ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, July 16, 2023

Mahabharata Tatparya Nirnaya Kannada 28-109-115

ಸಮ್ಭಾವಯತ ಆತ್ಮಾನಂ ವಾಸುದೇವಂ ವಿನಿನ್ದತಃ ।

ತತ್ಪರಾಂಶ್ಚ ಕಥಂ ನ ಸ್ಯಾತ್ ತಮೋSನ್ತೇ ಚ ವಿಶೇಷತಃ ॥೨೮.೧೦೯॥

 

ತನ್ನನ್ನು ಹೋಗಳಿಕೊಳ್ಳುವ, ಪರಮಾತ್ಮನನ್ನು ಮತ್ತು ಭಗವದ್ಭಕ್ತರನ್ನು ನಿಂದನೆ ಮಾಡುವ ದುರ್ಯೋಧನನಿಗೆ, ಕೊನೆಯಲ್ಲಿ ಅನ್ಧಂತಮಸ್ಸು ಹೇಗೆ ಆಗದೇ ಹೋದೀತು?

 

ಯದೈಕೈಕಮಲಂ ತತ್ರ ದುಃಖಾಧಿಕ್ಯಂ ಸಮುಚ್ಚಯಾತ್ ।

ಇತಿ ತತ್ ಕಾರಯಿತ್ವೇಶ ಆಹ ಮೋಘಂ ತವಾಖಿಲಮ್ ॥೨೮.೧೧೦॥

 

ನೃಶಂಸಸ್ಯ ಕೃತಘ್ನಸ್ಯ ಗುಣವದ್ದ್ವೇಷಿಣಃ ಸದಾ ।

ಯದಿ ಧರ್ಮ್ಮಫಲಂ ಧ್ವಾನ್ತಂ ಸೂರ್ಯ್ಯವತ್ ಸ್ಯಾತ್ ಪ್ರಕಾಶಕಮ್ ॥೨೮.೧೧೧॥

 

ಒಂದು  ವೇಳೆ ಇದರಲ್ಲಿ ಒಂದನ್ನು ಮಾಡಿದರೂ(ತನ್ನನ್ನು ತಾನು ಹೊಗಳಿಕೊಂಡರೆ, ಭಗವದ್ಭಕ್ತರನ್ನು   ದ್ವೇಷಮಾಡಿದರೆ, ಭಗವದ್ದ್ವೇಷಿಯಾಗಿದ್ದರೆ- ಹೀಗೆ ಈ ಮೂರರಲ್ಲಿ ಒಂದನ್ನು ಮಾಡಿದರೂ) ಕೂಡಾ ಅತಿದುಃಖ ಎನ್ನುವುದು ಬಂದೇ ಬರುತ್ತದೆ. ದುರ್ಯೋಧನನಂತೂ ಮೂರನ್ನೂ ಒಟ್ಟಿಗೇ ಮಾಡುತ್ತಿದ್ದಾನೆ. ಹೀಗಿರುವಾಗ  ದುಃಖವಾಗುವುದಿಲ್ಲವೇ? ಹೀಗಾಗಿ ಈ ಮೂರನ್ನೂ ಕೂಡಾ ಶ್ರೀಕೃಷ್ಣನು ಅವನ ಮೂಲಕ ಮಾಡಿಸಿ ಹೇಳುತ್ತಾನೆ-  ‘ನಿನ್ನ ಎಲ್ಲಾ ಕ್ರಿಯೆಗಳೂ(ಯಜ್ಞ, ದಾನ, ಇತ್ಯಾದಿ ಎಲ್ಲಾ ಕ್ರಿಯೆಗಳೂ)  ಕೂಡಾ ವ್ಯರ್ಥ. ನೀನು ಕ್ರೂರಿ, ಉಪಕಾರ ಸ್ಮರಣೆ ಇಲ್ಲದವನು, ಎಲ್ಲವುದಕ್ಕಿಂತ ಮುಖ್ಯವಾಗಿ ನೀನು ಗುಣವಂತರನ್ನು ದ್ವೇಷಮಾಡಿದೆ. ಇಂತಹ ನಿನಗೆ ಧರ್ಮದ ಫಲ ಸಿಗುತ್ತದೆ ಎಂದರೆ- ಕತ್ತಲೆಯೂ ಕೂಡಾ ಸೂರ್ಯನಂತೆ ಬೆಳಗುವಂತದ್ದಾಗಬೇಕು.’  (ಕತ್ತಲೆ ಯಾವರೀತಿ ಸೂರ್ಯನಂತೆ ಬೆಳಗಲು ಸಾಧ್ಯವಿಲ್ಲವೋ, ಆ ರೀತಿ ನಿನ್ನ ಕ್ರಿಯೆಗಳೂ ಕೂಡಾ ಬೆಳಗುವುದಿಲ್ಲ.)

