ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, July 23, 2023

Mahabharata Tatparya Nirnaya Kannada 28-190-200

 

[ಹಿಂದೆ ಅಶ್ವತ್ಥಾಮಾಚಾರ್ಯರು ತಮ್ಮ ಕನಸಿನಲ್ಲಿ ಏನನ್ನು ಕಂಡಿದ್ದರು ಎನ್ನುವುದನ್ನು ವಿವರಿಸುತ್ತಾರೆ-]

 

ಸ್ವಪ್ನೇ ಹಿ ದ್ರೌಪದೇಯಾನಾಂ ವಧೋ ದೃಷ್ಟೋSತ್ಮನಾ ನಿಶಿ ।

ಅರ್ಜ್ಜುನೇನ ಪ್ರತಿಜ್ಞಾನಂ ದ್ರೌಪದ್ಯೈ ಸ್ವವಧಂ ಪ್ರತಿ ॥೨೮.೧೯೦॥

 

ನಿಬಧ್ಯಾSನಯನಂ ಚೈವ ತೇನೈವ ಶಿಬಿರಂ ಪ್ರತಿ ।

ಮುಞ್ಚೇತಿ ದ್ರೌಪದೀವಾಕ್ಯಂ ನೇತಿ ಭೀಮವಚಸ್ತಥಾ ॥೨೮.೧೯೧॥

 

ಕೃಷ್ಣವಾಕ್ಯಾನ್ಮಣಿಂ ಹೃತ್ವಾ ದೇಶಾನ್ನಿರ್ಯಾತನಂ ತಥಾ ।

ಇತ್ಯಾದಿ ಸ್ವಪ್ನದೃಷ್ಟಂ ಯತ್ ಪ್ರಾಯಃ ಸತ್ಯಮಭೂದಿತಿ ॥೨೮.೧೯೨॥

 

ದ್ರೌಪದಿಯ ಮಕ್ಕಳ ಹತ್ಯೆ, ತನ್ನನ್ನು ಕೊಲ್ಲುವುದಾಗಿ ದ್ರೌಪದಿಯ ಮುಂದೆ ಅರ್ಜುನನ ಪ್ರತಿಜ್ಞೆ, ಅರ್ಜುನ ತನ್ನನ್ನು ಸೆರೆಹಿಡಿದು ಶಿಬಿರಕ್ಕೆ ಕರೆದೊಯ್ಯುವುದು, ದ್ರೌಪದಿ ಗುರುಪುತ್ರನಾದ ತನ್ನನ್ನು ಬಿಡುಗಡೆ ಮಾಡುವಂತೆ ಹೇಳುವುದು, ಆದರೆ ಭೀಮಸೇನ ಅದನ್ನು ನಿರಾಕರಿಸಿ ಶ್ರೀಕೃಷ್ಣನ ಮಾತಿನಂತೆ ಮಣಿಯನ್ನು ಕಸಿದುಕೊಳ್ಳುವುದು ಮತ್ತು ತನ್ನನ್ನು ದೇಶದಿಂದ ಗಡಿಪಾರು ಮಾಡುವುದು. ಹೀಗೆ ತಾನು ಕನಸಿನಲ್ಲಿ ಕಂಡ ಘಟನೆಗಳು ಪ್ರಾಯಃ ಸತ್ಯವಾಗಿರುವುದನ್ನು ಅಶ್ವತ್ಥಾಮಾಚಾರ್ಯರು ಚಿಂತಿಸಿದರು.

