ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, July 16, 2023

Mahabharata Tatparya Nirnaya Kannada 28-116-125

 

ತತಃ ಶ್ರುತ್ವಾ ಸಞ್ಜಯಾದ್ ದುಃಖತಪ್ತಂ ಸಮ್ಬೋಧಯಿಷ್ಯನ್ ಪಿತರಂ ಯುಯುತ್ಸುಃ ।

ಕೃಷ್ಣಸ್ಯ ರಾಜ್ಞಶ್ಚ ಮತೇನ ಯಾತೋ ಜಗಾಮ ಚಾನ್ವೇವ ಜನಾರ್ದ್ದನಶ್ಚ ॥೨೮.೧೧೬॥

 

ತದನಂತರ ಸಂಜಯನಿಂದ ಯುದ್ಧವಾರ್ತೆಯನ್ನೆಲ್ಲವನ್ನೂ ಕೇಳಿ ತಿಳಿದು, ಅತ್ಯಂತ ದುಃಖಿತನಾದ, ತನ್ನ ತಂದೆಯಾದ ಧೃತರಾಷ್ಟ್ರನನ್ನು ಸಂತೈಸಲು ಯುಯುತ್ಸುವು ಶ್ರೀಕೃಷ್ಣ ಹಾಗೂ ಧರ್ಮರಾಜನ ಅಣತಿಯನ್ನು ಪಡೆದ ತೆರಳಿದನು. ಶ್ರೀಕೃಷ್ಣ ಪರಮಾತ್ಮನೂ ಕೂಡಾ ಯುಯುತ್ಸುವನ್ನು ಅನುಸರಿಸಿ ನಂತರ ತೆರಳಿದನು.  

 

ಧರ್ಮ್ಮಯುಕ್ತೈಶ್ಚ ತತ್ತ್ವಾರ್ತ್ಥೈರ್ಲೋಕವೃತ್ತಾನುದರ್ಶಕೈಃ ।

ವಾಕ್ಯೈ ರಾಜಾನಮಾಶ್ವಾಸ್ಯ ಪ್ರಾಯಾತ್ ಪಾರ್ತ್ಥಾನ್ ಪುನರ್ಹರಿಃ ॥೨೮.೧೧೭॥

 

ಧರ್ಮದಿಂದ ಯುಕ್ತವಾಗಿರುವ ತತ್ವದ ಅರ್ಥವನ್ನು ಬಿಡಿಸುವ, ಲೋಕದ ಸ್ವಭಾವವನ್ನು ಪರಿಚಯಮಾಡಿಕೊಡುವ ಮಾತುಗಳಿಂದ, ಧೃತರಾಷ್ಟ್ರನನ್ನು ಸಮಾಧಾನಗೊಳಿಸಿದ ಶ್ರೀಕೃಷ್ಣಪರಮಾತ್ಮನು ಮತ್ತೆ ಪಾಂಡವರಿದ್ದಲ್ಲಿಗೆ ಹಿಂತಿರುಗಿದನು.

 

ಕಾಲಾನುಸಾರತೋ ದೈವಾಂಶ್ಚೋಪಸಂಹರ್ತ್ತುಮಚ್ಯುತಃ ।

ಯಯೌ ಸಪಾರ್ತ್ಥಶೈನೇಯಃ ಕುರೂಣಾಂ ಶಿಬಿರಂ ನಿಶಿ ॥೨೮.೧೧೮॥

 

ಕಾಲಕ್ಕೆ ಅನುಗುಣವಾಗಿ ಅವತರಿಸಿದ ದೇವಾಂಶಸಂಭೂತರಾದ ಎಲ್ಲರನ್ನೂ ಕೂಡಾ ನಾಶಮಾಡಲು, ಶ್ರೀಕೃಷ್ಣಪರಮಾತ್ಮನು ಪಾಂಡವರು ಮತ್ತು ಸಾತ್ಯಕಿಯೊಂದಿಗೆ ಕೂಡಿ ರಾತ್ರಿಕಾಲದಲ್ಲಿ ಕೌರವರ ಶಿಬಿರಕ್ಕೆ ತೆರಳಿದನು. (ಭೂಮಿಯಲ್ಲಿ ಅವತರಿಸಿ, ಪಾಂಡವರ ಪರ ನಿಂತಿದ್ದ ಅನೇಕ ದೇವತೆಗಳು ತಮ್ಮ ಅವತಾರವನ್ನು ಕೊನೆಗೊಳಿಸುವ ಕಾಲ ಕೂಡಿ ಬಂದಿರುವುದರ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಹೀಗೆ ಮಾಡಿದ. ಜೊತೆಗೆ ಯುದ್ಧವನ್ನು ಗೆದ್ದವರು ಶತ್ರು ಶಿಬಿರದಲ್ಲಿ  ಉಳಿದುಕೊಳ್ಳುವುದೂ ಆಕಾಲದ ಪದ್ಧತಿಯೂ ಆಗಿತ್ತು.)

