ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, July 23, 2023

Mahabharata Tatparya Nirnaya Kannada 28-167-177

ತಸ್ಮಾನ್ನಿವಾರಯನ್ ಯೋಗಂ ತಯೋರ್ಮ್ಮದ್ಧ್ಯೇSಭವತ್ ಕ್ಷಣಾತ್ ।

ನಿಸ್ಸೀಮಶಕ್ತಿಃ ಪರಮಃ ಕೃಷ್ಣಃ ಸತ್ಯವತೀಸುತಃ ॥೨೮.೧೬೭॥

 

ಅರ್ಜುನನ ಸಂಕಲ್ಪ ಏನೇ ಇದ್ದರೂ ಕೂಡಾ ಎರಡು ಬ್ರಹ್ಮಾಸ್ತ್ರಗಳು ಸೇರಿದರೆ ವಿನಾಶಕಾರಿಯಾಗುತ್ತವೆ. ಆ ಕಾರಣದಿಂದ ಆ ಎರಡು ಅಸ್ತ್ರಗಳ ಸೇರ್ಪಡೆಯನ್ನು  ತಡೆಯುವವರಾಗಿ ಅವೆರಡು ಅಸ್ತ್ರಗಳ ಮಧ್ಯದಲ್ಲಿ, ಎಣೆಯಿರದ ಶಕ್ತಿಯಿರುವ, ಉತ್ಕೃಷ್ಟನಾದ, ಸತ್ಯವತಿಯ ಮಗನಾದ ವೇದವ್ಯಾಸರು ಬಂದು ನಿಂತರು.

 

ಸಂಸ್ಥಾಪ್ಯಾಸ್ತ್ರದ್ವಯಂ ದೂರೇ ತಾವಾಹ ಪುರುಷೋತ್ತಮಃ ।

ಸನ್ತಿ ಹ್ಯಸ್ತ್ರವಿದಃ ಪೂರ್ವಂ ಪ್ರಾಯಶ್ಚೈತನ್ನ ತೈಃ ಕೃತಮ್ ॥೨೮.೧೬೮॥

 

ಲೋಕೋಪದ್ರವಕೃತ್ ಕರ್ಮ್ಮ ಸನ್ತಃ ಕುರ್ಯ್ಯುಃ ಕಥಂ ಕ್ವಚಿತ್ ।

ಇತ್ಯುಕ್ತೇ ಫಲ್ಗುನಃ ಪ್ರಾಹ ಮಯಾ ಮುಕ್ತಂ ಮಹಾಪದಿ ॥೨೮.೧೬೯॥

 

ಶಾನ್ತ್ಯರ್ತ್ಥಮೇವ ಚ ವಿಭೋ ಕ್ಷನ್ತವ್ಯಂ ಭವತಾ ತತಃ ।

ದ್ರೌಣಿರಪ್ಯೇವಮೇವಾSಹ ತೌ ವೇದಪತಿರಬ್ರವೀತ್  ॥೨೮.೧೭೦॥

 

ನಿವರ್ತ್ಯತಾಮಸ್ತ್ರಮಿತಿ ಶಕ್ರಸೂನುಸ್ತಥಾSಕರೋತ್ ।

ನಿವರ್ತ್ತನಾಪ್ರಭುಂ ದ್ರೌಣಿಂ ವಾಸುದೇವೋSಭ್ಯಭಾಷತ ॥೨೮.೧೭೧॥

 

ವೇದವ್ಯಾಸರು ಎರಡೂ ಅಸ್ತ್ರಗಳನ್ನು ದೂರದಲ್ಲಿ ನಿಲ್ಲಿಸಿ,(ಸೇರ್ಪಡೆಯಾಗದಂತೆ ಮಾಡಿ) ಅಶ್ವತ್ಥಾಮ ಹಾಗೂ ಅರ್ಜುನರನ್ನು ಕುರಿತು- ‘ಅಸ್ತ್ರವನ್ನು ಬಲ್ಲವರು ಹಿಂದೆಯೂ ಇದ್ದರು. ಅವರಿಂದ ಈರೀತಿಯಾಗಿ ಮಾಡಲ್ಪಡಲಿಲ್ಲ. ಲೋಕಕ್ಕೆ ಉಪದ್ರವ ಉಂಟುಮಾಡುವ ಕೆಲಸವನ್ನು ಸಜ್ಜನರು ಹೇಗೆ ತಾನೇ ಮಾಡಿಯಾರು’ ಎಂದು ಪ್ರಶ್ನಿಸಿದರು. ವೇದವ್ಯಾಸರು ಈರೀತಿಯಾಗಿ ಹೇಳಿದಾಗ ಅರ್ಜುನ- ‘ಮಹಾ ಆಪತ್ತಿನಲ್ಲಿ ಈ ಅಸ್ತ್ರವು ನನ್ನಿಂದ ಬಿಡಲ್ಪಟ್ಟಿತು.  ಸರ್ವಸಮರ್ಥರಾದ ವೇದವ್ಯಾಸರೇ, ಆ ಅಸ್ತ್ರ ಶಾಂತಿ ಆಗಲೀ ಎನ್ನುವುದೇ ನನ್ನ ಸಂಕಲ್ಪ’ ಎಂದನು. ಅಶ್ವತ್ಥಾಮಾಚಾರ್ಯರೂ ಕೂಡಾ ಹಾಗೆಯೇ ಹೇಳಿದರು. ಆಗ ವೇದವ್ಯಾಸರು ಅವರಿಬ್ಬರನ್ನೂ ಕುರಿತು- ‘ಬ್ರಹ್ಮಾಸ್ತ್ರವು ಉಪಸಂಹರಿಸಲ್ಪಡಲಿ’ ಎಂದರು. ವೇದವ್ಯಾಸರ ಮಾತಿನಂತೆ ಅರ್ಜುನನು ಹಾಗೇ ಮಾಡಿದ. ಆದರೆ ಅಶ್ವತ್ಥಾಮನಿಗೆ ಬ್ರಹ್ಮಾಸ್ತ್ರವನ್ನು ಉಪಸಂಹಾರ ಮಾಡಲಾಗಲಿಲ್ಲ. ಆಗ ಶ್ರೀಕೃಷ್ಣ ಪರಮಾತ್ಮನು ಮಾತನಾಡಿದನು-

