ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, July 18, 2023

Mahabharata Tatparya Nirnaya Kannada 28-149-156

 

ಸ ಚೇದಿಪಾಞ್ಚಾಲಕರೂಶಕಾಶೀನನ್ಯಾಂಶ್ಚ ಸರ್ವಾನ್ ವಿನಿಹತ್ಯ ವೀರಃ ।

ಶಿಶೂನ್ ಸ್ತ್ರಿಯಶ್ಚೈವ ನಿಹನ್ತುಮುಗ್ರಃ ಪ್ರಾಜ್ವಾಲಯತ್ ತಚ್ಛಿಬಿರಂ ಸಮನ್ತಾತ್ ॥೨೮.೧೪೯॥

 

ಕ್ರೂರಕರ್ಮರಥನಾಗಿರುವ ಅಶ್ವತ್ಥಾಮನು ಚೇದಿ, ಪಾಂಚಾಲ, ಕರೂಶ, ಕಾಶಿ, ಹೀಗೆ ಈ ಎಲ್ಲಾ ದೇಶದ  ಸಮಸ್ತ ವೀರರನ್ನು ಕೊಂದು, ಪುಟ್ಟ ಮಕ್ಕಳನ್ನೂ, ಸ್ತ್ರೀಯರನ್ನೂ ಕೊಲ್ಲಲೆಂದು ಆ ಪಾಂಡವರ ಶಿಬಿರದ ಸುತ್ತಲೂ ಬೆಂಕಿ ಇಟ್ಟನು.

 

ಜಿಜೀವಿಷೂಂಸ್ತತ್ರ ಪಲಾಯಮಾನಾನ್ ದ್ವಾರಿ ಸ್ಥಿತೋ ಗೌತಮಃ ಸಾತ್ವತಶ್ಚ ।

ನಿಜಘ್ನತುಃ ಸರ್ವಶಃ ಪಾರ್ಷತಸ್ಯ ಸೂತಸ್ತ್ವೇಕಃ ಶೇಷಿತೋ ದೈವಯೋಗಾತ್ ॥೨೮.೧೫೦॥

 

ಖಡ್ಗೇನ ಪ್ರಹೃತಂ ದೃಷ್ಟ್ವಾ ಹಾರ್ದ್ದಿಕ್ಯೇನ ಪಪಾತ ಹ ।

ಭೂಮೌ ಪ್ರಾಗೇವ ಸಂಸ್ಪರ್ಶಾನ್ನ ಜ್ಞಾತಸ್ತಮಸಾSಮುನಾ ॥೨೮.೧೫೧॥

 

ಸಂಹರಿಸಲ್ಪಡುತ್ತಿರುವ ವೀರರ ಮಧ್ಯದಲ್ಲಿ, ಬದುಕಲು ಬಯಸಿ ಓಡುತ್ತಿರುವ ಎಲ್ಲರನ್ನೂ ಶಿಬಿರ ದ್ವಾರದಲ್ಲಿ ನಿಂತಿದ್ದ  ಕೃಪಾಚಾರ್ಯರು ಮತ್ತು ಕೃತವರ್ಮ ಸಂಹರಿಸಿದರು. ದೈವಸಂಕಲ್ಪದಿಂದ ಕೇವಲ ಧೃಷ್ಟದ್ಯುಮ್ನನ ಸಾರಥಿ ಒಬ್ಬನೇ ಬದುಕುಳಿದನು. ಅವನು ಕೃತವರ್ಮ ಖಡ್ಗದಿಂದ ಹೊಡೆಯುವುದನ್ನು ಕಂಡು, ಕತ್ತಿ ತನಗೆ ತಾಗುವ  ಮೊದಲೇ ಭೂಮಿಯಲ್ಲಿ ಬಿದ್ದ. ಕತ್ತಲಿದ್ದುದರಿಂದ ಅದು ಕೃತವರ್ಮನಿಂದ ತಿಳಿಯಲ್ಪಡಲಿಲ್ಲ.

 

ಅನ್ಯಾಸಕ್ತೇ ಸಮುತ್ಥಾಯ ಪ್ರಾದ್ರವದ್ ಯತ್ರ ಪಾರ್ಷತೀ ।

ತಸ್ಯಾ ಅಕಥಯತ್ ಸರ್ವಂ ಸಾ ಭೀಮಾಯಾSಹ ದುಃಖಿತಾ ।

ಪ್ರಾದ್ರವದ್ ರಥಮಾರುಹ್ಯ ಸ ಧನ್ವೀ ಗೌತಮೀಸುತಮ್ ॥೨೮.೧೫೨॥

 

ಕೃತವರ್ಮನು ಇತರರನ್ನು ಸಂಹರಿಸುತ್ತಿರುವಾಗ ಮೇಲೆದ್ದ ಧೃಷ್ಟದ್ಯುಮ್ನನ ಸಾರಥಿಯು, ಎಲ್ಲಿ ದ್ರೌಪದಿ ಇದ್ದಳೋ ಅಲ್ಲಿಗೆ ಓಡಿಹೋದನು ಮತ್ತು ಅವಳಿಗೆ ಎಲ್ಲಾ ವೃತ್ತಾಂತವನ್ನು ಹೇಳಿದನು. ಅವಳು ದುಃಖಿತಳಾಗಿ ಭೀಮಸೇನನಲ್ಲಿಗೆ ಬಂದು ವಿಷಯವನ್ನು ತಿಳಿಸಿದಳು. ಭೀಮಸೇನನಾದರೋ, ಬಿಲ್ಲನ್ನು ಹಿಡಿದು, ರಥವನ್ನೇರಿ, ಅಶ್ವತ್ಥಾಮನಿದ್ದಲ್ಲಿಗೆ ಧಾವಿಸಿದನು.

