ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, July 12, 2023

Mahabharata Tatparya Nirnaya Kannada 28-79-87

 

ಕೃಷ್ಣಂ ದ್ಯೂತೇ ನಿಧೇಹೀತಿ ಯದಾವಾದೀತ್ ಸುಯೋಧನಃ ।

ತತ್ಪ್ರತಿಜ್ಞಾನುಸಾರೇಣ ಭೀಮೋ ಮೂರ್ದ್ಧಾನಮಕ್ರಮೀತ್ ।

‘ಋಷಭಂ ಮಾ ಸಮಾನಾನಾಮ್’ ಇತಿ ಸೂಕ್ತಂ ದದರ್ಶ ಚ ॥೨೮.೭೯॥

 

‘ಕೃಷ್ಣನನ್ನು ಜೂಜಿನಲ್ಲಿ ಪಣಕ್ಕೆ ಇಡು’ ಎಂದು ಯಾವ ಕಾರಣದಿಂದ ಯುಧಿಷ್ಠಿರನಿಗೆ ಸುಯೋಧನ ಹೇಳಿದ್ದನೋ, ಆಗ ಭೀಮ ಏನು ಪ್ರತಿಜ್ಞೆ ಮಾಡಿದ್ದನೋ, ಆ ಪ್ರತಿಜ್ಞೆಗೆ ಅನುಗುಣವಾಗಿ ಭೀಮಸೇನನು ದುರ್ಯೋಧನನ ತಲೆಗೆ ಒದ್ದ. ಹಾಗೆ ಒದೆಯುತ್ತ ಭೀಮಸೇನ ‘ಋಷಭಂ ಮಾ ಸಮಾನಾನಾಮ್’ ಎನ್ನುವ ಸೂಕ್ತವನ್ನು ಕಂಡ.

[ಇದನ್ನು ಮಹಾಭಾರತದಲ್ಲಿ  ‘ಶಿರಶ್ಚ ರಾಜಸಿಂಹಸ್ಯ ಪಾದೇನ ಸಮಲೋಡಯತ್’ (ಶಲ್ಯಪರ್ವ ೬೦.೦೫)  ಎಂದು ಹೇಳಿರುವುದನ್ನು ಕಾಣಬಹುದು]

 

ತೇಷಾಂ ಪುಣ್ಯಾನಿ ವಿದ್ಯಾಶ್ಚ ಸಮಾದಾಯೈವ ಸರ್ವಶಃ ।

ತಾಂಶ್ಚಕಾರ ತಮೋಗನ್ತೄಂಸ್ತಸ್ಯ ಮೂರ್ಧ್ನಿ ಪದಾSSಕ್ರಮನ್ ॥೨೮.೮೦॥

 

ಹೀಗೆ ಭೀಮಸೇನ ದುರ್ಯೋಧನಾದಿಗಳ ಪುಣ್ಯಗಳನ್ನೂ, ವಿದ್ಯೆಯನ್ನೂ, ಎಲ್ಲೆಡೆಯಿಂದ ತೆಗೆದುಕೊಂಡು ಅವರನ್ನು ತಮಸ್ಸಿಗೆ ಹೋಗುವಂತೆ ಮಾಡಿದ. (ದುರ್ಯೋಧನನ ತಲೆಯ ಮೇಲೆ ಮತ್ತೆಮತ್ತೆ ಒದೆಯುತ್ತಾ, ದುರ್ಯೋಧನಾದಿಗಳನ್ನು ತಮಸ್ಸಿಗೆ ಹೋಗುವಂತೆ ಮಾಡಿದ).

 

ಸ್ಮಾರಯಾಮಾಸ ಕರ್ಮ್ಮಾಣಿ ಯಾನಿ ತಸ್ಯ ಕೃತಾನಿ ಚ ।

ಕೃಷ್ಣಬನ್ಧೇ ಕೃತೋ ಮನ್ತ್ರ ಇತಿ ಮೂರ್ಧ್ನಿ ಪದಾSಹನತ್ ॥೨೮.೮೧॥

 

ದುರ್ಯೋಧನನು ಹಿಂದೆ ಏನು ಕರ್ಮಗಳನ್ನು ಮಾಡಿದ್ದನೋ, ಅದೆಲ್ಲವನ್ನೂ ಭೀಮ ಅವನಿಗೆ ನೆನಪಿಸಿದ.  ಶ್ರೀಕೃಷ್ಣನನ್ನು ಕಟ್ಟಿಹಾಕಬೇಕು ಎಂದು ಮಂತ್ರಾಲೋಚನೆ ಮಾಡಿರುವುದನ್ನು ನೆನಪಿಸಿ ಮತ್ತೆಮತ್ತೆ ಒದ್ದ.

 

ಪುನಃಪುನಶ್ಚ ತದ್ ವೀಕ್ಷ್ಯ ಚುಕ್ರೋಧ ಮುಸಲಾಯುಧಃ ।

ಚುಕ್ರೋಶ ನೈವ ಧರ್ಮ್ಮೋSಯಮಿತ್ಯಸಾವೂರ್ಧ್ವಬಾಹುಕಃ ॥೨೮.೮೨॥

 

ಭೀಮ ಪುನಃಪುನಃ ದುರ್ಯೋಧನನ ತಲೆಯನ್ನು ಒದೆಯುತ್ತಿರುವುದನ್ನು ನೋಡಿ ಬಲರಾಮ ಸಿಟ್ಟುಗೊಂಡ. ‘ಇದು ಧರ್ಮವಲ್ಲ’ ಎಂದು ತನ್ನ ಕೈಗಳನ್ನು ಮೇಲೆತ್ತಿ ಗಟ್ಟಿಯಾಗಿ ಕಿರುಚಿದ.

