ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, August 19, 2020

Mahabharata Tatparya Nirnaya Kannada 1850_1857

 

ಸುರಾಸುರಾನ್ ಸುಸಂರಬ್ಧಾನ್ ಕಾಲೇನ ದ್ರಕ್ಷ್ಯಥೇತಿ ಚ ।

ಬ್ರಹ್ಮಾ ನಿವಾರ್ಯ್ಯ ಸಸುರೋ ಯಯೌ ಸೇಶಃ ಸ್ವಮಾಲಯಮ್ ॥೧೮.೫೦॥

 

ಅತ್ತ ದೇವತೆಗಳು ಮತ್ತು ದೈತ್ಯರ ನಡುವೆಯೂ ಉದ್ವೇಗದ ವಾತಾವರಣ ನಿರ್ಮಾಣವಾಗಿತ್ತು. ಆಗ  ಪಿತಾಮಹ ಬ್ರಹ್ಮದೇವರು ‘ಸ್ವಲ್ಪಕಾಲ ನಿಲ್ಲಿ, ಕಾಲಕ್ರಮದಲ್ಲಿ ಎಲ್ಲವನ್ನೂ ನೋಡಬಹುದು’ ಎಂದು ಹೇಳಿ, ದೇವತೆಗಳಿಂದ, ರುದ್ರದೇವರಿಂದಲೂ ಕೂಡಿಕೊಂಡು ತಮ್ಮ ಆಲಯಕ್ಕೆ ತೆರಳಿದರು.

 

ಕರ್ಣ್ಣಂ ಹಸ್ತೇ ಪ್ರಗೃಹ್ಯೈವ ಧಾರ್ತ್ತರಾಷ್ಟ್ರೋ ಗೃಹಂ ಯಯೌ ।

ಪಾರ್ತ್ಥಂ ಹಸ್ತೇ ಪ್ರಗೃಹ್ಯೈವ ಭೀಮಃ ಪ್ರಾಯಾತ್ ಸ್ವಮಾಲಯಮ್ ॥೧೮.೫೧॥

 

ದುರ್ಯೋಧನನು ಕರ್ಣನ ಕೈ ಹಿಡಿದು ಮನೆಗೆ ತೆರಳಿದರೆ, ಭೀಮನೂ ಕೂಡಾ ಪಾರ್ಥನ ಕೈಹಿಡಿದು ತಮ್ಮ ಮನೆಗೆ ತೆರಳಿದ.

 

ಪಾರ್ತ್ಥೇನ ಕರ್ಣ್ಣೋ ಹನ್ತವ್ಯ ಇತ್ಯಾಸೀದ್ ಭೀಮನಿಶ್ಚಯಃ ।

ವೈಪರೀತ್ಯೇನ ತಸ್ಯಾsಸೀದ್ ದುರ್ಯ್ಯೊಧನವಿನಿಶ್ಚಯಃ ॥೧೮.೫೨॥

 

ಅರ್ಜುನನಿಂದ ಕರ್ಣನು ಕೊಲ್ಲಲ್ಪಡಲು ಅರ್ಹನು ಎನ್ನುವುದು ಭೀಮನ ನಿಶ್ಚಯವಾಗಿದ್ದರೆ, ಅದಕ್ಕೆ   ವಿಪರೀತವಾಗಿ(ಕರ್ಣನಿಂದ ಅರ್ಜುನ ಕೊಲ್ಲಲ್ಪಡಲು ಅರ್ಹನು ಎಂದು) ದುರ್ಯೋಧನನಿಗೆ  ನಿಶ್ಚಯವಿತ್ತು.

 

ತದರ್ತ್ಥಂ ನೀತಿಮತುಲಾಂ ಚಕ್ರತುಸ್ತಾವುಭಾವಪಿ ।

ತಥೋತ್ಕರ್ಷೇ ಫಲ್ಗುನಸ್ಯ ಯಶಸೋ ವಿಜಯಸ್ಯ ಚ ॥೧೮.೫೩॥

 

ಉದ್ಯೋಗ ಆಸೀದ್ ಭೀಮಸ್ಯ ಧಾರ್ತ್ತರಾಷ್ಟ್ರಸ್ಯ ಚಾನ್ಯಥಾ ।

ಭೀಮಾರ್ತ್ಥಂ ಕೇಶವೋsನ್ಯೇ ಚ ದೇವಾಃ ಫಲ್ಗುನಪಕ್ಷಿಣಃ ॥೧೮.೫೪॥

 

ಆಸನ್ ಯಥೈವ ರಾಮಾದ್ಯಾಃ ಸಙ್ಗ್ರಹೇಣ ಹನೂಮತಃ ।

ಸುರಾಃ ಸುಗ್ರೀವಪಕ್ಷಸ್ಥಾಃ ಪೂರ್ವಮಾಸಂಸ್ತಥೈವ ಹಿ ॥೧೮.೫೫॥

 

ಅದಕ್ಕಾಗಿಯೇ ಭೀಮ ಹಾಗೂ  ದುರ್ಯೋಧನರಿಬ್ಬರೂ ಕೂಡಾ ಬೇರೆ-ಬೇರೆ ನೀತಿಗಳನ್ನು ಮಾಡಿದರು. ಅರ್ಜುನನ ಯಶಸ್ಸಿಗೆ, ವಿಜಯಕ್ಕೆ, ಉತ್ಕರ್ಷಕ್ಕೆ ಭೀಮನ ಉದ್ಯೋಗವಿತ್ತು. ದುರ್ಯೋಧನನ ಉದ್ಯೋಗವು ಬೇರೆ ರೀತಿಯೇ ಆಗಿತ್ತು. ಭೀಮನಿಗಾಗಿ ಶ್ರೀಕೃಷ್ಣ ಹಾಗು ಇತರ ದೇವತೆಗಳು ಅರ್ಜುನನ ಪರವಹಿಸಿದರು. ಹೇಗೆ ಹಿಂದೆ ಶ್ರೀರಾಮ ಹಾಗು ಇತರ ದೇವತೆಗಳು ಹನುಮಂತನಿಂದ ರಕ್ಷಿಸಲ್ಪಟ್ಟಿದ್ದರಿಂದ ಸುಗ್ರೀವನಪರವಹಿಸಿದ್ದರೋ ಹಾಗೇ.

