ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, July 25, 2023

Mahabharata Tatparya Nirnaya Kannada 28-220-234

ಇತ್ಯುಕ್ತೋವಾಚ ನೈವಾನ್ಧದ್ವಯಸ್ಯಾಸ್ಯ ವೃಕೋದರ ।

ಘ್ನತಾ ಪುತ್ರಶತಂ ಯಷ್ಟಿಮಾತ್ರಂ ಚೋರ್ವರಿತಂ ತ್ವಯಾ ॥೨೮.೨೨೦॥

 

ಈರೀತಿಯಾಗಿ ಹೇಳಲ್ಪಟ್ಟ ಗಾಂಧಾರಿ ಮತ್ತೆ ಕೇಳುತ್ತಾಳೆ- ‘ ಎಲೋ ಭೀಮಸೇನನೇ, ಈ ಮುದಿ ಅಂಧರ ನೂರು ಜನ ಮಕ್ಕಳನ್ನು ಸಂಹರಿಸಿದ ನಿನ್ನಿಂದ, ಊರುಗೊಲಿನಂತೆ ಒಬ್ಬ ಮಗನನ್ನಾದರೂ ಉಳಿಸಬಹುದಿತ್ತಲ್ಲವೇ’ ಎಂದು.

 

ತಾಮಾಹ ಭೀಮಃ ಪಾಪಿಷ್ಠಾ ವಧಯೋಗ್ಯಾಪರಾಧಿನಃ ।

ಸರ್ವೇ ಹತಾ ಇತಿ ಪುನಃ ಸಾSSಹ ಯೇನಾಕೃತಸ್ತವ  ॥೨೮.೨೨೧॥

 

ಅಪರಾಧಃ ಸ ಏಕೋSಪಿ ಕಿಂ ನಾಸ್ತೀತ್ಯವದತ್ ಸ ತಾಮ್ ।

ಸರ್ವೈಃ ಸಮೇತೈಃ ಕೃಷ್ಣಸ್ಯ ಬನ್ಧನಾಯ ವಿನಿಶ್ಚಿತಮ್ ॥೨೮.೨೨೨॥

 

ಆಗ ಭೀಮಸೇನನು ‘ನಿನ್ನ ಎಲ್ಲಾ ಮಕ್ಕಳೂ ಕೊಲ್ಲಲು ಅರ್ಹರಾಗಿರುವ ಪಾಪವನ್ನು ಮಾಡಿದ್ದರು. ಹಾಗಾಗಿ ನಾನು ಎಲ್ಲರನ್ನೂ ಕೊಲ್ಲಬೇಕಾಯಿತು’ ಎನ್ನುತ್ತಾನೆ.  (ಕೊಲ್ಲಲು ಅರ್ಹರಾಗುವ ಎಲ್ಲಾ ಅಪರಾಧವನ್ನು ಅವರು ಮಾಡಿದ್ದರು. ಬೇರೊಬ್ಬರ ಮನೆಗೆ ಬೆಂಕಿ ಕೊಟ್ಟಿರುವುದು, ಬೇರೊಬ್ಬರಿಗೆ ವಿಷವನ್ನು ಹಾಕಿರುವುದು, ಬೇರೊಬ್ಬರ ಭೂಮಿಯನ್ನು ಅಪಹರಿಸಿರುವುದು, ಬೇರೊಬ್ಬರ ಹೆಂಡಿರನ್ನು ಅವಮಾನಮಾಡಿರುವುದು, ಹೀಗೆ ಅವರೆಲ್ಲರೂ ಅನೇಕ ಪಾಪಗಳನ್ನು ಮಾಡಿರುವ ಆತತಾಯಿಗಳಾಗಿದ್ದರು). ‘ಅಂತಹ ಅಪರಾಧ ಮಾಡದ ಒಬ್ಬ ಮಗನೂ ಕೂಡಾ ಇರಲಿಲ್ಲವೇ’ ಎಂದು ಪುನಃ ಗಾಂಧಾರಿ ಕೇಳಿದಾಗ, ಭೀಮಸೇನ ಹೇಳುತ್ತಾನೆ- ‘ ಇರಲಿಲ್ಲ, ಏಕೆಂದರೆ ಎಲ್ಲರೂ ಸೇರಿ ಶ್ರೀಕೃಷ್ಣನನ್ನೇ ಸೆರೆಹಿಡಿಯುವ ನಿಶ್ಚಯ ಮಾಡಿದ್ದರು’ ಎಂದು.

