ಮುಖ್ಯಂ ಧರ್ಮ್ಮಂ ಹಿ
ಭಗವಾನ್ ಬಲಾಯಾSಹ
ಜನಾಯ ಚ ।
ಧರ್ಮ್ಮೇಣೈವ ಹತೋ ರಾಜಾ
ಧಾರ್ತ್ತರಾಷ್ಟ್ರಃ ಸುಯೋಧನಃ ।
ಇತಿ ಯದ್ ವಕ್ಷ್ಯತಿ
ಪುನರ್ನ್ನಿಶ್ಚಯಾರ್ತ್ಥೇSರ್ಜ್ಜುನಾಯ ಚ ॥೨೮.೯೮॥
ಶ್ರೀಕೃಷ್ಣನು
ಬಲರಾಮನಿಗೆ ಮತ್ತು ಅಲ್ಲಿ ನೆರೆದ ಜನರಿಗೆ ಮುಖ್ಯವಾದ ಧರ್ಮವನ್ನೇ(ದುರ್ಯೋಧನ ಧರ್ಮದಿಂದಲೇ
ಕೊಲ್ಲಲ್ಪಟ್ಟಿದ್ದಾನೆ ಎನ್ನುವುದನ್ನೇ) ಹೇಳಿರುವನು.
ಧೃತರಾಷ್ಟನ ಮಗನಾದ
ಸುಯೋಧನನು ಧರ್ಮಮಾರ್ಗದಿಂದಲೇ ಕೊಲ್ಲಲ್ಪಟ್ಟಿದ್ದಾನೆ ಎಂದು ಅರ್ಜುನನಿಗೂ ಕೂಡಾ ಶ್ರೀಕೃಷ್ಣ ಮುಂದೆ(ಭವಿಷ್ಯದಲ್ಲಿ)
ಮತ್ತೆ ಹೇಳುತ್ತಾನೆ.
[ಇಲ್ಲಿ ಧರ್ಮರಾಜನ
ಮುಂದೆ ಮೋಹಕವಾಗಿ ಮಾತನಾಡಿದ ಶ್ರೀಕೃಷ್ಣ ಮುಂದೆ ಅರ್ಜುನನಿಗೆ ಹೇಳುವಾಗ ಪರಮಧರ್ಮವನ್ನು
ವಿವರಿಸುತ್ತಾನೆ. ಧಾರ್ಮಿಕರು ಯಾವ ರೀತಿ ಇರಬೇಕು, ಯಾರಿಗೆ ಏನು ಮಾಡಿದರೆ ತಪ್ಪಿಲ್ಲ, ಇತ್ಯಾದಿಗಳನ್ನು ಅಲ್ಲಿ
ಕೃಷ್ಣ ಸ್ಫುಟವಾಗಿ ವಿವರಿಸುತ್ತಾನೆ.]
ಪುನಃಪುನರ್ದ್ಧರ್ಮ್ಮತ
ಏಷ ಭೀಮೋ ಜಘಾನ ರಾಜಾನಮಿತಿ ಬ್ರುವನ್ತಮ್ ।
ಜಗಾದ ಕೃಷ್ಣಂ
ಸ್ಫುರಿತಾಧರೋಷ್ಠಃ ಕ್ರೋಧಾತ್ ಸುಪಾಪೋ
ಧೃತರಾಷ್ಟ್ರಸೂನುಃ ॥೨೮.೯೯॥
‘ಈ ಭೀಮಸೇನನು
ದುರ್ಯೋಧನನನ್ನು ಧರ್ಮಮಾರ್ಗದಿಂದಲೇ ಕೊಂದಿದ್ದಾನೆ’ ಎಂದು ಮತ್ತೆ-ಮತ್ತೆ ಹೇಳುವ ಶ್ರೀಕೃಷ್ಣನನ್ನು
ಕುರಿತು ಸಿಟ್ಟಿನಿಂದ, ಅದರುತ್ತಿರುವ ತುಟಿಯುಳ್ಳವನಾಗಿ, ಪಾಪಿಷ್ಠನಾದ (ತೊಡೆಮುರಿದು
ಬಿದ್ದಿರುವ)ದುರ್ಯೋಧನನು ಮಾತನಾಡಿದ-
ತ್ವಯೈವ ಪಾಪೇ ನಿಹಿತಾ
