ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, July 30, 2023

Mahabharata Tatparya Nirnaya Kannada 29-35-38

[ಸ್ತ್ರೀಧರ್ಮದ ಕುರಿತು ಹೇಳುತ್ತಾರೆ-]

 

ಜ್ಞೇಯಂ ಸರ್ವತ್ರಿವರ್ಣ್ಣಸ್ಥಸ್ತ್ರೀಭಿರ್ವೇದಾನ್ ವಿನಾSಖಿಲಮ್ ।

ಸ್ವೀಯಪುನ್ನಿಯತಿಃ ಸ್ತ್ರೀಣಾಂ ಸ್ವದಾರನಿಯತಿರ್ನ್ನೃಣಾಮ್ ॥ ೨೯.೩೫ ॥

 

ಧರ್ಮ್ಮೋ ಗುಣೋತ್ತಮಾನಾಂ ತು ಸ್ಮೃತ್ಯೈವಾನ್ಧಂ ತಮೋ ವ್ರಜೇತ್ ।

ಗುಣಸರ್ವಸ್ವಹಾನಿಃ ಸ್ಯಾದುತ್ತರೋತ್ತರತೋSತ್ರ ಚ ॥ ೨೯.೩೬ ॥

 

ಮೂರೂ ವರ್ಣದ ಸ್ತ್ರೀಯರು ವೇದವನ್ನು ಬಿಟ್ಟು, ಇತರ ಎಲ್ಲವನ್ನೂ ತಿಳಿಯಬೇಕಾಗಿರುವುದು ಅವರ ಕರ್ತವ್ಯ. ಈ ರೀತಿ ತಿಳಿಯಬೇಕಾದರೆ ಅವರು ಗಂಡನಿಗೆ ಮೋಸಮಾಡದೇ ನಡೆಯಬೇಕು. ಗಂಡಸರೂ ಕೂಡಾ ತಮ್ಮ ಪತ್ನಿಗೆ ಮೋಸಮಾಡದಂತೆ ನಡೆಯಬೇಕು. ಇದು ಧರ್ಮ.  ತಮ್ಮ ಗುಣದಿಂದ ಉತ್ತಮರಾಗಿರುವ ಗಂಡಂದಿರನ್ನು ಹೆಂಡತಿಯರು ಗೌರವಿಸಲೇಬೇಕು. ಯಾರು ಗುಣದಿಂದ ಉತ್ತಮರಿರುತ್ತಾರೆ, ಅಂತಹ ಸ್ತ್ರೀಯರ ಕುರಿತು ಕೆಟ್ಟ ಆಲೋಚನೆ ಸುಳಿದರೂ ಕೂಡಾ ನರಕವಾಗುತ್ತದೆ. ಅದನ್ನೇ ಸ್ಮರಣೆ ಮಾಡಿಕೊಂಡಿದ್ದರೆ ಅನ್ಧಂತಮಸ್ಸಿಗೆ ಹೋಗಬೇಕಾಗುತ್ತದೆ. ಹೀಗಾಗಿ ಗುಣೋತ್ತಮರಾದ ಹೆಣ್ಣುಮಕ್ಕಳ ಬಗ್ಗೆ ಕೆಟ್ಟ ಯೋಚನೆ ಮಾಡುವುದೂ ತಪ್ಪು.  ನಮಗಿಂತ ಹಿರಿಯರು, ನಮ್ಮ ಗುರುಸ್ಥಾನದಲ್ಲಿರುವ ಹೆಣ್ಣುಮಕ್ಕಳು, ಇವರ ಬಗ್ಗೆ ಕೆಟ್ಟ ಚಿಂತನೆ ಮಾಡಿದರೆ ನಮ್ಮ ಗುಣ ನಾಶವಾಗುತ್ತದೆ.

 

ಅಧೋSಧೋSಧಿಕದೋಷಃ ಸ್ಯಾತ್ ಸ್ತ್ರೀಣಾಮನ್ಯತ್ರ ಮದ್ಧ್ಯತಃ ।

ವೇದಾ ಅಪ್ಯುತ್ತಮಸ್ತ್ರೀಭಿಃ ಕೃಷ್ಣಾದ್ಯಾಭಿರಿವಾಖಿಲಾಃ ॥ ೨೯.೩೭ ॥

 

ದೇವ್ಯೋ ಮುನಿಸ್ತ್ರಿಯಶ್ಚೈವ ನರಾದಿಕುಲಜಾ ಅಪಿ ।

ಉತ್ತಮಾ ಇತಿ ವಿಜ್ಞೇಯಾಸ್ತಚ್ಛೂದ್ರೈರಪ್ಯವೈದಿಕಮ್ ।

ಜ್ಞೇಯಮನ್ಯೈರ್ಹರೇರ್ನ್ನಾಮ ನಿಜಕರ್ತ್ತವ್ಯಮೇವ ಚ ॥ ೨೯.೩೮ ॥

 

ಗುಣೋತ್ತಮನನ್ನು ತಿರಸ್ಕರಿಸಿ, ತನ್ನ ಗುಣಕ್ಕಿಂತ ಕಡಿಮೆಯಾದವನನ್ನು(ಕಾಮಕ್ಕಾಗಿ) ಆಶ್ರಯಿಸುವ ಸ್ತ್ರೀಯರಿಗೆ  ಅಧಿಕದೋಷ.

ದ್ರೌಪದಿಯಂತೆ ಎತ್ತರದಲ್ಲಿರುವ ಅತ್ಯುತ್ತಮ ಸ್ತ್ರೀಯರಿಂದ ವೇದಗಳೂ ತಿಳಿಯಲ್ಪಡಬೇಕು. ದೇವಿಯರು (ಉದಾಹರಣೆಗೆ ಶಚಿ, ಊರ್ವಶಿ), ಮುನಿಸ್ತ್ರೀಯರು(ಉದಾಹರಣೆಗೆ ಅರುಂಧತಿ ಮೊದಲಾದವರು), ಮನುಷ್ಯಕುಲದಲ್ಲಿ ಹುಟ್ಟಿದರೂ ಕೂಡಾ ಉತ್ತಮರೆಂದೇ ತಿಳಿಯಬೇಕು. ಶೂದ್ರರಿಂದಲೂ ಕೂಡಾ ಮಹಾಭಾರತಾದಿಗಳು ಅಭ್ಯಾಸನೀಯವೇ ಆಗಿವೆ. ಅನ್ಯರಿಗೆ ಪರಮಾತ್ಮನ ನಾಮಸ್ಮರಣೆ ಮತ್ತು ತಾವು ಮಾಡಬೇಕಾದ ಕರ್ತವ್ಯಕರ್ಮ ಧರ್ಮವು.

No comments:

Post a Comment