ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, August 15, 2020

Mahabharata Tatparya Nirnaya Kannada 1819_1829

 

ಅನ್ಯೇ ಭಾಗವತತ್ವೇsಪಿ ಖಿನ್ನಧರ್ಮ್ಮಾಃ ಕ್ವಚಿತ್ಕ್ವಚಿತ್ ।

ಸ್ಯಮನ್ತಕಾರ್ತ್ಥೇ ರಾಮೋsಪಿ ಕೃಷ್ಣಸ್ಯ ವಿಮನಾsಭವತ್ ॥೧೮.೧೯॥

 

ಭೀಮ ಹಾಗೂ ದ್ರೌಪದಿಯನ್ನು ಬಿಟ್ಟು ಉಳಿದವರು ಭಾಗವತರಾದರೂ ಕೂಡಾ, ಅಲ್ಲಲ್ಲಿ ಕೆಲವೊಮ್ಮೆ ಧರ್ಮದಿಂದ ಭೃಷ್ಟರಾಗಿದ್ದಾರೆ. (ವಿವಿಧ ಘಟನೆಗಳ ಪಟ್ಟಿ ನೀಡುತ್ತಾರೆ:) ಸ್ಯಮನ್ತಕ ಮಣಿಯ ಕಾರಣದಿಂದ ಬಲರಾಮನೂ ಕೂಡಾ, ಕೃಷ್ಣನಲ್ಲಿ ಮನಸ್ಸು ಕೆಡಿಸಿಕೊಂಡ (ಮ.ಭಾ.ತಾ.ನಿ. ಉಲ್ಲೇಖ: ೨೦.೩೨-೩೩).  

 

ಅವಮೇನೇsರ್ಜ್ಜುನಃ ಕೃಷ್ಣಂ ವಿಪ್ರಸ್ಯ ಶಿಷುರಕ್ಷಣೇ ।

ಪ್ರದ್ಯುಮ್ನ ಉದ್ಧವಃ ಸಾಮ್ಬೋsನಿರುದ್ಧಾದ್ಯಾಶ್ಚ ಸರ್ವಶಃ ॥೧೮.೨೦॥

 

ಹರೇರಿಷ್ಟಂ ಸುಭದ್ರಾಯಾಃ ಫಲ್ಗುನೇ ದಾನಮಞ್ಜಸಾ ।

ಜ್ಞಾತ್ವಾsಪಿ ರುರುಧುಃ ಸಮ್ಯಕ್ ಸಾತ್ಯಕಿಃ ಕೃಷ್ಣಸಮ್ಮಿತಮ್ ॥೧೮.೨೧॥

 

ಅರ್ಜುನನು ಬ್ರಾಹ್ಮಣನ ಮಕ್ಕಳನ್ನು ರಕ್ಷಿಸುವ ವಿಚಾರದಲ್ಲಿ ಅವಮಾನ ಮಾಡಿದ (ಮ.ಭಾ.ತಾ.ನಿ. ಉಲ್ಲೇಖ: ೨೧.೧೫-೩೫). ಪ್ರದ್ಯುಮ್ನ, ಉದ್ಧವ, ಸಾಮ್ಬ, ಅನಿರುದ್ಧ, ಮೊದಲಾದ ಎಲ್ಲರೂ ಕೂಡಾ ಸುಭದ್ರೆಯನ್ನು ಅರ್ಜುನನಿಗೆ ಕೊಡಬೇಕೆನ್ನುವುದು ಭಗವಂತನ ಇಚ್ಛೆ ಎಂದು ತಿಳಿದಿದ್ದರೂ ಕೂಡಾ ತಡೆದರು. ಸಾತ್ಯಕಿಯೂ ಕೂಡಾ ಒಮ್ಮೊಮ್ಮೆ ಅರ್ಜುನನನ್ನು ಕೃಷ್ಣನಿಗೆ ಸದೃಶ ಅಂದುಕೊಳ್ಳುತ್ತಿದ್ದ.

