್ತಿರುವ
ದೇಹವುಳ್ಳ ವಹ್ನಿಯು, ಕುಂಡದ ಮಧ್ಯದಿಂದ ಮೇಲಕ್ಕೆ ಬಂದನು. ಕಿರೀಟ ಹಾಗು ಕುಂಡಲವನ್ನು ಧರಿಸಿರುವ, ಹೊಳೆಯುವ ಬಂಗಾರದ ಮಾಲೆಯುಳ್ಳ, ಒಳ್ಳೆಯ ಕತ್ತಿಯನ್ನು ಹಿಡಿದ ಆತ, ಸೂರ್ಯನಂತೆ ಬಣ್ಣವುಳ್ಳ ರಥವನ್ನು ಏರಿ
ಘರ್ಜಿಸುತ್ತಾ, ದ್ರುಪದನ ಬಳಿ ಬಂದನು.
ಎಲ್ಲಾ ವೇದದ ತತ್ತ್ವವನ್ನು ತಿಳಿದವನಾದ ಅವನು, ಮುನಿಗಳಿಂದಲೂ,
ದ್ರುಪದನಿಂದಲೂ, ‘ಧೃಷ್ಟದ್ಯುಮ್ನ’ ಎಂದು ನಾಮಕರಣ ಮಾಡಲ್ಪಟ್ಟನು. (ಅಸಾಧಾರಣವಾದ ಧೈರ್ಯ(ಧೃಷ್ಟ)
ಹಾಗೂ ಚನ್ನಾಗಿ ಹೊಳೆಯುತ್ತಿರುವ(ದ್ಯುಮ್ನ) ಅವನು
‘ಧೃಷ್ಟದ್ಯುಮ್ನ’ ಎಂದು ಹೆಸರಾದನು).
ಅವನನ್ನು ಅಸುಸರಿಸಿ, ಸಾಕ್ಷಾತ್ ಭಾರತೀದೇವಿಯು ಯಜ್ಞಕುಂಡದ
ಮಧ್ಯದಿಂದ ಮೇಲೆದ್ದು ಬಂದಳು.
ಪ್ರಾಣೋ ಹಿ ಭರತೋ ನಾಮ ಸರ್ವಸ್ಯ ಭರಣಾಚ್ಛ್ರುತಃ ।
ತದ್ಭಾರ್ಯ್ಯಾ ಭಾರತೀ ನಾಮ ವೇದರೂಪಾ ಸರಸ್ವತೀ ॥೧೮.೧೦೩ ॥
ಎಲ್ಲರನ್ನೂ ಹೊತ್ತದ್ದರಿಂದ ಮುಖ್ಯಪ್ರಾಣನನ್ನು ‘ಭರತ’ ಎಂದೂ
ಕರೆಯುತ್ತಾರೆ. ಭರತನಿಗೆ ಸಂಬಂಧಪಟ್ಟವಳು(ಪತ್ನಿ) ಭಾರತೀ (ಭಾರತಸ್ಯ ಸಂಬಂಧಿನೀ ಭಾರತೀ).
ಸಾಕ್ಷಾತ್ ವೇದವೇ ಮೈವೆತ್ತು ಬಂದವಳಾದ ಅವಳನ್ನು ‘ಸರಸ್ವತೀ’ ಎಂದೂ ಕರೆಯುತ್ತಾರೆ.
ಈ ವಿಷಯವನ್ನು ಮಹಾಭಾರತದ ಆದಿಪರ್ವದಲ್ಲಿ(೧೪೯.೭೧-೭೩) ವಿವರಿಸಿರುವುದನ್ನು
ಕಾಣಬಹುದು: ‘ತಯೋಸ್ತು ನಾಮನಿ
ಚಕ್ರುರ್ದ್ವಿಜಾಃ ಸಂಪೂರ್ಣಮಾನಸಾಃ । ಧೃಷ್ಟತ್ವಾದಪ್ರಧೃಷ್ಯತ್ವಾದ್ ದ್ಯುಮ್ನಾದ್
ದುತ್ಸಮ್ಭವಾದಪಿ । ಧೃಷ್ಟದ್ಯುಮ್ನಃ ಕುಮಾರೋsಯಂ ದ್ರುಪದಸ್ಯ ಭವತ್ವಿತಿ । ಕೃಷ್ಣೇತ್ಯೇವಾಭವತ್ ಕನ್ಯಾ ಕೃಷ್ಣಾsಭೂತ್ ಸಾ ಹಿ ವರ್ಣತಃ । (ಬಣ್ಣದಿಂದ ಕಪ್ಪಗಿದ್ದುದರಿಂದ ಕೃಷ್ಣಾ ಎಂದು ಅವಳ ಹೆಸರಾಯಿತು) ತದಾ
ತನ್ಮಿಥುನಂ ಜಜ್ಞೇ ದ್ರುಪದಸ್ಯ ಮಹಾಮಖೇ ।
ವೈದಿಕಾಧ್ಯಯನೇ ಪಾರಂ ಧೃಷ್ಟದ್ಯುಮ್ನೋ ಗತಸ್ತದಾ’.
