ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, July 9, 2023

Mahabharata Tatparya Nirnaya Kannada 28-57-62

 

ಉವಾಚ ಚೈಕ ಏವಾಹಮಕಿರೀಟೋ ವಿವರ್ಮ್ಮಕಃ ।

ಭವನ್ತೋ ಬಹವೋ ವರ್ಮ್ಮಶಿರಸ್ತ್ರಾಣಯುತಾ ಅಪಿ ॥೨೮.೫೭॥

 

ಯದ್ಯೇವಮಪಿ ಮೇ ಯುದ್ಧಂ ಭವದ್ಭಿರ್ಮ್ಮನ್ಯಸೇ ಸಮಮ್ ।

ಸರ್ವೈರೇಕೇನ ವಾ ಯುದ್ಧಂ ಕರಿಷ್ಯೇ ನಚ ಭೀರ್ಮ್ಮಮ ॥೨೮.೫೮॥

 

ನೀರಿನಿಂದ ಮೇಲೆ ಬಂದ ದುರ್ಯೋಧನನು ಹೇಳುತ್ತಾನೆ- ‘ನಾನು ಒಬ್ಬನೇ ಇದ್ದೇನೆ. ನನ್ನಲ್ಲಿ ಕಿರೀಟವಿಲ್ಲ, ಕವಚವೂ ಇಲ್ಲ. ನೀವು ಬಹಳ ಜನರಿದ್ದೀರಿ. ನಿಮಗೆ ಕವಚವಿದೆ, ಶಿರಸ್ತ್ರಾಣವಿದೆ. ಇಷ್ಟಿದ್ದರೂ ಕೂಡಾ ನಿಮ್ಮ ಜೊತೆಗೆ ನನ್ನ ಯುದ್ಧವನ್ನು ಸಮ ಎಂದು ತಿಳಿದುಕೊಳ್ಳುವುದಾದರೆ, ನಿಮ್ಮೆಲ್ಲರ ಜೊತೆಗೆ ಅಥವಾ ನಿಮ್ಮಲ್ಲಿ ಒಬ್ಬನ ಜೊತೆಗಾದರೂ ನಾನು ಯುದ್ಧವನ್ನು ಮಾಡುತ್ತೇನೆ. ನನಗೆ ಸರ್ವಥಾ ಭಯವಿಲ್ಲ’.

 

ಇತ್ಯುಕ್ತ ಆಹ ಧರ್ಮ್ಮಾತ್ಮಾ ವರ್ಮ್ಮಾದ್ಯಂ ಚ ದದಾಮಿ ತೇ ।

ವೃಣೀಷ್ವ ಪ್ರತಿವೀರಂ ಚ ಪಞ್ಚಾನಾಂ ಯಂ ತ್ವಮಿಚ್ಛಸಿ ॥೨೮.೫೯॥

 

ಈರೀತಿಯಾಗಿ ಹೇಳಲ್ಪಟ್ಟ ಧರ್ಮರಾಜನು ಹೇಳುತ್ತಾನೆ- ‘ನಿನಗೆ ಕವಚ ಮೊದಲಾದವುಗಳನ್ನು ಕೊಡುತ್ತೇನೆ. ನಮ್ಮ ಐದು ಜನರಲ್ಲಿ ಯಾರನ್ನು ನೀನು  ಪ್ರತಿವೀರ ಎಂದು ತಿಳಿಯುತ್ತೀಯೋ ಅವನನ್ನು ಆಯ್ಕೆ ಮಾಡಿಕೋ.  