 

ತದನ್ತರೇ ದ್ರೌಣಿರಪಿ ಪ್ರಯಾತಃ ಕೃಷ್ಣಾಸುತಾನಾಂ ಮುದಿತಃ ಶಿರಾಂಸಿ ।

ಆದಾಯ ಹಾರ್ದ್ದಿಕ್ಯಕೃಪಾನುಯಾತೋ ದುರ್ಯ್ಯೋಧನಂ ಸನ್ನಿಕೃಷ್ಟಪ್ರಯಾಣಮ್ ॥೨೮.೧೫೩॥

 

ಈ ಸಮಯದಲ್ಲಿ ಸಂತುಷ್ಟಗೊಂಡ, ಕೃಪ ಹಾಗೂ  ಕೃತವರ್ಮರಿಂದ ಅನುಸರಿಸಲ್ಪಟ್ಟವನಾದ ಅಶ್ವತ್ಥಾಮ, ದ್ರೌಪದಿ ಮಕ್ಕಳ ರುಂಡವನ್ನು ಹಿಡಿದುಕೊಂಡು, ಇನ್ನೇನು ಸಾಯಲಿರುವ ದುರ್ಯೋಧನನ ಬಳಿಗೆ ತೆರಳಿದ.

 

ದೃಷ್ಟ್ವಾ ತದುಕ್ತಂ ಚ ನಿಶಮ್ಯ ಪಾಪಸ್ತುಷ್ಟೋSತ್ಯಜತ್ ಸಾಧ್ವಿತಿ ದೇಹಮಾಶು ।

ಭೀಮಾರ್ಜ್ಜುನಾಭ್ಯಾಮಥ ಕೇಶವಾಚ್ಚ ಭೀತಾಃ ಪೃಥಗ್ ದ್ರೌಣಿಮುಖಾಃ ಪ್ರಯಾತಾಃ ॥೨೮.೧೫೪॥

 

ಪಾಪಿಷ್ಠನಾದ ದುರ್ಯೋಧನನು ಅಶ್ವತ್ಥಾಮಾಚಾರ್ಯರ ಮಾತನ್ನು ಕೇಳಿ, ದ್ರೌಪದಿಯ ಮಕ್ಕಳ ಕತ್ತರಿಸಿದ ತಲೆಗಳನ್ನು ನೋಡಿ, ಸಂತೃಪ್ತನಾಗಿ, ‘ಬಹಳ ಒಳ್ಳೆಯದಾಯಿತು’ ಎಂದು ಹೇಳಿ, ಕೂಡಲೇ ದೇಹವನ್ನು ಬಿಟ್ಟನು. ನಂತರ ಭೀಮಸೇನ ಮತ್ತು ಅರ್ಜುನರಿಂದ,  ಶ್ರೀಕೃಷ್ಣನಿಂದಲೂ ಕೂಡಾ ಭಯಗೊಂಡ ಕೃಪ, ಕೃತವರ್ಮ ಮತ್ತು ಅಶ್ವತ್ಥಾಮ,  ಮೂರು ಸೀಳಾಗಿ ಬೇರೆಬೇರೆ ಕಡೆಗೆ ಹೊರಟುಹೋದರು.

 

ತತ್ರೈಕಲಂ ದ್ರೋಣಸುತಂ ರಥೇನ ಯಾನ್ತಂ ರಥೀ ಮಾರುತಿರನ್ವಧಾವತ್ ।

ತಮಾದ್ರವನ್ತಂ ಪ್ರಸಮೀಕ್ಷ್ಯ ಭೀತಃ ಪರಾದ್ರವದ್ ದ್ರೌಣಿರತಿದ್ರುತಾಶ್ವೈಃ ॥೨೮.೧೫೫॥

 

ಆ ಮೂವರ ಮಧ್ಯದಲ್ಲಿ ರಥದಿಂದ ಹೊರಡುತ್ತಿರುವ, ಸಹಾಯರಹಿತನಾದ, ಒಬ್ಬನೇ ಅಶ್ವತ್ಥಾಮನನ್ನು, ರಥವನ್ನೇರಿದ ಭೀಮಸೇನನು ಅನುಸರಿಸಿದನು. ಹಿಂಬಾಲಿಸಿ ಬರುತ್ತಿರುವ ಭೀಮಸೇನನನ್ನು ನೋಡಿ, ಅಶ್ವತ್ಥಾಮನು ವೇಗದಿಂದ ಕೂಡಿದ ಕುದುರೆಗಳಿಂದ ಪಲಾಯನ ಮಾಡಿದನು.

 

ಆದ್ರವನ್ತಂ ಪುನರ್ದ್ದೃಷ್ಟ್ವಾ ಭೀಮಂ ದ್ರೋಣಾತ್ಮಜೋ ರುಷಾ ।

ಆವೃತ್ಯ ಯುದ್ಧ್ಯನ್ ವಿಜಿತೋSಸ್ತ್ರಂ ಬ್ರಹ್ಮಶಿರ ಆದದೇ ॥೨೮.೧೫೬॥

 

ಪುನಃ ಓಡಿಸಿಕೊಂಡು ಬರುತ್ತಿರುವ ಭೀಮಸೇನನನ್ನು ನೋಡಿ, ಅಶ್ವತ್ಥಾಮನು ಸಿಟ್ಟಿನಿಂದ ಹಿಂದೆ ತಿರುಗಿ, ಯುದ್ಧಮಾಡುತ್ತಾ,  ಭೀಮಸೇನನಿಂದ ಸೋತು ಬ್ರಹ್ಮಾಸ್ತ್ರವನ್ನು ತೆಗೆದುಕೊಂಡನು.

No comments:

Post a Comment