 

ಕದಾಚಿನ್ಮನ್ಯತೇ ಪಾರ್ತ್ಥಂ ಧರ್ಮ್ಮಜೋsಪಿ ನರಂ ಹರಿಮ್ ।

ಮತ್ವಾsಬಿಭೇಜ್ಜರಾಸನ್ಧವಧೇ ಕೃಷ್ಣಮುದೀರಿತುಮ್ ॥೧೮.೨೨॥

 

ಧರ್ಮರಾಜನೂ ಕೂಡಾ ಪರಮಾತ್ಮನನ್ನು ‘ಮನುಷ್ಯ’ ಎಂದು ತಿಳಿದು, ಜರಾಸಂಧನ ವಧೆಯ ಸಮಯದಲ್ಲಿ ಕಳುಹಿಸಿಕೊಡಲು ಭಯಪಟ್ಟ.

 

ಬನ್ಧನಂ ಶಙ್ಕಮಾನೋ ಹಿ ಕೃಷ್ಣಸ್ಯ ವಿದುರೋsಪಿ ತು  

ಕೌರವೇಯಸಭಾಮದ್ಧ್ಯೇ ನಾವತಾರಮರೋಚಯತ್ ॥೧೮.೨೩॥

 

ವಿದುರನೂ ಕೂಡಾ ಕೃಷ್ಣ ಬಂಧನಕ್ಕೆ ಒಳಗಾಗಬಹುದು ಎಂದು ಶಂಕಿಸಿ,  ಸಂಧಾನದ ಸಮಯದಲ್ಲಿ ಕೌರವರ ಸಭೆಯ ಮಧ್ಯದಲ್ಲಿ ಕೃಷ್ಣನ ಆಗಮನವನ್ನು ಇಷ್ಟಪಡಲಿಲ್ಲ.

(ವಿದುರನೂ ಕೂಡಾ, ಕೃಷ್ಣನನ್ನು ‘ನರ’ ಎಂದುಕೊಂಡು ರಾಯಭಾರಿ ಧರ್ಮಕ್ಕೆ ವಿರುದ್ಧ ಯೋಚನೆ ಮಾಡಿದ)

 

ನಕುಲಃ ಕರದಾನಾಯ ಪ್ರೇಷಯಾಮಾಸ ಕೇಶವೇ ।

ಅವಮೇನೇ ಹರೇರ್ಬುದ್ಧಿಂ  ಸಹದೇವಃ ಕುಲಕ್ಷಯಾತ್ ॥೧೮.೨೪ ॥

 

ನಕುಲ ಶ್ರೀಕೃಷ್ಣನ ಪುರದ ಮುಂದೆ ರಥವನ್ನು ನಿಲ್ಲಿಸಿ, ಕೃಷ್ಣನಿಂದ ಕರವನ್ನು ಪಡೆದುಬರುವಂತೆ ಹೇಳಿ ತನ್ನ ಭೃತ್ಯರನ್ನು ಕಳುಹಿಸಿದ್ದ.(ಸಭಾಪರ್ವ). ಕುಲಕ್ಷಯಕ್ಕೆ ಸಂಬಂಧಪಟ್ಟಂತೆ ಪರಮಾತ್ಮನ ಬುದ್ಧಿಯನ್ನೇ ಸಹದೇವನು ಹೀನವಾಗಿ ತಿಳಿದು ಅವಮಾನ ಮಾಡಿದ.

