ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, July 30, 2023

Mahabharata Tatparya Nirnaya Kannada 29-48-54

ಪಾರ್ತ್ಥಾನಾಂ ಗದಿತಂ ತಚ್ಚ ಶ್ರುತ್ವಾ ಧರ್ಮ್ಮಸುತೋSನುಜಾನ್ ।

ಪಪ್ರಚ್ಛ ವಿದುರಂ ಚೈವ ಸಾರಂ ಧರ್ಮ್ಮಾದಿಷು ತ್ರಿಷು ॥ ೨೯.೪೮ ॥

 

ಭೀಷ್ಮಾಚಾರ್ಯರ ಮುಖೇನ ಉಪದೇಶ ಪಡೆದ ಧರ್ಮರಾಜನು ತನ್ನ ತಮ್ಮಂದಿರನ್ನು, ವಿದುರನನ್ನೂ, ಕುರಿತು- ‘ಪುರುಷಾರ್ಥಗಳಲ್ಲಿ(ಧರ್ಮ, ಅರ್ಥ, ಕಾಮ ಇವುಗಳಲ್ಲಿ) ಯಾವುದು ಶ್ರೇಷ್ಠ’ ಎಂದು ಕೇಳಿದನು.  

 

ಆಹ ಕ್ಷತ್ತಾ ಧರ್ಮ್ಮಮೇವ ಸಾರಮರ್ತ್ಥಂ ಚ ಮದ್ಧ್ಯಮಮ್ ।

ನೀಚಂ ಕಾಮಂ ನಿಷ್ಫಲತ್ವಾದರ್ತ್ಥಮೇವಾರ್ಜ್ಜುನೋSಬ್ರವೀತ್ ॥ ೨೯.೪೯ ॥

 

ವಿದುರನು ಪುರುಷಾರ್ಥಗಳಲ್ಲಿ  ಧರ್ಮವೇ ಶ್ರೇಷ್ಠ ಎಂದೂ, ಅರ್ಥವನ್ನು ಮಧ್ಯಮ ಎಂದೂ, ಫಲವಿಲ್ಲದ ಕಾಮವನ್ನು ನೀಚ ಎಂದೂ ಹೇಳಿದನು. ಆದರೆ ಅರ್ಜುನ ಅರ್ಥವೇ ಶ್ರೇಷ್ಠ ಎಂದನು.  

 

[ಅರ್ಥವೇ ಶ್ರೇಷ್ಠ ಎನ್ನುವ ತನ್ನ ಅಭಿಪ್ರಾಯವನ್ನು ಅರ್ಜುನ ವಿವರಿಸುತ್ತಾನೆ-]

 

ಸಾರಂ ಸ ದ್ವಿವಿಧೋ ಜ್ಞೇಯೋ ದೈವೋ ಮಾನುಷ ಏವ ಚ ।

ದೈವೋ ವಿದ್ಯಾ ಹಿರಣ್ಯಾದಿರ್ಮ್ಮಾನುಷಃ ಪರಿಕೀರ್ತ್ತಿತಃ ॥ ೨೯.೫೦ ॥

 

ಅರ್ಥ ಎನ್ನುವುದು ಎರಡು ರೀತಿ.  ಒಂದು ದೈವ ಹಾಗೂ ಇನ್ನೊಂದು ಮಾನುಷ. ದೈವಸಂಪತ್ತು ವಿದ್ಯೆ. ಮಾನುಷ ಸಂಪತ್ತು ಎಂದರೆ ಬಂಗಾರ ಮೊದಲಾದವುಗಳು ಎಂದು ಹೇಳಲ್ಪಟ್ಟಿದೆ.

 

ಮದ್ಧ್ಯಮೋ ಧರ್ಮ್ಮ ಏವಾತ್ರ ಸಾದ್ಧ್ಯಂ ಸಾಧನಮೇವ ಚ ।

ವಿದ್ಯಾಹ್ವಯೋSರ್ತ್ಥೋ ಧರ್ಮ್ಮಸ್ಯ ವಿದ್ಯಯೈವ ಚ ಮುಚ್ಯತೇ ॥ ೨೯.೫೧ ॥

 

ಧರ್ಮ ಎನ್ನುವುದು ಮಧ್ಯಮ. ಏಕೆಂದರೆ ವಿದ್ಯೆ ಎನ್ನುವ ದೈವಸಂಪತ್ತಿನ ಗುರಿ ಧರ್ಮ. ವಿದ್ಯೆ ಎನ್ನುವುದು ಸಾಧ್ಯವೂ ಹೌದು, ಸಾಧನವೂ ಹೌದು. ವಿದ್ಯೆಯೇ ಮೋಕ್ಷಸಾಧನವು.

 

ಮಾನುಷೋSರ್ತ್ಥೋSಪಿ ವಿದ್ಯಾಯಾಃ ಕಾರಣಂ ಸುಪ್ರಯೋಜಿತಃ ।

ತುಷ್ಟೋSರ್ತ್ಥೇನ ಗುರುರ್ಯ್ಯಸ್ಮಾತ್ ಕೈವಲ್ಯಂ ದಾತುಮಪ್ಯಲಮ್ ॥ ೨೯.೫೨ ॥

 

ಧರ್ಮ್ಮಾರ್ತ್ಥತಾಂ ವಿನಾSಪ್ಯರ್ತ್ಥೈಸ್ತುಷ್ಯೇಯುರ್ಗ್ಗುರುದೇವತಾಃ ।

ಯದ್ಯನುದ್ದೇಶಿತೋ ಧರ್ಮ್ಮೋSಪ್ಯರ್ತ್ಥಮೇವಾನು ಸಂವ್ರಜೇತ್ ॥ ೨೯.೫೩ ॥

 

ಗುರುತಾSರ್ತ್ಥಗತೈವ ಸ್ಯಾತ್ ಕಾಮೋSಸ್ತಾದ್ಧಿ ನಿಷ್ಪಲಃ ।

ಯಮಾವತ್ರ ವಿದಾಂ ಶ್ರೇಷ್ಠಾವರ್ಜ್ಜುನೋಕ್ತಮನೂಚತುಃ ॥ ೨೯.೫೪ ॥

 

ಮಾನುಷ ಸಂಪತ್ತನ್ನು ಸರಿಯಾಗಿ ಬಳಸಿದರೆ ಅದೂ ಕೂಡಾ ವಿದ್ಯೆಗೆ ಕಾರಣವಾಗುತ್ತದೆ. ಈರೀತಿ ಮಾಡುವುದರಿಂದ (ಸಂಪತ್ತನ್ನು ವಿದ್ಯೆಗಾಗಿ ಬಳಸುವುದರಿಂದ) ಗುರುಪ್ರೀತಿಯನ್ನು ಹೊಂದಬಹುದು ಮತ್ತು ಪ್ರೀತನಾದ ಗುರುವು ಮೊಕ್ಷವನ್ನೂ ಕೊಡಬಲ್ಲ. ಧರ್ಮಕ್ಕಾಗಿ ಬಳಸಲ್ಪಟ್ಟ ಅರ್ಥವೂ ಕೂಡಾ  ಗುರು ಹಾಗೂ ದೇವತೆಗಳನ್ನು ಪ್ರೀತರನ್ನಾಗಿ ಮಾಡಬಲ್ಲದು.