 

ಅನ್ಯಾನಿ ಚ ಸುಪಾಪಾನಿ ಕೃತಾನ್ಯತ್ರ ಪುರಾSಪಿಚ ।

ವಾಸುದೇವಂ ಸಭಾಸಂಸ್ಥಂ ಬ್ರುವಾಣಂ ಧರ್ಮ್ಮಸಂಹಿತಮ್  ॥೨೮.೨೨೩॥

 

ಪುನಃಪುನರವಜ್ಞಾಯ ಯಾನ್ತಂ ದೂರ್ಯ್ಯೋಧನಂ ಬಹಿಃ ।

ಸರ್ವೇSನ್ವಗಚ್ಛನ್ನಿತ್ಯಾದೀನ್ಯಭಿಪ್ರೇತ್ಯ ವೃಕೋದರಃ ॥೨೮.೨೨೪॥

 

ನೈಕೋSಪ್ಯನಪರಾಧೀ ಮೇ ಸ್ವಯಂ ತಾನನುಶಿಕ್ಷಿತುಮ್ ।

ಅಸಮರ್ತ್ಥಾ ಮಯಿ ಕ್ರೋಧಂ ಕಿಂ ಕರೋಷಿ ನಿರರ್ತ್ಥಕಮ್ ॥೨೮.೨೨೫॥

 

ಮುಂದುವರಿದು ಭೀಮಸೇನ ಹೇಳುತ್ತಾನೆ- ‘ಬಹಳ ಹಿಂದೆಯೂ ಕೂಡಾ ಅವರೆಲ್ಲರೂ ಅನೇಕ ಪಾಪಗಳನ್ನು ಮಾಡಿದ್ದಾರೆ’ ಎಂದು. ಸಭೆಯಲ್ಲಿ ಧರ್ಮವನ್ನು ಹೇಳುತ್ತಿರುವ ಶ್ರೀಕೃಷ್ಣನನ್ನು ಮತ್ತೆ-ಮತ್ತೆ ಧಿಕ್ಕರಿಸಿ ಹೊರಗೆ ಹೋಗುತ್ತಿರುವ ದುರ್ಯೋಧನನನ್ನು ಎಲ್ಲರೂ ಅನುಸರಿಸಿದರು. ಇವೇ ಮೊದಲಾದವುಗಳನ್ನು ಅಭಿಪ್ರಾಯದಲ್ಲಿಟ್ಟುಕ್ಕೊಂಡು ವೃಕೋದರನು – ‘ಒಬ್ಬನೂ ಅಲ್ಲಿ ಅಪರಾಧಿಯಲ್ಲದವನು ಇರಲಿಲ್ಲ. ನೀನೇ ಅವರನ್ನು ಶಿಕ್ಷಿಸಲು ಅಸಮರ್ಥಳಾಗಿ, ಈಗ ನನ್ನಲ್ಲಿ ಏಕೆ ಕೋಪಗೊಳ್ಳುತ್ತಿರುವೆ’ ಎಂದು ಗಾಂಧಾರಿಯನ್ನು ಪ್ರಶ್ನಿಸುತ್ತಾನೆ.

