ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, July 10, 2023

Mahabharata Tatparya Nirnaya Kannada 28-63-70

 

ಅಥಾSಹ ನಾರಾಯಣ ಆದಿದೇವೋ ಯುಧಿಷ್ಠಿರಂ ಕಷ್ಟಮಿದಂ ಕೃತಂ ತ್ವಯಾ ।

ನಹ್ಯೇಷ ರಾಜಾ ಗದಯಾ ರಣೇ ಚರನ್ ಶಕ್ಯೋ ವಿಜೇತುಂ ನಿಖಿಲೈಃ ಸುರಾಸುರೈಃ ॥೨೮.೬೩॥

 

ತದನಂತರ ಆದಿದೇವನಾದ,  ಶ್ರೀಕೃಷ್ಣರೂಪಿ ನಾರಾಯಣನು ಧರ್ಮರಾಜನನ್ನು ಕುರಿತು ಹೇಳಿದನು- ‘ನಿನ್ನಿಂದ ಬಹಳ ಕಷ್ಟಕರವಾದ ನಿರ್ಧಾರವು ತೆಗೆದುಕೊಳ್ಳಲ್ಪಟ್ಟಿತು. ಗದೆಯೊಂದಿಗೆ ಯುದ್ಧದಲ್ಲಿ ಸಂಚರಿಸುವ ಈ ದುರ್ಯೋಧನನನ್ನು  ಎಲ್ಲಾ ದೇವತೆಗಳು ಮತ್ತು ಅಸುರರು  ಕೂಡಾ ಗೆಲ್ಲಲು ಸಾಧ್ಯವಿಲ್ಲವಷ್ಟೇ.  

 

ಸ ನಿಶ್ಚಯಾದ್ ವಶ್ಚತುರೋ ನಿಹನ್ಯಾತ್ ಸಹಾರ್ಜ್ಜುನಾನ್ ಭೀಮಸೇನಃ ಕಥಞ್ಚಿತ್ ।

ಹನ್ತೈನಮಾಜೌ ನಹಿ ಭೀಮತುಲ್ಯೋ ಬಲೇ ಕ್ವಚಿದ್ ಧಾರ್ತ್ತರಾಷ್ಟ್ರಃ ಕೃತೀ ಚ ॥೨೮.೬೪॥

 

ದುರ್ಯೋಧನನು ನಿಶ್ಚಯವಾಗಿಯೂ ಅರ್ಜುನ ಸಹಿತರಾದ ನಿಮ್ಮ ನಾಲ್ಕೂ ಜನರನ್ನು ಕೊಲ್ಲಬಲ್ಲ. ಭೀಮಸೇನನಾದರೋ ಹೇಗೋ ಕಷ್ಟಪಟ್ಟು ಯುದ್ಧದಲ್ಲಿ ಅವನನ್ನು ಸಂಹರಿಸಬಲ್ಲ. ದುರ್ಯೋಧನನು ಬಲದಲ್ಲಿ ಭೀಮನಿಗೆ ಸಮಾನನಾದವನಲ್ಲ. ಆದರೆ ಗದಾಯುದ್ಧದಲ್ಲಿ ಜಾಣ(ಹೆಚ್ಚು ಅಭ್ಯಾಸ ದುರ್ಯೋಧನನಿಗಿದೆ)'

 

[ಮಹಾಭಾರತದಲ್ಲಿ ಈ ರೀತಿ ಹೇಳಿದ್ದಾರೆ: ‘ಬಲೀ ಭೀಮಃ ಸಮರ್ಥಶ್ಚ ಕೃತೀ ರಾಜಾ ಸುಯೋಧನಃ । ಬಲವಾನ್ ವಾ ಕೃತೀ ವೇತಿ ಕೃತೀ ರಾಜನ್ ವಿಶಿಷ್ಯತೇ’ (ಶಲ್ಯಪರ್ವ, ೩೩.೦೮). ಇದನ್ನು ಆಚಾರ್ಯರು  ವ್ಯಾಖ್ಯಾನ ಮಾಡುವಾಗ ಭೀಮನಿಗೆ ಅನ್ವಯಿಸಿ- ‘ಬಲೀ ಭೀಮಃ ಸಮರ್ಥಶ್ಚ’ ಎಂದೂ, ದುರ್ಯೋಧನಿಗೆ ಅನ್ವಯಿಸಿ ‘ರಾಜಾ ಸುಯೋಧನಃ ಕೃತೀ ಚ’ ಎಂದೂ ಹೇಳಿದ್ದಾರೆ].