ಹಿ ಪಾರ್ತ್ಥಾಃ ಪಾಪಾಧಿಕಸ್ತ್ವಂ ಹಿ ಸದೈಕ ಏವ ।
ಇತ್ಯೂಚಿವಾಂಸಂ
ಪ್ರಜಗಾದ ಕೃಷ್ಣೋ ನ ತ್ವತ್ಸಮಃ ಪಾಪತಮಃ ಕದಾಚಿತ್ ॥೨೮.೧೦೦॥
‘ನಿನ್ನಿಂದಲೇ ಪಾಂಡವರು
ಪಾಪಕರ್ಮದಲ್ಲಿ ತೊಡಗಿದ್ದಾರೆ. ನೀನು ಎಲ್ಲರಿಗಿಂತ ಹೆಚ್ಚು ಪಾಪಿಷ್ಠ.’ ಈರೀತಿಯಾಗಿ
ಹೇಳುತ್ತಿರುವ ದುರ್ಯೋಧನನನ್ನು ಕುರಿತು ಶ್ರೀಕೃಷ್ಣನು- ‘ನಿನಗೆ ಸಮನಾದ ಪಾಪಿಷ್ಠನು ಎಲ್ಲಿಯೂ ಇಲ್ಲವೇ ಇಲ್ಲಾ’ ಎಂದು ಹೇಳಿದನು.
ಭೀಷ್ಮಾದಿಹತ್ಯಾSಪಿ ತವೈವ ಪಾಪಂ
ಯದನ್ವಯುಸ್ತ್ವಾಮತಿಪಾಪನಿಶ್ಚಯಮ್ ।
ಪಾಪಂ ಚ ಪಾಪಾನುಗತಂ ಚ
ಹತ್ವಾ ಕಥಞ್ಚನಾಪ್ಯಸ್ತಿ ನಚೈವ ಪಾಪಮ್ ॥೨೮.೧೦೧॥
ನ ಪಾಣ್ಡವೇಷ್ವಸ್ತಿ
ತತೋ ಹಿ ಕಿಞ್ಚಿತ್ ಪಾಪಂ ಪ್ರಯತ್ನಾಚ್ಚ ನಿಸರ್ಗ್ಗತೋSಪಿ ।
ಗುಣಾಧಿಕಾಸ್ತೇ
ಮದಪಾಶ್ರಯಾಚ್ಚ ಕೋ ನಾಮ ತೇಷ್ವಣ್ವಪಿ ಪಾಪಮಾಹ ॥೨೮.೧೦೨॥
ಮುಂದುವರಿದು
ಶ್ರೀಕೃಷ್ಣ ಹೇಳುತ್ತಾನೆ- ‘ಭೀಷ್ಮಾದಿಗಳ ಹತ್ಯೆಯೂ ಕೂಡಾ ನಿನಗೇ ಪಾಪಕರವು. ಯಾವ ಕಾರಣದಿಂದ ಅವರು
ಅತ್ಯಂತ ಪಾಪಿಷ್ಠನಾದ ನಿನ್ನನ್ನು ಅನುಸರಿಸಿದರೋ, ಅಂತವರನ್ನು (ಪಾಪಿಗಳನ್ನು ಅನುಸರಿಸುವವರನ್ನು) ಕೊಲ್ಲುವುದರಿಂದ
ಯಾವ ರೀತಿಯಲ್ಲಿಯೂ ಕೂಡಾ ಪಾಪ ಬರುವುದಿಲ್ಲ.
ಆ ಕಾರಣದಿಂದಲೂ
ಪಾಂಡವರಲ್ಲಿ ಕಿಂಚಿತ್ ಪಾಪವೂ ಇಲ್ಲ. ಪ್ರಯತ್ನದಿಂದಲೂ, ಸ್ವಭಾವದಿಂದಲೂ ಪಾಂಡವರು
ಗುಣೋತ್ತಮರಾಗಿದ್ದಾರೆ. ನನ್ನನ್ನು ಆಶ್ರಯ ಮಾಡಿದ್ದರಿಂದಾಗಿ ಅವರು ಇನ್ನಷ್ಟು ಗುಣಗಳಿಂದ ಶೋಭಿಸುತ್ತಿದ್ದಾರೆ.
