ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, July 30, 2023

Mahabharata Tatparya Nirnaya Kannada 29-39-47

[ದೇವತಾರಾಧನೆ ಮತ್ತು ಮೋಕ್ಷಪ್ರಾಪ್ತಿಯ ಕುರಿತು ಹೇಳುತ್ತಾರೆ-]

 

ಸರ್ವಥಾSನ್ಧಂ ತಮೋ ಯಾತಿ ವರಂ ಸದೃಶಮೇವ ವಾ ।

ಯೋ ವಿಷ್ಣೋರ್ಮ್ಮನ್ಯತೇ ಕಿಞ್ಚಿದ್ ಗುಣೈಃ ಕೈಶ್ಚಿದಪಿ ಕ್ವಚಿತ್ ॥ ೨೯.೩೯ ॥

 

ಬ್ರಹ್ಮೇಶಾನಾದಿಕಮಪಿ ಭೇದಂ ಯೋ ವಾ ನ ಮನ್ಯತೇ ।

ಭೇದದೃಕ್ ತದ್ಗುಣಾದೌ ಚ ಪ್ರಾದುರ್ಭಾವಗತೇSಪಿ ಯಃ ॥ ೨೯.೪೦ ॥

 

ಪ್ರಾಕೃತಂ ದೇಹಮಥವಾ ದುಃಖಾಜ್ಞಾನಶ್ರಮಾದಿಕಮ್ ।

ಮನ್ಯತೇ ತಾರತಮ್ಯಂ ವಾ ತದ್ಭಕ್ತೇಷ್ವನ್ಯಥೈವ ಯಃ ॥ ೨೯.೪೧ ॥

 

ಇನ್ನೊಬ್ಬನನ್ನು ಪರಮಾತ್ಮನಿಗೆ ಸದೃಶ ಅಥವಾ ಪರಮಾತ್ಮನಿಗಿಂತ ಮಿಗಿಲು ಎಂದು ಯಾರು ತಿಳಿಯುತ್ತಾನೋ ಅವನು  ಅನ್ಧಂತಮಸ್ಸನ್ನು ಹೊಂದುತ್ತಾನೆ.

ಬ್ರಹ್ಮ, ರುದ್ರರು ಹಾಗೂ ಇತರರು ಪರಸ್ಪರ ಸದೃಶ ಎಂದು ತಿಳಿಯುವುದು, ದೇವತೆಗಳನ್ನು ಪರಮಾತ್ಮನಿಗೆ ಸದೃಶರು ಅಥವಾ ಉತ್ತಮರು ಎಂದುಕೊಳ್ಳುವುದು, ಪರಮಾತ್ಮನಿಗೂ ಹಾಗೂ ದೇವತೆಗಳಿಗೂ ನಡುವೆ  ಭೇದವನ್ನು ಒಪ್ಪದಿರುವುದು, ಭಗವಂತನಿಗೂ ಹಾಗೂ ಅವನ ಗುಣಗಳಿಗೂ ಭೇದವನ್ನು ಚಿಂತಿಸುವುದು, ಭಗವಂತನ ಮೂಲರೂಪ ಮತ್ತು ಅವತಾರ ರೂಪದಲ್ಲಿ ಭೇದವನ್ನು ತಿಳಿಯುವುದು, ಪರಮಾತ್ಮನಿಗೆ ಪ್ರಾಕೃತ ಶರೀರವಿದೆ ಎಂದುಕೊಳ್ಳುವುದು, ಭಗವಂತನಿಗೆ ನಮ್ಮಂತೆ ದುಃಖ, ಅಜ್ಞಾನ, ಶ್ರಮ, ಇತ್ಯಾದಿಗಳಿವೆ ಎಂದು ತಿಳಿಯುವುದು, ಪರಮಾತ್ಮನ ಭಕ್ತರಲ್ಲಿ ತಪ್ಪುತಪ್ಪಾಗಿ ತಾರತಮ್ಯವನ್ನು ತಿಳಿಯುವುದು- ಇಂತವರು  ಅನ್ಧಂತಮಸ್ಸಿಗೆ ಹೋಗುತ್ತಾರೆ.