 

ವದನ್ ಪುನಃಪುನರಿದಂ ಧರ್ಮ್ಮತೋ ಹತ ಇತ್ಯಪಿ ।

ಖ್ಯಾಪಯಾಮಾಸ ಭಗವಾನ್ ಜನೇ ನಿಜಜನೇಷ್ಟದಃ ॥೨೮.೧೧೨॥

 

ಹೀಗೆ ತನ್ನ ಭಕ್ತರಿಗೆ ಅಭೀಷ್ಟವನ್ನು ಕೊಡುವ ಶ್ರೀಕೃಷ್ಣನು, ಮತ್ತೆ-ಮತ್ತೆ ‘ಧಾರ್ಮಿಕವಾಗಿಯೇ ದುರ್ಯೋಧನ ಕೊಲ್ಲಲ್ಪಟ್ಟಿದ್ದಾನೆ’ ಎಂದು ಹೇಳುತ್ತಾ, ಜನರಲ್ಲಿ ‘ಧರ್ಮದಿಂದಲೇ ದುರ್ಯೋಧನ ಸಾಯಿಸಲ್ಪಟ್ಟಿದ್ದಾನೆ’ ಎನ್ನುವುದನ್ನು ಸಾರಿದ.

 

ಪ್ರಖ್ಯಾಪಿತೇ ವಾಸುದೇವೇನ ಧರ್ಮ್ಮೇ ಸತಾಂ ಸರ್ವೇಷಾಂ ಹೃದ್ಯಮಾಸೀತ್ ಸಮಸ್ತಮ್ ।

ಹತಂ ಚ ಧರ್ಮ್ಮೇಣ ನೃಪಂ ವ್ಯಜಾನನ್ ಪಾಪೋSಯಮಿತ್ಯೇವ ಚ ನಿಶ್ಚಿತಾರ್ತ್ಥಾಃ ॥೨೮.೧೧೩॥

 

ಶ್ರೀಕೃಷ್ಣನಿಂದ ‘ಇದು ಧರ್ಮ’ ಎಂದು ಚೆನ್ನಾಗಿ ಹೇಳಲ್ಪಡಲು, ಎಲ್ಲಾ ಸಜ್ಜನರ ಹೃದಯಕ್ಕೆ ಅದು ಪ್ರಿಯವಾಯಿತು. ಅವರೆಲ್ಲರೂ ‘ಧರ್ಮದಿಂದಲೇ ದುರ್ಯೋಧನ ಕೊಲ್ಲಲ್ಪಟ್ಟಿದ್ದಾನೆ’ ಎನ್ನುವುದನ್ನು ತಿಳಿದರು. ಅವನು ಪಾಪಿಷ್ಠ ಎಂದು ನಿಶ್ಚಯವಾದ ಮೇಲೆ, ‘ಪಾಪಿಗಳನ್ನು ಯಾವರೀತಿ ಸಾಯಿಸಿದರೂ ಅದು ಧರ್ಮವೇ ಆಗುತ್ತದೆ’ ಎನ್ನುವುದನ್ನೂ ಕೂಡಾ ಅವರೆಲ್ಲರೂ ತಿಳಿದರು.

 

ಯುಧಿಷ್ಠಿರೋSಪಾಯದರ್ಶೀ ಸದೈವ ಸಸಂಶಯೋSಭೂತ್ ಸುಮನೋSಭಿವೃಷ್ಟ್ಯಾ ।

ಸ್ನೇಹಾದ್ ದ್ರೌಣಿಃ ಸಞ್ಜಯೋ ರೌಹಿಣೇಯೋ ದೌರ್ಯ್ಯೋಧನಾತ್ ಪಾಪಮಿತ್ಯೇವ ಚೋಚುಃ ॥೨೮.೧೧೪॥

 

ಯಾವಾಗಲೂ ಇದು ಕೆಟ್ಟದ್ದೇನೋ ಎನ್ನುವ (ಇದು ಪಾಪಸಾದನವೋ ಏನೋ ಎಂದು ಸಂಶಯಪಡುವ) ಯುಧಿಷ್ಠಿರನು ಹೂಮಳೆಯಾಗಿರುವುದರಿಂದ ಸಂಶಯಗ್ರಸ್ತನಾದನು. ಅಶ್ವತ್ಧಾಮ, ಸಂಜಯ ಮತ್ತು ಬಲರಾಮ, ಈ ಮೂವರು ದುರ್ಯೋಧನನ ಮೇಲಿನ ಪ್ರೀತಿಯಿಂದಾಗಿ ‘ಇದು ಪಾಪದ ಕೆಲಸ’ ಎಂದು ಹೇಳಿದರು.

 

ತತಃ ಕೃಷ್ಣಃ ಪಾಣ್ಡುಪಾಞ್ಚಾಲಕೈಸ್ತೈರ್ಭೃಶಂ ನದದ್ಬಿರ್ಹೃಷಿತೈಃ ಸಮೇತಃ ।

ಯಯೌ ವಿರಿಞ್ಚೇಶಸುರೇನ್ದ್ರಮುಖ್ಯೈಃ ಸಮ್ಪೂಜಿತಸ್ತೈಶ್ಚ ರಣಾಙ್ಗಣಾತ್ ಸ್ಮಯನ್ ॥೨೮.೧೧೫॥

 

ತದನಂತರ ಶ್ರೀಕೃಷ್ಣನು ಸಂತೋಷದಿಂದ, ಚೆನ್ನಾಗಿ ಘರ್ಜಿಸುವ ಪಾಂಡವರು ಮತ್ತು ಪಾಂಚಾಲದೇಶದವರಿಂದ ಕೂಡಿದವನಾಗಿ, ಬ್ರಹ್ಮ-ರುದ್ರ-ಇಂದ್ರಾದಿಗಳಿಂದ ಪೂಜೆಗೊಂಡು, ನಸುನಗುತ್ತಾ ರಣಭೂಮಿಯಿಂದ ಹೊರಗೆ ತೆರಳಿದನು.

No comments:

Post a Comment