ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, July 22, 2023

Mahabharata Tatparya Nirnaya Kannada 28-157-166

ಏತಸ್ಮಿನ್ನನ್ತರೇ ಕೃಷ್ಣೋ ಧರ್ಮ್ಮಜೇನಾರ್ಜ್ಜುನೇನ ಚ ।

ತತ್ರಾSಗಮತ್ ತದಸ್ತ್ರಂ ಚ ಭೀಮಂ ಚಾವ್ಯರ್ತ್ಥತಾಂ ನಯನ್ ॥೨೮.೧೫೭॥

 

ಅವದ್ಧ್ಯೋ ಭೀಮಸೇನಸ್ತದಸ್ತ್ರಂ ಚಾಮೋಘಮೇವ ಯತ್ ।

ವಿಷ್ಣುನೈವೋಭಯಂ ಯಸ್ಮಾತ್ ಕ್ಲ್ ಪ್ತಂ ಭೀಮೋSಸ್ತ್ರಮೇವ ತತ್  ॥೨೮.೧೫೮॥

  

ಗಾಯತ್ರೀ ತತ್ರ ಮನ್ತ್ರೋ ಯದ್ ಬ್ರಹ್ಮಾ ತದ್ಧ್ಯಾನದೇವತಾ ।

ದ್ಧ್ಯೇಯೋ ನಾರಾಯಣೋ ದೇವೋ ಜಗತ್ಪ್ರಸವಿತಾ ಸ್ವಯಮ್ ॥೨೮.೧೫೯॥

 

ಭೀಮಸೇನನಿಂದ ಸೋತ ಅಶ್ವತ್ಥಾಮ ಬ್ರಹ್ಮಾಸ್ತ್ರವನ್ನು ತೆಗೆದುಕೊಳ್ಳುವ ಕಾಲದಲ್ಲಿ, ಧರ್ಮರಾಜ ಹಾಗೂ ಅರ್ಜುನನಿಂದ ಕೂಡಿಕೊಂಡ ಶ್ರೀಕೃಷ್ಣನು, ಅಸ್ತ್ರದ ಅಮೊಘತ್ವ ಮತ್ತು ಭೀಮಸೇನನ ಅವಧ್ಯತ್ವ ಎರಡನ್ನೂ ವ್ಯರ್ಥವಾಗದಂತೆ ತಡೆಯಲು ಅಲ್ಲಿಗೆ ಬಂದನು.

ಭೀಮಸೇನನು ಯಾವ ಅಸ್ತ್ರದಿಂದಲೂ ವಧ್ಯನಲ್ಲ. ಬ್ರಹ್ಮಾಸ್ತ್ರವಾದರೋ, ಅದು ಯಾವತ್ತೂ ವ್ಯರ್ಥವಾಗುವುದಿಲ್ಲ. ತನ್ನ ಸಂಕಲ್ಪದಂತೆ ಇವೆರಡನ್ನೂ ಹೊಂದಿಸಿಕೊಡುವವನಾಗಿ ಶ್ರೀಕೃಷ್ಣ ಅಲ್ಲಿಗೆ ಬಂದನು. ಭೀಮಸೇನನು ಆ ಅಸ್ತ್ರದ ಅಭಿಮಾನಿಯಾಗಿರುವುದರಿಂದ ಅಸ್ತ್ರವೇ ಆಗಿದ್ದಾನೆ.

ಬ್ರಹ್ಮಾಸ್ತ್ರದಲ್ಲಿ ಗಾಯತ್ರೀಯೇ ಮಂತ್ರ. ಧ್ಯಾನವನ್ನು ಪ್ರಚೋದನೆ ಮಾಡುವ ಋಷಿ ಮತ್ತು ಅಭಿಮಾನಿ ಸ್ವಯಂ ಚತುರ್ಮುಖ ಬ್ರಹ್ಮ. ಜಗದ್ ಪ್ರಸವಿತಾ ನಾರಾಯಣನೇ ಧ್ಯೇಯಾ. (‘ಸವಿತಃ ಎಂದು  ಜಗತ್ತನ್ನೇ ಹೆತ್ತ ನಾರಾಯಣನನ್ನೇ ಮಂತ್ರ ಹೇಳುತ್ತದೆ. ಬ್ರಹ್ಮಾಸ್ತ್ರಕ್ಕೆ ಅಮುಖ್ಯ ದೇವತೆ ಬ್ರಹ್ಮ, ಅವನ ಒಳಗೆ ಅಂತರ್ಯಾಮಿಯಾಗಿ ನಾರಾಯಣನನ್ನು ಚಿಂತನೆ ಮಾಡಬೇಕು. ಬ್ರಹ್ಮನಿಗೆ ಸಮಾನನಾದವನು ಮುಖ್ಯಪ್ರಾಣ. ಅವನೇ ಭೀಮಸೇನನಾಗಿ ಬಂದಿದ್ದಾನೆ. ಅದರಿಂದಾಗಿ ಆ ಅಸ್ತ್ರ ಅವನನ್ನು ಸುಡಲಾರದು.)  