 

ಕ್ಷತ್ರತೇಜಾ ಬ್ರಹ್ಮಚಾರಿ ಕೌಮಾರಾದಪಿ ಪಾಣ್ಡವಃ ।

ನಿವರ್ತ್ತನೇ ತತಃ ಶಕ್ತೋ ನಾಯಂ ದ್ರೋಣಾತ್ಮಜೋSಪಿ ಸನ್  ॥೨೮.೧೭೨॥                                                                                                                                                 

 

ಅಬ್ರಹ್ಮಚರ್ಯ್ಯಾದಿತ್ಯುಕ್ತೇ ವ್ಯಾಸೋ ದ್ರೌಣಿಮಭಾಷತ ।

ನಿವರ್ತ್ತನಾಸಮರ್ತ್ಥಸ್ತ್ವಂ ದೇಹಿ ನೈಸರ್ಗ್ಗಿಕಂ ಮಣಿಮ್  ॥೨೮.೧೭೩॥

 

‘ಯಾವ ಕಾರಣದಿಂದ ಕ್ಷತ್ರಿಯ ತೇಜಸ್ಸನ್ನು ಹೊಂದಿರುವ ಅರ್ಜುನನು ಹದಿನೈದನೇ ವಯಸ್ಸಿನಿಂದಲೂ ಕೂಡಾ ಬ್ರಹ್ಮಚರ್ಯವ್ರತದಲ್ಲಿ ಆಸಕ್ತನಾಗಿರುವನೋ, ಆಕಾರಣದಿಂದಲೇ ಅಸ್ತ್ರವನ್ನು ಉಪಸಂಹಾರ ಮಾಡುವಲ್ಲಿ ಸಮರ್ಥನಾದನು. ಆದರೆ ಈ ಅಶ್ವತ್ಥಾಮ ದ್ರೋಣಾಚಾರ್ಯರ ಮಗನಾಗಿಯೂ ಕೂಡಾ ಬ್ರಹ್ಮಚರ್ಯ ಇಲ್ಲದೇ ಇರುವುದರಿಂದ ಅಸ್ತ್ರವನ್ನು ಉಪಸಂಹಾರ ಮಾಡಲಾಗಲಿಲ್ಲ.’ ಶ್ರೀಕೃಷ್ಣನು ಹೀಗೆ ಹೇಳಲು, ವೇದವ್ಯಾಸರು ಅಶ್ವತ್ಥಾಮನನ್ನು ಕುರಿತು- ‘ಅಸ್ತ್ರ ಉಪಸಂಹಾರದಲ್ಲಿ ಅಸಮರ್ಥನಾಗಿರುವ ನೀನು ನೈಸರ್ಗಿಕವಾಗಿ ನಿನ್ನಲ್ಲಿರುವ ಮಣಿಯನ್ನು ಕೊಡು’ ಎಂದರು.