ಇನ್ನು ಪ್ರಾಣದೇವರನ್ನು ‘ಭರತ’ ಎನ್ನುವ ಹೆಸರಿನಿಂದ
ಕರೆಯುತ್ತಾರೆ ಎನ್ನುವುದನ್ನು ‘ಪ್ರಾಣೋ ಭರತಃ’
ಎಂದು ಐತರೇಯ ಬ್ರಾಹ್ಮಣದಲ್ಲಿ(೧೦.೨) ಹೇಳಿರುವುದರಲ್ಲಿ
ತಿಳಿಯುತ್ತದೆ].
ಶಂರೂಪಮಾಶ್ರಿತಾ ವಾಯುಂ ಶ್ರೀರಿತ್ಯೇವ ಚ ಕೀರ್ತ್ತಿತಾ ।
ಅವೇಶಯುಕ್ತಾ ಶಚ್ಯಾಶ್ಚ ಶ್ಯಾಮಳಾಯಾಸ್ತಥೋಷಸಃ ॥೧೮.೧೦೪ ॥
ಆನಂದವೇ ಮೈವೆತ್ತುಬಂದ ಮುಖ್ಯಪ್ರಾಣನನ್ನು ಆಶ್ರಯಿಸಿದ್ದರಿಂದ ‘ಶ್ರೀಃ’
ಎಂದೇ ಅವಳ ಹೆಸರು. ಅವಳು ಶಚಿ, ಶಾಮಳೆ ಮತ್ತು ಉಷೆಯ ಆವೇಶದಿಂದ ಕೂಡಿದ್ದಳು ಕೂಡಾ.
[ಮಹಾಭಾರತದಲ್ಲಿ ಅನೇಕ ಕಡೆ ದ್ರೌಪದಿಯನ್ನು ‘ಶ್ರೀಃ’ ಎಂದು ಸಂಬೋಧಿಸುವುದನ್ನು ನಾವು ಕಾಣುತ್ತೇವೆ. ಶ್ರೀಃ
ಎಂದರೆ ‘ಶಂ’ ರೂಪನಾಗಿರುವವನನ್ನು ಆಶ್ರಯಿಸಿದ್ದಾಳೆ
ಎಂದರ್ಥ. ಮಹಾಭಾರತದ ಆದಿಪರ್ವದಲ್ಲಿ ‘ಮಾನುಷಂ
ವಿಗ್ರಹಂ ಕೃತ್ವಾ ಸಾಕ್ಷಾಚ್ಛ್ರೀರಿವ ವರ್ಣಿನಿ’ (೧೪೯.೬೨) ಎಂದು ಹೇಳಿ ಮುಂದೆ ‘ತಾಂ ಚಾಪ್ಯೇಷಾಂ ಯೋಷಿತಂ ಲೋಕಕಾನ್ತಾಂ ಶ್ರಿಯಂ ಭಾರ್ಯಾಂ ವ್ಯದಧಾನ್ಮಾನುಷೇಷು' (೨೧೪.೩೦) ಎಂದು ಹೇಳುವುದನ್ನು
ಕಾಣುತ್ತೇವೆ. ಮುಂದೆ ಸ್ವರ್ಗಾರೋಹಣ ಪರ್ವದಲ್ಲಿ(೪.೧೨) ಶ್ರೀರೇಷಾ ದ್ರೌಪದೀರೂಪಾ ತ್ವದರ್ಥೇ ಮಾನುಷಂ ಗತಾ । ಅಯೋನಿಜಾ ಲೋಕಕಾನ್ತಾ
ಪುಣ್ಯಗನ್ಧಾ ಯುಧಿಷ್ಠಿರ’ ಎಂದು ಸ್ಫುಟವಾಗಿ ‘ಶ್ರೀಃ’ ಎಂದು ಹೇಳಿದ್ದಾರೆ. ಈರೀತಿ ಪ್ರಯೋಗವನ್ನು
ತಪ್ಪಾಗಿ ಶ್ರೀಲಕ್ಷ್ಮಿ ಎಂದು ತಿಳಿಯಬಾರದು. ‘ಶಂ’ ಎಂದರೆ ಮುಖ್ಯಪ್ರಾಣ.