 

[ಇಲ್ಲಿ ಶ್ರೀಕೃಷ್ಣ, ಪಾಂಡವರು ಕಾಡಿನಲ್ಲಿದ್ದಾಗ ಅಶ್ವತ್ಥಾಮಾಚಾರ್ಯರಿಂದ ಯಾವ ಅವಿವೇಕದ ಕೆಲಸ ಮಾಡಲ್ಪಟ್ಟಿತೋ,  ಆ ಘಟನೆಯನ್ನು ಯುಧಿಷ್ಠಿರ ಹಾಗೂ ಅರ್ಜುನನಿಗೆ ಹೇಳುತ್ತಾನೆ-]

 

ಊಚೇ ಚ ಪಾರ್ತ್ಥಯೋಃ ಕೃಷ್ಣೋ ಯತ್ ಕೃತಂ ದ್ರೌಣಿನಾ ಪುರಾ ।

ಸ್ವಾಯುಧಾನಾಂ ಯಾಚನಂ ಚಾಪ್ಯಶಕ್ತೇನ ತದುದ್ಧೃತೌ ॥೨೮.೧೬೦॥

 

ಪೃಷ್ಟೇನೋಕ್ತಂ ತ್ವಯಾ ಹೀನಾಂ ಕೃತ್ವಾ ದುರ್ಯ್ಯೋಧನಾಯ ಗಾಮ್ ।

ದಾತುಂ ತ್ವದಾಯುಧಂ ಮೇSದ್ಯೇತ್ಯೇವಮುಕ್ತೇ ತ್ಮನೋದಿತಮ್ ॥೨೮.೧೬೧॥

 

ಮೈವಂ ಕಾರ್ಷೀಃ ಪುನರಿತಿ ದ್ಧ್ಯಾಯತಾSಬ್ಧೇಸ್ತಟೇ ಸ್ವಮು ।

ತದಸ್ತ್ರಂ ಪ್ರಜ್ವಲದ್ ದೃಷ್ಟ್ವಾSಪಾಣ್ಡವತ್ವವಿಧಿತ್ಸಯಾ ॥೨೮.೧೬೨॥

 

ಧರಾಯಾಂ ದ್ರೌಣಿನಾ ಮುಕ್ತಂ ಕೃಷ್ಣೇನ ಪ್ರೇರಿತೋSರ್ಜ್ಜುನಃ ।

ಸ್ವಸ್ತ್ಯಸ್ತು ದ್ರೋಣಪುತ್ರಾಯ ಭೂತೇಭ್ಯೋ ಮಹ್ಯಮೇವ ಚ । ॥೨೮.೧೬೩॥

 

ಇತಿ ಬ್ರುವಂಸ್ತದೇವಾಸ್ತ್ರಮಸ್ತ್ರಶಾನ್ತ್ಯೈ ವ್ಯಸರ್ಜ್ಜಯತ್ ।

ಅನಸ್ತ್ರಜ್ಞೇಷು ಮುಕ್ತಂ ತದ್ಧನ್ಯಾದಸ್ತ್ರಮುಚಂ ಯತಃ ॥೨೮.೧೬೪॥

 