[ಭಾಗವತದ ಪ್ರಥಮ ಸ್ಕಂಧದಲ್ಲಿ(೦೭.೩೦-೫೭) ಈ ಮೇಲಿನ ಕನಸಿನ ವಿವರವನ್ನು ಕಾಣಬಹುದು. ಭಾಗವತ  ಮತ್ತು ಮಹಾಭಾರತದಲ್ಲಿ ಈ ಘಟನೆಯ ಕುರಿತಾದ ವಿವರ ಸ್ವಲ್ಪ ಭಿನ್ನವಾಗಿರುವುದನ್ನು ಆಚಾರ್ಯರು ಸ್ಪಷ್ಟ ನಿರ್ಣಯ ನೀಡಿ ಇಲ್ಲಿ ವಿವರಿಸಿದ್ದಾರೆ. ಅಶ್ವತ್ಥಾಮಾಚಾರ್ಯರು ಕಂಡಿರುವ ಕನಸನ್ನು ಭಾಗವತ ವಿವರಿಸಿದರೆ, ನಿಜ ಘಟನೆಯನ್ನು ಮಹಾಭಾರತ ವಿವರಿಸಿದೆ. ಇದನ್ನು ಭಾಗವತ ತಾತ್ಪರ್ಯ ನಿರ್ಣಯದಲ್ಲಿ(೧.೭) ಆಚಾರ್ಯರು ಸ್ಕಾಂಧಪುರಾಣದ ಪ್ರಮಾಣದೊಂದಿಗೆ ಸ್ಪಷ್ಟಪಡಿಸಿದ್ದಾರೆ. “ಪಾರ್ಥಾನುಯಾತಮಾತ್ಮಾನಂ ದ್ರೌಣಿಃ ಸ್ವಪ್ನೇ ದದರ್ಶ ಹ  । ಬಂಧನಂ ಚಾSತ್ಮನಸ್ತತ್ರ ದ್ರೌಪದ್ಯಾ ಚೈವ ಮೊಕ್ಷಣಮ್” ಇತಿ ಸ್ಕಾಂದೇ  । ತಸ್ಮಾನ್ನೈಷೀಕವಿರೋಧಃ । ]

 

ಚಿನ್ತಯನ್ ಪ್ರಯಯೌ ದಾವಂ ದ್ರೌಣಿಃ ಶಸ್ತ್ರಭೃತಾಂ ವರಃ ।

ಸ ಕೃಷ್ಣೋಕ್ತಮಪಿ ಪ್ರಾಪ್ಯ ಬಾದರಾಯಣಶಿಷ್ಯತಾಮ್ ॥೨೮.೧೯೩॥

 

ಪ್ರಾಪ್ಯೋತ್ತರದ್ವಾಪರೇ ಚ ವೇದಾನ್ ಸಂವಿಭಜಿಷ್ಯತಿ ।

ತತಃ ಸಪ್ತರ್ಷಿರ್ಭೂತ್ವಾ ಪಾರಾಶರ್ಯ್ಯಪ್ರಸಾದತಃ ॥೨೮.೧೯೪॥

 

ಏಕೀಭಾವಂ ಸ್ವರೂಪೇಣ ಯಾಸ್ಯತ್ಯಚ್ಯುತನಿಷ್ಠಯಾ ।

ಕೃಪೋSಥ ಪಾಣ್ಡವಾನ್ ಪ್ರಾಪ್ಯ ಗೌರವಾತ್ ಪೂಜಿತಶ್ಚ ತೈಃ ॥೨೮.೧೯೫॥

 

ಅಭೂದಾಚಾರ್ಯ್ಯ ಏವಾಸೌ ರಾಜ್ಞಾಂ ತತ್ತನ್ತುಭಾವಿನಾಮ್ ।

ಬಾದರಾಯಣಶಿಷ್ಯತ್ವಂ ಪುನಃ ಪ್ರಾಪ್ಯ ಭಜನ್ನಮುಮ್  ॥೨೮.೧೯೬॥

 

ಸಾಕಂ ಸ್ವಭಾಗಿನೇಯೇನ ಭಾವ್ಯೇಕೋ ಮುನಿಸಪ್ತಕೇ ।

ಕೃತವರ್ಮ್ಮಾ ದ್ವಾರವತೀಂ ಯಯೌ ಕೃಷ್ಣಾನುಮೋದಿತಃ ॥೨೮.೧೯೭॥

 

