ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, July 24, 2023

Mahabharata Tatparya Nirnaya Kannada 28-210-219

 

ತಸ್ಯಾಃ ಕ್ರೋಧಾಗ್ನಿನಿರ್ದ್ದಗ್ಧನಖಃ ಸ ಕುನಖೋSಭವತ್ ।

ವನ್ದಮಾನಂ ಪುನರ್ಭೀಮಮಾಹ ಸಾ ಕ್ರೋಧವಿಹ್ವಲಾ  ॥೨೮.೨೧೦॥

 

ಅಧರ್ಮ್ಮತಃ ಕಥಂ ಭೀಮ ಸುತಂ ಮೇ ತ್ವಂ ನಿಜಘ್ನಿವಾನ್ ।

ಇತ್ಯುಕ್ತೋSಸ್ಯಾಃ ಶಮಯಿತುಂ ಕ್ರೋಧಮಗ್ರೇ ವೃಕೋದರಃ ॥೨೮.೨೧೧॥

 

ಗಾಂಧಾರಿಯ ಕ್ರೋಧಾಗ್ನಿಯಿಂದ ಧರ್ಮರಾಜ ಸುಡಲ್ಪಟ್ಟ ಉಗುರುಳ್ಳವನಾದನು. ಆನಂತರ ತನಗೆ ನಮಿಸುವ ಭೀಮಸೇನನನ್ನು ಕುರಿತು ಸಿಟ್ಟಿನಿಂದ ಕಂಗೆಟ್ಟ ಗಾಂಧಾರಿಯು- ‘ಓ ಭೀಮಸೇನನೇ, ನನ್ನ ಮಗನನ್ನು ಹೇಗೆ ಅಧರ್ಮದಿಂದ ಕೊಂದೆ’ ಎಂದು ಕೇಳಿದಳು. ಈರೀತಿಯಾಗಿ ಕೇಳಲ್ಪಟ್ಟ ಭೀಮಸೇನನು, ಮೊದಲು ಅವಳ  ಕೋಪವನ್ನು ಸಮಾಧಾನಗೊಳಿಸಲು ಈರೀತಿ ಹೇಳುತ್ತಾನೆ-

 

ಪ್ರಾಹ ನ ಪ್ರಾಣಸನ್ದೇಹೇ ಪಾಪಂ ಸ್ಯಾತ್ ಪಾಪಿನೋ ವಧೇ ।

ಇತ್ಯುಕ್ತ್ವಾ ತಾಂ ಪುನಃ ಪ್ರಾಹ ಪ್ರತಿಜ್ಞಾಹಾನಿಮನ್ತರಾ ॥೨೮.೨೧೨॥

 

ನ ಮೇSಸ್ತಿ ಪ್ರಾಣಸನ್ದೇಹ ಇತಿ ಜಾನನ್ ವೃಕೋದರಃ ।

ಯಥಾಪ್ರತಿಜ್ಞಂ ಭ್ರಾತೃವ್ಯಾನ್ ರಣೇ ಮಮ ನಿಜಘ್ನುಷಃ  ॥೨೮.೨೧೩॥

 

ಕ್ವಾಧರ್ಮ್ಮಃ ಕ್ಷತ್ರಜಾತೇಸ್ತು ತದ್ಧಾನೌ ಜೀವಿತಂ ನಹಿ ।

ಪಾಪಾ ನ ಶುದ್ಧಧರ್ಮ್ಮೇಣ ಹನ್ತವ್ಯಾ ಇತಿ ಚ ಶ್ರುತಿಃ ॥೨೮.೨೧೪॥

 

