ವಿಧಾಯ ಭಕ್ತವಾಞ್ಚಿತಂ
ಪ್ರಿಯಾಸಹಾಯ ಈಶ್ವರಃ ।
ಪ್ರಗೃಹ್ಯ ತಂ
ಮಹಾಮಣಿಂ ವಿನಿರ್ಯಯೌ ಗುಹಾಮುಖಾತ್ ॥೧೭.೨೧೩॥
ಪರಮಾತ್ಮನು ಭಕ್ತನಾಗಿರುವ ಜಾಮ್ಬವಂತನ ಬಯಕೆಯನ್ನು ಈಡೇರಿಸಿ, ಜಾಮ್ಬವತಿ
ಜೊತೆಗೂಡಿ, ಸ್ಯಮಂತಕಮಣಿಯೊಂದಿಗೆ ಗುಹೆಯಿಂದ ಹೊರಬಂದನು.
ಗುಹಾಪ್ರವಿಷ್ಟಮೀಶ್ವರಂ
ಬಹೂನ್ಯಹಾನ್ಯನಿರ್ಗ್ಗತಮ್ ।
ಪ್ರತೀಕ್ಷ್ಯ
ಯಾದವಾಸ್ತು ಯೇ ಗತಾ ಗೃಹಂ ತದಾsಹೃಷುಃ ॥೧೭.೨೧೪॥
ಗುಹೆಯ ಒಳಗಡೆ ಹೋಗಿ ಬಹಳದಿನ ಆದರೂ ಹೊರಬಾರದೇ ಇರುವ ಶ್ರೀಕೃಷ್ಣನನ್ನು ಬಹಳದಿನ ನಿರೀಕ್ಷೆ
ಮಾಡಿ, ಯಾವ ಯಾದವರು ಮನೆಗೆ ತೆರಳಿದ್ದರೋ, ಅವರೆಲ್ಲರೂ ಕೂಡಾ
ಇದೀಗ ಕೃಷ್ಣ ಹಿಂತಿರುಗಿರುವುದನ್ನು ಕಂಡು ಬಹಳ ಸಂತಸಪಟ್ಟರು.
ಸಮಸ್ತವೃಷ್ಣಿಸನ್ನಿಧೌ
ಯದೂತ್ತಮಃ ಸ್ಯಮನ್ತಕಮ್ ।
ದದೌ ಚ
ಸತ್ರಜಿತ್ಕರೇ ಸ ವಿಚ್ಛವಿರ್ಬಭೂವ ಹ ॥೧೭.೨೧೫॥
ಸಮಸ್ತ ಯಾದವರ ಸಮ್ಮುಖದಲ್ಲೇ
ಶ್ರೀಕೃಷ್ಣನು ಸ್ಯಮಂತಕ ಮಣಿಯನ್ನು ಸತ್ರಜಿತ್ ರಾಜನ ಕೈಯಲ್ಲಿ ಕೊಟ್ಟನು. ಸತ್ರಜಿತನಾದರೋ, ಈ
ಎಲ್ಲಾ ಘಟನೆಗಳಿಂದಾಗಿ ಕಾನ್ತಿಹೀನನಾಗಿದ್ದನು.
ಸ ದುರ್ಯ್ಯಶೋ
ಸಮಾಪತಾವನೂಚ್ಯ ಮಿಥ್ಯಯಾ ತಪನ್ ।
ಸ್ವಪಾಪಹಾನಕಾಙ್ಕ್ಷಯಾ
ದದೌ ಸುತಾಂ ಜನಾರ್ದ್ದನೇ ॥೧೭.೨೧೬॥
ಸತ್ರಾಜಿತ ರಾಜನು ತನ್ನ ಸುಳ್ಳಿನ ಮಾತಿನಿಂದ ಶ್ರೀಕೃಷ್ಣನ ಮೇಲೆ ಕೆಟ್ಟ ಅಪವಾದ ಬರುವಂತೆ
ಮಾಡಿರುವುದಕ್ಕಾಗಿ ಪಶ್ಚಾತ್ತಾಪ ಪಡುತ್ತಾ, ತನ್ನ ದೋಷಪರಿಹಾರೇಚ್ಛೆಯಿಂದ
ಶ್ರೀಕೃಷ್ಣನಿಗೆ ತನ್ನ ಮಗಳನ್ನು(ಸತ್ಯಭಾಮೆಯನ್ನು) ಕೊಟ್ಟನು.