[ದುರ್ಯೋಧನನ ಪತ್ನಿಯಲ್ಲಿ ಮಗುವನ್ನು ಹುಟ್ಟಿಸಿ, ಆ ಮಗು ಮುಂದೆ ಭೂಮಿಯನ್ನು ಆಳುವಂತೆ ಮಾಡುತ್ತೇನೆ ಎಂದು ದುರ್ಯೋಧನನಿಗೆ ಮಾತು ಕೊಟ್ಟಿದ್ದ ಅಶ್ವತ್ಥಾಮ, ತನ್ನ ಬ್ರಹ್ಮಚರ್ಯವ್ರತವನ್ನು ಕಳೆದುಕೊಂಡಿದ್ದ. ]

 

ಜಿತಃ ಪ್ರಾಗೇವ ಭೀಮೇನ ಭೀಮಾಯೈವ ಮಹಾಪ್ರಭಮ್ ।

ಅಪಿ ಕೇವಲಯಾ ವಾಚಾ ಪಾರ್ತ್ಥೇಭ್ಯೋSಸ್ತ್ರಂ ನಿವರ್ತ್ತಯ ॥೨೮.೧೭೪॥

 

ಇತ್ಯುಕ್ತೋ ಮೂರ್ದ್ಧಜಂ ರತ್ನಂ ಜರಾಮರಣನಾಶನಮ್ ।

ಕ್ಷುತ್ತೃಟ್-ಶ್ರಮಾಪಹಂ ದಿವ್ಯಗನ್ಧಂ ಧ್ವಾನ್ತಹರಂ ಶುಭಮ್ ॥೨೮.೧೭೫॥

 

ಉತ್ಕೃತ್ಯ ಭೀಮಾಯ ದದೌ ಮುಕ್ತಾಃ ಪಞ್ಚೈವ ಪಾಣ್ಡವಾಃ ।

ಅಸ್ತ್ರಾದಿತಿ ತತೋ ವೇದಭರ್ತ್ತಾ ವಾಸವಿಮಬ್ರವೀತ್ ॥೨೮.೧೭೬॥

 

ತಾತ ಮುಕ್ತಂ ದ್ರೌಣಿನಾSಪಿ ತ್ವಮೇವಾಸ್ತ್ರಂ ನಿವರ್ತ್ತಯ ।

ಇತ್ಯುಕ್ತಸ್ತಂ ಪ್ರಣಮ್ಯಾSಶು ಸಞ್ಜಹಾರಾರ್ಜ್ಜುನೋSಪಿ ತತ್ ॥೨೮.೧೭೭॥

 

‘ಬ್ರಹ್ಮಾಸ್ತ್ರ ಪ್ರಯೋಗಕ್ಕೂ ಮೊದಲೇ ಭೀಮಸೇನನಿಂದ ಪರಾಜಿತನಾದ ನೀನು, ಭೀಮಸೇನನಿಗಾಗಿಯೇ ನಿನ್ನ ತಲೆಯಲ್ಲಿರುವ, ಹೊಳೆಯುತ್ತಿರುವ,  ಸಹಜವಾದ ಮಣಿಯನ್ನು ಕೊಡು ಮತ್ತು ಕೇವಲ ಮಾತಿನಿಂದಲೇ ಪಾಂಡವರಿಂದ ಅಸ್ತ್ರವನ್ನು ಉಪಸಂಹರಿಸು’. ಈರೀತಿಯಾಗಿ ವೇದವ್ಯಾಸರಿಂದ ಹೇಳಲ್ಪಟ್ಟ ಅಶ್ವತ್ಥಾಮನು, ಮುದಿತನ-ಮರಣವನ್ನು ನಾಶಪಡಿಸಬಲ್ಲ, ಹಸಿವು, ನೀರಡಿಕೆ, ದಣಿವು, ಇವುಗಳೆಲ್ಲವನ್ನು ಪರಿಹರಿಸತಕ್ಕ, ಒಳ್ಳೆಯ ಪರಿಮಳವನ್ನು ಬೀರುವ, ಅಂಧಕಾರವನ್ನು ನಾಶಮಾಡುವ, ಮಂಗಳಪ್ರದವಾದ, ತನ್ನ ತಲೆಯಲ್ಲಿರುವ ರತ್ನವನ್ನು ಕಿತ್ತು ಭೀಮಸೇನನಿಗೆ ಕೊಟ್ಟು, ಐದು ಜನ ಪಾಂಡವರು ಮಾತ್ರ ಅಸ್ತ್ರದಿಂದ ಬಿಡಲ್ಪಟ್ಟಿದ್ದಾರೆ ಎಂದು ಹೇಳಿದನು. ತದನಂತರ ವೇದವ್ಯಾಸರು ಅರ್ಜುನನನ್ನು ಕುರಿತು- ‘ಎಲೋ ಅರ್ಜುನನೇ, ಅಶ್ವತ್ಥಾಮ ಬಿಟ್ಟಿರುವ ಅಸ್ತ್ರವನ್ನು ನೀನೇ ಉಪಸಂಹರಿಸು’  ಎಂದು ಹೇಳಿದರು. ಹೀಗೆ ಹೇಳಲ್ಪಟ್ಟ ಅರ್ಜುನನು ವೇದವ್ಯಾಸರನ್ನು ನಮಸ್ಕರಿಸಿ, ಅಸ್ತ್ರವನ್ನು  ಉಪಸಂಹಾರ ಮಾಡಿದನು.

No comments:

Post a Comment