ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, July 29, 2023

Mahabharata Tatparya Nirnaya Kannada 29-13-23

ಸ ತಾಭ್ಯಾಂ ಭ್ರಾತೃಭಿಶ್ಚೈವ ಮುನಿಭಿಶ್ಚ ಸಮನ್ವಿತಃ ।

ಭೀಷ್ಮಂ ಯಯೌ ಲಜ್ಜಿತೇSಸ್ಮಿಂಸ್ತಂ ಭೀಷ್ಮಾಯಾSಹ ಕೇಶವಃ ॥ ೨೯.೧೩ ॥

 

ವೇದವ್ಯಾಸ-ಕೃಷ್ಣರಿಂದಲೂ, ತಮ್ಮಂದಿರರಿಂದಲೂ, ಮುನಿಗಳಿಂದಲೂ ಕೂಡಿಕೊಂಡ ಧರ್ಮರಾಜನು ಭೀಷ್ಮರಿದ್ದಲ್ಲಿಗೆ ತೆರಳಿದನು. ಧರ್ಮರಾಜನು ಭೀಷ್ಮಾಚಾರ್ಯರಿಗೆ ಹೇಗೆ ಮುಖ ತೋರಿಸುವುದು ಎಂದು ನಾಚಿಕೊಳ್ಳುತ್ತಿರಲು, ಶ್ರೀಕೃಷ್ಣನು ಅದನ್ನು ಭೀಷ್ಮಾಚಾರ್ಯರಿಗೆ ಹೇಳಿದನು.

 

ಪೃಚ್ಛೇತ್ಯುಕ್ತಃ ಸ ಭೀಷ್ಮೇಣ ಪಪ್ರಚ್ಛಾಖಿಲಮಞ್ಜಸಾ ।

ತತ್ರೋವಾಚಾಖಿಲಾನ್ ಧರ್ಮ್ಮಾನ್ ಕೃಷ್ಣೋ ಭೀಷ್ಮಶರೀರಗಃ ॥ ೨೯.೧೪ ॥

 

‘ನೀನು ಪ್ರಶ್ನೆ ಮಾಡು’ ಎಂದು ಭೀಷ್ಮಾಚಾರ್ಯರಿಂದ ಹೇಳಲ್ಪಟ್ಟ ಧರ್ಮರಾಜನು, ಎಲ್ಲವನ್ನೂ ಚೆನ್ನಾಗಿ ಪ್ರಶ್ನಿಸಿದನು. ಆಗ ಭೀಷ್ಮಾಚಾರ್ಯರ ಶರೀರದಲ್ಲಿರುವ ಶ್ರೀಕೃಷ್ಣನು ಎಲ್ಲಾ ಧರ್ಮಗಳನ್ನೂ ಯುಧಿಷ್ಠಿರನಿಗೆ ಉಪದೇಶಿಸಿದನು.

 

[ಏಕೆ ಶ್ರೀಕೃಷ್ಣ ಭೀಷ್ಮರ ಶರೀರದಲ್ಲಿದ್ದು ಬೋಧನೆ ಮಾಡಿದ ಎನ್ನುವುದನ್ನು ವಿವರಿಸುತ್ತಾರೆ-]

 

ಭೀಷ್ಮೋ ಹ್ಯಾಹ ಹರಿಂ ಪಾರ್ತ್ಥಾ ಬೋಧನೀಯಾಸ್ತ್ವಯೈವ ಹಿ ।

ಕಾ ಶಕ್ತಿರ್ಮ್ಮಮ ದೇವೇಶ ಪಾರ್ತ್ಥಾನ್ ಬೋಧಯಿತುಂ ಪ್ರಭೋ ॥ ೨೯.೧೫ ॥

 

ಭೀಷ್ಮಾಚಾರ್ಯರು ಪರಮಾತ್ಮನನ್ನು ಕುರಿತು- ‘ಓ, ಕೃಷ್ಣನೇ, ನಿನ್ನಿಂದಲೇ ಪಾಂಡವರು ಉಪದೇಶಕ್ಕೆ ಯೋಗ್ಯರಾಗಿದ್ದಾರೆ. ದೇವತೆಗಳ ಒಡೆಯನೇ, ಪಾಂಡವರಿಗೆ ಉಪದೇಶ ಮಾಡಲು ನನಗೆಲ್ಲಿದೆ ಶಕ್ತಿ’ ಎಂದು ಕೇಳುತ್ತಾರೆ.

