ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, July 17, 2023

Mahabharata Tatparya Nirnaya Kannada 28-136-148

ಪಾರಾವತಾಶ್ವಂ ಸ ತದಾ ಶಯಾನಮುಪೇತ್ಯ ಪದ್ಬ್ಯಾಂ ಸಮತಾಡಯಚ್ಚ ।

ವಕ್ಷಸ್ಯಸಾವವದದ್ ವೀತನಿದ್ರೋ ಜಾನೇ ಭವನ್ತಂ ಹಿ ಗುರೋಸ್ತನೂಜಮ್ ॥೨೮.೧೩೬॥

 

ಸಮುತ್ಥಿತಂ ಮಾಂ ಜಹಿ ಶಸ್ತ್ರಪಾಣಿಂ ಶಸ್ತ್ರೇಣ ವೀರೋSಸಿ ಸ ವೀರಧರ್ಮ್ಮಃ ।

ಲೋಕಾಶ್ಚ ಮೇ ಸನ್ತ್ವಥ ಶಸ್ತ್ರಪೂತಾ ಇತಿ ಬ್ರುವಾಣಂ ಸ ರುಷಾ ಜಗಾದ ॥೨೮.೧೩೭॥

 

ಪಾಂಡವರ ಶಿಬಿರದ ಒಳಗೆ ನುಗ್ಗಿದ ಅಶ್ವತ್ಥಾಮನು ಅಲ್ಲಿ ಮಲಗಿರುವ ಪಾರಾವತಾಶ್ವನ (ಧೃಷ್ಟದ್ಯುಮ್ನನನ) ಎದೆಗೆ ಕಾಲಿನಿಂದ ಒದ್ದು ಎಬ್ಬಿಸಿದ.  ಎಚ್ಚರಗೊಂಡ ಧೃಷ್ಟದ್ಯುಮ್ನ ಹೇಳುತ್ತಾನೆ: ‘ನಿನ್ನನ್ನು ಅಶ್ವತ್ಥಾಮ ಎಂದು ನಾನು ತಿಳಿದಿದ್ದೇನೆ. ನಿನ್ನನ್ನು ಬೇಡುತ್ತಿದ್ದೇನೆ, ನನ್ನನ್ನು ಏಳಲು ಬಿಡು. ಶಸ್ತ್ರವನ್ನು ಹಿಡಿಯುತ್ತೇನೆ, ಆ ನಂತರ ಶಸ್ತ್ರದಿಂದ ನನ್ನನ್ನು ಕೊಲ್ಲು. ಏಕೆಂದರೆ ನೀನು ವೀರನಾಗಿದ್ದೀಯ. ಶಸ್ತ್ರಪಾಣಿಗಳನ್ನು ಕೊಲ್ಲುವುದು ವೀರರ ಧರ್ಮ. ನನಗೆ ಶಸ್ತ್ರದಿಂದ ಕೊಲ್ಲಲ್ಪಟ್ಟವರಿಗೆ ಸಿಗುವ ಲೋಕ ಸಿಗುವಂತಾಗಲಿ.’ ಹೀಗೆ ಹೇಳುತ್ತಿರುವ ಧೃಷ್ಟದ್ಯುಮ್ನನನ್ನು ಕುರಿತು ಸಿಟ್ಟಿನಿಂದ ಅಶ್ವತ್ಥಾಮ ಹೇಳುತ್ತಾನೆ-

 

ನ ಸನ್ತಿ ಹಿ ಬ್ರಹ್ಮಹಣಾಂ ಸುಲೋಕಾ ವಿಶೇಷತಶ್ಚೈವ ಗುರುದ್ರುಹಾಂ ಪುನಃ ।

ನ ಧರ್ಮ್ಮಯುದ್ಧೇನ ವಧಾರ್ಹಕಾಶ್ಚ ಯೇ ತ್ವದ್ವಿಧಾಃ ಪಾಪತಮಾಃ ಸುಪಾಪ ॥೨೮.೧೩೮॥

 

‘ಎಲೈ ಪಾಪಿಷ್ಠನಾದ ಧೃಷ್ಟದ್ಯುಮ್ನನೇ, ಬ್ರಹ್ಮಹತ್ಯೆ ಮಾಡಿದವರಿಗೆ, ಅದರಲ್ಲೂ ವಿಶೇಷವಾಗಿ ಗುರುದ್ರೋಹಿಗಳಿಗೆ ಒಳ್ಳೆಯ ಲೋಕ ಸಿಗದು.  ಅದರಿಂದಾಗಿ ನಿನ್ನಂತಹ ಪಾಪಿಷ್ಠರು ಧರ್ಮಯುದ್ಧದಿಂದ ಕೊಲ್ಲಲು ಯೋಗ್ಯರಲ್ಲ.’