ಧರ್ಮದ ಪ್ರಯೋಜನವನ್ನು ಬಿಟ್ಟು, ಕೇವಲ ಅರ್ಥದಿಂದಲೂ ಗುರು-ದೇವತೆಗಳು ಸಂತುಷ್ಟರಾಗಬಲ್ಲರು. ಫಲಾಪೇಕ್ಷೆ ಇಲ್ಲದೇ ಮಾಡುವ (ಜ್ಞಾನ, ಮೋಕ್ಷ ಇತ್ಯಾದಿ ಫಲವನ್ನು ಉದ್ದೇಶಿಸಿ ಮಾಡಲ್ಪಡದ)  ಧರ್ಮವೂ ಕೂಡಾ ಅರ್ಥವನ್ನೇ ತಂದುಕೊಡುತ್ತದೆ. ಈರೀತಿಯಾಗಿ ಅರ್ಥವೇ ಶ್ರೇಷ್ಠವಾದದ್ದು. ಹೀಗೆ ಹೇಳಿದ ಅರ್ಜುನನು ಮುಂದುವರಿದು ಕಾಮ ಎನ್ನುವುದು ನಿಷ್ಪಲ ಎಂದು ಪ್ರಬಲವಾಗಿ ಪ್ರತಿಪಾದನೆ ಮಾಡಿ, ನಕುಲ ಸಹದೇವರನ್ನು ಕೇಳುತ್ತಾನೆ. ಅವರೂ ಕೂಡಾ  ಅರ್ಜುನನ ಅಭಿಪ್ರಾಯವನ್ನೇ ತಮ್ಮ ಅಭಿಪ್ರಾಯ ಎನ್ನುತ್ತಾರೆ.

Mahabharata Tatparya Nirnaya Kannada 29-39-47

[ದೇವತಾರಾಧನೆ ಮತ್ತು ಮೋಕ್ಷಪ್ರಾಪ್ತಿಯ ಕುರಿತು ಹೇಳುತ್ತಾರೆ-]

 

ಸರ್ವಥಾSನ್ಧಂ ತಮೋ ಯಾತಿ ವರಂ ಸದೃಶಮೇವ ವಾ ।

ಯೋ ವಿಷ್ಣೋರ್ಮ್ಮನ್ಯತೇ ಕಿಞ್ಚಿದ್ ಗುಣೈಃ ಕೈಶ್ಚಿದಪಿ ಕ್ವಚಿತ್ ॥ ೨೯.೩೯ ॥

 

ಬ್ರಹ್ಮೇಶಾನಾದಿಕಮಪಿ ಭೇದಂ ಯೋ ವಾ ನ ಮನ್ಯತೇ ।

ಭೇದದೃಕ್ ತದ್ಗುಣಾದೌ ಚ ಪ್ರಾದುರ್ಭಾವಗತೇSಪಿ ಯಃ ॥ ೨೯.೪೦ ॥

 

ಪ್ರಾಕೃತಂ ದೇಹಮಥವಾ ದುಃಖಾಜ್ಞಾನಶ್ರಮಾದಿಕಮ್ ।

ಮನ್ಯತೇ ತಾರತಮ್ಯಂ ವಾ ತದ್ಭಕ್ತೇಷ್ವನ್ಯಥೈವ ಯಃ ॥ ೨೯.೪೧ ॥

 

ಇನ್ನೊಬ್ಬನನ್ನು ಪರಮಾತ್ಮನಿಗೆ ಸದೃಶ ಅಥವಾ ಪರಮಾತ್ಮನಿಗಿಂತ ಮಿಗಿಲು ಎಂದು ಯಾರು ತಿಳಿಯುತ್ತಾನೋ ಅವನು  ಅನ್ಧಂತಮಸ್ಸನ್ನು ಹೊಂದುತ್ತಾನೆ.

ಬ್ರಹ್ಮ, ರುದ್ರರು ಹಾಗೂ ಇತರರು ಪರಸ್ಪರ ಸದೃಶ ಎಂದು ತಿಳಿಯುವುದು, ದೇವತೆಗಳನ್ನು ಪರಮಾತ್ಮನಿಗೆ ಸದೃಶರು ಅಥವಾ ಉತ್ತಮರು ಎಂದುಕೊಳ್ಳುವುದು, ಪರಮಾತ್ಮನಿಗೂ ಹಾಗೂ ದೇವತೆಗಳಿಗೂ ನಡುವೆ  ಭೇದವನ್ನು ಒಪ್ಪದಿರುವುದು, ಭಗವಂತನಿಗೂ ಹಾಗೂ ಅವನ ಗುಣಗಳಿಗೂ ಭೇದವನ್ನು ಚಿಂತಿಸುವುದು, ಭಗವಂತನ ಮೂಲರೂಪ ಮತ್ತು ಅವತಾರ ರೂಪದಲ್ಲಿ ಭೇದವನ್ನು ತಿಳಿಯುವುದು, ಪರಮಾತ್ಮನಿಗೆ ಪ್ರಾಕೃತ ಶರೀರವಿದೆ ಎಂದುಕೊಳ್ಳುವುದು, ಭಗವಂತನಿಗೆ ನಮ್ಮಂತೆ ದುಃಖ, ಅಜ್ಞಾನ, ಶ್ರಮ, ಇತ್ಯಾದಿಗಳಿವೆ ಎಂದು ತಿಳಿಯುವುದು, ಪರಮಾತ್ಮನ ಭಕ್ತರಲ್ಲಿ ತಪ್ಪುತಪ್ಪಾಗಿ ತಾರತಮ್ಯವನ್ನು ತಿಳಿಯುವುದು- ಇಂತವರು  ಅನ್ಧಂತಮಸ್ಸಿಗೆ ಹೋಗುತ್ತಾರೆ.

 

ಮನೋವಾಕ್ತನುಭಿರ್ಯ್ಯೋ ವಾ ತಸ್ಮಿಂಸ್ತದ್ಭಕ್ತ ಏವ ವಾ ।

ವಿರೋಧಕೃದ್ ವಿಷ್ಣ್ವಧೀನಾದನ್ಯತ್ ಕಿಞ್ಚಿದಪಿ ಸ್ಮರನ್ ॥ ೨೯.೪೨ ॥

 

ಅನ್ಯಾಧೀನತ್ವವಿಚ್ಚಾಸ್ಯ ಸರ್ವಪೂರ್ತ್ತ್ಯವಿದೇವ ಚ ।

ಭಕ್ತಿಹೀನಶ್ಚ ತೇ ಸರ್ವೇ ತಮೋSನ್ಧಂ ಯಾನ್ತ್ಯಸಂಶಯಮ್ ॥ ೨೯.೪೩ ॥

 

ಮನಸ್ಸಿನಿಂದಾಗಲೀ ಮಾತಿನಿಂದಾಗಲೀ ಅಥವಾ ದೇಹದಿಂದಾಗಲೀ ಯಾರು ಭಗವಂತನಲ್ಲಿ ಅಥವಾ  ಅವನ ಭಕ್ತರಲ್ಲಿ ವಿರೋಧವನ್ನು ಮಾಡುತ್ತಾನೋ, ಅವನು ಅನ್ಧಂತಮಸ್ಸನ್ನು ಹೊಂದುತ್ತಾನೆ.