‘ನಮ್ಮ ಪ್ರಾಣ ಉಳಿಯುತ್ತದೋ ಇಲ್ಲವೋ ಎನ್ನುವ ಸಂದೇಹ ಬಂದಾಗ ಪಾಪಿಗಳನ್ನು ಕೊಲ್ಲುವುದರಲ್ಲಿ ಪಾಪವಿಲ್ಲ’ [ಗಾಂಧಾರಿಯನ್ನು ಸಮಾಧಾನಗೊಳಿಸಲು ಭೀಮ ಹೇಳುವ ಈ ಮಾತನ್ನು ಮಹಾಭಾರತದ ಸ್ತ್ರೀಪರ್ವದಲ್ಲಿ(೧೪.೦೨) ಕಾಣಬಹುದು. ‘ಅಧರ್ಮೋ ಯದಿ ವಾ ಧರ್ಮಸ್ತ್ರಾಸಾತ್ ತತ್ರ ಮಯಾ ಕೃತಃ । ಆತ್ಮಾನಂ ತ್ರಾತುಕಾಮೇನ ತನ್ಮೇ ತ್ವಂ ಕ್ಷಂತುಮರ್ಹಸಿ’ – ‘ನನ್ನನ್ನು ಉಳಿಸಿಕೊಳ್ಳಲು ನಾನು ಹಾಗೆ ಮಾಡಿದೆ. ಹಾಗಾಗಿ ಇದರಲ್ಲಿ ಧರ್ಮದ ಹಾನಿ ಆಗಿಲ್ಲ’ ಎಂದಿದ್ದಾನೆ ಭೀಮಸೇನ. ಭೀಮನಿಗೆ  ಗಾಂಧಾರಿಯನ್ನು ಸಮಾಧಾನ ಮಾಡಬೇಕಿತ್ತು. ಕೇವಲ ಗಾಂಧಾರಿಯ ಕೋಪ ಶಮನಕ್ಕಾಗಿ ಭೀಮಸೇನ ಕೂಟದಿಂದ ಮೇಲ್ನೋಟದ ಅಭಿಪ್ರಾಯವನ್ನು ಮೊದಲು ಹೇಳಿದ. ತದನಂತರ ಅವನು ತನ್ನ ಮಾತಿನ ನಿಜವಾದ ಅಭಿಪ್ರಾಯವನ್ನು ಹೇಳುವುದನ್ನು ಕಾಣುತ್ತೇವೆ.] ದುರ್ಯೋಧನನ ತೊಡೆ ಮುರಿಯದೇ ಹೋಗಿದ್ದರೆ ತನ್ನ ಪ್ರತಿಜ್ಞೆ ಈಡೇರುವುದಿಲ್ಲ ಎನ್ನುವುದನ್ನು ಬಿಟ್ಟರೆ, ಅವನಿಗೆ ಪ್ರಾಣಸಂಶಯವಿರಲಿಲ್ಲ.  ಅದನ್ನು ಸ್ಪಷ್ಟಪಡಿಸುತ್ತಾ ಭೀಮಸೇನನು ಮುಂದುವರಿದು ಹೇಳುತ್ತಾನೆ- ‘ನನ್ನ ಪ್ರತಿಜ್ಞೆಗೆ ಅನುಗುಣವಾಗಿ ಹಿತಶತ್ರುಗಳನ್ನು (ಬಂಧುಗಳೇ ಆಗಿದ್ದು ದ್ವೇಷಮಾಡುವವರನ್ನು) ಯುದ್ಧದಲ್ಲಿ ಕೊಲ್ಲುವ, ಕ್ಷತ್ರಿಯನಾಗಿ ಹುಟ್ಟಿದ ನನಗೆ ಅಧರ್ಮ ಎಲ್ಲಿಂದ ಬಂತು? ಇಂತಹ ಧರ್ಮವನ್ನು ಕೈಬಿಟ್ಟರೆ ನಮ್ಮ ಜೀವನವೇ ನಾಶವಾಗುತ್ತದೆ. (ಇಲ್ಲಿ ‘ಪ್ರಾಣಸನ್ದೇಹ’ ಎನ್ನುವ ಪದದ ಒಳಾರ್ಥವನ್ನು ಭೀಮ ಹೇಳಿದ್ದಾನೆ.)

 

ಅನ್ಯವತ್ ಪಾಪಹನನಂ ಪಾಪಾಯೇತ್ಯಾಹ ಹಿ ಶ್ರುತಿಃ ।

ಅತೋSಸುರಾನ್ ನೈಕೃತಿಕಾನ್ ನಿಕೃತ್ಯಾ ಘ್ನನ್ತಿ ದೇವತಾಃ ॥೨೮.೨೧೫॥

 

‘ಪಾಪಿಗಳು ಶುದ್ಧಧರ್ಮದಿಂದ ಕೊಲ್ಲಲು ಯೋಗ್ಯರಾದವರಲ್ಲ ಎನ್ನುವುದು ವೇದವಾಣಿ. ಆ ಕಾರಣದಿಂದ ದೇವತೆಗಳು ಮೋಸಮಾಡುವವರಾದ ಅಸುರರನ್ನು ಮೋಸದಿಂದಲೇ ಕೊಲ್ಲುತ್ತಾರೆ. ಉಳಿದವರನ್ನು ಕೊಲ್ಲುವಂತೆ ಪಾಪಿಗಳನ್ನೂ ಕೊಲ್ಲುವುದು ಪಾಪ.’ 