[ಉದ್ಯೋಗಪರ್ವದಲ್ಲಿ ಈ ವಿವರ ಕಾಣಸಿಗುತ್ತದೆ, ಕೃಷ್ಣಾ, ನಿನ್ನ ಮೇಲೆ ಮಹತ್ತರವಾದ ಭಾರವಿದೆ. ಎರಡು ಕುಲದ ನಡುವೆ ಯುದ್ಧವಾಗುವ ಸಂಭವವಿದೆ. ಅದರಿಂದಾಗಿ ನೀನು ಬಹಳ ಯೋಚಿಸಿ ಮುಂದುವರಿಯಬೇಕು’ ಎಂದು ಸಹದೇವ ಕೃಷ್ಣನಿಗೇ ಉಪದೇಶ ಮಾಡಿದ. ಒಬ್ಬ ರಾಯಭಾರಿ ಹೇಗಿರಬೇಕು,  ಯಾವ ರೀತಿ ಮಾತನಾಡಬೇಕು, ಯಾವರೀತಿ ಪರಿಣಾಮವಾಗಬೇಕು ಇತ್ಯಾದಿ ವಿಷಯವನ್ನು ಅವನು ಶ್ರೀಕೃಷ್ಣನಿಗೇ ಉಪದೇಶ ಮಾಡಿದ. ಕೃಷ್ಣ ಅವನ ಮಾತನ್ನು ಸುಮ್ಮನೆ ಕೇಳಿಸಿಕೊಂಡ] 

 

ದೇವಕೀವಸುದೇವಾದ್ಯಾ ಮೇನಿರೇ ಮಾನುಷಂ ಹರಿಮ್ ।

ಭೀಷ್ಮಸ್ತು ಭಾರ್ಗ್ಗವಂ ರಾಮಮವಮೇನೇ ಯುಯೋಧ ಚ ॥೧೮.೨೫ ॥

 

ವಸುದೇವ-ದೇವಕೀ ಮೊದಲಾದವರು ಪರಮಾತ್ಮನನ್ನು ‘ಮನುಷ್ಯ’ ಅಂದುಕೊಂಡರು. ಭೀಷ್ಮ ಪರಶುರಾಮನನ್ನು ಅವಮಾನ ಮಾಡಿ ಯುದ್ಧಮಾಡಿದ.

 

ದ್ರೋಣಕರ್ಣ್ಣದ್ರೌಣಿಕೃಪಾಃ ಕೃಷ್ಣಾಭಾವೇ ಮನೋ ದಧುಃ ।

ದೇವಾಃ ಶಿವಾದ್ಯಾ ಅಪಿ ತು ವಿರೋಧಂ ಚಕ್ರಿರೇ ಕ್ವಚಿತ್ ॥೧೮.೨೬ ॥

 

ದ್ರೋಣಾಚಾರ್ಯರು, ಕರ್ಣ, ಅಶ್ವತ್ಥಾಮ, ಕೃಪ, ಇವರೆಲ್ಲಾ ಕೃಷ್ಣನನ್ನು ಇಲ್ಲವಾಗಿಸಬೇಕು  ಎಂದು ನಿಶ್ಚಯಮಾಡಿದ್ದರು.  ರುದ್ರಾದಿ ದೇವತೆಗಳೂ ಕೂಡಾ ಅಲ್ಲಲ್ಲಿ ವಿರೋಧವನ್ನು ಮಾಡಿದರು.

 

ಋಷಿಮಾನುಷಗನ್ಧರ್ವಾ ವಕ್ತವ್ಯಾಃ ಕಿಮತಃ ಪರಮ್ ।

ಜನ್ಮಜನ್ಮಾನ್ತರೇsಜ್ಞಾನಾದವಜಾನನ್ತಿ ಯತ್ ಸದಾ ॥೧೮.೨೭॥

 

ದೇವತೆಗಳೇ ಹೀಗೆ ಮಾಡಿದರು ಎಂದಮೇಲೆ ಋಷಿಗಳು, ಮನುಷ್ಯರು, ಗಂಧರ್ವರು ಮಾಡಲಿಲ್ಲಾ  ಎಂದು ಹೇಳಬೇಕೇ? ಮಾಡಿಯೇ ಮಾಡುತ್ತಾರೆ.  ಜನ್ಮಜನ್ಮಾಂತರದ ಅಜ್ಞಾನದಿಂದ ಭಗವಂತನನ್ನು  ಅವಮಾನ ಮಾಡುತ್ತಾರೆ. 