ಅವನಲ್ಲಿ ಸದಾರತಳಾಗಿರುವವಳು ಭಾರತೀದೇವಿ. ಆದ್ದರಿಂದ ಅವಳನ್ನು ‘ಶ್ರೀಃ’ ಎಂದೂ ಕರೆಯುತ್ತಾರೆ].
ತಾಶ್ಚೇನ್ದ್ರಧರ್ಮ್ಮನಾಸತ್ಯಸಂಶ್ರಯಾಚ್ಛ್ರಿಯ ಈರಿತಾಃ ।
ಸಾ ಕೃಷ್ಣಾ ನಾಮತಶ್ಚಾsಸೀದುತ್ಕೃಷ್ಟತ್ವಾದ್ಧಿ ಯೋಷಿತಾಮ್ ॥೧೮.೧೦೫ ॥
ಶಚೀ, ಶಾಮಳೆ ಮತ್ತು ಉಷಾದೇವಿಯರೂ ಕೂಡಾ ಇಂದ್ರ, ಯಮ ಮತ್ತು ಅಶ್ವೀದೇವತೆಗಳನ್ನು
ಆಶ್ರಯಿಸಿರುವುದರಿಂದ ‘ಶ್ರೀಯಃ ’ ಎಂದು ಕರೆಸಿಕೊಳ್ಳಲ್ಪಡುತ್ತಾರೆ.
ಈರೀತಿ ದ್ರುಪದರಾಜನ ಯಜ್ಞಕುಂಡದಿಂದ ಮೇಲೆದ್ದು ಬಂದ, ಹೆಣ್ಣುಮಕ್ಕಳಲ್ಲೇ ಅತ್ಯಂತ ಶ್ರೇಷ್ಠಳಾದ ಅವಳಿಗೆ
‘ಕೃಷ್ಣಾ’ ಎನ್ನುವ ಹೆಸರು ಬಂತು.
ಕೃಷ್ಣಾ ಸಾ ವರ್ಣ್ಣತಶ್ಚಾsಸೀದುತ್ಕೃಷ್ಟಾನನ್ದಿನೀ ಚ ಸಾ ।
ಉತ್ಪತ್ತಿತಶ್ಚ ಸರ್ವಜ್ಞಾ ಸರ್ವಾಭರಣಭೂಷಿತಾ ॥೧೮.೧೦೬ ॥
ಆಕೆ ಬಣ್ಣದಿಂದಲೂ ಕೂಡಾ ‘ಕೃಷ್ಣಾ’. ಅಲ್ಲದೇ, ಉತ್ಕೃಷ್ಟವಾದ ಆನಂದವನ್ನು ಕೊಡುವವಳಾದ್ದರಿಂದ
ಅವಳನ್ನು ‘ಕೃಷ್ಣಾ’ ಎಂದು ಕರೆಯುತ್ತಾರೆ. ಆಕೆ ಹುಟ್ಟುವಾಗಲೇ ಎಲ್ಲವನ್ನೂ ಬಲ್ಲವಳೂ. ಸರ್ವಾಭರಣಭೂಷಿತಳೂ
ಆಗಿದ್ದಳು.
ಸಮ್ಪ್ರಾಪ್ತಯೌವನೈವಾsಸೀದಜರಾ ಲೋಕಸುನ್ದರೀ ।
ಉಮಾಂಶಯುಕ್ತಾsತಿತರಾಂ ಸರ್ವಲಕ್ಷಣಸಂಯುತಾ ॥೧೮.೧೦೭
॥
ಅವಳಿಗೆ ಬಾಲ್ಯವೆಂಬುದಿರಲಿಲ್ಲ. ಸಂಪೂರ್ಣ ಯೌವನವನ್ನು ಹೊಂದಿಯೇ
ಅವಳಿದ್ದಳು. ಅವಳಿಗೆ ಮುಪ್ಪು ಇರಲಿಲ್ಲ. ಲೋಕದಲ್ಲಿ ಅತ್ಯಂತ ಸುಂದರಿಯಾಗಿದ್ದಳು. ಅವಳು ಉಮೆಯ ಅಂಶದಿಂದಲೂ. ಎಲ್ಲಾ ಲಕ್ಷಣಗಳಿಂದಲೂ ಕೂಡಿದ್ದಳು.
No comments:
Post a Comment