ಅಂತಹ ಪಾಂಡವರಲ್ಲಿ ಯಾವ ವಿವೇಕಿ ಪಾಪವಿದೇ ಎಂದು ಹೇಳಿಯಾನು?
ನಿಸರ್ಗ್ಗತಃ
ಪಾಪತಮಸ್ತ್ವಮನ್ಯಾನ್ ಧರ್ಮ್ಮಸ್ಥಿತಾನ್ ಪಾಪಪಥೇ ನಿಧಾಯ ।
ಸ್ವಯಂ ಚ ಪಾಪೇ ನಿರತಃ
ಸದೈವ ಪಾಪಾತ್ ಸುಪಾಪಾಂ ಗತಿಮೇವ ಯಾಸಿ ॥೨೮.೧೦೩॥
ನೀನು ಸ್ವಭಾವದಿಂದಲೇ
ಅತ್ಯಂತ ಪಾಪಿಷ್ಠ. ಧರ್ಮದಲ್ಲಿ ತೊಡಗಿರುವ ಭೀಷ್ಮಾದಿಗಳನ್ನು ಪಾಪದ ಮಾರ್ಗದಲ್ಲಿಟ್ಟ ನೀನು, ಆ
ಎಲ್ಲರ ಪಾಪದಿಂದ ಅತ್ಯಂತ ಪಾಪಿಷ್ಠ ಗತಿಯನ್ನೇ ಹೊಂದುವೆ.’
ಇತಿ ಬ್ರುವನ್ತಂ
ಪುನರಾಹ ಕೃಷ್ಣಂ ದುರ್ಯ್ಯೋಧನಃ ಪಾಪಕೃತಾಂ ಪ್ರಧಾನಃ ।
ಸ್ವಂತೋತ್ತಮೋ ನಾಮ ಕ
ಏವ ಮತ್ತಃ ಕೋ ನಾಮ ದೋಷೋSಸ್ತಿ ಮಯಾ ಕೃತೋSತ್ರ ॥೨೮.೧೦೪॥
ಪಾಪ ಮಾಡುವವರಲ್ಲೇ
ಅಗ್ರಗಣ್ಯನಾಗಿರುವ ದುರ್ಯೋಧನನು ಈರೀತಿಯಾಗಿ ಹೇಳುವ ಕೃಷ್ಣನಿಗೆ ಹೇಳುತ್ತಾನೆ- ‘ನನಗಿಂತ ಯಾರು
ಉತ್ತಮನಿದ್ದಾನೆ?
ನನ್ನಿಂದ ಯಾವ ದೋಷವಾಗಿದೆ?
ಇಷ್ಟಂ ಚ
ಯಜ್ಞೈಶ್ಚರಿತಂ ಚ ಪೂರ್ತ್ತೈಃ ಪದಂ ರಿಪೂಣಾಂ ನಿಹಿತಂ ಹಿ ಮೂರ್ಧ್ನಿ ।
ಮೃತ್ಯುಶ್ಚ
ಸಙ್ಗ್ರಾಮಶಿರಸ್ಯವಾಪ್ತೋ ರಣೋನ್ಮುಖೇನೈವ ಮಯಾ ಕಿಮನ್ಯತ್ ॥೨೮.೧೦೫॥
ನಾನು ಯಾಗಗಳನ್ನು ಮಾಡಿದೆ.
ಕೆರೆ-ಬಾವಿ-ಅರವಟ್ಟಿಗೆಗಳನ್ನೂ ಮಾಡಿಸಿದೆ. ಶತ್ರುಗಳ ತಲೆಯ ಮೇಲೆ ನನ್ನ ಕಾಲನ್ನಿಟ್ಟೆ.
ರಣರಂಗದಲ್ಲಿ ಯುದ್ಧಮಾಡುತ್ತಾ ಸಾವನ್ನೂ ಹೊಂದಿದೆ. ಇದಲ್ಲದೇ ಇನ್ನೇನು ಬೇಕು?
