ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, July 9, 2023

Mahabharata Tatparya Nirnaya Kannada 28-50-56

 

ತದಾ ಜಲಾತ್ ಸಮುನ್ಮಜ್ಜ್ಯ ತ್ರಿಭಿರ್ದ್ದ್ರೌಣಿಪುರಸ್ಸರೈಃ ।

ಮನ್ತ್ರಯನ್ತಂ ಸ್ಮ ದದೃಶುಸ್ತಾನ್ ದೃಷ್ಟ್ವಾ ತೇ ಪ್ರದುದ್ರುವುಃ ॥೨೮.೫೦॥

 

ಆ ಸಮಯದಲ್ಲಿ ನೀರಿನಿಂದ ಮೇಲೆದ್ದು, ಆ ಮೂರು ಜನರೊಂದಿಗೆ (ಅಶ್ವತ್ಥಾಮ, ಕೃಪಾ ಮತ್ತು ಕೃತವರ್ಮರೊಂದಿಗೆ) ಮಂತ್ರಾಲೋಚನೆ ಮಾಡುತ್ತಿದ್ದ ದುರ್ಯೋಧನನನ್ನು ಪಾಂಡವರು ದೂರದಿಂದ ನೋಡಿದರು. ಪಾಂಡವರನ್ನು ಕಂಡ ಆ ಮೂರು ಜನ ಅಲ್ಲಿಂದ ಮತ್ತೆ ಓಡಿಹೋದರು.

 

ದುರ್ಯ್ಯೋಧನೋSವಿಶತ್ ತೋಯಂ ದೃಷ್ಟ್ವಾ ತಂ ಕೇಶವಾಜ್ಞಯಾ ।

ಯುಧಿಷ್ಠಿರಃ ಸುಪರುಷೈರ್ವಾಕ್ಯೈರೇನಮಥಾSಹ್ವಯತ್ ॥೨೮.೫೧॥

 

ಪಾಂಡವರನ್ನು ಕಂಡ ದುರ್ಯೋಧನನು ನೀರನ್ನು ಪ್ರವೇಶಿಸಿದನು. ಅವನನ್ನು ನೋಡಿದ ಧರ್ಮರಾಜನು, ಪರಮಾತ್ಮನ ಆಜ್ಞೆಯಂತೆ, ಅತ್ಯಂತ ಕಠೋರ ಮಾತುಗಳಿಂದ ಆಹ್ವಾನಮಾಡಿದನು.

 

ಅಮರ್ಷಿತೋSಸೌ ಧೃತರಾಷ್ಟ್ರಪುತ್ರಃ ಶ್ವಸಂಸ್ತದಾ ದಣ್ಡಹತೋ ಯಥಾSಹಿಃ ।

ಉವಾಚ ಶಾಠ್ಯಾತ್ ತಪಸೇ ವನಾಯ ಯಾಯಾಂ ಭವಾಞ್ಛಾಸತು ಸರ್ವಪೃಥ್ವೀಮ್ ॥೨೮.೫೨॥

 

ಆಗ ಸಿಟ್ಟುಗೊಂಡ ಧೃತರಾಷ್ಟ್ರಪುತ್ರ ದುರ್ಯೋಧನನು ಕೋಲಿನಿಂದ ಹೊಡೆಯಲ್ಪಟ್ಟ ಹಾವಿನಂತೆ ಬುಸುಗುಡುತ್ತಾ, ಮೊಂಡುತನದಿಂದ(ಕಪಟದಿಂದ) ‘ನಾನು ಕಾಡಿಗೆ ತಪಸ್ಸು ಮಾಡಲೆಂದು ಹೋಗುತ್ತಿದ್ದೇನೆ. ನೀನು ಎಲ್ಲಾ ಭೂಮಿಯನ್ನು ಆಳು’ ಎಂದನು.

