ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, August 5, 2020

Mahabharata Tatparya Nirnaya Kannada 17221_17227

ಇತಿ ಪ್ರಶಾಸತಿ ಪ್ರಭೌ ಜಗಜ್ಜನಾರ್ದ್ದನೇsಖಿಲಮ್ ।

ಅಗಣ್ಯಸದ್ಗುಣಾರ್ಣ್ಣವೇ ಕದಾಚಿದಾಯಯೌ ದ್ವಿಜಃ ॥೧೭.೨೨೧॥

 

ಈರೀತಿಯಾಗಿ, ಸರ್ವೋತ್ತಮನಾದ, ಭಕ್ತರ ಹುಟ್ಟನ್ನು ತೊಡೆಯುವ (ಭಕ್ತರನ್ನು ಸಂಸಾರ ಬಂಧನದಿಂದ ಬಿಡಿಸಿ ಮುಕ್ತಿಯನ್ನು ನೀಡುವ) ನಾರಾಯಣನು,  ಎಣಿಸಲಾಗದ ಗುಣಗಳ ಕಡಲಾಗಿ ಎಲ್ಲವನ್ನೂ ಆಳುತ್ತಿರಲು, ಒಮ್ಮೆ ಒಬ್ಬ ಬ್ರಾಹ್ಮಣನು ಬಂದನು.

 

ಜನಾರ್ದ್ದನಃ ಸ ನಾಮತೋ ರಮೇಶಪಾದಸಂಶ್ರಯಃ ।

ಸ ಮಾನಿತಶ್ಚ ವಿಷ್ಣುನಾ ಪ್ರಣಮ್ಯ ವಾಕ್ಯಮಬ್ರವೀತ್ ॥೧೭.೨೨೨॥

 

ಆ ಬ್ರಾಹ್ಮಣನ ಹೆಸರು ಜನಾರ್ದನ. ಪರಮಾತ್ಮನ ಭಕ್ತ. ಪರಮಾತ್ಮನಿಂದ ಮಾನಿತನಾದ(ಗೌರವಿಸಲ್ಪಟ್ಟ) ಅವನು,  ನಮಸ್ಕರಿಸಿ, ಶ್ರೀಕೃಷ್ಣನಲ್ಲಿ  ಮಾತನ್ನು ಹೇಳುತ್ತಾನೆ: 

 

ಕ್ಷಮಸ್ವ ಮೇ ವಚಃ ಪ್ರಭೋ ಬ್ರವೀಮ್ಯತೀವ ಪಾಪಕಮ್ ।

ಯತಃ ಸುಪಾಪದೂತಕಸ್ತತೋ ಹಿ ತಾದೃಶಂ ವಚಃ ॥೧೭.೨೨೩॥

 

‘ಸರ್ವಸಮರ್ಥನಾದ ಶ್ರೀಕೃಷ್ಣನೇ, ಅತ್ಯಂತ ಪಾಪಿಷ್ಠವಾದ ಮಾತನ್ನು ಹೇಳಲು ಹೊರಟಿರುವ ನನ್ನನ್ನು ಕ್ಷಮಿಸು.  ಯಾವ ಕಾರಣದಿಂದ ನಾನು ಅತ್ಯಂತ ಪಾಪಿಷ್ಠರ ಧೂತನಾಗಿದ್ದೇನೋ, ಆ ಕಾರಣದಿಂದ ವಚನವೂ ಕೂಡಾ  ಹಾಗಿದೆ.