[ಮಹಾಭಾರತದ ಸ್ತ್ರೀಪರ್ವ- ‘ಅನಿಗೃಹ್ಯ ಪುರಾ ಪುತ್ರಾನಸ್ಮಾಸ್ವನಪಕಾರಿಷು । ನ ಮಾಮರ್ಹಸಿ ಕಲ್ಯಾಣಿ ದೋಷೇಣ ಪರಿಶಙ್ಕಿತುಮ್’(೧೪.೨೧)  ತಪ್ಪೇಮಾಡದ ನಮ್ಮಲ್ಲಿ ತಪ್ಪುಗಳನ್ನೇ ಮಾಡಿಕೊಂಡು ಬಂದ ನಿನ್ನ ಪುತ್ರರನ್ನು ಶಿಕ್ಷಿಸಲು ನೀನು ಅಸಮರ್ಥಳಾಗಿರುವೆ. ಇಂತಹ ನೀನು ನನ್ನಲ್ಲಿ ಏಕೆ ದೋಷವನ್ನು ಹೇಳುತ್ತಿರುವೆ ಎಂದು ಭೀಮಸೇನ ಗಾಂಧಾರಿಯನ್ನು ಪ್ರಶ್ನಿಸಿದ್ದಾನೆ]

 

ಇತ್ಯುಕ್ತಾ ಸಾSಭವತ್ ತೂಷ್ಣೀಂ ಕ್ರಮಾತ್ ಸರ್ವೈಶ್ಚ ಪಾಣ್ಡವೈಃ ।

ವನ್ದಿತಾ ವ್ಯಾಸವಾಕ್ಯಾಚ್ಚ ಕಿಞ್ಚಿಚ್ಛಾನ್ತಾSಥ ಸಾSಭವತ್ ॥೨೮.೨೨೬॥

 

ತಸ್ಯಾ ಯಾಶ್ಚ ಸ್ನುಷಾಃ ಸರ್ವಾಸ್ತಾಭಿಃ ಸಹ ಪುರಸ್ಕೃತಾಮ್ ।

ಕೃತ್ವಾ ತಂ ಧೃತರಾಷ್ಟ್ರಂ ಚ ವಿದುರಾದೀಂಶ್ಚ ಸರ್ವಶಃ ॥೨೮.೨೨೭॥

 

ಪಾಣ್ಡವಾಃ ಪ್ರಧನಸ್ಥಾನಂ ಸಭಾರ್ಯ್ಯಾಃ ಪೃಥಯಾ ಸಹ ।

ಕೃಷ್ಣಾಭ್ಯಾಂ ಚ ಯಯುಸ್ತತ್ರ ಗಾನ್ಧಾರ್ಯ್ಯಾಸ್ತಪಸೋ ಬಲಮ್ ॥೨೮.೨೨೮॥

 

ಈರೀತಿಯಾಗಿ ಹೇಳಲ್ಪಟ್ಟ ಅವಳು ಸುಮ್ಮನಾದಳು. ಕ್ರಮೇಣ ಉಳಿದ ಮೂರು ಜನ ಪಾಂಡವರಿಂದ ನಮಸ್ಕೃತಳಾಗಿ ವೇದವ್ಯಾಸರ ಮಾತಿನಿಂದಲೂ ಕೂಡಾ ಕಿಂಚಿತ್ ಶಾಂತಳಾದಳು.

ಎಲ್ಲಾ ಸೊಸೆಯರಿಂದ ಕೂಡಿರುವ ಗಾಂಧಾರಿಯನ್ನು, ವಿದುರ ಹಾಗೂ ಧೃತರಾಷ್ಟ್ರನನ್ನೂ ಕರೆದುಕೊಂಡು ಪಾಂಡವರು, ಕುಂತಿಯಿಂದಲೂ, ತಮ್ಮ ಹೆಂಡಿರಿಂದಲೂ ಕೂಡಿಕೊಂಡು, ವೇದವ್ಯಾಸರು ಮತ್ತು ಶ್ರೀಕೃಷ್ಣ ಪರಮಾತ್ಮನೊಂದಿಗೆ ರಣಭೂಮಿಯನ್ನು ಕುರಿತು ತೆರಳಿದರು.