ಮಣಿಂ ಚ ತಂ
ಪ್ರದಾಯ ತಂ ನನಾಮ ಹ ಕ್ಷಮಾಪಯನ್ ।
ಮಣಿಂ ಪುನರ್ದ್ದದೌ
ಹರಿರ್ಮ್ಮುಮೋದ ಸತ್ಯಭಾಮಯಾ ॥೧೭.೨೧೭॥
ಸ್ಯಮಂತಕ ಮಣಿಯನ್ನೂ ಕೂಡಾ ಶ್ರೀಕೃಷ್ಣನಿಗೆ ನೀಡಿದ ಸತ್ರಜಿತ್, ಕ್ಷಮೆಯನ್ನು ಬೇಡುತ್ತಾ, ನಮಸ್ಕಾರ
ಮಾಡಿದನು. ಪರಮಾತ್ಮನು ಮಣಿಯನ್ನು ರಾಜನಿಗೆ ಹಿಂತಿರುಗಿಸಿ, ಸತ್ಯಭಾಮೆಯಿಂದ ಸಂತಸಪಟ್ಟನು.
ರಮೈವ ಸಾ ಹಿ
ಭೂರಿತಿ ದ್ವಿತೀಯಮೂರ್ತ್ತಿರುತ್ತಮಾ ।
ಬಭೂವ
ಸತ್ರಜಿತ್ಸುತಾ ಸಮಸ್ತಲೋಕಸುನ್ದರೀ ॥೧೭.೨೧೮॥
ಸತ್ಯಭಾಮೆಯೂ ಕೂಡಾ ಶ್ರೀಲಕ್ಷ್ಮಿಯೇ ಆಗಿದ್ದು, ಭೂಃ[1] ಎಂಬ ಲಕ್ಷ್ಮೀದೇವಿಯ ಎರಡನೇ ರೂಪವಾಗಿದ್ದಾಳೆ. ಸಮಸ್ತಲೋಕಸುಂದರಿಯಾಗಿರುವ ಆಕೆ ಸತ್ರಜಿತ್ ರಾಜನ ಮಗಳಾಗಿ ಅವತರಿಸಿದ್ದಳು.
ತತೋ ಹಿ ಸಾ ಚ
ರುಗ್ಮಿಣೀ ಪ್ರಿಯೇ ಪ್ರಿಯಾಸು ತೇsಧಿಕಮ್ ।
ಜನಾರ್ದ್ದನಸ್ಯ ತೇ ಹರೇಃ ಸದಾsವಿಯೋಗಿನೀ ಯತಃ ॥೧೭.೨೧೯॥
ಈ ಕಾರಣದಿಂದ ಸತ್ಯಭಾಮೆ ಹಾಗೂ ರುಗ್ಮಿಣೀದೇವಿಯರು ಇತರ ಎಲ್ಲಾ ಪತ್ನಿಯರ ನಡುವೆ ಶ್ರೀಕೃಷ್ಣನಿಗೆ ಅತ್ಯಂತ
ಪ್ರಿಯರು. ಅವರು ಕೃಷ್ಣನೊಂದಿಗೆ ಎಂದೂ ವಿಯೋಗವಿಲ್ಲದೆ ಇರುತ್ತಾರೆ.
ಅಥಾsಪ ಸಾಮ್ಬನಾಮಕಂ ಸುತಂ ಚ ರೋಹಿಣೀ ಹರೇಃ ।
ಚತುರ್ಮ್ಮುಖಾಂಶಸಂಯುತಂ ಕುಮಾರಮೇವ ಷಣ್ಮುಖಮ್ ॥೧೭.೨೨೦॥
ತದನಂತರ ಪರಮಾತ್ಮನಿಂದ ರೋಹಿಣಿಯು (ಜಾಂಬವತಿಯು),
ಚತುರ್ಮುಖಬ್ರಹ್ಮನ ಅಂಶದಿಂದ ಕೂಡಿರುವ, ಸಾಮ್ಬಾ ಎನ್ನುವ ಹೆಸರನ್ನು ಹೊತ್ತ ಷಣ್ಮುಖನನ್ನು(ಸ್ಕಂಧನನ್ನು)
ಮಗನಾಗಿ ಪಡೆದಳು.
No comments:
Post a Comment