 

ನ ತೇsಸ್ತ್ಯಗೋಚರಂ ಕ್ವಚಿತ್ ತಥಾsಪಿ ಚಾsಜ್ಞಯಾ ವದೇ ।

ವದೇತಿ ಚೋದಿತೋsಮುನಾ ದ್ವಿಜೋ ಜಗಾದ ಮಾಧವಮ್ ॥೧೭.೨೨೪॥

 

ನಿನಗೆ ತಿಳಿಯದ್ದು ಯಾವುದೂ ಇಲ್ಲ. ಆದರೂ ನೀನು ಆಜ್ಞೆ ಕೊಟ್ಟರೆ ಹೇಳುತ್ತೇನೆ’ ಎಂದಾಗ ಕೃಷ್ಣನಿಂದ ‘ಹೇಳು’ ಎಂದು ಪ್ರೇರಿತನಾದ ಬ್ರಾಹ್ಮಣನು ಕೃಷ್ಣನನ್ನು ಕುರಿತು ಹೇಳುತ್ತಾನೆ:

 

ಸುತೌ ಹಿ ಸಾಲ್ವಭೂಪತೇರ್ಬಭೂವತುಃ ಶಿವಾಶ್ರಯೌ ।

ಶಿವಪ್ರಸಾದಸಮ್ಭವೌ ಪಿತುಸ್ತಪೋಬಲೇನ ತೌ ॥೧೭.೨೨೫॥

 

ಶಿವಭಕ್ತನಾದ ಸಾಲ್ವರಾಜನಿಗೆ ಅವನ ತಪೋಬಲದಿಂದ, ಶಿವನ ಅನುಗ್ರಹದಿಂದ, ಶಿವನೇ ಆಶ್ರಯವಾಗಿ ಉಳ್ಳ ಇಬ್ಬರು ಮಕ್ಕಳು ಹುಟ್ಟಿದರು. (ಇವರೇ ಹಂಸ ಮತ್ತು  ಡಿಭಕರು)

 

ಅಜೇಯವದ್ಧ್ಯತಾಂ ಚ ತೌ ಶಿವಾದ್ ವರಂ ಸಮಾಪತುಃ ।

ಜರಾಸುತಸ್ಯ ಶಿಷ್ಯಕೌ ತಪೋಬಲೇನ ಕೇವಲಮ್ ॥೧೭.೨೨೬॥

 

ಜರಾಸಂಧನ ಶಿಷ್ಯರಾಗಿರುವ ಅವರಿಬ್ಬರೂ, ಯಾರಿಗೂ ಸೋಲದ ಮತ್ತು ಯಾರಿಂದಲೂ ಸಾಯಿಸಲ್ಪಡದ  ವರವನ್ನು ಹೊಂದಿದರು..

 

ಮಹೋದರಂ ಚ ಕುಣ್ಡಧಾರಿಣಂ ಚ ಭೂತಕಾವುಭೌ ।

ತಥಾsಜಿತಾವವದ್ಧ್ಯಕೌ ದಿದೇಶ ಶಙ್ಕರಸ್ತಯೋಃ ॥೧೭.೨೨೭॥

 

ಅವರ ತಪೋಬಲಕ್ಕೆ ಮೆಚ್ಚಿ, ‘ಮಹೋದರ’ ಮತ್ತು ‘ಕುಣ್ಡಧಾರಿ’ ಎನ್ನುವ ತನ್ನ ಭೃತ್ಯರಾದ ಭೂತಗಳನ್ನು ಸದಾಶಿವನು ಅವರ ಸಹಾಯಕ್ಕಾಗಿ ಆಜ್ಞೆಮಾಡಿದನು. ಆ ಭೂತಗಳೂ ಕೂಡಾ ಯಾರಿಗೂ ಸೋಲಲಾರದವು ಮತ್ತು ಯಾರಿಂದಲೂ ಸಾಯಿಸಲಾರದವುಗಳು.

 

[ಈ ಕುರಿತಾದ ವಿವರಣೆ ಮಹಾಭಾರತದಲ್ಲೇ(ಸಭಾಪರ್ವ ೭೪.೩೯) ಕಾಣಸಿಗುತ್ತದೆ ನಾಮಭ್ಯಾಂ ಹಂಸಡಿಭಕಾವಶಸ್ತ್ರನಿಧನಾವುಭೌ’  ಹರಿವಂಶದ ಭವಿಷ್ಯತ್ಪರ್ವದಲ್ಲೂ  ಈ ಕುರಿತಾದ ವಿವರಣೆ ಕಾಣಸಿಗುತ್ತದೆ:  ದೇವಾಸುರಚಮೂಮುರ್ಖ್ಯೆಕ್ಷಗಂಧರ್ವದಾನವೈಃ ।  ಆವಾಮಜಯ್ಯೌ ಸರ್ವಾತ್ಮನ್ನೇಶ ನೌ  ಪ್ರಥಮೋ ವರಃ। ದ್ವಿತೀಯೋ ನೌ ವಿರೂಪಾಕ್ಷ  ರೌದ್ರಾಸ್ತ್ರಾಣಾಂ ಚ ಸಙ್ಗ್ರಹಃ’(೧೦೫.೧೨)  