ಭಗವಂತನಲ್ಲಿ ದೋಷಚಿಂತನೆ ಮಾಡುವುದು, ಪರಮಾತ್ಮನು ಇನ್ನೊಬ್ಬರ ಅಧೀನ ಎಂದು ತಿಳಿಯುವುದು, ಪರಮಾತ್ಮನು ಗುಣಗಳಿಂದ ಅಪೂರ್ಣ ಅಥವಾ ಎಲ್ಲಾ ಗುಣಗಳು ಅವನಲ್ಲಿಲ್ಲಾ ಎಂದು ತಿಳಿಯುವುದು, ಭಕ್ತಿ ಹೀನರಾಗಿರುವುದು, ಅಂತವರು ಅನ್ಧಂತಮಸ್ಸನ್ನು ಹೊಂದುತ್ತಾರೆ-ಇದರಲ್ಲಿ ಸಂಶಯವೇ ಇಲ್ಲ.

 

ತತ್ವೇ ಸಂಶಯಯುಕ್ತಾ ಯೇ ಸರ್ವೇ ತೇ ನಿರಯೋಪಗಾಃ ।

ದೋಷೇಭ್ಯಸ್ತೇ ಗುಣಾಧಿಕ್ಯೇ ನೈವ ಯಾನ್ತ್ಯಧಮಾಂ ಗತಿಮ್ ॥ ೨೯.೪೪ ॥

 

ಯಾರು ತತ್ವದಲ್ಲಿ ಸಂಶಯವನ್ನು ಹೊಂದಿರುತ್ತಾರೋ ಅವರೆಲ್ಲರೂ ಆ ದೋಷಗಳಿಂದಾಗಿ ನರಕವನ್ನು ಹೊಂದುತ್ತಾರೆ. ಅಂತವರಲ್ಲಿ ಗುಣಗಳಿದ್ದರೆ ಅಧೋಗತಿಯಿಂದ(ಅನ್ಧಂತಮಸ್ಸಿನಿಂದ) ಅವರು ಪಾರಾಗುತ್ತಾರೆ.

  

ಗುಣದೋಷಸಾಮ್ಯೇ ಮಾನುಷ್ಯಂ ಸರ್ವದೈವ ಪುನಃಪುನಃ ।

ಯಾವದ್ ದೋಷಕ್ಷಯಶ್ಚೋರ್ಧ್ವಾ ಗತಿಃ ಕ್ರಮಶ ಏವ ತು ॥ ೨೯.೪೫ ॥

 

ಗುಣ ಹಾಗೂ ದೋಷ ಎರಡೂ ಕೂಡಾ ಸಮವಾಗಿರುವುದು ಮನುಷ್ಯರ ಲಕ್ಷಣ. ಅಂತವರು ಮತ್ತೆಮತ್ತೆ ಮನುಷ್ಯರಾಗಿ ಹುಟ್ಟುತ್ತಿರುತ್ತಾರೆ. (ಗುಣಾಧಿಕ್ಯ ಇರುವುದು ದೇವತೆಗಳ ಲಕ್ಷಣವಾದರೆ,  ದೋಷಾಧಿಕ್ಯ ಎನ್ನುವುದು ಅಸುರ ಲಕ್ಷಣ). ನಾವು ಎಷ್ಟೆಷ್ಟು ದೋಷವನ್ನು ಕಳೆದುಕೊಳ್ಳುತ್ತೇವೋ ಅದೇ ರೀತಿ  ಕ್ರಮವಾಗಿ ಊರ್ಧ್ವಗತಿ ಸಾಧ್ಯವಾಗುತ್ತದೆ.

 

ಸರ್ವದೋಷಕ್ಷಯೇ ಮುಕ್ತಿರಾತ್ಮಯೋಗ್ಯಾನುಸಾರತಃ ।

ಭಕ್ತಿಜ್ಞಾನೋನ್ನತಾವೇವ ಸ್ವರ್ಗ್ಗಶ್ಚ ಶುಭಕರ್ಮ್ಮಣಃ ॥ ೨೯.೪೬ ॥

 

ವಿಷ್ಣುವೈಷ್ಣವವಾಕ್ಯೇನ ಹಾನಿಃ ಪಾಪಸ್ಯ ಕರ್ಮ್ಮಣಃ ।

ಇತ್ಯಾದಿ ಧರ್ಮ್ಮಸರ್ವಸ್ವಂ ಭೀಷ್ಮಸ್ಥೇನೈವ ವಿಷ್ಣುನಾ ॥ ೨೯.೪೭ ॥

 

ಎಲ್ಲಾ ದೋಷಗಳಿಂದ ಬಿಡುಗಡೆಯನ್ನು ಹೊಂದಿದರೆ ತನ್ನ ಯೋಗ್ಯತೆಗೆ ಅನುಗುಣವಾದ ಮುಕ್ತಿಯು. ಭಕ್ತಿ ಹಾಗೂ ಜ್ಞಾನದ ಉನ್ನತಿಯಾದರೆ ಎಲ್ಲಾ ದೋಷಗಳ ಕ್ಷಯವಾಗುತ್ತದೆ ಮತ್ತು ಮುಕ್ತಿ ಪ್ರಾಪ್ತವಾಗುತ್ತದೆ.  ಮಂಗಳಕರವಾದ ಅಥವಾ ಪುಣ್ಯಕರ್ಮಗಳಿಂದ ಸ್ವರ್ಗ ಪ್ರಾಪ್ತಿಯಾಗುತ್ತದೆ.

ನಾರಾಯಣ ಮತ್ತು ನಾರಾಯಣನ ಭಕ್ತರ ವಾಕ್ಯದಿಂದ(ಅನುಗ್ರಹ/ಆಶೀರ್ವಾದದಿಂದ) ಪಾಪಕರ್ಮದ ನಾಶವಾಗುತ್ತದೆ. ಇವೇ ಮೊದಲಾದ ಎಲ್ಲಾ ರೀತಿಯ ಧರ್ಮಗಳನ್ನೂ ಭೀಷ್ಮಾಚಾರ್ಯರ ಅಂತರ್ಯಾಮಿಯಾಗಿರುವ ಕೃಷ್ಣನಿಂದಲೇ ಪಾಂಡವರಿಗಾಗಿ ಹೇಳಲ್ಪಟ್ಟಿತು.