 

ಮನೋವಾಕ್ತನುಭಿರ್ಯ್ಯೋ ವಾ ತಸ್ಮಿಂಸ್ತದ್ಭಕ್ತ ಏವ ವಾ ।

ವಿರೋಧಕೃದ್ ವಿಷ್ಣ್ವಧೀನಾದನ್ಯತ್ ಕಿಞ್ಚಿದಪಿ ಸ್ಮರನ್ ॥ ೨೯.೪೨ ॥

 

ಅನ್ಯಾಧೀನತ್ವವಿಚ್ಚಾಸ್ಯ ಸರ್ವಪೂರ್ತ್ತ್ಯವಿದೇವ ಚ ।

ಭಕ್ತಿಹೀನಶ್ಚ ತೇ ಸರ್ವೇ ತಮೋSನ್ಧಂ ಯಾನ್ತ್ಯಸಂಶಯಮ್ ॥ ೨೯.೪೩ ॥

 

ಮನಸ್ಸಿನಿಂದಾಗಲೀ ಮಾತಿನಿಂದಾಗಲೀ ಅಥವಾ ದೇಹದಿಂದಾಗಲೀ ಯಾರು ಭಗವಂತನಲ್ಲಿ ಅಥವಾ  ಅವನ ಭಕ್ತರಲ್ಲಿ ವಿರೋಧವನ್ನು ಮಾಡುತ್ತಾನೋ, ಅವನು ಅನ್ಧಂತಮಸ್ಸನ್ನು ಹೊಂದುತ್ತಾನೆ.

ಭಗವಂತನಲ್ಲಿ ದೋಷಚಿಂತನೆ ಮಾಡುವುದು, ಪರಮಾತ್ಮನು ಇನ್ನೊಬ್ಬರ ಅಧೀನ ಎಂದು ತಿಳಿಯುವುದು, ಪರಮಾತ್ಮನು ಗುಣಗಳಿಂದ ಅಪೂರ್ಣ ಅಥವಾ ಎಲ್ಲಾ ಗುಣಗಳು ಅವನಲ್ಲಿಲ್ಲಾ ಎಂದು ತಿಳಿಯುವುದು, ಭಕ್ತಿ ಹೀನರಾಗಿರುವುದು, ಅಂತವರು ಅನ್ಧಂತಮಸ್ಸನ್ನು ಹೊಂದುತ್ತಾರೆ-ಇದರಲ್ಲಿ ಸಂಶಯವೇ ಇಲ್ಲ.

 

ತತ್ವೇ ಸಂಶಯಯುಕ್ತಾ ಯೇ ಸರ್ವೇ ತೇ ನಿರಯೋಪಗಾಃ ।

ದೋಷೇಭ್ಯಸ್ತೇ ಗುಣಾಧಿಕ್ಯೇ ನೈವ ಯಾನ್ತ್ಯಧಮಾಂ ಗತಿಮ್ ॥ ೨೯.೪೪ ॥

 

ಯಾರು ತತ್ವದಲ್ಲಿ ಸಂಶಯವನ್ನು ಹೊಂದಿರುತ್ತಾರೋ ಅವರೆಲ್ಲರೂ ಆ ದೋಷಗಳಿಂದಾಗಿ ನರಕವನ್ನು ಹೊಂದುತ್ತಾರೆ. ಅಂತವರಲ್ಲಿ ಗುಣಗಳಿದ್ದರೆ ಅಧೋಗತಿಯಿಂದ(ಅನ್ಧಂತಮಸ್ಸಿನಿಂದ) ಅವರು ಪಾರಾಗುತ್ತಾರೆ.