 

ಅವಶ್ಯಭಾವಿನಂ ಮೃತ್ಯುಂ ಧೃಷ್ಟದ್ಯುಮ್ನೋ ವಿಚಿನ್ತ್ಯ ತಮ್ ।

ತೂಷ್ಣೀಂ ಬಭೂವ ಸ್ವಪ್ನೇSಪಿ ನಿತ್ಯಂ ಪಶ್ಯತಿ ತಾಂ ಮೃತಿಮ್ ॥೨೮.೧೩೯॥

  

ದ್ರೌಣಿಂ ಚ ಕಾಳರಾತ್ರಿಂ ಚ ದ್ರೋಣಪಾತಾದನನ್ತರಮ್ ।

ವಿಶಸನ್ತಂ ಕೃಷನ್ತೀಂ ಚ ಸ್ವಪ್ನೇSಪಶ್ಯದ್ಧಿ ಪಾರ್ಷತಃ ॥೨೮.೧೪೦॥

 

ನಿಶ್ಚಯವಾಗಿಯೂ ತನ್ನ ಸಾವು ಇದೇ ರೀತಿ ಆಗುತ್ತದೆ ಎಂದು ಚಿಂತಿಸಿದ ಧೃಷ್ಟದ್ಯುಮ್ನನು ಸುಮ್ಮನಾದ. (ಹೇಗೆ ಅವನಿಗೆ ಅದು ನಿಶ್ಚಯವಾಗಿ ತಿಳಿದಿತ್ತು ಎಂದರೆ-)ಅವನು ಕನಸಿನಲ್ಲಿ ಯಾವಾಗಲೂ ಆ ಸಾವನ್ನು ಕಾಣುತ್ತಿದ್ದ. (ಕನಸಿನ ಕುರಿತು ಹೇಳುತ್ತಾರೆ-) ಧೃಷ್ಟದ್ಯುಮ್ನನು ದ್ರೋಣಾಚಾರ್ಯರನ್ನು ಕೊಂದ ನಂತರ ಕನಸಿನಲ್ಲಿ ನಿತ್ಯವೂ-  ಅಶ್ವತ್ಥಾಮ ಬಂದು ತನ್ನನ್ನು ಕೊಲ್ಲತಕ್ಕವನಾಗಿಯೂ, ದುರ್ಗೆಯು [ತಮೋಭಿಮಾನಿ,  (ಕಪ್ಪುಬಣ್ಣದ) ದುರ್ಗೆಯು] ತನ್ನನ್ನು ಸೆಳೆಯತಕ್ಕವಳಾಗಿಯೂ ನೋಡುತ್ತಿದ್ದ.  

 

ಸಮಾಕ್ಷಿಪದ್ ದ್ರೋಣಸುತೋSಸ್ಯ ಕಣ್ಠೇ ನಿಬದ್ಧ್ಯ ಮೌರ್ವೀಂ ಧನುಷೋSಪ್ಯುರಸ್ಥಃ ।

ಮಮನ್ಥ ಕೃಚ್ಛ್ರೇಣ ವಿಹಾಯ ದೇಹಂ ಯಯೌ ನಿಜಂ ಸ್ಥಾನಮಸೌ ಚ ವಹ್ನಿಃ ॥೨೮.೧೪೧॥

 

ದ್ರೋಣಾಚಾರ್ಯರ ಮಗನಾಗಿರುವ ಅಶ್ವತ್ಥಾಮ ಧೃಷ್ಟದ್ಯುಮ್ನನ ಎದೆಯಮೇಲೆ ಕುಳಿತು, ಬಿಲ್ಲಿನ ಹಗ್ಗವನ್ನು ಬಿಚ್ಚಿ, ಧೃಷ್ಟದ್ಯುಮ್ನನ ಕೊರಳಿಗೆ ಕಟ್ಟಿ ಎಳೆದ. ಕಷ್ಟಪಟ್ಟು ಅವನ ಕುತ್ತಿಗೆಯನ್ನು ಹಿಚುಕಿದ. ಆಗ (ಅಗ್ನಿಯ ಅವತಾರರೂಪನಾದ) ಧೃಷ್ಟದ್ಯುಮ್ನನು ಬಹಳ ಹಿಂಸೆಯಿಂದ ದೇಹವನ್ನು ಬಿಟ್ಟು ತನ್ನ ಸ್ಥಾನವನ್ನೇ ಹೊಂದಿದನು (ಅಗ್ನಿಯನ್ನು ನಂದಿಸಲು ಹೇಗೆ ಗಾಳಿ ಇಲ್ಲವಾಗಬೇಕೋ ಹಾಗೇ, ಅವನ ಕತ್ತನ್ನು ಹಿಚುಕಿ ಉಸಿರುಗಟ್ಟಿಸಿ ಕೊಂದ).