 

[ಸಾಮಾನ್ಯವಾಗಿ ಜಾಣನೇ ಯುದ್ಧದಲ್ಲಿ ಮನ್ನಣೆಯನ್ನು ಪಡೆಯುತ್ತಾನೆ. ಕೃಷ್ಣ ಏಕೆ ಹೀಗೆ ಹೇಳಿದ ಎಂದರೆ-]

 

ಊರೂ ಭೀಮೇನ ಭೇತ್ತವ್ಯೌ ಪ್ರತಿಜ್ಞಾಂ ರಕ್ಷತಾ ರಿಪೋಃ ।

ನಾಭೇರಧಸ್ತಾದ್ಧನನಂ ಜನಾ ಆಹುರ್ಗ್ಗದಾಮೃಧೇ ॥೨೮.೬೫॥


ಅಧರ್ಮ್ಮ ಇತಿ ತತ್ ಕೃಷ್ಣೋ ಲೋಕನಿನ್ದಾನಿವೃತ್ತಯೇ ।

ಆಪದ್ಧರ್ಮಂ ದರ್ಶಯಿತುಂ ಕಿಞ್ಚಿದ್ ವ್ಯಾಜೇನ ಸಂಯುತಃ ॥೨೮.೬೬॥


ಪ್ರತಿಜ್ಞೆಯನ್ನು ರಕ್ಷಣೆ ಮಾಡುವ ಭೀಮಸೇನನಿಂದ ಶತ್ರುವಿನ ಎರಡು ತೊಡೆಗಳು ಭೇದಿಸಲ್ಪಡಬೇಕಾಗಿದೆ. ಜನರು ಗದಾಯುದ್ಧದಲ್ಲಿ ಹೊಕ್ಕುಳಿನಿಂದ ಕೆಳಗೆ ಹೊಡೆಯುವಿಕೆಯನ್ನು ಅಧರ್ಮ ಎಂದು ಹೇಳುತ್ತಾರೆ. 

ಈ ಅಭಿಪ್ರಾಯವನ್ನಿಟ್ಟುಕೊಂಡು ಕೃಷ್ಣನು, ಲೌಕಿಕರು ಭೀಮಸೇನನನ್ನು ನಿಂದನೆ ಮಾಡಬಾರದು ಎಂದೂ, ಮುಂದಿನ ಪೀಳಿಗೆಗೆ ಆಪದ್ಧರ್ಮ ತೋರಲು, ಸ್ವಲ್ಪ ಅಡ್ಡವಾದ ಮಾತುಗಳನ್ನಾಡಿದ.

 

[ಏಕೆ ಕೃಷ್ಣ ಹೀಗೆ ಮಾತನಾಡಿದ ಎನ್ನುವುದನ್ನು ವಿವರಿಸುತ್ತಾರೆ-]

 

ಭೀಮೋ ಹನ್ಯಾದ್ ಧಾರ್ತ್ತರಾಷ್ಟ್ರಮಿತ್ಯೂಚೇ ಯದ್ಯಪಿ ಸ್ಫುಟಮ್ ।

ಅವ್ಯಾಜೇನಾಪಿ ಶಕ್ತೋSಸೌ ಬಲಂ ನಿಸ್ಸೀಮಮಾಹ ಚ ॥೨೮.೬೭॥

 

ಆಪದ್ಧರ್ಮವನ್ನು ತೋರಲು ‘ಭೀಮಸೇನ ಹೇಗೋ ಯುದ್ಧದಲ್ಲಿ ದುರ್ಯೋಧನನನ್ನು ಕೊಲ್ಲಬಲ್ಲ’ ಎಂದು ಹೇಳಿದ ಶ್ರೀಕೃಷ್ಣ, ಭೀಮನ ಬಲವನ್ನು ನಿಶ್ಚಯವಾಗಿ  ‘ಬಲದಲ್ಲಿ ಭೀಮನಿಗೆ ಸಮನಾದವನು ಇಲ್ಲಾ ಎಂದೂ ಹೇಳಿದನು.