 

ತಸ್ಮಾದೇಕೋ ವಾಯುರೇವ ಧರ್ಮ್ಮೇ ಭಾಗವತೇ ಸ್ಥಿರಃ ।

ಲಕ್ಷ್ಮೀಃ ಸರಸ್ವತೀ ಚೇತಿ ಪರಶುಕ್ಲತ್ರಯಂ ಶ್ರುತಮ್ ॥೧೮.೨೮ ॥

 

ಅದರಿಂದ ಮುಖ್ಯಪ್ರಾಣನೊಬ್ಬನೇ ಭಾಗವತ ಧರ್ಮದಲ್ಲಿ ಸ್ಥಿರನಾಗಿ ಇದ್ದಾನೆ. ಲಕ್ಷ್ಮೀ, ಸರಸ್ವತೀಯರೂ ಕೂಡಾ. ಈ ಮೂವರು ಪರಮಾತ್ಮನಲ್ಲಿ ಯಾವುದೇ ಬುದ್ಧಿದೋಷವಿಲ್ಲದೇ ಇರುತ್ತಾರೆ.

[ಶಾಸ್ತ್ರದಲ್ಲಿ ಬ್ರಹ್ಮದೇವರಿಗೆ ಏನು ಗುಣ-ಸ್ಥಾನವನ್ನು ಹೇಳುತ್ತೇವೋ, ಆ ಸ್ಥಾನ ಮುಖ್ಯಪ್ರಾಣನಿಗೂ ಇದೆ ಎಂದು ತಿಳಿದುಕೊಳ್ಳಬೇಕು. ಮುಖ್ಯಪ್ರಾಣನಿಗೆ ಯಾವ ಗುಣ-ಸ್ಥಾನಗಳನ್ನು ಹೇಳುತ್ತೇವೋ,  ಆ ಅಧಿಕಾರ ಬ್ರಹ್ಮದೇವರಿಗೂ ಇದೆ ಎಂದು ತಿಳಿದುಕೊಳ್ಳಬೇಕು. ಈ ಕುರಿತಾದ ಮಾರ್ಗಸೂಚಿಯನ್ನು ನಾವು ಈಗಾಗಲೇ ಮೊದಲನೇ ಅಧ್ಯಾಯದಲ್ಲಿ ನೋಡಿದ್ದೇವೆ.  ಇಲ್ಲಿ ವಾಯು-ಭಾರತೀ ಎಂದು ಹೇಳದೇ ಸರಸ್ವತೀ ಎಂದು ಹೇಳಿದ್ದಾರೆ. ಅಂದರೆ ವಾಯು ಎನ್ನುವ ಪದದಿಂದ ಬ್ರಹ್ಮ-ವಾಯುವನ್ನೂ, ಸರಸ್ವತಿ ಎನ್ನುವ ಪದದಿಂದ ಸರಸ್ವತಿ-ಭಾರತಿಯರನ್ನು ಹೇಳಲಾಗಿದೆ ಎನ್ನುವುದನ್ನು ನಾವಿಲ್ಲಿ ತಿಳಿದುಕೊಳ್ಳಬೇಕು ]

 

ಸರ್ವಮೇತಚ್ಚ ಕಥಿತಂ ತತ್ರತತ್ರಾಮಿತಾತ್ಮನಾ ।

ವ್ಯಾಸೇನೈವ ಪುರಾಣೇಷು ಭಾರತೇ ಚ ಸ್ವಸಂವಿದಾ ॥೧೮.೨೯॥

 

ಇವೆಲ್ಲವನ್ನೂ ಕೂಡಾ ಅಮಿತ ಬುದ್ಧಿಯುಳ್ಳ ಪರಮಾತ್ಮನೇ(ವೇದವ್ಯಾಸರೇ) ಪುರಾಣಗಳಲ್ಲಿ ಮತ್ತು ಮಹಾಭಾರತದಲ್ಲಿ  ತನ್ನ ವಿವಕ್ಷೆಯೊಂದಿಗೆ(ಸಮಾಧಿಭಾಷೆಯಿಂದ)  ಹೇಳಿದ್ದಾನೆ.


No comments:

Post a Comment