 

ಹತ್ವೈಕಂ ತ್ವಂ ಭುಙ್ಕ್ಷ್ವ ರಾಜ್ಯಮನ್ಯೇ ಯಾಮ ವಯಂ ವನಮ್ ।

ಹತೇ ವಾ ತ್ವಯೀ ತೇನೈವ ಭುಞ್ಜೀಮಶ್ಚಾಖಿಲಾಂ ಭುವಮ್ ।

ಆದತ್ಸ್ವ ಚಾSಯುಧಂ ಯೇನ ಜೇತುಮಿಚ್ಛಸಿ ಶಾತ್ರವಾನ್ ॥೨೮.೬೦॥

 

ನಮ್ಮಲ್ಲಿ ನೀನು ಆರಿಸಿಕೊಂಡ ಒಬ್ಬನನ್ನು ಕೊಂದು ನೀನು ರಾಜ್ಯವನ್ನಾಳು. ಉಳಿದ ನಾವೆಲ್ಲರೂ ಕೂಡಾ ಕಾಡಿಗೆ ಹೋಗುತ್ತೇವೆ. ಆದರೆ ಆರಿಸಿಕೊಂಡವನಿಂದ ನೀನು ಸತ್ತರೆ ಆಗ ನಾವು ಇಡೀ ಭೂಮಿಯನ್ನು ಅನುಭವಿಸುತ್ತೇವೆ. ಯಾವ ಆಯುಧದಿಂದ ನೀನು ಶತ್ರುಗಳನ್ನು ಜಯಿಸಲು ಬಯಸುತ್ತೀಯೋ, ಆ ಆಯುಧವನ್ನು ತೆಗೆದುಕೋ’.

 

ಇತ್ಯುಕ್ತ ಊಚೇ ನಹಿ ದುರ್ಬಲೈರಹಂ ಯೋತ್ಸ್ಯೇ ಚತುರ್ಭಿರ್ಭವದರ್ಜ್ಜುನಾದಿಭಿಃ ।

ಭೀಮೇನ ಯೋತ್ಸ್ಯೇ ಗದಯಾ ಸದಾ ಹಿ ಮೇ ಪ್ರಿಯಾ ಗದಾ ನಾನ್ಯದಥಾSಯುಧಂ ಸ್ಪೃಶೇ ॥೨೮.೬೧॥

 

ಈರೀತಿಯಾಗಿ ಹೇಳಲ್ಪಟ್ಟ ದುರ್ಯೋಧನನು- ‘ನಾನು ದುರ್ಬಲರಾದ ನೀನು, ಅರ್ಜುನ, ಮೊದಲಾದ ಈ ನಾಲ್ಕು ಜನರ ಜೊತೆಗೆ ಯುದ್ಧ ಮಾಡುವುದಿಲ್ಲ. ನನಗೆ ಯಾವಾಗಲೂ ಗದೆಯು ಪ್ರಿಯವು.  ಆದ್ದರಿಂದ ಗದೆಯಿಂದ ಭೀಮಸೇನನೊಂದಿಗೆ ಯುದ್ಧಮಾಡುತ್ತೇನೆ. ಇನ್ನೊಂದು ಆಯುಧವನ್ನು ನಾನು ಮುಟ್ಟುವುದಿಲ್ಲ’.

 

ಶ್ರುತ್ವಾSಸ್ಯ ವಾಕ್ಯಂ ರಭಸೋ ವೃಕೋದರೋ ಗದಾಂ ತದಾSದ್ಧ್ಯರ್ದ್ಧಭರಾಧಿಕಾಂ ಮುದಾ ।

ರಾಜ್ಞೋ ಗದಾಯಾಃ ಪರಿಗೃಹ್ಯ ವೀರಃ ಸಮುತ್ಥಿತೋ ಯುದ್ಧಮನಾಃ ಸಮುನ್ನದನ್ ॥೨೮.೬೨॥

 

ದುರ್ಯೋಧನನ ಮಾತನ್ನು ಕೇಳಿ, ವೇಗಯುಕ್ತನಾದ ವೃಕೋದರನು, ಭಾರದಲ್ಲಿ ಬೇರೆ ಗದೆಗಳಿಗಿಂತ ಒಂದೂವರೆಪಟ್ಟು ಹೆಚ್ಚಿನದಾದ ಗದೆಯನ್ನು ಹಿಡಿದುಕೊಂಡು ಸಂತೋಷದಿಂದ ಎದ್ದು ಯುದ್ಧಕ್ಕೆ ಸನ್ನದ್ಧನಾಗಿ ಗರ್ಜಿಸುತ್ತಾ ಬಂದನು.  

No comments:

Post a Comment