Mahabharata Tatparya Nirnaya Kannada 29-35-38

[ಸ್ತ್ರೀಧರ್ಮದ ಕುರಿತು ಹೇಳುತ್ತಾರೆ-]

 

ಜ್ಞೇಯಂ ಸರ್ವತ್ರಿವರ್ಣ್ಣಸ್ಥಸ್ತ್ರೀಭಿರ್ವೇದಾನ್ ವಿನಾSಖಿಲಮ್ ।

ಸ್ವೀಯಪುನ್ನಿಯತಿಃ ಸ್ತ್ರೀಣಾಂ ಸ್ವದಾರನಿಯತಿರ್ನ್ನೃಣಾಮ್ ॥ ೨೯.೩೫ ॥

 

ಧರ್ಮ್ಮೋ ಗುಣೋತ್ತಮಾನಾಂ ತು ಸ್ಮೃತ್ಯೈವಾನ್ಧಂ ತಮೋ ವ್ರಜೇತ್ ।

ಗುಣಸರ್ವಸ್ವಹಾನಿಃ ಸ್ಯಾದುತ್ತರೋತ್ತರತೋSತ್ರ ಚ ॥ ೨೯.೩೬ ॥

 

ಮೂರೂ ವರ್ಣದ ಸ್ತ್ರೀಯರು ವೇದವನ್ನು ಬಿಟ್ಟು, ಇತರ ಎಲ್ಲವನ್ನೂ ತಿಳಿಯಬೇಕಾಗಿರುವುದು ಅವರ ಕರ್ತವ್ಯ. ಈ ರೀತಿ ತಿಳಿಯಬೇಕಾದರೆ ಅವರು ಗಂಡನಿಗೆ ಮೋಸಮಾಡದೇ ನಡೆಯಬೇಕು. ಗಂಡಸರೂ ಕೂಡಾ ತಮ್ಮ ಪತ್ನಿಗೆ ಮೋಸಮಾಡದಂತೆ ನಡೆಯಬೇಕು. ಇದು ಧರ್ಮ.  ತಮ್ಮ ಗುಣದಿಂದ ಉತ್ತಮರಾಗಿರುವ ಗಂಡಂದಿರನ್ನು ಹೆಂಡತಿಯರು ಗೌರವಿಸಲೇಬೇಕು. ಯಾರು ಗುಣದಿಂದ ಉತ್ತಮರಿರುತ್ತಾರೆ, ಅಂತಹ ಸ್ತ್ರೀಯರ ಕುರಿತು ಕೆಟ್ಟ ಆಲೋಚನೆ ಸುಳಿದರೂ ಕೂಡಾ ನರಕವಾಗುತ್ತದೆ. ಅದನ್ನೇ ಸ್ಮರಣೆ ಮಾಡಿಕೊಂಡಿದ್ದರೆ ಅನ್ಧಂತಮಸ್ಸಿಗೆ ಹೋಗಬೇಕಾಗುತ್ತದೆ. ಹೀಗಾಗಿ ಗುಣೋತ್ತಮರಾದ ಹೆಣ್ಣುಮಕ್ಕಳ ಬಗ್ಗೆ ಕೆಟ್ಟ ಯೋಚನೆ ಮಾಡುವುದೂ ತಪ್ಪು.  ನಮಗಿಂತ ಹಿರಿಯರು, ನಮ್ಮ ಗುರುಸ್ಥಾನದಲ್ಲಿರುವ ಹೆಣ್ಣುಮಕ್ಕಳು, ಇವರ ಬಗ್ಗೆ ಕೆಟ್ಟ ಚಿಂತನೆ ಮಾಡಿದರೆ ನಮ್ಮ ಗುಣ ನಾಶವಾಗುತ್ತದೆ.

 

ಅಧೋSಧೋSಧಿಕದೋಷಃ ಸ್ಯಾತ್ ಸ್ತ್ರೀಣಾಮನ್ಯತ್ರ ಮದ್ಧ್ಯತಃ ।

ವೇದಾ ಅಪ್ಯುತ್ತಮಸ್ತ್ರೀಭಿಃ ಕೃಷ್ಣಾದ್ಯಾಭಿರಿವಾಖಿಲಾಃ ॥ ೨೯.೩೭ ॥

 

ದೇವ್ಯೋ ಮುನಿಸ್ತ್ರಿಯಶ್ಚೈವ ನರಾದಿಕುಲಜಾ ಅಪಿ ।

ಉತ್ತಮಾ ಇತಿ ವಿಜ್ಞೇಯಾಸ್ತಚ್ಛೂದ್ರೈರಪ್ಯವೈದಿಕಮ್ ।

ಜ್ಞೇಯಮನ್ಯೈರ್ಹರೇರ್ನ್ನಾಮ ನಿಜಕರ್ತ್ತವ್ಯಮೇವ ಚ ॥ ೨೯.೩೮ ॥

 

ಗುಣೋತ್ತಮನನ್ನು ತಿರಸ್ಕರಿಸಿ, ತನ್ನ ಗುಣಕ್ಕಿಂತ ಕಡಿಮೆಯಾದವನನ್ನು(ಕಾಮಕ್ಕಾಗಿ) ಆಶ್ರಯಿಸುವ ಸ್ತ್ರೀಯರಿಗೆ  ಅಧಿಕದೋಷ.

ದ್ರೌಪದಿಯಂತೆ ಎತ್ತರದಲ್ಲಿರುವ ಅತ್ಯುತ್ತಮ ಸ್ತ್ರೀಯರಿಂದ ವೇದಗಳೂ ತಿಳಿಯಲ್ಪಡಬೇಕು. ದೇವಿಯರು (ಉದಾಹರಣೆಗೆ ಶಚಿ, ಊರ್ವಶಿ), ಮುನಿಸ್ತ್ರೀಯರು(ಉದಾಹರಣೆಗೆ ಅರುಂಧತಿ ಮೊದಲಾದವರು), ಮನುಷ್ಯಕುಲದಲ್ಲಿ ಹುಟ್ಟಿದರೂ ಕೂಡಾ ಉತ್ತಮರೆಂದೇ ತಿಳಿಯಬೇಕು. ಶೂದ್ರರಿಂದಲೂ ಕೂಡಾ ಮಹಾಭಾರತಾದಿಗಳು ಅಭ್ಯಾಸನೀಯವೇ ಆಗಿವೆ. ಅನ್ಯರಿಗೆ ಪರಮಾತ್ಮನ ನಾಮಸ್ಮರಣೆ ಮತ್ತು ತಾವು ಮಾಡಬೇಕಾದ ಕರ್ತವ್ಯಕರ್ಮ ಧರ್ಮವು.