 

ಪುನಃ ಕ್ರೋಧಾಭಿತಾಮ್ರಾಕ್ಷ ಆದಾಯ ಮುಸಲಂ ಹಲಮ್ ।

ಅಭಿದುದ್ರಾವ ಭೀಮಂ ತಂ ನ ಚಚಾಲ ವೃಕೋದರಃ ॥೨೮.೮೩॥

 

ಮತ್ತೆ ಕೋಪದಿಂದ ಕೆಂಪಡರಿದ ಕಣ್ಣುಗಳುಳ್ಳವನಾಗಿ, ಮುಸಲಾಯುಧವನ್ನು ಮತ್ತು ಹಲಾಯುಧವನ್ನು ತೆಗೆದುಕೊಂಡು ಬಲರಾಮ ಭೀಮನನ್ನು ಹೊಡೆಯಲೆಂದು ಹೋದ. ಆದರೆ  ಭೀಮಸೇನ ಸ್ವಲ್ಪವೂ ಕದಲಲಿಲ್ಲ.    

 

ಅಭಯೇ ಸಂಸ್ಥಿತೇ ಭೀಮೇ ರಾಮಂ ಜಗ್ರಾಹ ಕೇಶವಃ  ।

ಆಹ ಧರ್ಮ್ಮೇಣ ನಿಹತೋ ಭೀಮೇನಾಯಂ ಸುಯೋಧನಃ ॥೨೮.೮೪॥

 

ಹೀಗೆ ಭೀಮಸೇನ  ಯಾವುದೇ ಭಯವಿಲ್ಲದೇ ನಿಂತಿರಲು, ಕೃಷ್ಣನು ಬಲರಾಮನನ್ನು ಹಿಡಿದುಕೊಂಡ ಮತ್ತು ಹೇಳಿದ ಕೂಡಾ- ‘ಈ ದುರ್ಯೋಧನನು ಭೀಮಸೇನನಿಂದ ಧರ್ಮದಿಂದಲೇ ಕೊಲ್ಲಲ್ಪಟ್ಟಿದ್ದಾನೆ ಎಂದು.

 

ನ ಮಣ್ಡಲೇSಭಿಸಾರೇ ವಾ ನಾಪಸಾರೇ ಚ ನಾಭಿತಃ ।

ಅಧೋ ಹನ್ಯಾದ್ ವಞ್ಚಯನ್ತಮಧೋ ಹತ್ವಾ ನ ದುಷ್ಯತಿ ॥೨೮.೮೫॥

 

‘ಮಂಡಲದಲ್ಲಿ, ಮುಂಗಟ್ಟಿನಲ್ಲಿ, ಹಿಂಗಟ್ಟಿನ ಯುದ್ಧದಲ್ಲಿ ಹೊಕ್ಕುಳಿನ ಕೆಳಗೆ ಹೊಡೆಯಬಾರದು ಎನ್ನುವುದು ನಿಯಮ. ಆದರೆ ಇಲ್ಲಿ ದುರ್ಯೋಧನ ತಲೆಕೆಳಗೆ ಮಾಡಿ ಮೋಸಮಾಡಿದ್ದಾನೆ. ಹೀಗೆ ಮೋಸಮಾಡುತ್ತಿರುವ ಅವನಿಗೆ ಕೆಳಗೆ ಹೊಡೆದರೆ ಯಾವುದೇ ದೋಷವಿಲ್ಲ.   

 

ಕೃತಾ ಪ್ರತಿಜ್ಞಾ ಚ ವೃಕೋದರೇಣ ಭೇತ್ಸ್ಯೇ ತವೋರೂ ಇತಿ ಯುಕ್ತಿಪೂರ್ವಮ್ ।

ಸಂಶ್ರಾವಯಾನೇನ ತದೇಷ ಧರ್ಮ್ಮತೋ ಜಘಾನ ದುರ್ಯ್ಯೋಧನಮಗ್ರ್ಯಕರ್ಮ್ಮಾ ॥೨೮.೮೬॥

 

ಭೀಮಸೇನನಿಂದ ಪ್ರತಿಜ್ಞೆಯು ಮಾಡಲ್ಪಟ್ಟಿತ್ತು. ಭೀಮ ‘ನಿನ್ನ ತೊಡೆಯನ್ನು ಮುರಿಯುತ್ತೇನೆ’ ಎಂದು ಯುಕ್ತಿಪೂರ್ವಕವಾಗಿಯೇ ಹೇಳಿದ್ದಾನೆ. ಅದರಿಂದ ಇವನು ಶ್ರೇಷ್ಠವಾದ ಕರ್ಮವುಳ್ಳವನಾಗಿ ದುರ್ಯೋಧನನನ್ನು ಶುದ್ಧಧರ್ಮದಿಂದಲೇ ಕೊಂದುಹಾಕಿದ’.

 

ವಾಸುದೇವವಚಃ ಶ್ರುತ್ವಾ ಧರ್ಮ್ಮಚ್ಛಲಮಿತಿ ಬ್ರುವನ್ ।

ರೌಹಿಣೇಯೋ ಜಗಾಮಾSಶು ಸ್ವಪುರೀಮೇವ ಸಾನುಗಃ ॥೨೮.೮೭॥

 

ವಾಸುದೇವನ ಮಾತನ್ನು ಕೇಳಿದ ಮೇಲೂ, ‘ಇದು ಧರ್ಮವಲ್ಲ’ ಎಂದು ಹೇಳುತ್ತಾ, ಬಲರಾಮನು ತನ್ನ ಹಿಂಬಾಲಕರಿಂದ ಕೂಡಿಕೊಂಡು ದ್ವಾರಕಾಪಟ್ಟಣಕ್ಕೆ ತೆರಳಿದ.

No comments:

Post a Comment