ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, July 23, 2023

Mahabharata Tatparya Nirnaya Kannada 28-178-189

ಯಾದವೇಶೋSಥ ಗೌತಮ್ಯಾಃ ಸುತಮಾಹೈಕಸನ್ತತೇಃ ।

ವಾಚ ನಿವರ್ತ್ತಯಾಸ್ತ್ರಂ ತೇ ಇತ್ಯುಕ್ತೋ ದ್ರೌಣಿರಬ್ರವೀತ್ ॥೨೮.೧೭೮॥

 

ಪಕ್ಷಪಾತಾದಿಚ್ಛಸಿ ತ್ವಂ ಭಾಗಿನೇಯಸ್ಯ ಸನ್ತತಿಮ್ ।

ತತ್ರೈವ ಪಾತಯಾಮ್ಯಸ್ತ್ರಮುತ್ತರಾಗರ್ಭಕೃನ್ತನೇ ॥೨೮.೧೭೯॥

 

ತದನಂತರ ಶ್ರೀಕೃಷ್ಣ ಪರಮಾತ್ಮನು ಅಶ್ವತ್ಥಾಮನನ್ನು ಕುರಿತು- ‘ಪಾಂಡವರ ಕುಡಿ (ಉತ್ತರೆಯ ಗರ್ಭದಲ್ಲಿ)  ಒಂದೇ ಒಂದು ಉಳಿದಿದೆ. ಅದರಿಂದಲೂ ಕೂಡಾ ಅಸ್ತ್ರವನ್ನು ಮಾತಿನಿಂದ ಉಪಸಂಹರಿಸು’ ಎಂದು ಹೇಳಿದಾಗ ಅಶ್ವತ್ಥಾಮನು- ‘ನೀನು ಪಕ್ಷಪಾತದಿಂದ ನಿನ್ನ ತಂಗಿಯ ಮಗನ ಸಂತತಿಯನ್ನು ಉಳಿಸಲು ಬಯಸುತ್ತಿರುವೆ. ಉತ್ತರೆಯ ಗರ್ಭವನ್ನು ನಾಶಮಾಡಲು ನಾನು ಈ ಅಸ್ತ್ರವನ್ನು ಅಲ್ಲೇ ಹಾಕುತ್ತೇನೆ’ ಎಂದು ಹಠದಿಂದ ಮಾತನಾಡಿದನು.

 

ವಾಸುದೇವಃ ಪುನಃ ಪ್ರಾಹ ಯದಿ ಹನ್ತವ್ಯ ಏವ ತೇ ।

ಗರ್ಭಸ್ತಥಾSಪಿ ನೈವಾಸ್ತ್ರಂ ಪಾತಯಾಸ್ಮಿನ್ ಕಥಞ್ಚನ ॥೨೮.೧೮೦॥

 

ಅಭಿಮನ್ಯೋರ್ಮೃತಸ್ಯೈವ ದೇಹೇ ಪಾತಯ ಮಾನದ ।

ಏವಂ ತ್ವದಸ್ತ್ರನಿಹತಂ ಗರ್ಭಮುಜ್ಜೀವಯಾಮ್ಯಹಮ್ ॥೨೮.೧೮೧॥

 

