ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, July 4, 2023

Mahabharata Tatparya Nirnaya Kannada 28-33-42

 

ಮದ್ರರಾಜೇ ಹತೇ ವೀರೇ ಸುಶರ್ಮ್ಮಾSರ್ಜ್ಜುನಮಭ್ಯಯಾತ್ ।

ಸಂಶಪ್ತಕಾವಶಿಷ್ಟೈಸ್ತಮನಯನ್ಮೃತ್ಯವೇSರ್ಜ್ಜುನಃ ॥೨೮.೩೩॥

 

ವೀರನಾಗಿರುವ ಮದ್ರರಾಜ ಶಲ್ಯನು ಸಾಯಲು, ತ್ರಿಗರ್ತರಾಜ ಸುಶರ್ಮ ಅಳಿದುಳಿದ ಸಂಶಪ್ತಕರೊಡಗೂಡಿ ಅರ್ಜುನನನ್ನು ಎದುರುಗೊಂಡ. ಅರ್ಜುನನು ಸುಶರ್ಮನನ್ನು ಅವನ ಸೇನೆಯ ಜೊತೆಗೆ ಯಮನಲ್ಲಿಗೆ ಕಳುಹಿಸಿದನು.

 

ದುರ್ಯ್ಯೋಧನಸ್ಯಾವರಜಾನವಿಶಿಷ್ಟಾನ್ ವೃಕೋದರಃ ।

ಸರ್ವಾನ್ ಜಘಾನ ಸೇನಾಂ ಚ ನಿಶ್ಯೇಷಮಕರೋದ್ ರಣೇ ॥೨೮.೩೪॥

 

ಭೀಮಸೇನನು ಉಳಿದ ಎಲ್ಲಾ ದುರ್ಯೋಧನನ ತಮ್ಮಂದಿರರನ್ನು ಕೊಂದು ಹಾಕಿ, ಶತ್ರು ಸೇನೆಯನ್ನೂ ಕೂಡಾ ನಿಶ್ಯೇಷ ಮಾಡಿದನು.

 

ಉಲೂಕಂ ಸಹದೇವೋSಥ ಶಕುನಿಂ ಚಾತಿಪಾಪಿನಮ್ ।

ಜಘಾನ ದ್ರೌಣಿಹಾರ್ದ್ದಿಕ್ಯಕೃಪಾನ್ ಭೀಮಾರ್ಜ್ಜುನೌ ತತಃ ॥೨೮.೩೫॥

 

ಬಹುಶೋ ವಿರಥೀಕೃತ್ಯ ಪೀಡಯಿತ್ವಾ ಪುನಃಪುನಃ ।

ದ್ರಾವಯಾಮಾಸತುಸ್ತೇ ತು ಭೀಷಿತಾ ವಿವಿಶುರ್ವನಮ್ ॥೨೮.೩೬॥

 

ಉಲೂಕನನ್ನು, ಅತ್ಯಂತ ಪಾಪಿಷ್ಠನಾದ ಶಕುನಿಯನ್ನೂ ಕೂಡಾ ಸಹದೇವ ಕೊಂದ. ತದನಂತರ ಭೀಮಸೇನ ಹಾಗೂ ಅರ್ಜುನರು ಅಶ್ವತ್ಥಾಮ, ಕೃತವರ್ಮ, ಕೃಪಾಚಾರ್ಯರನ್ನು ಬಹಳ ಬಾರಿ ರಥಹೀನರನ್ನಾಗಿ ಮಾಡಿ, ಮತ್ತೆ ಮತ್ತೆ ಪೀಡಿಸಿ ಓಡಿಸಿದರು. ಆ ಮೂವರೂ ಭಯಗೊಂಡು ಕಾಡನ್ನು ಪ್ರವೇಶಿಸಿದರು(ಕಾಡಿನಲ್ಲಿ ಅವಿತುಕೊಂಡರು).   

 

ಶೈನೇಯೇನ ಗೃಹೀತೋSಥ ಸಞ್ಜಯೋSನನ್ತಶಕ್ತಿನಾ ।

ವ್ಯಾಸೇನ ಮೋಚಿತೋSಥೈಕಃ ಪಾರ್ತ್ಥಾನ್ ದುರ್ಯ್ಯೋಧನೋSಭ್ಯಯಾತ್ ॥೨೮.೩೭॥

 

ತದನಂತರ ಸಾತ್ಯಕಿಯಿಂದ ಹಿಡಿಯಲ್ಪಟ್ಟ ಸಂಜಯನು, ಅನಂತಶಕ್ತಿಯುಳ್ಳ ವ್ಯಾಸರಿಂದ ಬಿಡಿಸಲ್ಪಟ್ಟನು. ಉಳಿದ ಒಬ್ಬನೇ ದುರ್ಯೋಧನನು ಪಾಂಡವರನ್ನು ಎದುರುಗೊಂಡನು.

 

ತೇಷಾಮಭೂತ್ ತಸ್ಯ ಚ ಘೋರರೂಪಂ ಯುದ್ಧಂ ಸ ಬಾಣೈರ್ಬಹುಶೋSರ್ಜ್ಜುನಂ ಚ ।

ಚಕಾರ ಮೂರ್ಚ್ಛಾಭಿಗತಂ ಯುಧಿಷ್ಠಿರಂ ಯಮಾವಯತ್ನಾದ್ ವಿರಥಾಂಶ್ಚಕಾರ ॥೨೮.೩೮॥

 

ಪಾಂಡವರಿಗೂ ಮತ್ತು ದುರ್ಯೋಧನನಿಗೂ ಘೋರರೂಪವಾಗಿರುವ ಯುದ್ಧವಾಯಿತು. ಅವನು ಬಹಳ ಬಾರಿ ಅರ್ಜುನನನ್ನು ಬಾಣಗಳಿಂದ ಮೂರ್ಛೆಗೊಳಗಾಗುವಂತೆ ಮಾಡಿದನು. ಯುಧಿಷ್ಠಿರನನ್ನೂ, ನಕುಲ ಸಹದೇವರನ್ನೂ, ಯಾವುದೇ ಪ್ರಯತ್ನವಿಲ್ಲದೇ ರಥಹೀನರನ್ನಾಗಿ ಮಾಡಿದನು.