ಇಂದು ಲಭ್ಯವಿರುವ ಹರಿವಂಶದಲ್ಲಿ  ಈರೀತಿಯ  ಪಾಠವೂ ಕಾಣಸಿಗುತ್ತದೆ: ‘ಸಹಾಯೌ ದ್ವೌ  ಮಹಾದೇವ ಭೂತೌ ಯುದ್ಧೇ ಹಿ ಗಚ್ಛತಾಮ್ । ಏವಮಸ್ತ್ವಿತಿ ದೇವೇಶ ಆಹ ಬೃಙ್ಗಿರಿಟಿ ಹರಃ । ಕುಣ್ಡೋದರಂ  ವಿರೂಪಾಕ್ಷಂ  ಸರ್ವಪ್ರಾಣಿಹಿತೇ ರತಮ್ । ಯುವಾಮಥ ಚ ಭೂತೇಶೌ ಸಹಾಯೌ  ಸತತಂ ರಣೇ’ (ಹರಿವಂಶ, ಭವಿಷ್ಯತ್ಪರ್ವಣಿ ೧೦೫.೧೫-೧೬) ಆದರೆ ಇದು ಅಶುದ್ಧ ಪಾಠ. ಏಕೆಂದರೆ ಇದು ಇಲ್ಲಿ ಅನ್ವಯವೇ ಆಗುವುದಿಲ್ಲ ಮತ್ತು  ಅರ್ಥವೂ ಕೂಡಾ ಅಸ್ವಾರಸ್ಯವಾಗಿದೆ. ಹಾಗಾಗಿ ಹರಿವಂಶದ ಪಾಠ ಈರೀತಿ ಇದ್ದರೂ ಇರಬಹುದು: ‘ಏವಮಸ್ತ್ವಿತಿ ದೇವೇಶಃ ಪ್ರಾಹ ಲಮ್ಬೋದರಂ ಹರಃ । ಕುಣ್ಡಧಾರಂ ವಿರೂಪಾಕ್ಷಃ  ಸರ್ವಪ್ರಾಣಿಹಿತೇ ರತಃ’

 

ಇಲ್ಲಿ  ಲಮ್ಬೋದರ ಎಂದರೆ ‘ವಿನಾಯಕ’ ಎನ್ನುವ ಭ್ರಮೆ ಬರಬಾರದು ಎಂದು ಆಚಾರ್ಯರು ‘ಮಹೋದರ’ ಎಂದು ಹೇಳಿದ್ದಾರೆ. ಏಕೆಂದರೆ ಮುಂದೆ ಭವಿಷ್ಯತ್ಪರ್ವದಲ್ಲೇ(೧೨೭.೨೧) ‘ಅಥ ಭೂತೌ ಮಹಾಘೋರೌ  ಲಮ್ಬೋದರಶರೀರಿಣೌ’ ಎಂದು ಹೇಳಿದ್ದಾರೆ.  ಭೂತ ಎನ್ನುವ ವಿಶೇಷ ಇರುವುದರಿಂದ ಮಹೋದರ ಮತ್ತು ಕುಣ್ಡಧಾರ ಎನ್ನುವವರು ಭೂತಗಳು ಎಂದಾಗುತ್ತದೆ. ಆದ್ದರಿಂದ ಇಲ್ಲಿ ಹೇಳಿರುವ  ಲಮ್ಬೋದರ ಗಣಪತಿ ಅಲ್ಲ].


No comments:

Post a Comment