[‘ನ ತ್ವಂ ಭೀಮೋ ನ ನಕುಲಃ ಸಹದೇವೋSಥ ಫಲ್ಗುನಃ। ಜೇತುಂ ನ್ಯಾಯೇನ ಶಕ್ತೋ ವೈ ಕೃತೀ ರಾಜಾ ಸುಯೋಧನಃ’ [ಶಲ್ಯಪರ್ವ (೩೩.೧೩)]  ಇಲ್ಲಿ ‘ನೀವು ನ್ಯಾಯಮಾರ್ಗದಲ್ಲಿ ಯುದ್ಧಮಾಡಿದರೆ ದುರ್ಯೋಧನನನ್ನು ಗೆಲ್ಲಲು ಸಾಧ್ಯವಿಲ್ಲಾ’ ಎಂದು ಕೃಷ್ಣ ಹೇಳಿದ್ದಾನೆ. ಆಪತ್ತಿನಲ್ಲಿ ಧರ್ಮವನ್ನು ಮೀರಲು ಅವಕಾಶವಿದೆ, ಹೀಗಾಗಿ ಇದು ಆಪದ್ಧರ್ಮ ಎಂದೂ ಜನ ತಿಳಿಯಲಿ ಎಂದು ಶ್ರೀಕೃಷ್ಣ ಆರೀತಿ ಹೇಳಿದ.]

 

[ಶಲ್ಯಪರ್ವದಲ್ಲಿ(೩೩.೦೮) ‘ಬಲೀ ಭೀಮಃ ಸಮರ್ಥಶ್ಚ ಕೃತೀ ರಾಜಾ ಸುಯೋಧನಃ। ಬಲವಾನ್ ವಾ ಕೃತೀ ವೇತಿ ಕೃತೀ ರಾಜನ್ ವಿಶಿಷ್ಯತೇ’ ಎಂದು ಹೇಳಿದ್ದಾರೆ. ‘ಭೀಮಸೇನ ಬಲಿಷ್ಠ ಮತ್ತು ಸಮರ್ಥ. ದುರ್ಯೋಧನ ಅಭ್ಯಾಸ ಮಾಡಿದ್ದಾನೆ’ ಎನ್ನುವುದು ಈ ಮಾತಿನ ಒಂದು ಆಯಾಮವಾದರೆ,  ಈ ಮಾತಿನ ಇನ್ನೊಂದು ಬಾವವನ್ನೂ ಕೂಡಾ ನಾವು ಗ್ರಹಿಸಬೇಕು ಎನ್ನುವುದನ್ನು ಆಚಾರ್ಯರು ವಿವರಿಸುತ್ತಾರೆ:]

 

ಆಹ ಶಿಕ್ಷಾಮಪ್ಯನೂನಾಂ ಯತ್ನಂ ದುರ್ಯ್ಯೋಧನೇSಧಿಕಮ್ ।

ನಹಿ ಭೀಮೋSತಿಪ್ರಯತ್ನಂ ಕುರ್ಯ್ಯಾದಿತಿ ಗುಣೋ ಹ್ಯಯಮ್ ॥೨೮.೬೮॥

 

ದುರ್ಯೋಧನ ತುಂಬಾ ಪ್ರಯತ್ನಪಟ್ಟು ವಿಪರೀತ ಅಭ್ಯಾಸ ಮಾಡಿದ್ದಾನೆ. ಆದರೆ ಭೀಮಸೇನ ಅತಿಪ್ರಯತ್ನ ಮಾಡುತ್ತಿರಲಿಲ್ಲ. ಆದರೆ ಇದೂ ಭೀಮಸೇನನ ಗುಣವೇ ಆಗಿದೆ. (ದುರ್ಯೋಧನ ಪ್ರಯತ್ನದ ಅಭ್ಯಾಸದಿಂದ  ಭೀಮಸೇನನಿಗೆ  ಸಮನಾಗಲು ನಿರಂತರ ಪ್ರಯತ್ನಿಸುತ್ತಿದ್ದ,  ಆದರೆ ಗುಣದಿಂದಲೇ ಹೆಚ್ಚು ಅಭ್ಯಾಸ  ಮಾಡದೆಯೂ ಕೂಡಾ, ಭೀಮ ದುರ್ಯೋಧನನಿಗಿಂತ ಮಿಗಿಲಾಗಿದ್ದಾನೆ).