 

ತಂ ಭೀಮಸೇನೋ ವಿರಥಂ ಚಕಾರ ಗಜಂ ಸಮಾರುಹ್ಯ ಪುನಃ ಸಮಭ್ಯಯಾತ್ ।

ಪುನಶ್ಚ ಶೈನೇಯಶಿಖಣ್ಡಿಪಾರ್ಷತಾನ್  ಯಮೌ ನೃಪಂ ಚ ವ್ಯದಧಾನ್ನಿರಾಯುಧಾನ್ ॥೨೮.೩೯॥

 

ಭೀಮಸೇನನು ದುರ್ಯೋಧನನನ್ನು ರಥಹೀನನನ್ನಾಗಿ ಮಾಡಿದನು. ಆಗ ಆನೆಯೊಂದನ್ನು ಏರಿ ಬಂದ ದುರ್ಯೋಧನ ಮತ್ತೆ ಸಾತ್ಯಕಿ, ಶಿಖಂಡಿ, ಧೃಷ್ಟದ್ಯುಮ್ನ, ಇವರನ್ನೂ, ನಕುಲ ಸಹದೇವರನ್ನೂ, ಧರ್ಮರಾಜನನ್ನೂ ಕೂಡಾ ನಿರಾಯುಧರನ್ನಾಗಿ ಮಾಡಿದನು.

 

ಗಜೇ ಚ ಭೀಮೇನ ಶರೈರ್ನ್ನಿಪಾತಿತೇ ಸಮಾರುಹದ್ ವಾಜಿವರಂ ಸುನಿರ್ಭಯಃ ।

ಸ ತೇನ ಚ ಪ್ರಾಸಕರೋ ರಣೇSರಿಹಾ ಚಚಾರ ಶೈನೈಯಮತಾಡಯಚ್ಚ ॥೨೮.೪೦॥

 

ಭೀಮಸೇನನಿಂದ ದುರ್ಯೋಧನನ ಆನೆಯು ಬೀಳಿಸಲ್ಪಡಲು(ಕೊಲ್ಲಲ್ಪಡಲು), ಯಾವುದೇ ಭಯವಿಲ್ಲದೇ ಕುದುರೆಯನ್ನು ಏರಿದ ಅವನು, ಪ್ರಾಸವೆಂಬ ಆಯುಧವನ್ನು ಹಿಡಿದು ಸಂಚರಿಸಿದ ಮತ್ತು ಸಾತ್ಯಕಿಯನ್ನು ಹೊಡೆದ. 

 

ಮುಮೋಹ ತೇನಾಭಿಹತಃ ಸ ಸಾತ್ಯಕಿರ್ಯ್ಯಮಾವಪಿ ಪ್ರಾಸನಿಪೀಡಿತೌ ರಥೇ ।

ನಿಷೀದತರ್ದ್ಧರ್ಮ್ಮಸುತಂ ಪ್ರಯಾನ್ತಂ ಸಮೀಕ್ಷ್ಯ ಭೀಮೋSಸ್ಯ ಜಘಾನ ವಾಜಿನಮ್ ॥೨೮.೪೧॥

 

ಅವನಿಂದ ಹೊಡೆಯಲ್ಪಟ್ಟ ಸಾತ್ಯಕಿಯು ಮೂರ್ಛೆ ಹೊಂದಿದನು. ನಕುಲ ಸಹದೇವರೂ ಕೂಡಾ ರಥದಲ್ಲಿ ಪ್ರಾಸದಿಂದ ಹೊಡೆಯಲ್ಪಟ್ಟವರಾಗಿ ಕುಸಿದರು. ಧರ್ಮರಾಜನನ್ನು ಕುರಿತು ತೆರಳುತ್ತಿರುವ ದುರ್ಯೋಧನನನ್ನು ನೋಡಿ ಭೀಮಸೇನನು ಅವನ ಕುದುರೆಯನ್ನು ಕೊಂದುಹಾಕಿದನು.

 

ಪ್ರಾಸೇ ನಿಕೃತ್ತೇ ಚ ವೃಕೋದರೇಣ ವಿವಾಹನಃ ಸೋSಪಯಯೌ ಸುಯೋಧನಃ ।

ಆದಾಯ ಗುರ್ವೀಂ ಚ ಗದಾಂ ಪ್ರಯಾತೋ ದ್ವೈಪಾಯನಸ್ಯೋರು ಸರೋ ವಿವೇಶ ॥೨೮.೪೨॥

 

ಭೀಮಸೇನನಿಂದ ಪ್ರಾಸವೂ ಕೂಡಾ ಕತ್ತರಿಸಲ್ಪಡಲು, ವಾಹನವಿಲ್ಲದೇ ಆ ಸುಯೋಧನನು ದೊಡ್ಡ ಗದೆಯನ್ನು ಹಿಡಿದುಕೊಂಡು ಓಡಿ ಹೋದನು. ಹಾಗೆ ತೆರಳುತ್ತಾ, ದ್ವೈಪಾಯನ ಎಂಬ ಹೆಸರಿನ ಅಗಾಧವಾದ ಸರೋವರವನ್ನು ಪ್ರವೇಶ ಮಾಡಿದನು.

No comments:

Post a Comment