 

ತಮಾಹ ಧರ್ಮ್ಮಜೋ ರಾಜಾ ಯಸ್ತ್ವಂ ಕೃಷ್ಣೇ ಸಮಾಗತೇ ।

ಸೂಚ್ಯಗ್ರವೇದ್ಧ್ಯಾಂ ಪೃಥಿವೀಂ ದಾತುಂ ನೈಚ್ಛಃ ಕಥಂ ಪುನಃ ॥೨೮.೫೩॥

 

ಆಗ ಅವನನ್ನು ಕುರಿತು ಧರ್ಮರಾಜ ‘ಯಾವ ನೀನು ಕೃಷ್ಣನೇ ಸಂಧಾನಕ್ಕೆಂದು ಬರಲು ಒಂದು ಸೂಜಿಯ ಮೊನೆಯಷ್ಟು ಭೂಮಿಯನ್ನು ಕೊಡಲು ಬಯಸಲಿಲ್ಲವೋ, ಹಾಗಿರುವಾಗ ಈಗೆ ಹೇಗೆ ಒಪ್ಪಿಕೊಳ್ಳುತ್ತಿರುವೆ’ ಎಂದು ಕೇಳಿದನು.

 

ಘಾತಯಿತ್ವಾ ಸರ್ವಪೃಥ್ವೀಂ ಭೀಷ್ಮದ್ರೋಣಮುಖಾನಪಿ ।

ದಾತುಮಿಚ್ಛಸಿ ಸರ್ವಾಂ ಚ ಪೃಥ್ವೀಂ ನಾದ್ಯ ವಯಂ ಪುನಃ ॥೨೮.೫೪॥

 

ಅಹತ್ವಾ ಪ್ರತಿಗೃಹ್ಣೀಮ ಏಹಿ ಯುದ್ಧೇ ಸ್ಥಿರೋ ಭವ ।

ನ ಕುರೂಣಾಂ ಕುಲೇ ಜಾತಸ್ತ್ವಂ ಯೋ ಭೀತೋ ಹ್ಯಪೋSವಿಶಃ ॥೨೮.೫೫॥

 

‘ಎಲ್ಲಾ ಭೂಮಿಯನ್ನೂ ಭೀಷ್ಮ-ದ್ರೋಣ ಮೊದಲಾದವರನ್ನು ಸಂಹಾರಮಾಡಿಸಿ ಈಗ ಕೊಡಬೇಕೆಂದು ಬಯಸುತ್ತಿರುವೆಯಷ್ಟೇ.  ಆದರೆ ನಾವು ಈಗ ನಿನ್ನನ್ನು ಕೊಲ್ಲದೇ ಅದನ್ನು ತೆಗೆದುಕೊಳ್ಳುವುದಿಲ್ಲ. ಬಾ, ಯುದ್ಧದಲ್ಲಿ ಗಟ್ಟಿಯಾಗಿ ನಿಲ್ಲು. ಯಾವ ನೀನು ಭಯಗೊಂಡು ನೀರನ್ನು ಪ್ರವೇಶಮಾಡಿರುವೆಯೋ, ಪ್ರಾಯಃ ಕುರುಗಳ ಕುಲದಲ್ಲಿ ನೀನು ಹುಟ್ಟಿದವನಲ್ಲ. ಇಲ್ಲದಿದ್ದರೆ ಹೀಗೆ ನಪುಂಸಕನಂತೆ ಅಡಗಿಕೊಳ್ಳುತ್ತಿರಲಿಲ್ಲ.’

 

ಇತ್ಯಾದಿ ರೂಕ್ಷವಚನಂ ಶ್ರುತ್ವಾ ದುರ್ಯ್ಯೋಧನೋ ರುಷಾ ।

ಜಲಸ್ತಮ್ಭಾತ್ ಸಮುತ್ತಸ್ಥೌ ಶ್ವಸನ್ನಾಶೀವಿಷೋ ಯಥಾ ॥೨೮.೫೬॥

 

ಇವೇ ಮೊದಲಾದ ಕಠಿಣವಾದ ಮಾತನ್ನು ಕೇಳಿಸಿಕೊಂಡ ದುರ್ಯೋಧನನು ಸಿಟ್ಟಿನಿಂದ ಬುಸುಗುಡುವ ಹಾವಿನಂತೆ  ಸರೋವರದಿಂದ ಮೇಲೆದ್ದು ಬಂದ.

No comments:

Post a Comment