ಆಗ ಶ್ರೀಕೃಷ್ಣನು ಹೇಳುತ್ತಾನೆ- ‘ಒಂದು ವೇಳೆ ನೀನು ಗರ್ಭವನ್ನು ನಾಶಮಾಡಬೇಕು ಎಂದು ಬಯಸುತ್ತಿದ್ದೀಯಾದರೆ ಅದನ್ನು ಈ ಅಸ್ತ್ರದಿಂದ ಕೊಲ್ಲಬೇಡ.  ಇಲ್ಲಾ, ನೀನು ಅಸ್ತ್ರದಿಂದಲೇ ಕೊಲ್ಲುತ್ತೇನೆ ಎಂದರೆ,  ಅದನ್ನು ಅಭಿಮನ್ಯುವಿನ ಮೃತದೇಹದಲ್ಲಿ ಹಾಕುವುದೇ ಒಳ್ಳೆಯದು.’(ಇದೊಂದು ಪರಿಹಾಸ. ಅಭಿಮನ್ಯುವಿನ ಮೃತದೇಹದಲ್ಲಿ ಅಸ್ತ್ರವನ್ನು ಹಾಕುವುದು ಎಷ್ಟು ವ್ಯರ್ಥವೋ, ಹಾಗೇ ಉತ್ತರೆಯ ಗರ್ಭದಲ್ಲಿ ಹಾಕುವುದೂ ಅಷ್ಟೇ ವ್ಯರ್ಥ. ಹೇಗೆ ಇಲ್ಲಿ ಆಗಲೇ ಸತ್ತಿರುವ ಅಭಿಮನ್ಯು ಮತ್ತೆ ಸಾಯುವುದಿಲ್ಲವೋ, ಹಾಗೇ ಉತ್ತರೆಯ ಗರ್ಭದಲ್ಲಿರುವ ಮಗುವೂ ಕೂಡಾ ಸಾಯುವುದಿಲ್ಲ ಎನ್ನುವ ಧ್ವನಿ. ಅದು ಹೇಗೆ ಎಂದರೆ-). ‘ನಿನ್ನ ಅಸ್ತ್ರದಿಂದ ಸಾಯಿಸಲ್ಪಟ್ಟ ಗರ್ಭವನ್ನು ನಾನು ಬದುಕಿಸುವೆನು’ ಎನ್ನುತ್ತಾನೆ ಕೃಷ್ಣ.

 

ಪಾತಯೇ ಗರ್ಭ ಏವಾಹಮಿತ್ಯೂಚೇ ಗೌತಮೀಸುತಃ ।

ಅಥಾSಹ ವಾಸುದೇವಸ್ತಮೀಷತ್ಕ್ರುದ್ಧ ಇವ ಪ್ರಭುಃ ॥೨೮.೧೮೨॥

 

ದುರ್ಮ್ಮತೇ ಪಶ್ಯ ಮೇ ವೀರ್ಯ್ಯಂ ಯತ್ ತೇ ಶಕ್ಯಂ ಕುರುಷ್ವ ತತ್ ।

ಉಜ್ಜೀವಯಾಮ್ಯಹಂ ಗರ್ಭಂ ಯತತಃ ಶಕ್ತಿತೋSಪಿ ತೇ ॥೨೮.೧೮೩॥

 

ಸನ್ತತಿರ್ವರ್ಷಸಾಹಸ್ರಂ ಪಾಣ್ಡವಾನಾಂ ಭವೇದ್ ಭುವಿ ।

ಮತ್ಪಾಲಿತಾಂ ನ ಕಶ್ಚಿತ್ ತಾಂ ತಾವದ್ಧನ್ತುಂ ಕ್ಷಮಃ ಕ್ವಚಿತ್ ॥೨೮.೧೮೪॥

 

ಅಶ್ವತ್ಥಾಮ ‘ನಾನು ಗರ್ಭದಲ್ಲಿಯೇ ಅಸ್ತ್ರವನ್ನು ಬೀಳಿಸುತ್ತೇನೆ’ ಎಂದು ಹಠದಿಂದ ನುಡಿದ. ಆಗ ಶ್ರೀಕೃಷ್ಣನು ಮುನಿದವನಂತೆ ಅಶ್ವತ್ಥಾಮನನ್ನು ಕುರಿತು- ‘ಎಲೈ ದುರ್ಬುದ್ಧಿಯುಳ್ಳವನೇ, ನನ್ನ ಪರಾಕ್ರಮವನ್ನು ನೋಡುವೆಯಾ? ನಿನ್ನ ಕೈಯಲ್ಲಿ ಏನಾಗುತ್ತದೋ ಅದನ್ನು ಮಾಡು. ನೀನು ನಿನ್ನ ಸಮಗ್ರಶಕ್ತಿಯಿಂದ ಪ್ರಯತ್ನಪಟ್ಟರೂ ಕೂಡಾ ನಾನು ಉತ್ತರೆಯ ಬಸಿರನ್ನು ಉಳಿಸುತ್ತೇನೆ. ಪಾಂಡವರ ಸಂತತಿಯು ಈ ಭೂಮಿಯಲ್ಲಿ ಸಾವಿರ ವರ್ಷಗಳ ಕಾಲ ಬಾಳುತ್ತದೆ. ನಾನು ಪಾಲನೆ ಮಾಡಿದ, ಆ ಸಂತತಿಯನ್ನು ಯಾರೂ ಕೂಡಾ ಎಲ್ಲಿಯೂ ಸಂಹರಿಸಲು ಸಾಧ್ಯವಿಲ್ಲ.