ಹೀಗೆ ತನ್ನ ಕನಸನ್ನು ನೆನಪಿಸಿಕೊಳ್ಳುತ್ತಾ ಶಸ್ತ್ರವನ್ನು ಹಿಡಿದವರಲ್ಲೇ ಅಗ್ರಗಣ್ಯರೆನಿಸಿದ ಅಶ್ವತ್ಥಾಮಾಚಾರ್ಯರು ಕಾಡಿನತ್ತ ತೆರಳಿದರು. ಹಾಗೆಯೇ, ಅವರು ಶ್ರೀಕೃಷ್ಣನಿಂದ ಹೇಳಲ್ಪಟ್ಟ ಶಾಪ ಫಲವನ್ನು ಸಾವಿರ ವರ್ಷಗಳ ಕಾಲ ಅನುಭವಿಸಿ, ನಂತರ ವೇದವ್ಯಾಸರ ಶಿಷ್ಯನಾಗಿ, ಮುಂದಿನ ದ್ವಾಪರಯುಗದಲ್ಲಿ ವೇದಗಳನ್ನು ವಿಭಾಗ ಮಾಡುತ್ತಾರೆ. ಮುಂದೆ ವೇದವ್ಯಾಸರ ಅನುಗ್ರಹದಿಂದ ಸಪ್ತರ್ಷಿಗಳಲ್ಲಿ ಒಬ್ಬನಾಗಿ, ಪರಮಾತ್ಮನಲ್ಲಿನ ಭಕ್ತಿಯಿಂದ ತನ್ನ ಸ್ವರೂಪದೊಂದಿಗೆ(ರುದ್ರನಿಂದ) ಐಕ್ಯವನ್ನು ಹೊಂದುತ್ತಾರೆ.

ತದನಂತರ ಕೃಪಾಚಾರ್ಯರು ಪಾಂಡವರನ್ನು ಹೊಂದಿ, ಅತ್ಯಂತ ಗೌರವದಿಂದ ಪೂಜಿತರಾಗಿ, ಪಾಂಡವರ ಸಂತತಿಯ ರಾಜರಿಗೆ ಆಚಾರ್ಯರಾದರು. ಪಾಂಡವರ ಸಂತತಿಯ ನಾಶದ ನಂತರ(ಸಾವಿರ ವರ್ಷಗಳ ನಂತರ) ಮತ್ತೆ ವೇದವ್ಯಾಸರ ಶಿಷ್ಯತ್ವವನ್ನು ಹೊಂದಿ, ವೇದವ್ಯಾಸರನ್ನೇ ಭಕ್ತಿಯಿಂದ ಸೇವಿಸಿ, ತನ್ನ ತಂಗಿಯ ಪುತ್ರನಾದ ಅಶ್ವತ್ಥಾಮಾಚಾರ್ಯರಿಂದ ಕೂಡಿಕೊಂಡು, ಮುಂದೆ ಸಪ್ತರ್ಷಿಗಳಲ್ಲಿ ಒಬ್ಬರಾಗುತ್ತಾರೆ. ಶ್ರೀಕೃಷ್ಣನಿಂದ ಅನುಮತಿಯನ್ನು ಪಡೆದ ಕೃತವರ್ಮನು ದ್ವಾರಕಾ ಪಟ್ಟಣಕ್ಕೆ ತೆರಳಿದನು.

[ಪಾಂಡವರ ಕಡೆ ಶ್ರೀಕೃಷ್ಣ, ಸಾತ್ಯಕಿ ಮತ್ತು ಪಂಚ ಪಾಂಡವರು  (ಒಟ್ಟು ಏಳು ಜನ) ಹಾಗೂ  ಕೌರವರ ಕಡೆ ದ್ರೌಣಿ, ಕೃಪಾಚಾರ್ಯರು ಮತ್ತು ಕೃತವರ್ಮ (ಮೂವರು). ಇವರಷ್ಟೇ (ಹತ್ತುಜನ) ಪ್ರಧಾನರಾದವರು  ಮಹಾಭಾರತ ಯುದ್ಧದಲ್ಲಿ ಪಾಲ್ಗೊಂಡು ಬದುಕುಳಿದಿರುವುದು.]   