Saturday, July 29, 2023

Mahabharata Tatparya Nirnaya Kannada 29-24-34

[ಚಾತುರ್ವರ್ಣ ಧರ್ಮದ ಕುರಿತು ಹೇಳುತ್ತಾರೆ-]


ತತ್ವವಿಜ್ಞಾಪನಂ ಧರ್ಮ್ಮೋ ವಿಪ್ರಸ್ಯ ತು ವಿಶೇಷತಃ ।

ಶಾರೀರದಣ್ಡಸನ್ತ್ಯಾಗಃ ಪುತ್ರಭಾರ್ಯ್ಯಾದಿಕಾನೃತೇ ॥ ೨೯.೨೪ ॥

 

ತತ್ರಾಪಿ ನಾಙ್ಗಹಾನಿಃ ಸ್ಯಾದ್ ವೇದನಾ ವಾ ಚಿರಂ ನತು ।

ನಚಾರ್ತ್ಥದಣ್ಡಃ ಕರ್ತ್ತವ್ಯೋ ವಿಪ್ರವೈಶ್ಯಾದಿಭಿಃ ಕ್ವಚಿತ್ ॥ ೨೯.೨೫ ॥

 

ತತ್ವವನ್ನು ತಿಳಿಸಿಕೊಡುವುದು ಬ್ರಾಹ್ಮಣರ ಪರಮಧರ್ಮ. ಹೆಂಡತಿ ಮಕ್ಕಳನ್ನು ಬಿಟ್ಟು ಉಳಿದವರಲ್ಲಿ ಶರೀರತಃ ದಂಡನೆ ಕೊಡುವ ಹಕ್ಕು ಬ್ರಾಹ್ಮಣನಿಗಿಲ್ಲ. ಹೆಂಡತಿ ಮಕ್ಕಳಲ್ಲೂ ಕೂಡಾ, ಅಂಗಹಾನಿ ಆಗದಂತೆ, ಹೆಚ್ಚು ನೋವಾಗದಂತೆ ದಂಡನೆ ಮಾಡಬೇಕು. ಬ್ರಾಹ್ಮಣರಾಗಲೀ  ವೈಶ್ಯರಾಗಲೀ ಇನ್ನೊಬ್ಬರಿಗೆ ಅರ್ಥದಂಡ (ಕರ ಅಥವಾ ಹಣದ ದಂಡ) ಹಾಕುವಂತಿಲ್ಲ.  

 

ಶಾರೀರದಣ್ಡವಿಷಯೇ ವೈಶ್ಯಾದೀನಾಂ ಚ ವಿಪ್ರವತ್ ।

ಯಥಾಲಬ್ಧೇನ ವರ್ತ್ತೇತ ಭಿಕ್ಷಯಾ ವಾ ದ್ವಿಜೋತ್ತಮಃ ॥ ೨೯.೨೬ ॥

 

ಶಿಷ್ಯಯಾಜ್ಯೋಪಲಬ್ಧೈರ್ವಾ ಕ್ಷತ್ರಧರ್ಮ್ಮೇಣ ವಾSSಪದಿ ।

ಮಹಾಪದಿ ವಿಶಾಂ ಧರ್ಮ್ಮೈಃ ಕ್ಷತ್ರಿಯಃ ಸುರವಿಪ್ರಯೋಃ ॥ ೨೯.೨೭ ॥

 

ಅನ್ಯತ್ರ ಸರ್ವವಿತ್ತೇನ ವರ್ತ್ತೇತೈತಾಂಶ್ಚ ಪಾಲಯನ್ ।

ವಿರೋಧಿನಃ ಕ್ಷತ್ರಿಯಾಚ್ಚ ಪ್ರಸಹ್ಯೈವ ಹರೇದ್ ಧನಮ್ ॥ ೨೯.೨೮ ॥

 

ಶರೀರಶಿಕ್ಷೆಯ ವಿಚಾರದಲ್ಲಿ ಬ್ರಾಹ್ಮಣರಿಗೆ ಏನನ್ನು ಹೇಳಿದ್ದಾರೋ ಅದೇ ವೈಶ್ಯರಿಗೆ ಮತ್ತು ಇತರರಿಗೆ  ಅನ್ವಯಿಸುತ್ತದೆ.

ಬ್ರಾಹ್ಮಣಶ್ರೇಷ್ಠನು ಸಿಕ್ಕಿದ್ದರಲ್ಲಿ(ಪ್ರಯತ್ನವಿಲ್ಲದೇ ಲಭ್ಯವಾಗಿರುವ ದ್ರವ್ಯದಲ್ಲಿ) ಅಥವಾ ಭಿಕ್ಷೆಬೇಡಿ ಬದುಕಬೇಕು. ಶಿಷ್ಯರು ಕೊಟ್ಟರೆ ಅದರಿಂದ ಹಾಗೂ  ಪೌರೋಹಿತ್ಯ ಮಾಡಿ ಬಂದ ದ್ರವ್ಯದಿಂದಲೂ ಬದುಕಬಹುದು. ಆಪತ್ತಿನಲ್ಲಿ ಕ್ಷತ್ರಿಯರ ಧರ್ಮದಿಂದಲೂ ಬದುಕಬಹುದು. ಬಹಳ ಆಪತ್ತು ಬಂದಾಗ ವ್ಯಾಪಾರಮಾಡಿ ಬದುಕಬಹುದು. ಕ್ಷತ್ರಿಯರು ಬ್ರಾಹ್ಮಣದ್ರವ್ಯ ಮತ್ತು ದೇವದ್ರವ್ಯ ಇಷ್ಟನ್ನು ಬಿಟ್ಟು ಬದುಕಬೇಕು. ಇನ್ನು ಉಳಿದ ಎಲ್ಲರಿಂದ ಹಣವನ್ನು(ಕರವನ್ನು) ಅವರು ತೆಗೆದುಕೊಳ್ಳಬಹುದು. ಕ್ಷತ್ರಿಯನು ಉಳಿದ ಎಲ್ಲರನ್ನೂ ಪಾಲನೆ ಮಾಡಿಕೊಂಡಿರಬೇಕು. ಒಬ್ಬ ಕ್ಷತ್ರಿಯ, ವಿರೋಧಿಯಾಗಿರುವ ಇನ್ನೊಬ್ಬ ಕ್ಷತ್ರಿಯನನ್ನು ಮಣಿಸಿ ದ್ರವ್ಯವನ್ನು ಪಡೆಯಬೇಕು.

 

ಸಾಮಾದಿಕ್ರಮತೋ ಧರ್ಮ್ಮಾನ್ ವರ್ತ್ತಯೇದ್ ದಣ್ಡತೋSನ್ತತಃ ।

ಅಪಲಾಯೀ ಸದಾ ಯುದ್ಧೇ ಸತಾಂ ಕಾರ್ಯ್ಯಮೃತೇ ಭವೇತ್ ॥ ೨೯.೨೯ ॥

 

ಧರ್ಮವನ್ನು ಮೊದಲು ಸಾಮ ನಂತರ ದಾನ ಆಮೇಲೆ  ಭೇದ ಈ ಕ್ರಮದಲ್ಲಿ ರಕ್ಷಿಸಬೇಕು. (ಸಾಮಾದಿಗಳಿಂದ ಧರ್ಮ ಪ್ರವ್ರತ್ತಿಯಾಗದಿದ್ದರೆ) ಕೊನೆಯಲ್ಲಿ ದಂಡದಿಂದಲೇ ಧರ್ಮವನ್ನು ಕಾಪಾಡಬೇಕು. ಸಜ್ಜನರ ಕಾರ್ಯವನ್ನು ಹೊರತುಪಡಿಸಿ ಇತರೆಡೆ ಕ್ಷತ್ರಿಯರು ಯುದ್ಧದಲ್ಲಿ ಪಲಾಯನ ಮಾಡದೇ ಬದುಕಬೇಕು.