 

ಜಾನಾಮಿ ತೇ ಮತಿಂ ದುಷ್ಟಾಂ ಜಿಘಾಂಸೋಃ ಪಾರ್ತ್ಥಸನ್ತತಿಮ್ ।

ಚಿಕೀರ್ಷೋರ್ದ್ಧಾರ್ತ್ತರಾಷ್ಟ್ರಸ್ಯ ತನ್ತುಂ ಭೂಯಃ ಸುದುಷ್ಕರಮ್ ॥೨೮.೧೮೫॥

 

ಮದಾಜ್ಞಯಾ ಸಾ ವಿಫಲಾ ಭವಿತ್ರೀ ವಾಞ್ಚಾ ಮುಮುಕ್ಷಾ ವಿಮುಖಸ್ಯ ವಿಷ್ಣೋಃ ।

ಯಥೈವ ತೇನೈವ ನರಾಧಿರೂಢೋ ಗಮ್ಯಸ್ತವ ಸ್ಯಾನ್ನಚ ಭೂಮಿಭಾಗಃ ॥೨೮.೧೮೬॥

 

ದುರ್ಗ್ಗನ್ಧಯುಕ್ತೋ ವ್ರಣಸಞ್ಚಿತಾಙ್ಗಃ ಸದಾ ಚರಃ ಸ್ಯಾ ವಿಪಿನೇಷು ಮನ್ದ ।

ಯಾವದ್ ಭುವಿ ಸ್ಯಾದಿಹ ಪಾರ್ತ್ಥತನ್ತುರ್ವ್ಯಾಸೋSಪಿ ತಂ ಪ್ರಾಹ ತಥೇತಿ ದೇವಃ ॥೨೮.೧೮೭॥

 

ಪಾಂಡವರ ಸಂತತಿಯನ್ನು ಕೊಂದು ಧೃತರಾಷ್ಟ್ರನ ಸಂತತಿಯನ್ನು ಬೆಳಸಬೇಕು ಎನ್ನುವ ನಿನ್ನ ಸಂಕಲ್ಪವನ್ನು ನಾನು ಅತಿದುಷ್ಟಬುದ್ಧಿಯೆಂದು ತಿಳಿಯುತ್ತೇನೆ. ನಾರಾಯಣನಿಗೆ ಬೆನ್ನು ತಿರುಗಿಸಿದವನಿಗೆ ಬಿಡುಗಡೆಯಾಗುವ ಬಯಕೆಯು ಹೇಗೆ ವಿಫಲವೋ, ಹಾಗೆಯೇ ನಿನ್ನ ಬಯಕೆಯೂ ನನ್ನ ಆಜ್ಞೆಯಿಂದ ಖಂಡಿತ ವಿಫಲವಾಗುತ್ತದೆ. ನಾನು ನಿನಗೆ ಶಾಪಕೊಡುತ್ತಿದ್ದೇನೆ- ಮನುಷ್ಯರಿರುವ ಯಾವುದೇ ಭೂಮಿ ಭಾಗವು ನಿನ್ನಿಂದ ತಲುಪದೇ ಇರಲಿ. ವಿಪರೀತ ಕೆಟ್ಟ ವಾಸನೆಯಿಂದ ಕೂಡಿದವನಾಗಿ, ಹುಣ್ಣುಗಳಿಂದ, ಕೀವುಗಳಿಂದ ತುಂಬಿದ ಮೈಯುಳ್ಳವನಾಗಿ, ಕಾಡುಗಳಲ್ಲಿ ಯಾವಾಗಲೂ ನೀನು ತಿರುಗುತ್ತಿರು. ಎಲ್ಲಿಯ ತನಕ ಪಾಂಡವರ ಸಂತತಿ ಇರುತ್ತದೋ ಅಲ್ಲಿಯ ತನಕ ಇದೇ ಅವಸ್ಥೆ ನಿನ್ನದಾಗಲಿ’. ಶ್ರೀಕೃಷ್ಣನ ಈ ಮಾತುಗಳನ್ನು ಕೇಳಿದ ವೇದವ್ಯಾಸರೂ ಕೂಡಾ ‘ಹಾಗೇ ಆಗಲಿ’ ಎಂದು ಹೇಳಿದರು.