 

ತದೈವ ಹಾರ್ದ್ದಿಕ್ಯಕೃಪಾನ್ವಿತೋSಯಾತ್ ಸುಯೋಧನಂ ದ್ರೌಣಿರಮುಂ ಶಯಾನಮ್ ।

ಪ್ರಭಗ್ನಸಕ್ಥಿಂ ಚ ಸೃಗಾಲಭೂತೈಃ ಸಮ್ಭಕ್ಷ್ಯಮಾಣಂ ದದೃಶೇ ಶ್ವಸನ್ತಮ್ ॥೨೮.೧೧೯॥

 

ಸ ದುಃಖಶೋಕಾಭಿಹತೋ ವಿನಿನ್ದ್ಯ ಪಾರ್ತ್ಥಾನ್ ಮಯಾ ಭೂಪ ಕಿಮತ್ರ ಕಾರ್ಯ್ಯಮ್ ।

ಇತ್ಯಾಹ ನಿಷ್ಪಾಣ್ಡವತಾಂ ಕುರುಷ್ವೇತ್ಯಮುಂ ವ್ಯಧಾತ್ ಪಾಂಸ್ವಭಿಷೇಕಿಣಂ ನೃಪಃ ॥೨೮.೧೨೦॥

 

ಅದೇ ಸಂಧರ್ಭದಲ್ಲಿ, ಕೃತವರ್ಮ ಹಾಗೂ ಕೃಪಾಚಾರ್ಯರಿಂದ ಕೂಡಿದ ಅಶ್ವತ್ಥಾಮನು, ತೊಡೆಮುರಿದು ರಣಭೂಮಿಯಲ್ಲಿ ಮಲಗಿರುವ, ನರಿ-ನಾಯಿಗಳಿಂದಲೂ, ಇತರ ಪ್ರಾಣಿಗಳಿಂದಲೂ ತಿನ್ನಲ್ಪಡುತ್ತಿರುವ ಶರೀರವುಳ್ಳ, ಗಟ್ಟಿಯಾಗಿ ನಿಟ್ಟುಸಿರು ಬಿಡುತ್ತಿರುವ ದುರ್ಯೋಧನನನ್ನು ಕುರಿತು ಬಂದನು.

ಅಲ್ಲಿ ದುರ್ಯೋಧನನ ಸ್ಥಿತಿಯನ್ನು ನೋಡಿ, ಸಂಕಟಗೊಂಡ ಅಶ್ವತ್ಥಾಮನು,  ಪಾಂಡವರನ್ನು ನಿಂದಿಸಿ, ‘ರಾಜನೇ, ನಾನೇನು ಮಾಡಬೇಕು’ ಎಂದು ಕೇಳಿದನು. ಆಗ ದುರ್ಯೋಧನನು ಪಾಂಡವರೆಲ್ಲರನ್ನೂ ನಾಶಮಾಡು ಎಂದು ಹೇಳಿ, ಅವನನ್ನು ಅಲ್ಲಿದ್ದ ಧೂಳಿನಿಂದ(ನೀರು ಇಲ್ಲದಿರುವುದರಿಂದ ಧೂಳಿನಿಂದ) ಅಭಿಷೇಕ ಮಾಡಿದನು.

 

ಉಚ್ಛಿದ್ಯ ಸನ್ತತಿಂ ಪಾಣ್ಡೋಃ ಕೃತ್ವಾ ಸ್ವಕ್ಷೇತ್ರಸನ್ತತಿಮ್ ।

ತಯಾ ಭೂರಕ್ಷಣಹೃದಾ ಸೋSಭಿಷಿಕ್ತಸ್ತಥೇತ್ಯಗಾತ್ ॥೨೮.೧೨೧॥

 

‘ಪಾಂಡವರ ಸಂತತಿಯನ್ನು ನಾಶಮಾಡಿ, ನನ್ನ ಹೆಂಡತಿಯಲ್ಲಿ ಸಂತಾನವನ್ನು ಹುಟ್ಟಿಸಿ, ಆ ಸಂತಾನದಿಂದ  ಭೂಮಿಯನ್ನು ರಕ್ಷಣೆ ಮಾಡಬೇಕು’ ಎಂದು ದುರ್ಯೋಧನನಿಂದ ಅಭಿಷಿಕ್ತನಾದಾಗ ಅಶ್ವತ್ಥಾಮ, ‘ಆಯಿತು’ ಎಂದು ಹೇಳಿ ಹೊರಟನು. (ಬ್ರಹ್ಮಚಾರಿಯಾದ ಅಶ್ವತ್ಥಾಮ ಸಂತಾನ ಹುಟ್ಟಿಸಲು ಒಪ್ಪಿಕೊಂಡ!)