ಇಷ್ಟಾ ಭೋಗಾ ಮಯಾ
ಭುಕ್ತಾಃ ಪ್ರಾಪ್ತಾ ಚ ಪರಮಾ ಗತಿಃ ।
ದುಃಖಿನೋ
ದುಃಖಮಾಪ್ಸ್ಯನ್ತಿ ಪಾರ್ತ್ಥಾಸ್ತೇ ಕೂಟಯೋಧಿನಃ ॥೨೮.೧೦೬॥
ಬೇಕೆನಿಸಿದ ಭೋಗಗಳು
ನನ್ನಿಂದ ಉಣ್ಣಲ್ಪಟ್ಟವು. ಉತ್ಕೃಷ್ಟವಾದ ಗತಿಯು ನನ್ನಿಂದ ಹೊಂದಲ್ಪಟ್ಟಿತು. ಮೋಸಮಾಡಿ
ಯುದ್ಧಮಾಡುವ ದುಃಖಿಗಳಾದ ಪಾಂಡವರು ದುಃಖವನ್ನೇ ಹೊಂದುತ್ತಾರೆ.
ಚನ್ದ್ರಸೂರ್ಯ್ಯನಿಭೈಃ
ಶೂರೈರ್ದ್ಧಾರ್ಮ್ಮಿಕೈಃ ಸದ್ಬಿರುಜ್ಝಿತಾ ।
ಕೇವಲಾ ರತ್ನಹೀನೇಯಂ
ಪಾಣ್ಡವೈರ್ಭುಜ್ಯತಾಂ ಮಹೀ ॥೨೮.೧೦೭॥
ಚಂದ್ರ-ಸೂರ್ಯರಿಗೆ
ಸದೃಶವಾಗಿರುವ, ಶೂರ ಧಾರ್ಮಿಕ ಸಜ್ಜನರಿಂದ ರಹಿತವಾದ, ಅಮೂಲ್ಯವಾದ ರತ್ನಗಳಿಲ್ಲದ, ಕೇವಲ (ಮಣ್ಣಾಗಿ ಉಳಿದ) ಈ ಭೂಮಿಯು ಪಾಂಡವರಿಂದ ಭೋಗಿಸಲ್ಪಡಲಿ.'
ಇತ್ಯುಕ್ತವತ್ಯೇವ ನೃಪೇ
ಸುರೇಶೈಃ ಪ್ರಸೂನವೃಷ್ಟಿರ್ವಿಹಿತಾ ಪಪಾತ ।
ತಾಮೇವ ಬುದ್ಧಿಂ
ಧೃತರಾಷ್ಟ್ರಸೂನೋಃ ಕೃತ್ವಾ ದೃಢಾಂ ಪಾತಯಿತುಂ ತಮೋSನ್ಧೇ ॥೨೮.೧೦೮॥
ಈರೀತಿಯಾಗಿ
ದುರ್ಯೋಧನನು ಹೇಳುತ್ತಿರಲು, ಅದೇರೀತಿಯಾದ ದೃಢನಿಶ್ಚಯವು ಅವನಿಗಾಗಿ, ಅವನನ್ನು ಅನ್ಧತಮಸ್ಸಿನಲ್ಲಿ
ಬೀಳಿಸಲೋಸುಗ, ದೇವತೆಗಳಿಂದ ಮಾಡಲ್ಪಟ್ಟ ಹೂಮಳೆಯು ದುರ್ಯೋಧನನ ಮೇಲೆ ಬಿದ್ದಿತು. (ಎಲ್ಲೋ ಸ್ವಲ್ಪ ಅಳುಕಿನಲ್ಲಿ ದುರ್ಯೋಧನ ಮಾತನಾಡುತ್ತಿದ್ದ. ಪುಷ್ಪವೃಷ್ಟಿಯಿಂದಾಗಿ 'ನಾನೇ ಸರಿ' ಎಂದು ಅವನು ದೃಢವಾಗಿ
ಮಾತನಾಡಲು, ಅದು ಅವನ ಪಾಪ ಸಾಧನಕ್ಕೆ ಕಾರಣವಾಗುವಂತಾಯಿತು.)
No comments:
Post a Comment