ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, July 24, 2023

Mahabharata Tatparya Nirnaya Kannada 28-200-209

ವೇದೇಶ್ವರೇಣಾಪಿ ಯದೂತ್ತಮೇನ ಕೃಷ್ಣೇನ ಯುಕ್ತಾಸ್ತತ ಆಶು ಪಾರ್ತ್ಥಾಃ ।

ಯಯುಃ ಸಭಾರ್ಯ್ಯಾ ನಿಜರಾಜಧಾನೀಂ ಹತ್ವೈವ ಸನ್ತೋSನ್ತರರೀನ್ ಸ್ವರಾಜ್ಯಮ್ ॥೨೮.೨೦೧॥

 

ಹೀಗೆ ವೇದವ್ಯಾಸರಿಂದಲೂ, ಯಾದವರಲ್ಲಿ ಉತ್ತಮನಾದ ಶ್ರೀಕೃಷ್ಣನಿಂದಲೂ ಕೂಡಿಕೊಂಡ, ಸಜ್ಜನರಾದ ಪಾಂಡವರು, ಒಳಗಡೆಯ ಶತ್ರುಗಳನ್ನೂ ಕೂಡಾ ಕೊಂದು, ತಮ್ಮ ರಾಜಧಾನಿಗೆ ಪತ್ನಿಯರೊಂದಿಗೆ ತೆರಳಿದರು. (ಯುದ್ಧದಲ್ಲಿ ಪಾಂಡವರಿಗೆ ಇದು ‘ಭಗವದ್ ಪ್ರೀತ್ಯರ್ಥವಾದ  ಕ್ಷತ್ರಿಯ ಧರ್ಮ’ ಎನ್ನುವ ಭಾವನೆ ಇತ್ತೇ ವಿನಃ ಬೇರೆ ಭಾವನೆ ಇರಲಿಲ್ಲ. ಹೀಗಾಗಿ ‘ನಾವು ಬಲಜ್ಯೇಷ್ಠರು ಎನ್ನುವ ಅಹಂಕಾರ ಸೊಂಕದಂತೆ ಯುದ್ಧಮಾಡಿದ್ದ ಅವರು, ಶ್ರೀಕೃಷ್ಣ ಮತ್ತು ವೇದವ್ಯಾಸರ ಜೊತೆಗೂಡಿ ಹಸ್ತಿನಪುರಕ್ಕೆ ತೆರಳಿದರು).

 

ಯುಧಿಷ್ಠಿರಸ್ಯಾನು ವಿಚಿತ್ರವೀರ್ಯ್ಯಸುತಸ್ಯ ಪಾದಾವಭಿವನ್ದಮಾನಮ್ ।

ಆಕೃಷ್ಯ ಭೀಮಂ ಪರಮೇಶ್ವರೋSಯಮಯಾಕೃತಿಂ ಧಾತ್ ಪುರತೋ ನೃಪಸ್ಯ ॥೨೮.೨೦೨॥

 

ಶ್ರೀಕೃಷ್ಣನು, ಯುಧಿಷ್ಠಿರನ ನಂತರ ವಿಚಿತ್ರವೀರ್ಯನ ಮಗನಾದ ಧೃತರಾಷ್ಟ್ರನ ಚರಣಗಳನ್ನು ನಮಸ್ಕರಿಸಲು ಹೊರಡುತ್ತಿರುವ ಭೀಮಸೇನನನ್ನು ಸೆಳೆದು, ಧೃತರಾಷ್ಟ್ರನ ಎದುರು ಭೀಮನ ಉಕ್ಕಿನ ಆಕೃತಿಯನ್ನಿಟ್ಟನು.