 

ಜಾನನ್ ಪಾಣ್ಡವರಕ್ಷಾರ್ತ್ಥಂ ಚಿಕೀರ್ಷುಸ್ತತ್ತಪೋವ್ಯಯಮ್ ।

ವೇದೇಶ್ವರೋ ದದೌ ದಿವ್ಯಂ ಚಕ್ಷುಃ ಸತ್ಯವತೀಸುತಃ ॥೨೮.೨೨೯॥

 

ಗಾಂಧಾರಿಯ ತಪಸ್ಸಿನ ಬಲವನ್ನು ತಿಳಿದವರಾದ ವೇದವ್ಯಾಸರು, ಪಾಂಡವರ ರಕ್ಷಣೆಗಾಗಿ ಮತ್ತು ಅವಳ ತಪಸ್ಸಿನ ವ್ಯಯವನ್ನು ಮಾಡಲು ಗಾಂಧಾರಿಗೆ  ದಿವ್ಯಚಕ್ಷುಸನ್ನು ಕೊಟ್ಟರು.

 

ತೇನ ದೃಷ್ಟ್ವಾ ಪ್ರೇತದೇಹಾನ್ ಸರ್ವಾಂಸ್ತತ್ರ ಸಮಾಕುಲಾ ।

ಶಶಾಪ ಯಾದವೇಶಾನಂ ತ್ವಯಾSಸ್ಮತ್ಕುಲನಾಶನಮ್ ॥೨೮.೨೩೦॥

 

ಯತ್ ಕೃತಂ ತತ್ ತವ ಕುಲಂ ಗಚ್ಛತ್ವನ್ಯೋನ್ಯತಃ ಕ್ಷಯಮ್ ।

ಇತ್ಯುಕ್ತೋ ಭಗವಾನ್ ಕೃಷ್ಣಃ ಸ್ವಚಿಕೀರ್ಷಿತಮೇವ ತತ್ ॥೨೮.೨೩೧॥

 

ಅಸ್ತ್ವೇವಮಿತ್ಯಾಹ ವಿಭುರೀಶ್ವರೋSಪ್ಯನ್ಯಥಾ ಕೃತೌ ।

ತೇನ ತಸ್ಯಾಸ್ತಪೋ ನಷ್ಟಂ ಹೀನಾ ಸಾSತೋ ಹಿ ಭರ್ತ್ತೃತಃ ॥೨೮.೨೩೨॥

 

ಆ ದಿವ್ಯಚಕ್ಷುಸಿನಿಂದ ಸತ್ತ ಎಲ್ಲರ ದೇಹವನ್ನು ನೋಡಿದ ಗಾಂಧಾರಿ, ಶ್ರೀಕೃಷ್ಣಪರಮಾತ್ಮನನ್ನು ಕುರಿತು- ‘ನಿನ್ನಿಂದ ನಮ್ಮ ಕುಲನಾಶವು ಮಾಡಲ್ಪಟ್ಟಿತು. ಅದರಿಂದ ನಿನ್ನ ಕುಲವೂ ಕೂಡಾ ಪರಸ್ಪರ ಹೊಡೆದಾಡಿಕೊಂಡು ನಾಶವನ್ನು ಹೊಂದಲಿ’ ಎಂದು ಶಾಪ ಕೊಟ್ಟಳು. ಈರೀತಿಯಾಗಿ ಶಪಿಸಲ್ಪಟ್ಟ ಶ್ರೀಕೃಷ್ಣನು ಶಾಪವನ್ನು ಹುಸಿ ಮಾಡಲು ಸಮರ್ಥನಿದ್ದರೂ ಕೂಡಾ, ‘ಹಾಗೇ ಆಗಲಿ, ನಿನ್ನ ಶಾಪವನ್ನು ನಾನು ಸ್ವೀಕರಿಸಿದ್ದೇನೆ’ ಎಂದು ಹೇಳಿದನು.  ಈ ರೀತಿ ಶಾಪ ಕೊಟ್ಟದ್ದರಿಂದ ಗಾಂಧಾರಿಯ ತಪಸ್ಸು ಕುಂದಿತು ಮತ್ತು  ಅವಳು ಗಂಡನ ತಪಸ್ಸಿಗಿಂತಲೂ ಕಡಿಮೆ ತಪಸ್ಸಿನವಳಾದಳು. (ಗಾಂಧಾರಿ ಶಾಪ ಕೊಡದೇ ಹೋಗಿದ್ದರೂ ಕೂಡಾ, ಸಮಸ್ತ ಯಾದವರು ‘ಯಾದವೀ ಕಲಹ’ ಎನ್ನುವ ನೆಪದಲ್ಲಿ ಸಾಯುವಂತೆ ಭಗವಂತ ಮಾಡುತ್ತಿದ್ದ. ಆದರೆ ಗಾಂಧಾರಿ ಕೆಟ್ಟದ್ದನ್ನು ಎಣಿಸಿ ತನ್ನ ಧೀರ್ಘ ಕಾಲದ ತಪಸ್ಸನ್ನು ಕಳೆದುಕೊಳ್ಳುವಂತಾಯಿತು.)