  

ಗುಣದೋಷಸಾಮ್ಯೇ ಮಾನುಷ್ಯಂ ಸರ್ವದೈವ ಪುನಃಪುನಃ ।

ಯಾವದ್ ದೋಷಕ್ಷಯಶ್ಚೋರ್ಧ್ವಾ ಗತಿಃ ಕ್ರಮಶ ಏವ ತು ॥ ೨೯.೪೫ ॥

 

ಗುಣ ಹಾಗೂ ದೋಷ ಎರಡೂ ಕೂಡಾ ಸಮವಾಗಿರುವುದು ಮನುಷ್ಯರ ಲಕ್ಷಣ. ಅಂತವರು ಮತ್ತೆಮತ್ತೆ ಮನುಷ್ಯರಾಗಿ ಹುಟ್ಟುತ್ತಿರುತ್ತಾರೆ. (ಗುಣಾಧಿಕ್ಯ ಇರುವುದು ದೇವತೆಗಳ ಲಕ್ಷಣವಾದರೆ,  ದೋಷಾಧಿಕ್ಯ ಎನ್ನುವುದು ಅಸುರ ಲಕ್ಷಣ). ನಾವು ಎಷ್ಟೆಷ್ಟು ದೋಷವನ್ನು ಕಳೆದುಕೊಳ್ಳುತ್ತೇವೋ ಅದೇ ರೀತಿ  ಕ್ರಮವಾಗಿ ಊರ್ಧ್ವಗತಿ ಸಾಧ್ಯವಾಗುತ್ತದೆ.

 

ಸರ್ವದೋಷಕ್ಷಯೇ ಮುಕ್ತಿರಾತ್ಮಯೋಗ್ಯಾನುಸಾರತಃ ।

ಭಕ್ತಿಜ್ಞಾನೋನ್ನತಾವೇವ ಸ್ವರ್ಗ್ಗಶ್ಚ ಶುಭಕರ್ಮ್ಮಣಃ ॥ ೨೯.೪೬ ॥

 

ವಿಷ್ಣುವೈಷ್ಣವವಾಕ್ಯೇನ ಹಾನಿಃ ಪಾಪಸ್ಯ ಕರ್ಮ್ಮಣಃ ।

ಇತ್ಯಾದಿ ಧರ್ಮ್ಮಸರ್ವಸ್ವಂ ಭೀಷ್ಮಸ್ಥೇನೈವ ವಿಷ್ಣುನಾ ॥ ೨೯.೪೭ ॥

 

ಎಲ್ಲಾ ದೋಷಗಳಿಂದ ಬಿಡುಗಡೆಯನ್ನು ಹೊಂದಿದರೆ ತನ್ನ ಯೋಗ್ಯತೆಗೆ ಅನುಗುಣವಾದ ಮುಕ್ತಿಯು. ಭಕ್ತಿ ಹಾಗೂ ಜ್ಞಾನದ ಉನ್ನತಿಯಾದರೆ ಎಲ್ಲಾ ದೋಷಗಳ ಕ್ಷಯವಾಗುತ್ತದೆ ಮತ್ತು ಮುಕ್ತಿ ಪ್ರಾಪ್ತವಾಗುತ್ತದೆ.  ಮಂಗಳಕರವಾದ ಅಥವಾ ಪುಣ್ಯಕರ್ಮಗಳಿಂದ ಸ್ವರ್ಗ ಪ್ರಾಪ್ತಿಯಾಗುತ್ತದೆ.

ನಾರಾಯಣ ಮತ್ತು ನಾರಾಯಣನ ಭಕ್ತರ ವಾಕ್ಯದಿಂದ(ಅನುಗ್ರಹ/ಆಶೀರ್ವಾದದಿಂದ) ಪಾಪಕರ್ಮದ ನಾಶವಾಗುತ್ತದೆ. ಇವೇ ಮೊದಲಾದ ಎಲ್ಲಾ ರೀತಿಯ ಧರ್ಮಗಳನ್ನೂ ಭೀಷ್ಮಾಚಾರ್ಯರ ಅಂತರ್ಯಾಮಿಯಾಗಿರುವ ಕೃಷ್ಣನಿಂದಲೇ ಪಾಂಡವರಿಗಾಗಿ ಹೇಳಲ್ಪಟ್ಟಿತು.

No comments:

Post a Comment