 

ಕೃಷ್ಣಾಯೈ ತಂ ಮಣಿಂ ದತ್ವಾ ಭೀಮಸ್ತಾಂ ಪರ್ಯ್ಯಸಾನ್ತ್ವಯತ್ ।

ವಿಕೋಪಾ ಭೀಮವಾಕ್ಯೇನ ರಾಜ್ಞೇ ಸಾ ಚ ಮಣಿಂ ದದೌ ॥೨೮.೧೯೮॥

 

ಭೀಮಸೇನನು ಅಶ್ವತ್ಥಾಮನಿಂದ ಪಡೆದ ಮಣಿಯನ್ನು ದ್ರೌಪದಿಗೆ ಕೊಟ್ಟು ಸಮಾಧಾನಪಡಿಸಿದನು. ಭೀಮನ ಮಾತಿನಿಂದ ಪುತ್ರಸಂಹಾರ ಪ್ರಯುಕ್ತವಾದ ಕೋಪವನ್ನು ಕಳೆದುಕೊಂಡ ಅವಳು, ಭೀಮ ಕೊಟ್ಟ ಮಣಿಯನ್ನು ರಾಜನಿಗೆ(ಯುಧಿಷ್ಠಿರನಿಗೆ) ಕೊಟ್ಟಳು. (ಏಕೆ ಹೀಗೆ ಮಾಡಿದಳು ಎಂದರೆ-)

 

ರಾಜಾರ್ಹೇ ಹಿ ಮಣೌ ದತ್ತೇ ಮಹ್ಯಂ ಭೀಮೇನ ಲೌಕಿಕಾಃ ।

ಸ್ತ್ರೀಪಕ್ಷಪಾತಂ ರಾಜಾ ಚ ಶಙ್ಕೇಯುರ್ಮ್ಮಾರುತೇರಿತಿ ॥೨೮.೧೯೯॥

 

ಮಣಿಂ ರಾಜ್ಞೇ ದದೌ ಕೃಷ್ಣಾ ಭರ್ತ್ತೃಪ್ರಿಯಹಿತೇ ರತಾ ।

ಸೋSಪ್ಯಾಬದ್ಧ್ಯ ಮಣಿಂ ಮೂರ್ಧ್ನಿ ರೇಜೇ ರಾಜಾ ಗವಾಮಿವ ॥೨೮.೨೦೦॥

 

ಒಬ್ಬ ರಾಜ ಮಾತ್ರ ಧರಿಸಬಹುದಾದ ಮಣಿಯು ಭೀಮಸೇನನಿಂದ ನನಗಾಗಿ ಕೊಡಲ್ಪಡುತ್ತಿರಲು, ಲೋಕದಲ್ಲಿ ಜನರು ಭೀಮ ಸ್ತ್ರೀಪಕ್ಷಪಾತಿ ಎಂದುಕೊಳ್ಳಬಾರದು ಎಂದು, ಅದಕ್ಕಾಗಿ,  ಗಂಡನಿಗೆ ಪ್ರಿಯವೂ ಮತ್ತು ಹಿತವಾದುದರಲ್ಲಿ ಆಸಕ್ತಳಾದ ದ್ರೌಪದಿಯು ಅಶ್ವತ್ಥಾಮನ ಮಣಿಯನ್ನು ಯುಧಿಷ್ಠಿರನಿಗೆ ಕೊಟ್ಟಳು. ಅವನಾದರೋ, ಆ ಮಣಿಯನ್ನು ತಲೆಯಲ್ಲಿ ಧರಿಸಿ, ಸ್ವರ್ಗದ ಒಡೆಯನಾದ ಇಂದ್ರನಂತೆ ಶೋಭಿಸಿದನು.

No comments:

Post a Comment