ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, August 10, 2020

Mahabharata Tatparya Nirnaya Kannada 17272_17279

 

ತತಃ ಸ ಹಂಸಸಂಯುತೋ ಜಗಾಮ ಯೋದ್ಧುಮಚ್ಯುತಮ್ ।

ಕ್ಷಣೇನ ತೌ ನಿರಾಯುಧೌ ಚಕಾರ ಕೇಶವಃ ಶರೈಃ ॥೧೭.೨೭೨॥

 

ತದನಂತರ ಡಿಭಕನು ಹಂಸನಿಂದ ಕೂಡಿಕೊಂಡು ಕೃಷ್ಣನನ್ನು ಕುರಿತು ಯುದ್ಧಮಾಡಲು ತೆರಳಿದನು. ಕೇಶವನು ತನ್ನ ಬಾಣಗಳಿಂದ,  ಕೆಲವೇ ಕ್ಷಣಗಳಲ್ಲಿ ಅವರನ್ನು ನಿರಾಯುಧರನ್ನಾಗಿ ಮಾಡಿದನು. 

 

ಹತಂ ಚ ಸೈನ್ಯಮೇತಯೋಶ್ಚತುರ್ತ್ಥಭಾಗಶೇಷಿತಮ್ ।

ಕ್ಷಣೇನ ಕೇಶವೇನ ತದ್ಭಯಾದಪೇಯತುಶ್ಚತೌ ॥೧೭.೨೭೩ ॥

 

ಅವರಿಬ್ಬರ ಸೈನ್ಯದ ನಾಲ್ಕನೇ ಒಂದು ಭಾಗ ಮಾತ್ರ ಉಳಿದದ್ದಾಗಿ, ಕ್ಷಣದಲ್ಲೇ ಕೃಷ್ಣನಿಂದ ಸೋಲಿಸಲ್ಪಟ್ಟ ಹಂಸ-ಡಿಭಕರು ಭಯದಿಂದ ಓಡಿಹೋದರು.

 

ಸ ಪುಷ್ಕರೇಕ್ಷಣಸ್ತದಾ ಸುರೈರ್ನ್ನುತೋsಥ ಪುಷ್ಕರೇ ।

ಉವಾಸ ತಾಂ ನಿಶಾಂ ಪ್ರಭುಃ ಸಯಾದವೋsಮಿತಪ್ರಭಃ ॥೧೭.೨೭೪ ॥

 

ಕಮಲದಂತೆ ಕಣ್ಗಳುಳ್ಳ ಕೃಷ್ಣನು ಪುಷ್ಕರಕ್ಷೇತ್ರದಲ್ಲಿ ದೇವತೆಗಳಿಂದ ಸ್ತೋತ್ರಮಾಡಲ್ಪಟ್ಟವನಾಗಿ, ಯಾದವರಿಂದ ಕೂಡಿ, ಒಳ್ಳೆಯ ಕಾಂತಿಯನ್ನು ಬೆಳಗುತ್ತಾ, ಆರಾತ್ರಿಯನ್ನು ಅಲ್ಲೇ ಕಳೆದನು.

 

ಪರೇ ದಿನೇ ಜನಾರ್ದ್ದನೋ ನೃಪಾತ್ಮಜೌ ಪ್ರವಿದ್ರುತೌ ।

ಯಮಸ್ವಸುಸ್ತಟೇ ಪ್ರಭುಃ ಸಮಾಸಸಾದ ಪೃಷ್ಠತಃ ॥೧೭.೨೭೫ ॥

 

ಮಾರನೇದಿನ ಶ್ರೀಕೃಷ್ಣನು, ಓಡಿಹೋಗುತ್ತಿರುವ ಆ ಹಂಸ-ಡಿಭಕರನ್ನು ಯಮುನಾನದಿ ತೀರದಲ್ಲಿ ಬೆನ್ನಟ್ಟಿ ಹೊಂದಿದನು.

 

ಸ ರೌಹಿಣೇಯಸಂಯುತಃ ಸಮನ್ವಿತಶ್ಚ ಸೇನಯಾ ।

ಸ್ವಶಿಷ್ಟಸೇನಯಾ ವೃತೌ ಪಲಾಯಿನಾವವಾರಯತ್ ॥೧೭.೨೭೬ ॥

 

ಬಲರಾಮನಿಂದ ಕೂಡಿಕೊಂಡು, ಯಾದವ ಸೇನೆಯಿಂದಲೂ ಕೂಡಿಕೊಂಡ ಶ್ರೀಕೃಷ್ಣನು , ಅಳಿದುಳಿದ ಸೇನೆಯೊಂದಿಗೆ ಓಡುತ್ತಿರುವ ಹಂಸ-ಡಿಭಕರನ್ನು ತಡೆದ.