 

ತತಃ ಶಿಖಣ್ಡಿನಂ ಹತ್ವಾ ಯುಧಾಮನ್ಯೂತ್ತಮೋಜಸೌ ।

ಜನಮೇಜಯಂ ಚ ಪಾಞ್ಚಾಲೀಸುತಾನಭಿಯಯೌ ಜ್ವಲನ್ ॥೨೮.೧೪೨॥

 

ತದನಂತರ ಶಿಖಂಡಿ, ಯುದಾಮನ್ಯು, ಉತ್ತಮೌಜಸ ಹಾಗೂ ಜನಮೇಜಯ ಎನ್ನುವ ನಾಲ್ಕು ಜನರನ್ನು  ಕೊಂದು, ಕೋಪದಿಂದ ಉರಿಯುತ್ತಾ, ದ್ರೌಪದಿಯ ಮಕ್ಕಳಿದ್ದ ಕಡೆಗೆ ನುಗ್ಗಿದ.  

 

ತೈರುತ್ಥಿತೈರಸ್ಯಮಾನಃ ಶರೈಃ ಖಡ್ಗೇನ ಜಘ್ನಿವಾನ್ ।

ಸರ್ವಾನ್ ಸವ್ಯಾಪಸವ್ಯೇನ ತಥಾSನ್ಯಾನ್ ಪಾಣ್ಡವಾತ್ಮಜಾನ್ ॥೨೮.೧೪೩॥

 

ಋತ ಏಕಂ ಭೈಮಸೇನಿಂ  ಕಾಶಿರಾಜಾತ್ಮಜಾತ್ಮಜಮ್ ।

ತಂ ತದಾSನ್ತರ್ಹಿತಃ ಶರ್ವಃ ಕೈಲಾಸಮನಯತ್ ಕ್ಷಣಾತ್ ॥೨೮.೧೪೪॥

 

ನಿದ್ದೆಯಿಂದ ಎದ್ದಿರತಕ್ಕ ಪಾಂಚಾಲೀ ಪುತ್ರರ ಬಾಣಗಳಿಂದ ಹೊಡೆಯಲ್ಪಡುವವನಾದ ಅಶ್ವತ್ಥಾಮನು, ಖಡ್ಗದಿಂದ ದ್ರೌಪದಿಯ ಎಲ್ಲಾ ಮಕ್ಕಳನ್ನು ಕೊಂದುಹಾಕಿದ. ಹಾಗೇ, ಭೀಮಸೇನನಿಂದ ಹುಟ್ಟಿದ, ಕಾಶಿರಾಜನ ಮಗಳ ಮಗನೊಬ್ಬನನ್ನು  ಬಿಟ್ಟು, ಪಾಂಡವರ ಇತರ ಎಲ್ಲಾ ಮಕ್ಕಳನ್ನೂ ಕೂಡಾ ಅಶ್ವತ್ಥಾಮ ಎಡಕ್ಕೂ, ಬಲಕ್ಕೂ ಹೊಡೆದು ಸಂಹರಿಸಿದನು. ಆಗ ಅಲ್ಲಿ ಯಾರಿಗೂ ಕಾಣದಂತೆ ಇದ್ದ ರುದ್ರನು ಕೊಲ್ಲಲ್ಪಡದೇ ಉಳಿದಿರುವ ಭೀಮಸೇನನ ಮಗನನ್ನು ಕೂಡಲೇ ಕೈಲಾಸಕ್ಕೆ ಕರೆದುಕೊಂಡು ಹೋದನು.

 

ಸ ಶರ್ವತ್ರಾತನಾಮಾSSಸೀದತಸ್ತತ್ರೈವ ಸೋSವಸತ್ ।

ಪುರಾSರ್ತ್ಥಿತಃ ಸ್ವದೌಹಿತ್ರಸ್ಯಾಮರತ್ವಾಯ ಶಙ್ಕರಃ ॥೨೮.೧೪೫॥

 

ಕಾಶಿರಾಜೇನ ತೇನಾಸೌ ಜುಗೋಪೈನಂ ಕೃಪಾಯುತಃ ।

ವಾಸುದೇವಮತಂ ಜ್ಞಾತ್ವಾ ಸಾಮ್ರಾಜ್ಯಾಯ ಪರೀಕ್ಷಿತಃ ॥೨೮.೧೪೬॥

 

ವಾರಯಾಮಾಸ ಭೂಲೋಕಂ ನೈವ ಯಾಹೀತ್ಯಮುಂ ಶಿವಃ ।

ಸಾಮಾನ್ಯತೋSಪಾಣ್ಡವಾಯ ದ್ರೌಣಿನಾSಪ್ಯಭಿಸನ್ಧಿತಮ್ ॥೨೮.೧೪೭॥

 