 

ತದರ್ತ್ಥಮೇವ ಭೀಮಸ್ಯ ಹ್ಯನುಜತ್ವಂ ಸುರೇಶ್ವರಃ ।

ಆಪ ಪೂರ್ವಾನುತಾಪೇನ ತೇನ ಭೀಮಸ್ತಥಾsಕರೋತ್ ॥೧೮.೫೬॥

 

ಹಿಂದೆ(ವಾಲಿಯಾಗಿ ಜನ್ಮತಳೆದಿದ್ದಾಗ) ಮಾಡಿದ್ದ ತಪ್ಪಿನ ಪಶ್ಚಾತ್ತಾಪದಿಂದಲೇ ಈಗ  ಇಂದ್ರನು ಭೀಮನ ತಮ್ಮನಾಗಿ ಅವತರಿಸಿದ್ದ. ಆ ಕಾರಣದಿಂದಲೇ  ಭೀಮನು ಅವನ ಉದ್ದೇಶವನ್ನು ಈಡೇರಿಸಿದ.

 

ದುರ್ಯ್ಯೋಧನಾರ್ತ್ಥಂ ಕರ್ಣ್ಣಸ್ಯ ಪಕ್ಷಿಣೋ ದೈತ್ಯದಾನವಾಃ ।

ಆಸುಃ ಸರ್ವೇ ಗ್ಲಹಾವೇತಾವಾಸತುಃ ಕರ್ಣ್ಣಫಲ್ಗುನೌ ॥೧೮.೫೭॥

 

ದುರ್ಯೋಧನನಿಗಾಗಿ ದೈತ್ಯ ದಾನವರೆಲ್ಲರೂ  ಕರ್ಣನ ಪಕ್ಷದಲ್ಲಿರತಕ್ಕವರಾದರು. ಹೀಗೆ  ದೈತ್ಯರ ಮತ್ತು ದೇವತೆಗಳ ಆಟದಲ್ಲಿ  ಕರ್ಣಾರ್ಜುನರು ದಾಳವಾದರು.

[ಇಲ್ಲಿ ಕರ್ಣ ಅಂದರೆ ಸೂರ್ಯ, ಕಣ್ಣಿನ ಅಭಿಮಾನಿ ದೇವತೆ. ಅರ್ಜುನ ಅಂದರೆ ಇಂದ್ರ, ಶ್ರವಣ, ಮನನ ನಿಧಿದ್ಯಾಸನಗಳ ದೇವತೆ. ಅವರಿಬ್ಬರಿಗೂ ಯುದ್ಧವಾಗುತ್ತದೆ ಎಂದರೆ, ನಾವು ಕೇಳುವ ಶಾಸ್ತ್ರವೂ ಮತ್ತು ನಮ್ಮ ದರ್ಶನವೂ ಎರಡೂ ಬೇರೆ ರೀತಿಯಾಗಿರುವಂತೆ ತೋರುತ್ತದೆ. ನರಕ, ನಿವಾಸಕವಚ, ಇತ್ಯಾದಿ ದೈತ್ಯರು ಕರ್ಣನಲ್ಲಿ ಆಶ್ರಿತರಾಗಿದ್ದರು. ಇದು ನಮ್ಮ ದರ್ಶನದಲ್ಲಿಯೇ ದೋಷವಿದೆ ಎನ್ನುವುದನ್ನು ತಿಳಿಸುತ್ತದೆ. ಇವರಿಬ್ಬರಿಗೆ ಯುದ್ಧವಾದಾಗ ಶ್ರೀಕೃಷ್ಣ ಉಪದೇಶ ಮಾಡಬೇಕು. ‘ ನಿನ್ನ ಐನ್ದ್ರೀಯಕ ಪ್ರತ್ಯಕ್ಷದಲ್ಲಿ ದೋಷವಿರುತ್ತದೆ, ಆದರೆ ಸ್ವರೂಪ ಪ್ರತ್ಯಕ್ಷದಲ್ಲಿ ದೋಷವಿರುವುದಿಲ್ಲ’ ಎಂದು ಕೃಷ್ಣ ಹೇಳಬೇಕು. ಅದಕ್ಕಾಗಿ ದೇಹ ಬೇರೆ, ಆತ್ಮ ಬೇರೆ ಎನ್ನುವ ಸಂದೇಶವನ್ನು ಶ್ರೀಕೃಷ್ಣ ಗೀತೆಯ ಆರಂಭದಲ್ಲೇ ಕೊಡುತ್ತಾನೆ. ಹೀಗೆ ಏವಮಧ್ಯಾತ್ಮನಿಷ್ಠಂ ಹಿ ಸರ್ವ೦ ಭಾರತಮುಚ್ಯತೇ, ಎನ್ನುವುದರ ಚಿಂತನೆ ಹೀಗೂ ಆಗಬಹುದು ]


No comments:

Post a Comment