 

ಇತ್ಯುಕ್ತೋ ಭಗವಾನಾಹ ತ್ವತ್ಕೀರ್ತ್ತ್ಯೈ ತ್ವಯಿ ಸಂಸ್ಥಿತಃ ।

ಪ್ರವಕ್ಷ್ಯಾಮ್ಯಖಿಲಾನ್ ಧರ್ಮ್ಮಾನ್ ಸೂಕ್ಷ್ಮಂ ತತ್ವಮಪೀತಿ ಹ ॥ ೨೯.೧೬ ॥

 

ಈರೀತಿಯಾಗಿ ಹೇಳಲ್ಪಟ್ಟ ಶ್ರೀಕೃಷ್ಣನು, ‘ನಿನ್ನ ಕೀರ್ತಿಗಾಗಿ ನಿನ್ನಲ್ಲಿ ಇರುವವನಾಗಿ ನಾನು ಎಲ್ಲಾ ಧರ್ಮಗಳನ್ನೂ, ಸೂಕ್ಷ್ಮವಾಗಿರುವ ತತ್ವಗಳನ್ನೂ ಹೇಳುತ್ತೇನೆ’ ಎಂದು ಹೇಳಿದನು.


 [ರಾಜಧರ್ಮ/ಭಾಗವತ ಧರ್ಮದ ಕುರಿತು ಹೇಳುತ್ತಾರೆ-]


ರಾಜ್ಞಃ ಪ್ರಥಮತೋ ಧರ್ಮ್ಮೋ ಭಗವದ್ಧರ್ಮ್ಮಪಾಲನಮ್ ।

ತದರ್ತ್ಥಂ ಕಣ್ಟಕೋದ್ಧಾರೋ ಧರ್ಮ್ಮಾ ಭಾಗವತಾ ಅಪಿ ॥ ೨೯.೧೭ ॥

 

ರಾಜನಾದವನಿಗೆ ಮೊದಲನೆಯ ಕರ್ತವ್ಯವೆಂದರೆ- ಪರಮಾತ್ಮನ ಧರ್ಮವನ್ನು ಪಾಲಿಸುವುದು, ಅದಕ್ಕಾಗಿ ಶತ್ರುಗಳನ್ನು ನಿಗ್ರಹಿಸುವುದು ಧರ್ಮ. ಇದಲ್ಲದೇ ಭಾಗವತ ಧರ್ಮವನ್ನೂ ಪಾಲನೆ ಮಾಡಬೇಕು.

 

ಮನೋವಾಕ್ಕರ್ಮ್ಮಭಿರ್ವಿಷ್ಣೋರಚ್ಛಿದ್ರತ್ವೇನ ಚಾರ್ಚ್ಚನಮ್ ।

ಪೂರ್ಣ್ಣಾಶೇಷಗುಣೋ ವಿಷ್ಣುಃ ಸ್ವತನ್ತ್ರಶ್ಚೈಕ ಏವ ತು ॥ ೨೯.೧೮ ॥

 

ತದ್ವಶಂ ಸರ್ವಮನ್ಯಚ್ಚ ಸರ್ವದೇತಿ ವಿನಿಶ್ಚಯಃ ।

ದೇವತಾಕ್ರಮವಿಜ್ಞಾನಮಪೂಜಾSನ್ಯಸ್ಯ ವೈ ಹರೇಃ ॥ ೨೯.೧೯ ॥

 

ಪೂಜಾ ಭಾಗವತತ್ವೇನ ದೇವಾದೀನಾಂ ಚ ಸರ್ವಶಃ ।

ವೃಥಾ ಕರ್ಮ್ಮಾಕೃತಿಃ ಕ್ವಾಪಿ ನಿರಾಶೀಸ್ತ್ವಂ ಸದೈವ ಚ ॥ ೨೯.೨೦ ॥

 

ವಿಷ್ಣೋರ್ಭಾಗವತಾನಾಂ ಚ ಪ್ರತೀಪಸ್ಯಾಕೃತಿಃ ಸದಾ ।

ಪರಸ್ಪರವಿರೋಧೇ ತು ವಿಶಿಷ್ಟಸ್ಯಾನುಕೂಲತಾ ॥ ೨೯.೨೧ ॥

 

