ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, July 6, 2023

Mahabharata Tatparya Nirnaya Kannada 28-43-49

 

ಏವಮಕ್ಷೋಹಿಣೀಷಟ್-ಕಂ ಭೀಮೇನ ನಿಹತಂ ರಣೇ ।

ಪಞ್ಚ ಪಾರ್ತ್ಥೇನ ನಿಹತಾ ಅರ್ದ್ಧಂ ಕಾಲಿಙ್ಗಕಾನೃತೇ ॥೨೮.೪೩॥

 

ಏಕಾದಶಾಕ್ಷೋಹಿಣೀಭ್ಯಃ ಶಿಷ್ಟಮನ್ಯೈರ್ನ್ನಿಸೂದಿತಮ್ ।

ಅಕ್ಷೋಹಿಣೀಚತುಷ್ಕಂ ಚ ಪಾರ್ತ್ಥಾನಾಂ ದ್ರೌಣಿನಾ ಹತಮ್ ॥೨೮.೪೪॥

 

ಅನ್ಯೈರನ್ಯಾಃ ಸಮಸ್ತೈಶ್ಚ ದ್ರೋಣಕರ್ಣ್ಣಮಹಾಬ್ರತಾಃ ।

ದುರ್ಯ್ಯೋಧನೋ ಭೌಮಸೂನುಃ ಪ್ರಾಯಃ ಸೇನಾಹನಃ ಕ್ರಮಾತ್  ॥೨೮.೪೫॥

 

ಈ ಪ್ರಕಾರವಾಗಿ ಭೀಮಸೇನನಿಂದ ಯುದ್ಧದಲ್ಲಿ ಆರು ಅಕ್ಷೋಹಿಣಿ ಸಂಹರಿಸಲ್ಪಟ್ಟಿತು. ಕಾಲಿಂಗ ದೇಶದವರನ್ನು ಬಿಟ್ಟು, ಅರ್ಜುನನಿಂದ ಕೌರವರ ಒಟ್ಟು ಸೈನ್ಯದ ಅರ್ಧಾಂಶ ಕೊಲ್ಲಲ್ಪಟ್ಟಿತು.

ಇನ್ನು ಕೌರವರ ಹನ್ನೊಂದು ಅಕ್ಷೋಹಿಣಿಯಲ್ಲಿ ಉಳಿದ ಭಾಗವನ್ನು ಉಳಿದ ಎಲ್ಲರೂ ಸೇರಿ ಕೊಂದರೆ,  ಪಾಂಡವರ ನಾಲ್ಕು ಅಕ್ಷೋಹಿಣಿ ಸೇನೆಯನ್ನು ಅಶ್ವತ್ಥಾಮ ಕೊಂದ. ಉಳಿದ ಮೂರು ಅಕ್ಷೋಹಿಣಿ ಸೇನೆ ಕ್ರಮವಾಗಿ ದ್ರೋಣ, ಕರ್ಣ, ದುರ್ಯೋಧನ, ಭಗದತ್ತರಿಂದ ಕೊಲ್ಲಲ್ಪಟ್ಟಿತು.    