 

ಕೃಷಿವಾಣಿಜ್ಯಗೋರಕ್ಷಾಕುಸೀದಂ ವೈಶ್ಯಜೀವನಮ್ ।

ಪರಿಚರ್ಯ್ಯೈವ ಶೂದ್ರಸ್ಯ ವೃತ್ತಿರನ್ಯೇ ಸ್ವಪೂರ್ವವತ್ ॥ ೨೯.೩೦ ॥

 

ಹೊಲ ಊಳುವುದು(ಕೃಷಿ), ವ್ಯಾಪಾರ ಮಾಡುವುದು, ಗೋವುಗಳ ಪಾಲನೆ (ಹೈನುಗಾರಿಕೆ), ಬಡ್ಡೀ ವ್ಯಾಪಾರ, ಇದು ವೈಶ್ಯರ ಜೀವನೋಪಾಯಧರ್ಮ. ಶೂದ್ರವರ್ಣದವರಿಗೆ ಪರಿಚರ್ಯೆಯೇ(ಸೇವಾವೃತ್ತಿಯೇ) ಜೀವನೋಪಾಯವು. ಉಳಿದವರು ತಮ್ಮಿಂದ ಮುಂಚಿನವರಂತೆ(ಕುಲವೃದ್ಧರ ಆಚರಣೆಯಂತೆ) ಬದುಕಬೇಕು.

 

ವರ್ತ್ತೇಯುರ್ಬಾಹ್ಮಣಾದ್ಯಾಶ್ಚ ಕ್ರಮಾತ್ ಪೂಜ್ಯಾ ಹರಿಪ್ರಿಯಾಃ ।

ಹರಿಭಕ್ತಾವನುಚ್ಚಸ್ತು ವರ್ಣ್ಣೋಚ್ಚೋ ನಾತಿಪೂಜ್ಯತೇ । ॥ ೨೯.೩೧ ॥

 

ಬ್ರಾಹ್ಮಣಾದಿಗಳು ಭಕ್ತರಾಗಿದ್ದು, ಪರಮಾತ್ಮನಿಗೆ ಪ್ರಿಯರಾಗಿದ್ದರೆ ಕ್ರಮೇಣ  ಪೂಜ್ಯರಾಗಿರುವರು. ಪರಮಾತ್ಮನ ಬಗ್ಗೆ ಅನಾಸಕ್ತಿ, ಭಕ್ತಿ ಇಲ್ಲದೇ ಇರುವುದು, ತತ್ವ ಚಿಂತನೆ ಮಾಡದಿರುವುದು, ಅಂತವರು  ಹುಟ್ಟಿನಲ್ಲಿ ವರ್ಣೋಚ್ಚನಾಗಿದ್ದರೂ ಕೂಡಾ ಪೂಜ್ಯನಾಗುವುದಿಲ್ಲ.

 

ವಿನಾ ಪ್ರಣಾಮಂ ಪೂಜ್ಯಸ್ತು ವರ್ಣ್ಣಹೀನೋ ಹರಿಪ್ರಿಯಃ ।

ಆದರಸ್ತತ್ರ ಕರ್ತ್ತವ್ಯೋ ಯತ್ರ ಭಕ್ತಿರ್ಹರೇರ್ವರಾ ॥ ೨೯.೩೨ ॥

 

ಪರಮಾತ್ಮನಿಗೆ ಪ್ರಿಯನಾಗಿರುವವನು ವರ್ಣದಿಂದ ಹೀನನಾಗಿದ್ದರೂ, ಅವನಿಗೆ ನಮಸ್ಕಾರ ಮಾಡದೇ, ಪೂರ್ತಿಯಾಗಿ ಅವನನ್ನು ಗೌರವಿಸಬೇಕು, ಸತ್ಕರಿಸಬೇಕು. ಯಾರಲ್ಲಿ ಪರಮಾತ್ಮನ ಭಕ್ತಿ ಶ್ರೇಷ್ಠವಾಗಿರುತ್ತದೋ ಅವರನ್ನು ಆದರದಿಂದ ನೋಡಬೇಕು.

 

ಜ್ಞಾಪನಂ ಕ್ಷತ್ರಿಯಾಣಾಂ ಚ ಧರ್ಮ್ಮೋ ವಿಪ್ರಾಭ್ಯನುಜ್ಞಯಾ ।

ತದಭಾವೇ ತು ವೈಶ್ಯಾನಾಂ ಶೂದ್ರಸ್ಯ ಪರಮಾಪದಿ ॥ ೨೯.೩೩ ॥

 

ತತ್ವಜ್ಞಾನಿಯಾದ ಬ್ರಾಹ್ಮಣರು ಇಲ್ಲದೇ ಹೋದಾಗ, ಬ್ರಾಹ್ಮಣರ ಅನುಜ್ಞೆಯಂತೆ ತತ್ವೋಪದೇಶ ಮಾಡುವುದು ಕ್ಷತ್ರಿಯರ ಧರ್ಮ. (ಇದನ್ನು ಉಪನಿಷತ್ತಿನಲ್ಲಿ ನಾವು ಕಾಣಬಹುದು. ಶ್ರೇಷ್ಠ ಕ್ಷತ್ರಿಯರು ಬ್ರಾಹ್ಮಣರಿಗೆ ಹೇಳುವುದನ್ನು ನಾವಲ್ಲಿ ನೋಡುತ್ತೇವೆ). ತತ್ವೋಪದೇಶ ಮಾಡುವ ಕ್ಷತ್ರಿಯರೂ ಇಲ್ಲದಿದ್ದಾಗ, ವೈಶ್ಯರು ಹೇಳಬಹುದು. ಅತ್ಯಂತ ಆಪತ್ತು ಬಂದಾಗ ಶೂದ್ರನಿಗೆ ತತ್ವವನ್ನು ವಿಜ್ಞಾಪನೆ ಮಾಡುವ ಕರ್ತವ್ಯವಿರುತ್ತದೆ.