 

ರೂಪದ್ವಯೇನಾಪಿ ಹರೇಸ್ತಥೋಕ್ತೋ ಜಗಾದ ಕಾಳೀತನಯಂ ಸ ಕೃಷ್ಣಮ್ ।

ತ್ವಯಾ ಸಹ ಸ್ಯಾನ್ಮಮ ಸಙ್ಗಮೋ ವಿಭೋ ಯಥೇಷ್ಟತಃ ಸ್ಯಾನ್ನಚ ಮೇSತ್ರ ವಿಘ್ನಃ ॥೨೮.೧೮೮॥

 

ಪರಮಾತ್ಮನ ಎರಡು ರೂಪಗಳಿಂದಲೂ ಈರೀತಿಯಾಗಿ ಹೇಳಲ್ಪಟ್ಟ ಅಶ್ವತ್ಥಾಮಾಚಾರ್ಯರು,  ಸತ್ಯವತಿಯ ಮಗನಾದ ವೇದವ್ಯಾಸರನ್ನು ಕುರಿತು- ‘ಸರ್ವಸಮರ್ಥನಾದ ಓ ನಾರಾಯಣನೇ, ವೇದವ್ಯಾಸರೇ, ನನಗೆ ಇಚ್ಛಾನುಸಾರ ನಿಮ್ಮ ಜೊತೆಗೆ ಸಂಗಮವಾಗಲಿ. ಇಲ್ಲಿ ಯಾವುದೇ ವಿಘ್ನ ಬರದಿರಲಿ’ ಎಂದು ಬೇಡಿದನು.

 

ಇತ್ಯುಕ್ತ ಓಮಿತಿ ಪ್ರಾಹ ಭಗವಾನ್ ಬಾದರಾಯಣಃ ।

ತಂ ಪ್ರಣಮ್ಯ ಯಯೌ ಸೋSಪಿ ಸ್ವಪ್ನದೃಷ್ಟಮನುಸ್ಮರನ್ ॥೨೮.೧೮೯॥

 

ಈರೀತಿಯಾಗಿ ಹೇಳಲ್ಪಟ್ಟ ಶಡ್ಗುಣೈಶ್ವರ್ಯ ಸಂಪನ್ನರಾದ ಬಾದರಾಯಣ ವೇದವ್ಯಾಸರು ‘ಓಂ’(ಆಯಿತು) ಎಂದು ಹೇಳಿದರು. ಅಶ್ವತ್ಥಾಮಾಚಾರ್ಯರಾದರೋ, ವೇದವ್ಯಾಸರಿಗೆ ನಮಸ್ಕರಿಸಿ, ಕನಸಿನಲ್ಲಿ ಕಂಡದ್ದನ್ನು  ನೆನಪಿಸಿಕೊಳ್ಳುತ್ತಾ ಅಲ್ಲಿಂದ ತೆರಳಿದರು.

No comments:

Post a Comment