[ಆರು ಅಕ್ಷೋಹಿಣಿ ಸೇನೆ ಎಂದರೆ: ೧,೩೧,೨೨೦ ರಥಗಳು, ಅಷ್ಟೇ ಗಜಗಳು,,೯೩,೬೬೦ ಕುದುರೆಗಳು, ೬,೫೬,೧೦೦ ಪದಾತಿಗಳು. ಹಾಗೆಯೇ ಐದು ಅಕ್ಷೋಹಿಣಿ ಸೇನೆ ಎಂದರೆ: ೧,೦೯,೩೫೦ ರಥಗಳು ಮತ್ತು ಅಷ್ಟೇ ಗಜಗಳು,,೨೮,೦೫೦ ಕುದುರೆಗಳು,,೪೬,೭೫೦ ಪದಾತಿಗಳು.  ಕೌರವ ಸೇನೆಯ ಹನ್ನೊಂದು ಅಕ್ಷೋಹಿಣಿ ಸೇನೆಯಲ್ಲಿ ಒಂದು ಅಕ್ಷೋಹಿಣಿ ಸೇನೆ ಕಾಲಿಂಗ ದೇಶದವರದ್ದಾಗಿತ್ತು. ಈ ಸೇನೆಯನ್ನು ಕೇವಲ ಭೀಮಸೇನ ಕೊಂದ. ಇನ್ನು ಉಳಿದ ಹತ್ತು ಅಕ್ಷೋಹಿಣಿ ಸೇನೆಯಲ್ಲಿ ಸಂಕೀರ್ಣವಾಗಿ ಐದು ಅಕ್ಷೋಹಿಣಿ ಸೇನೆಯನ್ನು ಭೀಮನೂ, ಐದು ಅಕ್ಷೋಹಿಣಿ ಸೇನೆಯನ್ನು ಅರ್ಜುನನೂ ಕೊಂದಿರುವುದು.  ಒಟ್ಟು ಸೇನೆ ಹನ್ನೊಂದು ಅಕ್ಷೋಹಿಣಿ ಅಷ್ಟೇ ಅಲ್ಲದೇ ಇನ್ನೂ ಸ್ವಲ್ಪ ಶೇಷ ಭಾಗವಿದ್ದು, ಅದನ್ನು  ಪಾಂಡವರ ಕಡೆಯ ಇತರ ಎಲ್ಲರೂ ಸೇರಿ ಕೊಂದಿರುವುದು]

 

ಜಯಂ ಲಬ್ಧ್ವಾ ನದತ್ಸೂಚ್ಚೈಃ ಪಾಣ್ಡವೇಷು ಮಹಾತ್ಮಸು ।

ದುರ್ಯ್ಯೋಧನೋ ಜಲಸ್ತಮ್ಭಂ ಕೃತ್ವಾ ಮನ್ತ್ರಾನ್ ಜಜಾಪ ಹ ॥೨೮.೪೬॥

 

ಹೀಗೆ ಗೆಲುವನ್ನು ಹೊಂದಿ, ಎಲ್ಲಾ ಪಾಂಡವರೂ ಕೂಡಾ ಗಟ್ಟಿಯಾಗಿ ಘರ್ಜಿಸುತ್ತಿರಲು, ದುರ್ಯೋಧನನು ಜಲಸ್ತಮ್ಭಾನ ಮಾಡಿಕೊಂಡು ಮಂತ್ರ ಜಪ ಮಾಡಲಾರಮ್ಭಿಸಿದ.

 

ಮನ್ತ್ರಾ ದುರ್ವಾಸಸಾ ದತ್ತಾ ಮೃತಸಞ್ಜೀವನಪ್ರದಾಃ ।

ಜಲೇ ಸ್ಥಿತ್ವಾ ಜಪನ್ ಸಪ್ತದಿನೈಃ ಸರ್ವಾನ್ ಮೃತಾನಪಿ ॥೨೮.೪೭॥

 

ಉದ್ಧರೇದ್ ಧಾರ್ತ್ತರಾಷ್ಟ್ರೋSಯಂ ಸ್ಯುರವದ್ಧ್ಯಾಶ್ಚ ತೇ ಪುನಃ ।

ಇತಿ ವಿದ್ಯಾಬಲಂ ತಸ್ಯ ಜ್ಞಾತ್ವಾ ಪಾಣ್ಡುಸುತಾಸ್ತತಃ ॥೨೮.೪೮॥

 

ಅನ್ವೇಷನ್ತಃ ಶುಶ್ರುವುಶ್ಚ ವ್ಯಾಧೇಭ್ಯಸ್ತಂ ಜಲೇ ಸ್ಥಿತಮ್ ।

ಅಗಚ್ಛಂಶ್ಚ ತತಸ್ತತ್ರ ಪುರಸ್ಕೃತ್ಯ ಜನಾರ್ದ್ದನಮ್ ॥೨೮.೪೯॥

 

