ಅಸಾನ್ತ್ವಯಚ್ಚ ಬಾನ್ಧವಾನ್ ಸ ಪೌರಸಂಶ್ರಿತಾದಿಕಾನ್ ।
ದದೌ ಯಥೇಷ್ಟತೋ ಧನಂ
ರರಕ್ಷ ಚಾನು ಪುತ್ರವತ್ ॥ ೨೯.೦೬ ॥
ಧರ್ಮರಾಜನು ತನ್ನ ಪ್ರಜೆಗಳನ್ನು,
ತನ್ನನ್ನು ಆಶ್ರಯಿಸಿದವರನ್ನು,
ಬಂಧುಗಳನ್ನೂ ಸಮಾಧಾನಗೊಳಿಸಿದ. ಅವರಿಗೆ ಅಗತ್ಯವಿದ್ದ ಹಣವನ್ನು ಕೊಟ್ಟ ಮತ್ತು ಅವರನ್ನು ಮಕ್ಕಳಂತೆ
ರಕ್ಷಿಸಿದ ಕೂಡಾ.
ಸ ಭೀಷ್ಮದ್ರೋಣಕರ್ಣ್ಣಾನಾಂ
ವಧಾದ್ ದುರ್ಯ್ಯೋಧನಸ್ಯ ಚ ।
ಪಾಪಾಶಙ್ಕೀ ತಪ್ಯಮಾನೋ
ರಾಜ್ಯತ್ಯಾಗೇ ಮನೋ ದಧೇ ॥ ೨೯.೦೭ ॥
ಆ ಧರ್ಮರಾಜನು ಭೀಷ್ಮ, ದ್ರೋಣ, ಕರ್ಣರ ಸಂಹಾರದಿಂದಲೂ, ದುರ್ಯೋಧನನ ಸಂಹಾರದಿಂದಲೂ ತನಗೆ ಪಾಪ ಬಂದಿರುವುದೋ ಏನೋ ಎಂದು ಶಂಕಿಸುವವನಾಗಿ, ಸಂಕಟಪಡುತ್ತಾ, ರಾಜ್ಯವನ್ನು ಬಿಡುತ್ತೇನೆ ಎಂದು ಮನಸ್ಸಿನಲ್ಲಿ ನಿರ್ಧಾರಮಾಡಿದನು.
ಸೋSನುಜೈಃ ಕೃಷ್ಣಯಾ
ವಿಪ್ರೈರಪ್ಯುಕ್ತೋ ಧರ್ಮ್ಮಶಾಸನಮ್ ।
ಭೀಮಂ ಸಮ್ಪ್ರಾರ್ತ್ಥಯಿತ್ವೈವ
ನ ವೇತ್ಥ್ಸಿತ್ಯಾಹ ಫಲ್ಗುನಮ್ ॥ ೨೯.೦೮ ॥
ತಮ್ಮಂದಿರಿಂದಲೂ,
ದ್ರೌಪದೀದೇವಿಯಿಂದಲೂ, ಬ್ರಾಹ್ಮಣರಿಂದಲೂ ಕೂಡಾ ಧರ್ಮಾನುಶಾಸನದ ಬಗ್ಗೆ ಹೇಳಿಸಿಕೊಳ್ಳಲ್ಪಟ್ಟವನಾಗಿ,
ಭೀಮಸೇನನಲ್ಲಿ ಬೇಡಿಕೊಂಡು(ಇನ್ನೂ ಹೆಚ್ಚಿನ ಧರ್ಮಶಿಕ್ಷಣ ಮಾಡಬೇಡ ಎಂದು ಬೇಡಿಕೊಂಡು), ಅರ್ಜುನನನ್ನು ಗದರಿಸಿದ(ಸೂಕ್ಷ್ಮಧರ್ಮವನ್ನು ನೀನು
ತಿಳಿದಿಲ್ಲ ಎಂದು ಗದರಿದ).
[ನಾನು ರಾಜ್ಯವನ್ನು
ಬಿಡುತ್ತೇನೆ, ಈ
ರಾಜ್ಯ ಪಾಲನೆ ಮಾಡುವುದರಿಂದ ನನಗೆ ಯಾವ ಸುಖವೂ ಇಲ್ಲಾ ಎಂದು ಹೇಳಿ ಧರ್ಮರಾಜ ಪದತ್ಯಾಗಕ್ಕೆ
ಮುಂದಾದಾಗ ತಮ್ಮಂದಿರು ಅವನಿಗೆ ಬುದ್ಧಿವಾದ ಹೇಳಿದರು. ಆಗ ಅವನು ಎಲ್ಲರ ಮಾತುನ್ನು ಕೇಳುತ್ತಾ,
ಭೀಮನಲ್ಲಿ ಮುಂದೇನೂ ಹೇಳದಂತೆ ವಿನಂತಿಸಿದ. ಅರ್ಜುನನನ್ನು ಕುರಿತು- ‘ಯುದ್ಧಶಾಸ್ತ್ರವಿದೇವ ತ್ವಂ ನ ವೃದ್ಧಾಃ ಸೇವಿತಾಸ್ತ್ವಯಾ। ಸಮಾಸವಿಸ್ತರವಿದಾಂ ನ ತೇಷಾಂ
ವೇತ್ಸಿ ನಿಶ್ಚಯಮ್’(ಶಾಂತಿಪರ್ವ ೧೯.೧೨)- ನಿನಗೆ ಯುದ್ಧಶಾಸ್ತ್ರ
ತಿಳಿದಿರಬಹುದು. ಆದರೆ ನೀನೆಂದೂ ವೃದ್ಧರ ಸೇವೆ ಮಾಡಿಲ್ಲ. ಆದುದರಿಂದ ಧರ್ಮನಿಶ್ಚಯವು ನಿನಗೆ
ತಿಳಿಯದು’ ಎಂದು ಗದರಿದ.]