ಪ್ರಿಯಂ ವಿಷ್ಣೋಸ್ತದೀಯಾನಾಮಪಿ ಸರ್ವಂ ಸಮಾಚರೇತ್ ।

ಧರ್ಮ್ಮಮಪ್ಯಪ್ರಿಯಂ ತೇಷಾಂ ನೈವ ಕಿಞ್ಚಿತ್ ಸಮಾಚರೇತ್ ॥ ೨೯.೨೨ ॥

 

ಸಾಮ್ಯೇ ವಿರೋಧೇ ಚ ಬಹೂನನುವರ್ತ್ತೇತ ವೈಷ್ಣವಾನ್ ।

ಏತೇ ಸಾಧಾರಣಾ ಧರ್ಮ್ಮಾ ಜ್ಞೇಯಾ ಭಾಗವತಾ ಇತಿ ॥ ೨೯.೨೩ ॥

 

ಮನಸ್ಸಿನಿಂದ, ಮಾತಿನಿಂದ ಹಾಗೂ ಕರ್ಮಗಳಿಂದ, ಯಾವುದೇ ಮೋಸವಿಲ್ಲದೇ, ನಾರಾಯಣನನ್ನು  ಪೂಜಿಸುವುದು ಧರ್ಮವು. ಪರಮಾತ್ಮನೊಬ್ಬನೇ ಸಮಸ್ತಗುಣಗಳಿಂದ ತುಂಬಿದವನು, ಸರ್ವಸ್ವತಂತ್ರನು. ಸರ್ವೋತ್ತಮನು,  ಸರ್ವಾಂತರ್ಯಾಮಿಯು. ಉಳಿದ ಎಲ್ಲವೂ ಯಾವಾಗಲೂ ಕೂಡಾ ಪರಮಾತ್ಮನ  ವಶವಾಗಿದೆ ಎಂದು ನಿಶ್ಚಯವು. ದೇವತಾ ತಾರತಮ್ಯದ ವಿಜ್ಞಾನವು ಧರ್ಮವು. ಪರಮಾತ್ಮನಿಗೆ ವಿರುದ್ಧವಾದವರ ಗೌರವಿಸದಿರುವಿಕೆ ಧರ್ಮವು. ದೇವತೆಗಳನ್ನು ವಿಷ್ಣುಭಕ್ತತ್ವೇನ ಪೂಜಿಸುವುದು(ದೇವತೆಗಳನ್ನು ಸರ್ವೋತ್ತಮತ್ವದಿಂದ ಪೂಜಿಸದಿರುವುದು. ಅಥವಾ ದೇವತೆಗಳು ಭಗವಂತನ ಅಧೀನ ಎಂದು ತಿಳಿದು ಪೂಜಿಸುವುದು), ವ್ಯರ್ಥವಾದ ಕರ್ಮವನ್ನು ಮಾಡದೇ ಇರುವುದು, ಕರ್ಮಫಲದಲ್ಲಿ ಆಂಟಿಕೊಳ್ಳದಿರುವುದು (ಆಸೆ ಇಟ್ಟುಕೊಳ್ಳದಿರುವುದು), ಪರಮಾತ್ಮನಿಗಾಗಲೀ, ಭಗವದ್ ಭಕ್ತರಿಗಾಗಲೀ ವಿರುದ್ಧವಾದ ಕೆಲಸವನ್ನು ಮಾಡದಿರುವಿಕೆಯು ಧರ್ಮವು. ಭಗವದ್ ಭಕ್ತರ ನಡುವೆ ಪರಸ್ಪರ ವಿರೋಧಬಂದಾಗ ಹೆಚ್ಚಿನ ಜ್ಞಾನ-ಭಕ್ತಿಗೆ ತಕ್ಕಂತೆ ನಡೆಯುವುದು. ಪರಮಾತ್ಮನ ಭಕ್ತರಿಗೆ ಯಾವುದು ಪ್ರಿಯವೋ ಅದನ್ನು ಮಾಡುವುದು(ವಿಷ್ಣುಭಕ್ತರಿಗೆ ಅಪ್ರಿಯವಾಗಿರುವುದನ್ನು ಆಚರಿಸದೇ ಇರುವುದು), ಸಾಮ್ಯ-ವಿರೋಧ ಎರಡೂ ಬಂದಾಗ ಬಹಳ ಜನ ವೈಷ್ಣವರು ಏನನ್ನು ಹೇಳುತ್ತಾರೋ ಅದನ್ನೇ ಅನುಸರಿಸುವುದು, ಇದೆಲ್ಲವೂ ಸಾಧಾರಣ ಭಾಗವತ ಧರ್ಮ.

No comments:

Post a Comment