 

[ಈರೀತಿ ಸಾಮಾಜಿಕವಾಗಿ ಆಪದ್ಧರ್ಮ ಎನ್ನುವ ಸಂದೇಶ, ಯುದ್ಧತಂತ್ರದಲ್ಲಿ ಅತಿಪ್ರಯತ್ನವಿಲ್ಲದ ಭೀಮಸೇನನೇ ಮಿಗಿಲು ಎನ್ನುವ ಎರಡು ಸಂದೇಶವನ್ನು ಹೇಳಿ, ಮುಂದೆ ಅಧ್ಯಾತ್ಮದ ಮುಖವನ್ನು ವಿವರಿಸುತ್ತಾರೆ-]

 

 

ಪ್ರತಿಜ್ಞಾಪಾಲನಂ ಧರ್ಮ್ಮೋ ದುಷ್ಟೇಷು ತು ವಿಶೇಷತಃ ।

ಇತಿ ಧರ್ಮ್ಮರಹಸ್ಯಂ ತು ವಿತ್ತಃ ಕೃಷ್ಣವೃಕೋದರೌ ॥೨೮.೬೯॥

 

ನಾನ್ಯಸ್ತತೋ ಲೋಕನಿನ್ದಾಂ ವ್ಯಪನೇತುಮುಭಾವಪಿ ।

ಅನಾಪದ್ಯಾಪದಿವ ಚ ದರ್ಶಯೇತಾಂ  ಜನಸ್ಯ ತು ॥೨೮.೭೦॥

 

‘ವಿಶೇಷವಾಗಿ ದುಷ್ಟರಲ್ಲಿ ಪ್ರತಿಜ್ಞೆಯನ್ನು ಪಾಲನೆ ಮಾಡಬೇಕಾಗಿರುವುದೇ ಧರ್ಮ’ ಎನ್ನುವ ಈ ಅತ್ಯಂತ ಗುಹ್ಯಧರ್ಮವನ್ನು ಭೀಮಸೇನ ಹಾಗೂ ಶ್ರೀಕೃಷ್ಣ ತಿಳಿದಿದ್ದಾರೆ.

ಉಳಿದವರು ಈ ಧರ್ಮರಹಸ್ಯವನ್ನು ತಿಳಿದಿಲ್ಲ. ಆ ಕಾರಣದಿಂದ ಲೋಕದದೃಷ್ಟಿಯಲ್ಲಿ ನಿಂದೆ ಬರಬಾರದು ಎಂದೂ ಅವರು  ಆಪತ್ತು ಇಲ್ಲದಿದ್ದರೂ ಆಪತ್ತೋ ಎಂಬಂತೆ ಜನರಿಗೆ ತೋರಿದರು.

[ವಸ್ತುತಃ ಭೀಮನ ವಿಷಯದಲ್ಲಿ ಇದು ಆಪದ್ಧರ್ಮವಲ್ಲ. ಆಪದ್ಧರ್ಮ ಎನ್ನುವುದು  ಕೈಯಿಂದ ಮಾಡಲು ಸಾಧ್ಯವಿಲ್ಲದೇ ಇರುವ ವ್ಯಕ್ತಿಗೆ ಅನ್ವಯವಾಗುವಂತಹದ್ದು. ಹಾಗಾಗಿ ಅದು ಬಲದಲ್ಲಿ ಎತ್ತರದಲ್ಲಿರುವ ಭೀಮನಿಗೆ ಅನ್ವಯವಾಗುವುದಿಲ್ಲ. ಆದರೆ ಸಾಮಾಜಿಕವಾಗಿ ಧರ್ಮರಹಸ್ಯ ತಿಳಿಯದ ಜನರಿಗೆ ತಪ್ಪು ಸಂದೇಶ ಹೋಗಬಾರದು ಎಂದು ಶ್ರೀಕೃಷ್ಣ ಆಪದ್ಧರ್ಮದ ಕುರಿತೂ ಮಾತನಾಡಿದ].

No comments:

Post a Comment