ಶ್ರೀಕೃಷ್ಣ ಹಿಂದೆ ನಡೆದ ಘಟನೆಯೊಂದನ್ನು ಹೇಳುತ್ತಾನೆ- ಒಮ್ಮೆ ತನ್ನಿಂದ ಎತ್ತಲು ಅಸಾಧ್ಯವಾದ ಶ್ರೀಕೃಷ್ಣನ ಆಯುಧದ(ಚಕ್ರದ) ಪ್ರಾರ್ಥನೆ ಅಶ್ವತ್ಥಾಮನಿಂದ ಮಾಡಲ್ಪಟ್ಟಿತ್ತು. ಯಾವ ಕಾರಣಕ್ಕಾಗಿ ಆಯುಧವನ್ನು ಬಯಸುತ್ತಿದ್ದೀಯ ಎಂದು ಕೇಳಲಾಗಿ ಅವನು ಹೇಳುತ್ತಾನೆ- ‘ನಿನ್ನನ್ನು(ಕೃಷ್ಣನನ್ನು) ಸಾಯಿಸಿ, ಭೂಮಿಯನ್ನು ದುರ್ಯೋಧನನಿಗೆ ಕೊಡಲು ನಿನ್ನ ಆಯುಧವನ್ನು ನನಗೆ ಕೊಡು’ ಎಂದು. ಈ ರೀತಿಯಾಗಿ ಹೇಳಿದಾಗ, ಕೃಷ್ಣ ಹೇಳುತ್ತಾನೆ- ‘ನಿನ್ನ ಮೂಲರೂಪದ ಪದವಿಯನ್ನು ಉಳಿಸಿಕೊಳ್ಳಲು ಸಮುದ್ರ ತೀರದಲ್ಲಿ ನನ್ನನ್ನು ಕುರಿತು ಧ್ಯಾನ ಮಾಡುತ್ತಿರುವ ರೂಪವನ್ನು ನೆನಪಿಸಿಕೋ, ಅದರಿಂದ ಈ ರೀತಿ ಮಾಡಬೇಡ’ ಎಂದು. (ನಿನ್ನ ಮೂಲರೂಪದ ಅಸ್ತಿತ್ವಕ್ಕಾಗಿ ನನ್ನನ್ನೇ ಪ್ರಾರ್ಥಿಸುತ್ತಿರುವೆ. ಅಂತಹ ನೀನು, ನನ್ನನ್ನೇ ಕೊಲ್ಲ ಬಯಸುವುದು ಎಷ್ಟು ಅಸಂಗತ? ಅದರಿಂದಾಗಿ-ಈ ರೀತಿ ಮಾಡಬೇಡ ಎಂದು ಹೇಳಿದ. ಹೀಗೆ ಅಶ್ವತ್ಥಾಮನ ಮನಸ್ಥಿತಿಯನ್ನು ಹೇಳುತ್ತಾ,   ಆರೀತಿಯ ಮನಸ್ಥಿತಿಗೆ ಏನಾದರೂ ಪರಿಹಾರ ಬೇಕು ಎಂದು, ಈ ಸಂದರ್ಭದಲ್ಲಿ ಶ್ರೀಕೃಷ್ಣ ಹಿಂದಿನ ಘಟನೆಯನ್ನು ಅರ್ಜುನ ಹಾಗು ಯುಧಿಷ್ಠಿರನನಿಗೆ ಹೇಳಿದ.)

ಇಂತಹ ಅಶ್ವತ್ಥಾಮನಿಂದ ಭೂಮಿಯಲ್ಲಿರುವ ಪಾಂಡವರು ಮತ್ತು ಅವರ ಸಂತತಿ ಇರಬಾರದು ಎಂದು (ನಾಶಮಾಡಲೆಂದು) ಬಿಡಲ್ಪಟ್ಟ ಬ್ರಹ್ಮಾಸ್ತ್ರವು ಪ್ರಜ್ವಲಿಸುತ್ತಾ ಬರುತ್ತಿರುವುದನ್ನು ನೋಡಿ, ಕೃಷ್ಣನಿಂದ ಪ್ರೇರಿತನಾದ ಅರ್ಜುನನು ‘ದ್ರೋಣಾಚಾರ್ಯರ ಮಗನಿಗೆ ಒಳ್ಳೆಯದಾಗಲಿ, ಎಲ್ಲಾ ಪಂಚಭೂತಗಳಿಗೂ ಕೂಡಾ ಮಂಗಳವಾಗಲಿ, ನನಗೂ ಕೂಡಾ ಕಲ್ಯಾಣವಾಗಲಿ’ ಎಂದು ಹೇಳುತ್ತಾ, ಅಶ್ವತ್ಥಾಮ ಬಿಟ್ಟ ಬ್ರಹ್ಮಾಸ್ತ್ರದ ಶಮನಕ್ಕಾಗಿ ಅದೇ ಅಸ್ತ್ರವನ್ನು ಬಿಟ್ಟ (ಅರ್ಜುನನೂ ಬ್ರಹ್ಮಾಸ್ತ್ರಕ್ಕೆ ಪ್ರತಿಯಾಗಿ ಬ್ರಹ್ಮಾಸ್ತ್ರವನ್ನು ಬಿಟ್ಟ. ಒಬ್ಬ ವೀರ ಪ್ರಕೃತಿಯ ಹಿತವನ್ನು ಗಮನದಲ್ಲಿಟ್ಟುಕೊಂಡು ಹೇಗೆ ಆಯುಧವನ್ನು ಬಳಸುತ್ತಾನೆ ಎನ್ನುವುದು ಇಲ್ಲಿ ನಮಗೆ ತಿಳಿಯುತ್ತದೆ)