 

ಸ ಕೃಷ್ಣಭೀಮಪಾರ್ತ್ಥಾನಾಂ ಭಯಾದೇವ ಪುನರ್ವನಮ್ ।

ಕೃಪಸಾತ್ವತಸಂಯುಕ್ತೋ ವಿವೇಶ ಗಹನಂ ರಥೀ ॥೨೮.೧೨೨॥

 

ಅಶ್ವತ್ಥಾಮನು ಶ್ರೀಕೃಷ್ಣ ಮತ್ತು ಭೀಮಾರ್ಜುನರ ಭಯದಿಂದಲೇ, ಕೃಪಾಚಾರ್ಯ ಹಾಗೂ ಕೃತವರ್ಮರಿಂದ ಕೂಡಿಕೊಂಡು, ರಥವನ್ನೇರಿ ದಟ್ಟವಾಗಿರುವ ಕಾಡನ್ನು ಪ್ರವೇಶಿಸಿದನು.

 

ತಸ್ಯಾ ಚಿನ್ತಯತೋ ದ್ರೋಣವಧಂ ದುರ್ಯ್ಯೋಧನಸ್ಯ ಚ ।

ನಾSಗಾನ್ನಿದ್ರಾ ನಿಶೀಥೇ ಚ ಧ್ವಾಕ್ಷಾನ್ ನ್ಯಗ್ರೋಧವಾಸಿನಃ ॥೨೮.೧೨೩॥

 

ಹತಾನ್ ಸುಬಹುಸಾಹಸ್ರಾನೇಕೇನಾತಿಬಲೇನ ತು ।

ಕೌಶಿಕೇನ ನಿರೀಕ್ಷ್ಯೈವ ಪ್ರಾಹ ತೌ ಕೃಪಸಾತ್ವತೌ ॥೨೮.೧೨೪॥

 

ನಿದರ್ಶನೇನ ಹ್ಯೇನೇನ ಪ್ರೇರಿತಃ ಪರಮಾತ್ಮನಾ ।

ಯಾಮಿ ಪಾಣ್ಡುಸುತಾನ್ ಹನ್ತುಮಿತ್ಯುಕ್ತ್ವಾSSರುರುಹೇ ರಥಮ್ ॥೨೮.೧೨೫॥

 

ದುರ್ಯೋಧನನ ಅಂತ್ಯ  ಹಾಗೂ ಅಪ್ಪನಾದ ದ್ರೋಣಾಚಾರ್ಯರ ಸಾವನ್ನು ಚಿಂತನೆ ಮಾಡುತ್ತಿರುವ ಅಶ್ವತ್ಥಾಮನಿಗೆ ಆ ರಾತ್ರಿ ನಿದ್ರೆಯೇ ಬರಲಿಲ್ಲ. ಅರ್ಧರಾತ್ರಿ ಕಾಲದಲ್ಲಿ  ಶಕ್ತಿಶಾಲಿಯಾದ ಗೂಬೆಯೊಂದು  ಗೋಳೀಮರದಲ್ಲಿ ವಾಸಮಾಡುತ್ತಿದ್ದ ಸಹಸ್ರ ಸಂಖ್ಯೆಯ ಕಾಗೆಗಳನ್ನು ಸಂಹಾರ ಮಾಡುವ ದೃಶ್ಯವನ್ನು ಕಂಡು ಸ್ಪೂರ್ತಿಗೊಂಡ ಅವನು, ಕೃಪಾ ಹಾಗೂ ಕೃತವರ್ಮನನ್ನು ಕುರಿತು- ‘ಪರಮಾತ್ಮನಿಂದ ಈ ದೃಷ್ಟಾಂತದ ಮುಖೇನ ಪ್ರೇರಿಸಲ್ಪಟ್ಟ ನಾನು ಪಾಂಡವರನ್ನು ಕೊಲ್ಲಲು ಹೋಗುತ್ತಿದ್ದೇನೆ’ ಎಂದು ಹೇಳಿ, ರಥವನ್ನೇರಿದನು.

No comments:

Post a Comment