 

[ಹರಿವಂಶದ ಭವಿಷ್ಯತ್ ಪರ್ವದಲ್ಲಿ (೧೨೭.2-೫) ಈ ಕುರಿತಾದ ವಿವರ ಕಾಣಸಿಗುತ್ತದೆ : ‘ಅಥ ಪ್ರಭಾತೇ ವಿಮಲೇ ಸೂರ್ಯೇ ಚಾಭ್ಯುದಿತೇ  ಸತಿ । ಗೋವರ್ಧನಂ ಜಗಾಮಾsಶು ಕೇಶವಃ ಕೇಶಿಸೂದನಃ । (ಹಿಂದೆ ಯಾವ ಪರಿಸರದಲ್ಲಿ ಶ್ರೀಕೃಷ್ಣ ಗೋವರ್ಧನ ಪರ್ವತವನ್ನು ಎತ್ತಿಟ್ಟಿದ್ದನೋ , ಅದೇ ಪರಿಸರದಲ್ಲಿ ಇವರು ಓಡುತ್ತಿದ್ದರು).ಶೈನೇಯೋ  ಬಲಭದ್ರಶ್ಚ  ಯಾದವಾಃ ಸಾರಣಾದಯಃ । ಗೋಧನೈರಥ ಸೈನೈಶ್ಚ ನಾದಿತಂ ಬಹುಧಾ ಗಿರಿಮ್ । ತಸ್ಯೋತ್ತರಂ ನೃಪಶ್ರೇಷ್ಠ ಪಾರ್ಶ್ವಂ ಸಂಪ್ರಾಪ್ಯ ಯಾದವಾಃ । ನಿಕಷಾ ಯಮುನಾಂ ರಾಜಂಸ್ತತೋ ಯುದ್ಧಮವರ್ತತ’].

 

ನಿವೃತ್ಯ ತೌ ಸ್ವಸೇನಯಾ ಶರೋತ್ತಮೈರ್ವವರ್ಷತುಃ ।

ಸುಕೋಪಿತೌ ಸಮಸ್ತಶೋ ಯದೂನವಾರ್ಯ್ಯಪೌರುಷೌ ॥೧೭.೨೭೭॥

 

ತಡೆಯಲು ಅಸಾಧ್ಯವಾದ ಪರಾಕ್ರಮವುಳ್ಳ ಅವರು, ಅತ್ಯಂತ ಸಿಟ್ಟಿನಿಂದ ಹಿಂದೆತಿರುಗಿ, ತಮ್ಮ ಸೇನೆಯಿಂದ ಕೂಡಿಕೊಂಡು, ಉತ್ಕೃಷ್ಟವಾದ ಬಾಣಗಳನ್ನು ಬಿಡಲಾರಮ್ಭಿಸಿದರು.

 

ಅಥಾsಸಸಾದ ಹಂಸಕೋ ಹಲಾಯುಧಂ ಮಹಾಧನುಃ ।

ಅನನ್ತರೋsಸ್ಯ ಸಾತ್ಯಕಿಂ ಗದಂ ಚ ಸರ್ವಸೈನಿಕಾನ್ ॥೧೭.೨೭೮॥

 

ತದನಂತರ, ದೊಡ್ಡ ಬಿಲ್ಲುಳ್ಳ ಹಂಸನು ಬಲರಾಮನನ್ನು ಎದುರುಗೊಂಡ. ಅವನ ನಂತರ ಡಿಭಕನು ಸಾತ್ಯಕಿ, ಗದ ಮತ್ತು ಯಾದವ ಸೈನಿಕರೊಂದಿಗೆ  ಯುದ್ಧ ಮಾಡಿದ. 

 

ಸ ಸಾತ್ಯಕಿಂ ನಿರಾಯುಧಂ ವಿವಾಹನಂ ವಿವರ್ಮ್ಮಕಮ್ ।

ವ್ಯಧಾದ್ ಗದಂ ಚ ತೌ ರಣಂ ವಿಹಾಯ ಹಾಪಜಗ್ಮತುಃ ॥೧೭.೨೭೯ ॥

 

ಅವನು ಸಾತ್ಯಕಿ ಮತ್ತು ಗದನನ್ನು ನಿರಾಯುಧರನ್ನಾಗಿಯೂ, ವಾಹನರಹಿತರನ್ನಾಗಿಯೂ, ಕವಚಹೀನರನ್ನಾಗಿಯೂ ಮಾಡಿದ.  ಆಗ ಸಾತ್ಯಕಿ ಮತ್ತು ಗದರು ಯುದ್ಧವನ್ನು ಬಿಟ್ಟು ಹೊರಟುಬಂದರು.

No comments:

Post a Comment