(ಏಕೆ ಅರ್ಜುನ ‘ಅಶ್ವತ್ಥಾಮನಿಗೆ ಒಳ್ಳೆಯದಾಗಲಿ’ ಎಂದು ಹೇಳಿ ಬ್ರಹ್ಮಾಸ್ತ್ರ ಪ್ರಯೋಗಿಸಿದ ಎಂದರೆ-) ಅಸ್ತ್ರವನ್ನು ಯಾರು ಬಲ್ಲವರಲ್ಲವೋ ಅಂತವರ ಮೇಲೆ ಪ್ರಯೋಗಿಸಲ್ಪಟ್ಟ ಅಸ್ತ್ರವು ಅಸ್ತ್ರಬಿಟ್ಟವನನ್ನೇ ಕೊಲ್ಲುತ್ತದೆ-

 

ಗುರುಭಕ್ತ್ಯಾ ತತೋ ದ್ರೌಣೇಃ ಸ್ವಸ್ತ್ಯಸ್ತ್ವಿತ್ಯಾಹ ವಾಸವಿಃ ।

ತದಾSಸ್ತ್ರಯೋಸ್ತು ಸಂಯೋಗೇ ಭೂತಾನಾಂ ಸಂಹೃತಿರ್ಭವೇತ್  ॥೨೮.೧೬೫॥

 

ಭೂತಾನಾಂ ಸ್ವಸ್ತಿರಪ್ಯತ್ರ ಕಾಙ್ಕ್ಷಿತಾ ಕರುಣಾತ್ಮನಾ ।

ತಥಾSಪ್ಯಸ್ತ್ರದ್ವಯಂ ಯುಕ್ತಂ ಭೂತಾನಾಂ ನಾಶಕೃದ್ ಧ್ರುವಮ್ ॥೨೮.೧೬೬॥

  

ಹೀಗಾಗಿ ತನ್ನ ಗುರುಗಳ ಮೇಲಿನ ಪ್ರೀತಿಯಿಂದ ಅರ್ಜುನ ‘ದ್ರೋಣಾಚಾರ್ಯರ ಮಗನಿಗೆ ಒಳ್ಳೆಯದಾಗಲಿ’ ಎಂದು ಹೇಳಿದ.  (ಭೂತಗಳಿಗೂ ಮಂಗಳವಾಗಲಿ ಎಂದು ಏಕೆ ಹೇಳಿದ ಎಂದರೆ-) ಎರಡು ಬ್ರಹ್ಮಾಸ್ತ್ರಗಳ ಸೇರ್ಪಡೆಯಾದಲ್ಲಿ ಸಮಸ್ತ ಪ್ರಾಣಿಗಳ ಮತ್ತು ಪಂಚಭೂತಗಳ ನಾಶವಾಗುತ್ತದೆ. ಅದರಿಂದಾಗಿ ಕರುಣಾಪೂರ್ಣ ಮನಸ್ಕನಾಗಿರುವ ಅರ್ಜುನನಿಂದ ಜೀವರ ಅಥವಾ ಪಂಚಭೂತಗಳ ಕಲ್ಯಾಣವೂ ಕೂಡಾ ಬಯಸಲ್ಪಟ್ಟಿತು.

No comments:

Post a Comment