ತದ್ರೂಪೇಣೈವ ರುದ್ರೇಣ ವಿನೈನಮಿತಿ ಚಿನ್ತಿತಮ್ ।

ಅಸ್ತ್ರಂ ಬ್ರಹ್ಮಶಿರಶ್ಚೈನಂ ನ ಜಘಾನೈಕ್ಯತಸ್ತಯೋಃ ।

ಚೇಕಿತಾನಾದಿಕಾಂಶ್ಚೈವ ಜಘಾನಾನ್ಯಾನ್ ಸ ಸರ್ವಶಃ ॥೨೮.೧೪೮॥

 

ಶರ್ವತ್ರಾತ(ರುದ್ರನಿಂದ ಯಾವಾಗಲೂ ರಕ್ಷಿಸಲ್ಪಟ್ಟವನು) ಎಂಬ ಹೆಸರಿನ ಆ ಭೀಮಪುತ್ರನು  ಮುಂದೆ ಕೈಲಾಸದಲ್ಲಿಯೇ ವಾಸಮಾಡಿದನು.  (ಏಕೆ ರುದ್ರ ಅವನನ್ನು ರಕ್ಷಿಸಿದ ಎಂದರೆ-) ಹಿಂದೆ ತನ್ನ ಮಗಳ ಮಗನ ಅಮರತ್ವಕ್ಕಾಗಿ ಕಾಶಿರಾಜನಿಂದ ಬೇಡಲ್ಪಟ್ಟಿದ್ದ ಸದಾಶಿವನು ಕೃಪೆಯಿಂದ ಅವನನ್ನು ರಕ್ಷಣೆ ಮಾಡಿದನು. (ಹಾಗಿದ್ದರೆ ಅವನು ಏಕೆ ಮತ್ತೆ ಭೂಲೋಕಕ್ಕೆ ಬರಲಿಲ್ಲ ಎಂದರೆ-) ಅಭಿಮನ್ಯು ಪುತ್ರ ಪರೀಕ್ಷಿತನ ರಾಜ್ಯಾಭಿಷೇಕಕ್ಕಾಗಿ ಇರುವ ವಾಸುದೇವನ ಅಭಿಪ್ರಾಯವನ್ನು ತಿಳಿದು, ‘ಭೂಲೋಕವನ್ನು ಕುರಿತು ಹೋಗಬೇಡ’ ಎಂದು ಸದಾಶಿವನು ಶರ್ವತ್ರಾತನನ್ನು ತಡೆದನು.

(ಹಾಗಿದ್ದರೆ ಪಾಂಡವರ ಸಂತತಿ ನಾಶಕ್ಕಾಗಿ ಅಶ್ವತ್ಥಾಮನಿಂದ ಪ್ರಯೋಗಿಸಲ್ಪಟ್ಟ ಅಸ್ತ್ರವು ಹೇಗೆ ಶರ್ವತ್ರಾತನನ್ನು ಕೊಲ್ಲಲಿಲ್ಲ ಎಂದರೆ-) ಪಾಂಡವರ ಸಂತತಿಯ ನಾಶಕ್ಕಾಗಿಯೇ ಅಶ್ವತ್ಥಾಮರಿಂದ ಸಂಕಲ್ಪ ಮಾಡಲ್ಪಟ್ಟಿತು. ಆದರೆ ಅಶ್ವತ್ಥಾಮನ ಸ್ವರೂಪಭೂತನಾದ ರುದ್ರನಿಂದ ‘ಶರ್ವತ್ರಾತನನ್ನು ಬಿಟ್ಟು’ ಎಂದು ಚಿಂತನೆ ಮಾಡಲ್ಪಟ್ಟಿತ್ತು(ಸುಪ್ತಪ್ರಜ್ಞೆಯಲ್ಲಿ ಶರ್ವತ್ರಾತನಿಗೆ ಬ್ರಹ್ಮಾಸ್ತ್ರ ತಗಲುವುದು ಬೇಡ ಎನ್ನುವ ಚಿಂತನೆ ಇತ್ತು). ಅಶ್ವತ್ಥಾಮ ಮತ್ತು ಸದಾಶಿವ ಒಂದೇ ಆಗಿರುವುದರಿಂದ ಬ್ರಹ್ಮಾಸ್ತ್ರವು ಶರ್ವತ್ರಾತನನ್ನು ಕೊಲ್ಲಲಿಲ್ಲ. ಆದರೆ ಅಶ್ವತ್ಥಾಮ ಚೇಕಿತಾನನೇ ಮೊದಲಾಗಿರುವ ಎಲ್ಲರನ್ನೂ ಸಂಹರಿಸಿದನು.

No comments:

Post a Comment