 

ಭೀಮಾಕೃತಿಂ ತಾಂ ಸ ಸುಯೋಧನೇನ ಕಾರಾಪಿತಾಮಭ್ಯಸನೇ ಗದಾಯಾಃ ।

ಆಶ್ಲಿಷ್ಯ ಚೂರ್ಣ್ಣೀಕೃತವಾನಸೃಗ್ ವಮನ್ ಹಾ ತಾತ ಭೀಮೇತಿ ವದನ್ ಪಪಾತ ॥೨೮.೨೦೩॥

 

ಆ ಧೃತರಾಷ್ಟ್ರನು, ಸುಯೋಧನನಿಂದ ಗದೆಯ ಅಭ್ಯಾಸಕ್ಕಾಗಿ ಮಾಡಿಸಲ್ಪಟ್ಟ ಭೀಮನ ಲೋಹದ ಪ್ರತಿಮೆಯನ್ನು ಗಟ್ಟಿಯಾಗಿ ಆಲಂಗಿಸಿ, ಅದನ್ನು ಪುಡಿ-ಪುಡಿ ಮಾಡಿದನು. ನಂತರ ‘ಅಪ್ಪಾ, ಭೀಮಸೇನಾ... ಎಂದು ಅಳುತ್ತಾ, ರಕ್ತವನ್ನು ಕಾರುತ್ತಾ ಕೆಳಗಡೆ ಕುಸಿದನು.  

 

ತಮಾಹ ಕೃಷ್ಣೋ ನ ಹತೋSದ್ಯ ಭೀಮೋ ನಚ ತ್ವಯಾSನ್ಯೈರಪಿ ಶಕ್ಯತೇSಸೌ ।

ಹನ್ತುಂ ಸ್ವಬುದ್ಧಿಃ ಪ್ರಥಿತಾ ತ್ವಯಾSದ್ಯ ಪಾಪಾ ಹಿ ತೇ ಬುದ್ಧಿರದ್ಯಾಪಿ ರಾಜನ್ ॥೨೮.೨೦೪॥

 

ಕೃಷ್ಣನು ಹೀಗೆ ಅಳುತ್ತಿರುವ ಧೃತರಾಷ್ಟ್ರನನ್ನು ಕುರಿತು- ‘ಭೀಮಸೇನನು ಈಗ ಸಾಯಲಿಲ್ಲ. ನಿನ್ನಿಂದಾಗಲೀ, ಬೇರೆಯವರಿಂದಾಗಲೀ ಅವನನ್ನು  ಕೊಲ್ಲಲಾಗುವುದಿಲ್ಲ. ಇದರಿಂದ ಭೀಮಸೇನನನ್ನು ಕೊಲ್ಲಬೇಕೆಂದಿರುವ ನಿನ್ನ ಬುದ್ಧಿಯು ಜಗತ್ತಿಗೇ ತೋರಿಸಲ್ಪಟ್ಟಿತು. ಓ ರಾಜನೇ, ಈಗಲೂ ಕೂಡಾ ನಿನ್ನ ಬುದ್ಧಿಯು ಪಾಪಿಷ್ಠವಾಗಿದೆಯಲ್ಲವೇ? ಎಂದು ಕೇಳಿದನು.  

 

ಸ್ವಬುದ್ಧಿದೋಷಾದತಿಪಾಪಶೀಲಪುತ್ರಾಖ್ಯಪಾಪಾನಿ ವಿವರ್ದ್ಧಯಿತ್ವಾ ।

ನೀತೋ ವಶಂ ತೈಃ ಫಲಮದ್ಯ ಭುಞ್ಜನ್ ನ ಕ್ರೋಧಿತುಂ ಚಾರ್ಹಸಿ ಭೀಮಸೇನೇ ॥೨೮.೨೦೫॥

 

ನಿನ್ನ ಬುದ್ಧಿದೋಷದಿಂದ ಅತ್ಯಂತ ಪಾಪಶೀಲರಾಗಿರುವ ಪುತ್ರರೆಂಬ ಪಾಪಗಳನ್ನು ಬೆಳೆಸಿ, ಅವರಿಂದ ಅಧೀನತೆಯನ್ನು ಹೊಂದಿ, ಅದರ ಫಲವನ್ನು ಈಗ ತಿನ್ನುತ್ತಿರುವ ನೀನು, ಭೀಮಸೇನನಲ್ಲಿ ಮುನಿಯಬೇಡ.