 

‘ವರ್ಣ್ಣೇಷ್ವಜ್ಞೇಷ್ವವರ್ಣ್ಣಸ್ತು ನ ಜ್ಞಾನೀ ಸ್ಯಾತ್ ಕಥಞ್ಚನ’ ।

ಇತಿ ಶ್ರುತೇರವರ್ಣ್ಣಸ್ಯ ಜ್ಞಾಪನಪ್ರಾಪ್ತಿರೇವ ನ ॥ ೨೯.೩೪ ॥

 

‘ನಾಲ್ಕೂ ವರ್ಣಗಳು ಅಜ್ಞವಾದರೆ, ಪಂಚಮರು (ಚಂಡಾಲರು,..ಇತ್ಯಾದಿ ವರ್ಣಬಾಹ್ಯರು) ಯಾವ ರೀತಿಯಿಂದಲೂ ಜ್ಞಾನಿಗಳಾಗಲಾರರು ಎನ್ನುವ ವೇದ ವಾಕ್ಯದಂತೆ ಪಂಚಮರು ತತ್ವ ವಿಜ್ಞಾಪನೆ ಮಾಡುವ ಪ್ರಸಂಗವೇ ಇರುವುದಿಲ್ಲ.

Mahabharata Tatparya Nirnaya Kannada 29-13-23

ಸ ತಾಭ್ಯಾಂ ಭ್ರಾತೃಭಿಶ್ಚೈವ ಮುನಿಭಿಶ್ಚ ಸಮನ್ವಿತಃ ।

ಭೀಷ್ಮಂ ಯಯೌ ಲಜ್ಜಿತೇSಸ್ಮಿಂಸ್ತಂ ಭೀಷ್ಮಾಯಾSಹ ಕೇಶವಃ ॥ ೨೯.೧೩ ॥

 

ವೇದವ್ಯಾಸ-ಕೃಷ್ಣರಿಂದಲೂ, ತಮ್ಮಂದಿರರಿಂದಲೂ, ಮುನಿಗಳಿಂದಲೂ ಕೂಡಿಕೊಂಡ ಧರ್ಮರಾಜನು ಭೀಷ್ಮರಿದ್ದಲ್ಲಿಗೆ ತೆರಳಿದನು. ಧರ್ಮರಾಜನು ಭೀಷ್ಮಾಚಾರ್ಯರಿಗೆ ಹೇಗೆ ಮುಖ ತೋರಿಸುವುದು ಎಂದು ನಾಚಿಕೊಳ್ಳುತ್ತಿರಲು, ಶ್ರೀಕೃಷ್ಣನು ಅದನ್ನು ಭೀಷ್ಮಾಚಾರ್ಯರಿಗೆ ಹೇಳಿದನು.

 

ಪೃಚ್ಛೇತ್ಯುಕ್ತಃ ಸ ಭೀಷ್ಮೇಣ ಪಪ್ರಚ್ಛಾಖಿಲಮಞ್ಜಸಾ ।

ತತ್ರೋವಾಚಾಖಿಲಾನ್ ಧರ್ಮ್ಮಾನ್ ಕೃಷ್ಣೋ ಭೀಷ್ಮಶರೀರಗಃ ॥ ೨೯.೧೪ ॥

 

‘ನೀನು ಪ್ರಶ್ನೆ ಮಾಡು’ ಎಂದು ಭೀಷ್ಮಾಚಾರ್ಯರಿಂದ ಹೇಳಲ್ಪಟ್ಟ ಧರ್ಮರಾಜನು, ಎಲ್ಲವನ್ನೂ ಚೆನ್ನಾಗಿ ಪ್ರಶ್ನಿಸಿದನು. ಆಗ ಭೀಷ್ಮಾಚಾರ್ಯರ ಶರೀರದಲ್ಲಿರುವ ಶ್ರೀಕೃಷ್ಣನು ಎಲ್ಲಾ ಧರ್ಮಗಳನ್ನೂ ಯುಧಿಷ್ಠಿರನಿಗೆ ಉಪದೇಶಿಸಿದನು.

 

[ಏಕೆ ಶ್ರೀಕೃಷ್ಣ ಭೀಷ್ಮರ ಶರೀರದಲ್ಲಿದ್ದು ಬೋಧನೆ ಮಾಡಿದ ಎನ್ನುವುದನ್ನು ವಿವರಿಸುತ್ತಾರೆ-]

 

ಭೀಷ್ಮೋ ಹ್ಯಾಹ ಹರಿಂ ಪಾರ್ತ್ಥಾ ಬೋಧನೀಯಾಸ್ತ್ವಯೈವ ಹಿ ।

ಕಾ ಶಕ್ತಿರ್ಮ್ಮಮ ದೇವೇಶ ಪಾರ್ತ್ಥಾನ್ ಬೋಧಯಿತುಂ ಪ್ರಭೋ ॥ ೨೯.೧೫ ॥

 

ಭೀಷ್ಮಾಚಾರ್ಯರು ಪರಮಾತ್ಮನನ್ನು ಕುರಿತು- ‘ಓ, ಕೃಷ್ಣನೇ, ನಿನ್ನಿಂದಲೇ ಪಾಂಡವರು ಉಪದೇಶಕ್ಕೆ ಯೋಗ್ಯರಾಗಿದ್ದಾರೆ. ದೇವತೆಗಳ ಒಡೆಯನೇ, ಪಾಂಡವರಿಗೆ ಉಪದೇಶ ಮಾಡಲು ನನಗೆಲ್ಲಿದೆ ಶಕ್ತಿ’ ಎಂದು ಕೇಳುತ್ತಾರೆ.

 

ಇತ್ಯುಕ್ತೋ ಭಗವಾನಾಹ ತ್ವತ್ಕೀರ್ತ್ತ್ಯೈ ತ್ವಯಿ ಸಂಸ್ಥಿತಃ ।

ಪ್ರವಕ್ಷ್ಯಾಮ್ಯಖಿಲಾನ್ ಧರ್ಮ್ಮಾನ್ ಸೂಕ್ಷ್ಮಂ ತತ್ವಮಪೀತಿ ಹ ॥ ೨೯.೧೬ ॥

 

ಈರೀತಿಯಾಗಿ ಹೇಳಲ್ಪಟ್ಟ ಶ್ರೀಕೃಷ್ಣನು, ‘ನಿನ್ನ ಕೀರ್ತಿಗಾಗಿ ನಿನ್ನಲ್ಲಿ ಇರುವವನಾಗಿ ನಾನು ಎಲ್ಲಾ ಧರ್ಮಗಳನ್ನೂ, ಸೂಕ್ಷ್ಮವಾಗಿರುವ ತತ್ವಗಳನ್ನೂ ಹೇಳುತ್ತೇನೆ’ ಎಂದು ಹೇಳಿದನು.


