ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, July 13, 2023

Mahabharata Tatparya Nirnaya Kannada 28-88-97

 

ತಸ್ಮಿನ್ ಗತೇ ವಾಸುದೇವಂ ಸಮಪೃಚ್ಛದ್ ಯುಧಿಷ್ಠಿರಃ ।

ಧರ್ಮ್ಮೋSಯಮಥವಾSಧರ್ಮ್ಮ ಇತಿ ತಂ ಪ್ರಾಹ ಕೇಶವಃ ॥೨೮.೮೮॥

 

ಬಲರಾಮ ಹೊರಟುಹೋದ ಮೇಲೆ ಯುಧಿಷ್ಠಿರನು ವಾಸುದೇವನನ್ನು ಕುರಿತು - ‘ಇದು ಧರ್ಮವೋ, ಅಧರ್ಮವೋ’ ಎಂದು ಕೇಳಿದ.  ಆಗ ಶ್ರೀಕೃಷ್ಣನು ಅವನನ್ನು ಕುರಿತು ಹೀಗೆ ಹೇಳಿದ-

 

ನ ಸಾಕ್ಷಾದ್ ಧರ್ಮ್ಮತೋ ವದ್ಧ್ಯಾ ಯೇ ತು ಪಾಪತಮಾ ನರಾಃ ।

ದೇವೈರ್ಹಿ ವಞ್ಚಯಿತ್ವೈವ ಹತಾಃ ಪೂರ್ವಂ ಸುರಾರಯಃ ॥೨೮.೮೯॥

 

ಅತೋSಯಮಪ್ಯಧರ್ಮ್ಮೇಣ ಹತೋ ನಾತ್ರಾಸ್ತಿ ದೂಷಣಮ್ ।

ಭೀಷ್ಮದ್ರೋಣೌ ಚ ಕರ್ಣ್ಣಶ್ಚ ಯದೈವೋಪಧಿನಾ ಹತಾಃ ॥೨೮.೯೦॥

 

ಕೋ ನು ದುರ್ಯ್ಯೋಧನೇ ಪಾಪೇ ಹತೇ ದೋಷಃ ಕಥಞ್ಚನ ।

ಪ್ರತಿಜ್ಞಾಪಾಲನಾಯಾಪಿ ಬಿಭೇದೋರೂ ವೃಕೋದರಃ  ॥೨೮.೯೧॥

 

‘ಯಾರು ಅತ್ಯಂತ ಪಾಪಿಷ್ಠರೋ, ಅಂತವರು  ಶುದ್ಧಧರ್ಮದಿಂದ ಕೊಲ್ಲಲು ಅರ್ಹರಲ್ಲ. ದೇವತೆಗಳಿಂದ ಮೋಸಗೊಳಿಸಿಯೇ ಹಿಂದೆ ದೈತ್ಯರು ಕೊಲ್ಲಲ್ಪಟ್ಟರಷ್ಟೇ? ಕೇವಲ ಧರ್ಮದಿಂದ  ಪಾಪಿಷ್ಠರನ್ನು ಸಂಹರಿಸುವುದು ಯುಕ್ತವಲ್ಲವಾದುದರಿಂದ ಅತ್ಯಂತ ಪಾಪಿಷ್ಠನಾದ ಈ ದುರ್ಯೋಧನನು ಅಧರ್ಮದಿಂದ ಕೊಲ್ಲಲ್ಪಟ್ಟಿದ್ದಾನೆ. ಈ ವಿಚಾರದಲ್ಲಿ ಯಾವುದೇ ದೋಷವಿಲ್ಲ. ಭೀಷ್ಮಾಚಾರ್ಯರು, ದ್ರೋಣಾಚಾರ್ಯರು ಕರ್ಣ ಮೊದಲಾದವರೆಲ್ಲ -ಮೇಲ್ನೋಟಕ್ಕೆ ಧರ್ಮಕ್ಕೆ ವಿರುದ್ಧವಾಗಿಯೇ(ಕಪಟದಿಂದಲೇ) ಸಂಹರಿಸಲ್ಪಟ್ಟಿದ್ದಾರೆ. ಹೀಗಿರುವಾಗ ಪಾಪಿಷ್ಠನಾಗಿರುವ ಈ ದುರ್ಯೋಧನನು ಸಂಹರಿಸಲ್ಪಡಲು ದೋಷವೇನು? ಅಷ್ಟೇ ಅಲ್ಲ, ಭೀಮಸೇನನು ತನ್ನ ಪ್ರತಿಜ್ಞೆಯನ್ನು ಪಾಲನೆ ಮಾಡುವುದಕ್ಕಾಗಿಯೇ ಅವನ ತೊಡೆಗಳನ್ನು ಮುರಿದನು’.

 

ಧರ್ಮ್ಮತಶ್ಚ ಪ್ರತಿಜ್ಞೇಯಂ ಕೃತಾ ತೇನಾನುರೂಪತಃ ।

ಲೋಕತೋSಪಿ ನ ಧರ್ಮ್ಮಸ್ಯ ಹಾನಿರತ್ರ ಕಥಞ್ಚನ ॥೨೮.೯೨॥

 

ಧರ್ಮಪೂರ್ವಕವಾಗಿಯೇ ಭೀಮಸೇನನಿಂದ ಪ್ರತಿಜ್ಞೆಯು ಮಾಡಲ್ಪಟ್ಟಿತು. ಪಾಪಿಷ್ಠರನ್ನು ಅಧರ್ಮ ರೀತಿಯಿಂದ ಸಂಹರಿಸುವುದೇ ಧರ್ಮವಾಗಿರುವುದರಿಂದ ಲೌಕಿಕವಾಗಿ ನೋಡಿದರೂ ಕೂಡಾ ಈ ಯುದ್ಧದಲ್ಲಿ ಧರ್ಮದ ಹಾನಿ ಆಗಿಲ್ಲ.