ತಸ್ಮಿನ್ ಕ್ರುದ್ಧೇ
ನೃಪಂ ಪ್ರಾಹುರ್ವಿಪ್ರಾಸ್ತ್ವತ್ತೋSಪಿ ತತ್ವವಿತ್ ।
ಶಕ್ರೋSರ್ಜ್ಜುನ ಇತಿ ಶ್ರುತ್ವಾSಪ್ಯೇತದ್ಧರ್ಮ್ಮೇ ಸಸಂಶಯಮ್ ॥ ೨೯.೦೯ ॥
ಯುಧಿಷ್ಠಿರನ ಮಾತಿನಿಂದ
ಅರ್ಜುನ ಕೋಪಗೊಳ್ಳುತ್ತಿರಲು, ಬ್ರಾಹ್ಮಣರು ಧರ್ಮರಾಜನನ್ನು ಕುರಿತು- ‘ಅರ್ಜುನನು
ಇಂದ್ರನಾಗಿದ್ದಾನೆ. ಅದರಿಂದ ನಿನಗಿಂತಲೂ ಕೂಡಾ ಧರ್ಮವನ್ನು ಅವನು ತಿಳಿದಿದ್ದಾನೆ’ ಎಂದರು. ಇದನ್ನು ಕೇಳಿಯೂ ಕೂಡಾ, ಧರ್ಮದ ಕುರಿತು ಯುಧಿಷ್ಠಿರ
ಸಂಶಯದಲ್ಲೇ ಉಳಿದ.
ಮತ್ಸ್ನೇಹಾದೇವ ಸರ್ವೇSಪಿ ಧರ್ಮ್ಮೋSಯಮಿತಿ ವಾದಿನಃ ।
ಇತ್ಯೇವಂ ಶಙ್ಕಮಾನಂ
ತಮೂಚತುರ್ವಿಪ್ರಯಾದವೌ ॥ ೨೯.೧೦ ॥
ಕೃಷ್ಣೌ ಧರ್ಮ್ಮೋSಯಮಿತ್ಯೇವ ಶಾಸ್ತ್ರಯುಕ್ತ್ಯಾ
ಪುನಃಪುನಃ ।
ನಾತಿನಿಶ್ಚಿತಬುದ್ಧಿಂ
ತಂ ತದಾSಪಿ
ಪುರುಷೋತ್ತಮೌ ॥ ೨೯.೧೧ ॥
ಹತಪಕ್ಷಗತತ್ವೇನ
ತಚ್ಛಙ್ಕಾಯಾ ಅಗೋಚರಃ ।
ಯತೋ ಭೀಷ್ಮಸ್ತತೋ ಯಾಹಿ
ತಮಿತ್ಯೂಚತುರವ್ಯಯೌ ॥ ೨೯.೧೨ ॥
ತನ್ನ ಮೇಲಿನ
ಪ್ರೀತಿಯಿಂದ ಎಲ್ಲರೂ ಈರೀತಿಯಾಗಿ ಧರ್ಮವನ್ನು ಹೇಳುತ್ತಿದ್ದಾರೆ ಎಂದು ಸಂದೇಹಪಡುತ್ತಿರುವ
ಧರ್ಮರಾಜನನ್ನು ಕುರಿತು ವೇದವ್ಯಾಸರು ಮತ್ತು ಶ್ರೀಕೃಷ್ಣ ‘ಇದು ಧರ್ಮ’ ಎಂದು ಶಾಸ್ತ್ರದ ಅನೇಕ
ಯುಕ್ತಿಗಳಿಂದ ಮತ್ತೆ ಮತ್ತೆ ಹೇಳಿದರೂ ಕೂಡಾ, ದೃಢನಿಶ್ಚಯಕ್ಕೆ ಬರಲಾಗದ ಧರ್ಮರಾಜನನ್ನು ಕುರಿತು ವೇದವ್ಯಾಸ-ಕೃಷ್ಣರು-
‘ಶತ್ರುವಿನ ಪಕ್ಷದಲ್ಲಿರುವ ಭೀಷ್ಮಾಚಾರ್ಯರ ಮಾತನ್ನು ನೀನು ಸಂಶಯಪಡಲಾರೆ. ನಿನ್ನ ಸಂದೇಹಕ್ಕೆ
ಸಿಲುಕದ ಭೀಷ್ಮರು ಎಲ್ಲಿದ್ದಾರೋ, ಅವರನ್ನು ಕುರಿತು ಹೋಗು’ ಎಂದು ಹೇಳಿದರು.
No comments:
Post a Comment