 [ರಾಜಧರ್ಮ/ಭಾಗವತ ಧರ್ಮದ ಕುರಿತು ಹೇಳುತ್ತಾರೆ-]


ರಾಜ್ಞಃ ಪ್ರಥಮತೋ ಧರ್ಮ್ಮೋ ಭಗವದ್ಧರ್ಮ್ಮಪಾಲನಮ್ ।

ತದರ್ತ್ಥಂ ಕಣ್ಟಕೋದ್ಧಾರೋ ಧರ್ಮ್ಮಾ ಭಾಗವತಾ ಅಪಿ ॥ ೨೯.೧೭ ॥

 

ರಾಜನಾದವನಿಗೆ ಮೊದಲನೆಯ ಕರ್ತವ್ಯವೆಂದರೆ- ಪರಮಾತ್ಮನ ಧರ್ಮವನ್ನು ಪಾಲಿಸುವುದು, ಅದಕ್ಕಾಗಿ ಶತ್ರುಗಳನ್ನು ನಿಗ್ರಹಿಸುವುದು ಧರ್ಮ. ಇದಲ್ಲದೇ ಭಾಗವತ ಧರ್ಮವನ್ನೂ ಪಾಲನೆ ಮಾಡಬೇಕು.

 

ಮನೋವಾಕ್ಕರ್ಮ್ಮಭಿರ್ವಿಷ್ಣೋರಚ್ಛಿದ್ರತ್ವೇನ ಚಾರ್ಚ್ಚನಮ್ ।

ಪೂರ್ಣ್ಣಾಶೇಷಗುಣೋ ವಿಷ್ಣುಃ ಸ್ವತನ್ತ್ರಶ್ಚೈಕ ಏವ ತು ॥ ೨೯.೧೮ ॥

 

ತದ್ವಶಂ ಸರ್ವಮನ್ಯಚ್ಚ ಸರ್ವದೇತಿ ವಿನಿಶ್ಚಯಃ ।

ದೇವತಾಕ್ರಮವಿಜ್ಞಾನಮಪೂಜಾSನ್ಯಸ್ಯ ವೈ ಹರೇಃ ॥ ೨೯.೧೯ ॥

 

ಪೂಜಾ ಭಾಗವತತ್ವೇನ ದೇವಾದೀನಾಂ ಚ ಸರ್ವಶಃ ।

ವೃಥಾ ಕರ್ಮ್ಮಾಕೃತಿಃ ಕ್ವಾಪಿ ನಿರಾಶೀಸ್ತ್ವಂ ಸದೈವ ಚ ॥ ೨೯.೨೦ ॥

 

ವಿಷ್ಣೋರ್ಭಾಗವತಾನಾಂ ಚ ಪ್ರತೀಪಸ್ಯಾಕೃತಿಃ ಸದಾ ।

ಪರಸ್ಪರವಿರೋಧೇ ತು ವಿಶಿಷ್ಟಸ್ಯಾನುಕೂಲತಾ ॥ ೨೯.೨೧ ॥

 

ಪ್ರಿಯಂ ವಿಷ್ಣೋಸ್ತದೀಯಾನಾಮಪಿ ಸರ್ವಂ ಸಮಾಚರೇತ್ ।

ಧರ್ಮ್ಮಮಪ್ಯಪ್ರಿಯಂ ತೇಷಾಂ ನೈವ ಕಿಞ್ಚಿತ್ ಸಮಾಚರೇತ್ ॥ ೨೯.೨೨ ॥

 

ಸಾಮ್ಯೇ ವಿರೋಧೇ ಚ ಬಹೂನನುವರ್ತ್ತೇತ ವೈಷ್ಣವಾನ್ ।

ಏತೇ ಸಾಧಾರಣಾ ಧರ್ಮ್ಮಾ ಜ್ಞೇಯಾ ಭಾಗವತಾ ಇತಿ ॥ ೨೯.೨೩ ॥

 

ಮನಸ್ಸಿನಿಂದ, ಮಾತಿನಿಂದ ಹಾಗೂ ಕರ್ಮಗಳಿಂದ, ಯಾವುದೇ ಮೋಸವಿಲ್ಲದೇ, ನಾರಾಯಣನನ್ನು  ಪೂಜಿಸುವುದು ಧರ್ಮವು. ಪರಮಾತ್ಮನೊಬ್ಬನೇ ಸಮಸ್ತಗುಣಗಳಿಂದ ತುಂಬಿದವನು, ಸರ್ವಸ್ವತಂತ್ರನು. ಸರ್ವೋತ್ತಮನು,  ಸರ್ವಾಂತರ್ಯಾಮಿಯು. ಉಳಿದ ಎಲ್ಲವೂ ಯಾವಾಗಲೂ ಕೂಡಾ ಪರಮಾತ್ಮನ  ವಶವಾಗಿದೆ ಎಂದು ನಿಶ್ಚಯವು. ದೇವತಾ ತಾರತಮ್ಯದ ವಿಜ್ಞಾನವು ಧರ್ಮವು. ಪರಮಾತ್ಮನಿಗೆ ವಿರುದ್ಧವಾದವರ ಗೌರವಿಸದಿರುವಿಕೆ ಧರ್ಮವು. ದೇವತೆಗಳನ್ನು ವಿಷ್ಣುಭಕ್ತತ್ವೇನ ಪೂಜಿಸುವುದು(ದೇವತೆಗಳನ್ನು ಸರ್ವೋತ್ತಮತ್ವದಿಂದ ಪೂಜಿಸದಿರುವುದು. ಅಥವಾ ದೇವತೆಗಳು ಭಗವಂತನ ಅಧೀನ ಎಂದು ತಿಳಿದು ಪೂಜಿಸುವುದು), ವ್ಯರ್ಥವಾದ ಕರ್ಮವನ್ನು ಮಾಡದೇ ಇರುವುದು, ಕರ್ಮಫಲದಲ್ಲಿ ಆಂಟಿಕೊಳ್ಳದಿರುವುದು (ಆಸೆ ಇಟ್ಟುಕೊಳ್ಳದಿರುವುದು), ಪರಮಾತ್ಮನಿಗಾಗಲೀ, ಭಗವದ್ ಭಕ್ತರಿಗಾಗಲೀ ವಿರುದ್ಧವಾದ ಕೆಲಸವನ್ನು ಮಾಡದಿರುವಿಕೆಯು ಧರ್ಮವು. ಭಗವದ್ ಭಕ್ತರ ನಡುವೆ ಪರಸ್ಪರ ವಿರೋಧಬಂದಾಗ ಹೆಚ್ಚಿನ ಜ್ಞಾನ-ಭಕ್ತಿಗೆ ತಕ್ಕಂತೆ ನಡೆಯುವುದು. ಪರಮಾತ್ಮನ ಭಕ್ತರಿಗೆ ಯಾವುದು ಪ್ರಿಯವೋ ಅದನ್ನು ಮಾಡುವುದು(ವಿಷ್ಣುಭಕ್ತರಿಗೆ ಅಪ್ರಿಯವಾಗಿರುವುದನ್ನು ಆಚರಿಸದೇ ಇರುವುದು), ಸಾಮ್ಯ-ವಿರೋಧ ಎರಡೂ ಬಂದಾಗ ಬಹಳ ಜನ ವೈಷ್ಣವರು ಏನನ್ನು ಹೇಳುತ್ತಾರೋ ಅದನ್ನೇ ಅನುಸರಿಸುವುದು, ಇದೆಲ್ಲವೂ ಸಾಧಾರಣ ಭಾಗವತ ಧರ್ಮ.