 

ಯೇ ಭೀಮಸ್ಯಾಪ್ರಭಾವಜ್ಞಾ ಆಪದ್ಧರ್ಮಂ ಚ ಮನ್ವತೇ ।

ಅವದ್ಧ್ಯತ್ವೇ ಶಿವವರಾದ್ ಗದಾಶಿಕ್ಷಾಬಲಾದಪಿ ॥೨೮.೯೩॥

 

ಜರಾಸನ್ಧೋಪಮೋ ಯಸ್ಮಾದ್ ಧಾರ್ತ್ತರಾಷ್ಟ್ರಃ ಸುವಿಶ್ರುತಃ ।

ತಸ್ಮಾತ್ ಸದ್ಧರ್ಮ್ಮ ಏವಾಯಂ ಭೀಮಚೀರ್ಣ್ಣ ಇತಿ ಬ್ರುವನ್ ॥೨೮.೯೪॥

 

ಅಪಿ ಸಂಶಯಿನಂ ಚಕ್ರೇ ಧರ್ಮ್ಮರಾಜಂ ಜಗತ್ಪತಿಃ ।

ಭೂಭಾರಕ್ಷತಿಜೋ ಧರ್ಮ್ಮೋ ಮಚ್ಛುಶ್ರೂಷಾತ್ಮಕಸ್ತು ಯಃ ॥೨೮.೯೫॥

 

ಭೀಮಸ್ಯೈವ ಭವೇತ್ ಸಮ್ಯಗಿತಿ ಬುದ್ಧ್ಯಾ ಪರಃ ಪ್ರಭುಃ ।

ಸ್ವೇನೈವ ಬಲಭದ್ರಾಯ ಜನಾಯ ಚ ಪುನಃಪುನಃ ॥೨೮.೯೬॥

 

ಶ್ರುತ್ವಾSಪ್ಯುಕ್ತಂ ನ ತತ್ಯಾಜ ಸಂಶಯಂ ಧರ್ಮ್ಮಜೋ ಯತಃ ।

ತತೋSಪ್ಯಸಂಶಯಂ ಕೃಷ್ಣೋ ನ ಚಕಾರ ಯುಧಿಷ್ಠಿರಮ್ ॥೨೮.೯೭॥

 

ಯಾರು ಭೀಮಸೇನನ ಸಾಮರ್ಥ್ಯವನ್ನು ತಿಳಿದಿಲ್ಲವೋ,  ಅವರು ಇದನ್ನು ಆಪದ್ಧರ್ಮ ಎಂದು ತಿಳಿಯುತ್ತಾರೆ. ಇನ್ನು ಶಿವನಿಂದ ಅವಧ್ಯತ್ವದ ವರವಿದ್ದ ಜರಾಸಂಧನಿಗೆ, ಗದೆಯ ಅಭ್ಯಾಸ ಮತ್ತು ಕಸುವಿನಲ್ಲಿ ದುರ್ಯೋಧನನು ಸಮ ಎಂದು ಪ್ರಸಿದ್ಧನಾಗಿದ್ದಾನೆ’. (ಜರಾಸಂಧನನ್ನೇ ಕೊಂದ ಭೀಮಸೇನನಿಗೆ ದುರ್ಯೋಧನನನ್ನು ಕೊಲ್ಲುವುದು ಕಷ್ಟವಲ್ಲ). ಈ ರೀತಿ ಶ್ರೀಕೃಷ್ಣ ಭೀಮಸೇನ ಮಾಡಿರುವುದು ಧರ್ಮಪೂರ್ವಕವೇ ಆಗಿದೆ ಎನ್ನುವುದನ್ನು ಸ್ಪಷ್ಟಪಡಿಸಿದ.  ಆದರೂ ಕೂಡಾ ಶ್ರೀಕೃಷ್ಣ  ಧರ್ಮರಾಜನಿಗೆ ಸಂಶಯ ಬರುವ ಹಾಗೇ ನಡೆದುಕೊಂಡ. (ಏಕೆ ಎಂದರೆ-) ಭೂಭಾರವನ್ನು ನಾಶಮಾಡಿರುವುದು-ಭಗವಂತನ ಸೇವೆ. ಆ ಪುಣ್ಯವು ಭೀಮಸೇನನಿಗೆ ಸಲ್ಲಬೇಕೇ ಹೊರತು ಬೇರೊಬ್ಬರಿಗಲ್ಲ. ಹೀಗಾಗಿ ಶ್ರೀಕೃಷ್ಣ  ಧರ್ಮರಾಜನಿಗೆ ಸಂಶಯ ಬರುವಂತೆ ನಡೆದುಕೊಂಡ.

ತನ್ನಿಂದಲೇ ಬಲರಾಮನಿಗೂ, ಅಲ್ಲಿ ನೆರೆದ ಜನರಿಗೂ ಕೂಡಾ ಮತ್ತೆ ಮತ್ತೆ ಹೇಳಿದ್ದನ್ನು ಕೇಳಿಯೂ ಕೂಡಾ, ಯಾವಕಾರಣದಿಂದ ಧರ್ಮರಾಜನು ಸಂಶಯವನ್ನು ಬಿಡಲಿಲ್ಲವೋ, ಆ ಕಾರಣದಿಂದಲೂ ಶ್ರೀಕೃಷ್ಣ ಯುಧಿಷ್ಠಿರನನ್ನು ಸಂಶಯರಹಿತನನ್ನಾಗಿ ಮಾಡಲಿಲ್ಲ.

No comments:

Post a Comment