 

ನಾಶಯೇದ್ಧಿ ಸದಾ ವಿಷ್ಣುಃ ಸ್ವಯೋಗ್ಯಾದಧಿಕಾನ್ ಗುಣಾನ್ ।

ತತ ಆಶ್ಲಿಷ್ಯ ಭರ್ತ್ತೄಣಾಂ ದೇಹಾನ್ ಪ್ರರುದತೀಃ ಸ್ತ್ರಿಯಃ ॥೨೮.೨೩೩॥

 

ಸರ್ವಾ ದುರ್ಯ್ಯೋಧನಾದೀನಾಂ ದರ್ಶಯಾಮಾಸ ಕೇಶವಃ ।

ಕೃಷ್ಣಾಯೈ ಸಾ ಚ ತಂ ದೇವಮಸ್ತುವತ್ ಪೂರ್ಣ್ಣಸದ್ಗುಣಮ್ ॥೨೮.೨೩೪॥

 

ಶ್ರೀಕೃಷ್ಣ ಪರಮಾತ್ಮನು ಯಾವಾಗಲೂ ತನ್ನ ಯೋಗ್ಯತೆಗಿಂತ ಮಿಗಿಲಾದ ಗುಣಗಳನ್ನು ನಾಶ ಮಾಡುತ್ತಾನಷ್ಟೇ.(ಹಾಗೇ, ಗಾಂಧಾರಿಯ ಯೋಗ್ಯತೆಗೆ ಮೀರಿದ ತಪಃಶಕ್ತಿಯನ್ನು ಶ್ರೀಕೃಷ್ಣ ನಾಶಮಾಡಿದ) ತದನಂತರ(ತಾನು ಈ ಹಿಂದೆ ಮಾಡಿದ್ದ ಪ್ರತಿಜ್ಞೆಗೆ ಅನುಗುಣವಾಗಿ) ಗಂಡಂದಿರಾಗಿರುವ ದುರ್ಯೋಧನಾದಿಗಳ ದೇಹಗಳನ್ನು ಅಪ್ಪಿ ಅಳುವ ಕೌರವ  ಸ್ತ್ರೀಯರನ್ನು ದ್ರೌಪದಿಗಾಗಿ ಶ್ರೀಕೃಷ್ಣನು ತೋರಿಸಿದನು. ಅವಳಾದರೋ, ಗುಣಗಳಿಂದ ತುಂಬಿರುವ ಶ್ರೀಕೃಷ್ಣನನ್ನು ಸ್ತೋತ್ರಮಾಡಿದಳು.

No comments:

Post a Comment