ಅವನಿಗೆ ದುರ್ವಾಸರಿಂದ ಕೊಡಲ್ಪಟ್ಟ ಮಂತ್ರಗಳು ಸತ್ತವರನ್ನು ಬದುಕಿಸುವ ಶಕ್ತಿ ಉಳ್ಳವುಗಳಾಗಿದ್ದವು. ನೀರಿನಲ್ಲಿ ಇದ್ದು, ಏಳುದಿವಸಗಳ ಕಾಲ ಜಪಮಾಡುತ್ತಾ, ಈತನಕ ಸತ್ತ ಎಲ್ಲರನ್ನೂ ಕೂಡಾ ಅವನು ಬದುಕಿಸಬಹುದಿತ್ತು ಮತ್ತು ಹಾಗೆ ಬದುಕಿ ಬಂದವರನ್ನು ಅವಧ್ಯರನ್ನಾಗಿಯೂ ಮಾಡಬಹುದಿತ್ತು. ಈ ವಿದ್ಯಾಬಲ ದುರ್ಯೋಧನನಲ್ಲಿ ಇದೇ ಎಂದು ತಿಳಿದ ಪಾಂಡವರು ಅವನನ್ನು ಹುಡುಕುತ್ತಾ ತೆರಳಿದರು. ಆಗ ಕೆಲವು ಬೇಡರಿಂದ ‘ನೀರಿನಲ್ಲಿ ಅವನಿದ್ದಾನೆ’ ಎನ್ನುವುದನ್ನು ತಿಳಿದ ಪಾಂಡವರು ಕೃಷ್ಣನನ್ನು ಮುಂದೆ ಮಾಡಿಕೊಂಡು ಅವನಿದ್ದ ಸ್ಥಳಕ್ಕೆ ಬಂದರು.

[ದುರ್ಯೋಧನ ಈ ರೀತಿ ಮಂತ್ರ ಬಲದಿಂದ ಸತ್ತವರನ್ನು ಬದುಕಿಸಲು ಜಪಮಾಡುತ್ತಿದ್ದ ಎನ್ನುವುದನ್ನು ಮಹಾಭಾರತದಲ್ಲಿ ಸ್ಫುಟವಾಗಿ ಹೇಳಿಲ್ಲ. ಆದರೆ ಅದನ್ನು ನಾವು ಅರ್ಥಾಪತ್ತಿರೂಪವಾದ ಪ್ರಮಾಣದಿಂದ ಊಹಿಸಬೇಕಾಗುತ್ತದೆ. ಶಲ್ಯಪರ್ವದಲ್ಲಿ ‘ಅಸ್ತಂಭಯತ ತೋಯಂ ಚ ಮಾಯಯಾ ಮನುಜಾಧಿಪಃ’(೨೯.೪೪) ಎಂದು ಹೇಳಿದ್ದಾರೆ. ಇಲ್ಲಿ ಬಂದಿರುವ ‘ಮಾಯಯಾ’ ಎನ್ನುವ ಪದವನ್ನು ಆಚಾರ್ಯರು ‘ವಿದ್ಯಾಬಲ’ ಎಂದು ವ್ಯಾಖ್ಯಾನ ಮಾಡಿರುವುದನ್ನು ನಾವು ಕಾಣುತ್ತೇವೆ. ದುರ್ಯೋಧನ ತನ್ನ ಮಂತ್ರಬಲ ಅಥವಾ ವಿದ್ಯಾಬಲದಿಂದ ನೀರನ್ನು ಸ್ತಂಭನಗೊಳಿಸಿದ. ದುರ್ಯೋಧನನಲ್ಲಿ ಈರೀತಿಯ ಮಂತ್ರಬಲ ಇರುವುದನ್ನು ತಿಳಿದಿರುವ ಪಾಂಡವರು ಅದಕ್ಕಾಗಿಯೇ ಅವನನ್ನು ಹುಡುಕಿಕೊಂಡು ಹೋದರು]


No comments:

Post a Comment