 

ಇತ್ಯುಕ್ತೇ ಶಾನ್ತಬುದ್ಧ್ಯೈವ ರಾಜ್ಞಾSSಹೂತೋ ವೃಕೋದರಃ ।

ಅಭ್ಯವನ್ದತ ತತ್ಪಾದಾವನುಜಾದ್ಯಾಶ್ಚ ತಸ್ಯ ಯೇ ॥೨೮.೨೦೬॥

 

ಈರೀತಿಯಾಗಿ ಹೇಳಲ್ಪಡಲು, ಶಾಂತಗೊಂಡ ಮನಸ್ಸಿನವನಾದ ಧೃತರಾಷ್ಟ್ರನಿಂದ ಕರೆಯಲ್ಪಟ್ಟ ಭೀಮಸೇನನು, ಅವನ ಅಡಿಗಳನ್ನು ನಮಿಸಿದ. ಅವನ ತಮ್ಮಂದಿರು ಮತ್ತು ಉಳಿದವರೂ ಕೂಡಾ ಅದನ್ನೇ ಮಾಡಿದರು.

 

ವಜ್ರಾಚ್ಚ ದೃಢದೇಹತ್ವಾದವಿಕಾರೇ ವೃಕೋದರೇ ।

ನ ದೋಷೋ ವಿವೃತೋSಸ್ಯ ಸ್ಯಾದಿತಿ ಕೃಷ್ಣೇನ ವಞ್ಚಿತಃ ॥೨೮.೨೦೭॥

 

ವಜ್ರಕ್ಕಿಂತಲೂ ಕೂಡಾ ದೃಢವಾಗಿರುವ, ಭಂಗವಾಗದ ಶರೀರವನ್ನು ಭೀಮಸೇನ ಹೊಂದಿದ್ದರೂ ಕೂಡಾ, ಧೃತರಾಷ್ಟ್ರನ ಕೆಟ್ಟ ಮನಸ್ಸು ಪ್ರಪಂಚಕ್ಕೆ ತಿಳಿಯದೇ ಹೋದೀತು ಎಂದು ಕೃಷ್ಣನಿಂದ ಧೃತರಾಷ್ಟ್ರನು ಮೋಸಗೊಳಿಸಲ್ಪಟ್ಟನು.  

 

ಸರ್ವಾನಾಶ್ಲಿಷ್ಯ ಚ ಪ್ರೇಮ್ಣಾ ಯುಯೋಜ ನೃಪ ಆಶಿಷಃ ।

ಕುಲನಾಶಕರಃ ಪಾಪಃ ಶಾಪಯೋಗ್ಯಸ್ತವ ಹ್ಯಹಮ್ ॥೨೮.೨೦೮॥

 

ಇತ್ಯುಕ್ತ್ವೈವ ಪ್ರಣಮತೋ ಗಾನ್ಧಾರೀ ಸುಪದಾಙ್ಗುಲೀಃ ।

ದದರ್ಶ ಧರ್ಮ್ಮರಾಜಸ್ಯ ಪಟ್ಟಾನ್ತೇನ ಪ್ರಕೋಪಿತಾ ॥೨೮.೨೦೯॥

 

ಧೃತರಾಷ್ಟ್ರನು ಎಲ್ಲರನ್ನೂ ಪ್ರೀತಿಯಿಂದ ಅಪ್ಪಿ ಆಶೀರ್ವಾದವನ್ನು ಮಾಡಿದನು. ‘ಕುಲದ ನಾಶವನ್ನು ಮಾಡುವ ಪಾಪಿಯಾಗಿರುವ ನಾನಾದರೋ ನಿನ್ನ ಶಾಪಕ್ಕೆ ಯೋಗ್ಯನು ಎಂದು ಹೇಳಿಯೇ ನಮಸ್ಕರಿಸುವ ಧರ್ಮರಾಜನ ಶೋಭಾನವಾದ ಪಾದದ ಬೆರಳುಗಳನ್ನು ಬಹಳ ಕೋಪದಲ್ಲಿರುವ ಗಾಂಧಾರಿಯು, ಕಣ್ಣಿಗೆ ಕಟ್ಟಿರುವ ಬಟ್ಟೆಯ ಅಂಚಿನಿಂದ ಕಂಡಳು.

No comments:

Post a Comment