 

‘ನಿಕೃತ್ಯಾ ನಿಕೃತಿಂ ಹನ್ಯಾನ್ನಿಕೃತ್ಯಾ ನೈವ ಧಾರ್ಮ್ಮಿಕಮ್’ ।

ಇತಿ ಶ್ರುತಿರ್ಹಿ ಪರಮಾ ಪಠ್ಯತೇ ಪೈಙ್ಗಿಭಿಃ ಸದಾ ॥೨೮.೨೧೬॥

 

‘ಮೋಸವನ್ನು ಮೋಸದಿಂದಲೇ ಹೊಡೆಯಬೇಕು. ಆದರೆ ಮೋಸದಿಂದ ಧಾರ್ಮಿಕರನ್ನು ಸಂಹರಿಸಬಾರದು ಎಂದು ಉತ್ಕೃಷ್ಟವಾದ ವೇದವು ಪೈಂಗಿ ಶಾಖೆಯನ್ನು ಅಭ್ಯಾಸ ಮಾಡುವವರಿಂದ ಯಾವಾಗಲೂ ಹೇಳಲ್ಪಡುತ್ತದೆ.’  

 

ಇತ್ಯುಕ್ತಾ ತಂ ಪುನಃ ಪ್ರಾಹ ಕಥಂ ತೇ ನರಶೋಣಿತಮ್ ।

ಪೀತಂ ನರೇಣೈವ ಸತಾ ನ ಪೀತಮಿತಿ ಸೋSಬ್ರವೀತ್ ॥೨೮.೨೧೭॥

 

ದನ್ತಾನ್ತರಂ ನ ಮೇ ಪ್ರಾಪ ಶೋಣಿತಂ ತತ್ ಸುತಸ್ಯ ತೇ ।

ಪ್ರತಿಜ್ಞಾಪಾಲನಾಯಾಪಿ ಪ್ರತಿಕರ್ತ್ತುಂ ಚ ತತ್ ಕೃತಮ್ ॥೨೮.೨೧೮॥

 

ಈರೀತಿಯಾಗಿ ಭೀಮಸೇನನಿಂದ ಹೇಳಲ್ಪಟ್ಟ ಗಾಂಧಾರಿ ಅವನನ್ನು ಮತ್ತೆ ಕೇಳಿದಳು. ‘ಮನುಷ್ಯ ರಕ್ತವು ಮನುಷ್ಯನಾಗಿಯೇ ಇರುವ, ಸಜ್ಜನನಾಗಿರುವ ನಿನ್ನಿಂದ ಹೇಗೆ ಕುಡಿಯಲ್ಪಟ್ಟಿತು’ ಎಂದು. ಆಗ ಭೀಮಸೇನ ಹೇಳುತ್ತಾನೆ- ‘ನಿನ್ನ ಮಗನ ರಕ್ತವು ನನ್ನ ಹಲ್ಲಿನ ಒಳಗೆ ಹೋಗಲೇ ಇಲ್ಲ. ಪ್ರತಿಜ್ಞೆಯನ್ನು ಪಾಲನೆ ಮಾಡಲು, ಸೇಡಿಗಾಗಿಯೂ ಹಾಗೆ ಮಾಡಿದೆ. ಹಾಗಾಗಿ ಆ ಬಗ್ಗೆ ಚಿಂತಿಸಬೇಡ.’

 

ಭೀಷಣಾಯ ಚ ಶತ್ರೂಣಾಂ ಪೀತವಚ್ಚ ಪ್ರದರ್ಶಿತಮ್ ।

ವೇದದೃಷ್ಟಶ್ಚ ಧರ್ಮ್ಮೋSಯಮತಿಪಾಪಜನಂ ಪ್ರತಿ ॥೨೮.೨೧೯॥

 

‘ಶತ್ರುಗಳನ್ನು ಭಯಗೊಳಿಸುವುದಕ್ಕಾಗಿ ರಕ್ತವನ್ನು ಕುಡಿದಂತೆ ತೋರಿಸಿದೆ. ಇದು ಅತ್ಯಂತ ಪಾಪಿಷ್ಠರನ್ನು ಕುರಿತು ಮಾಡಬೇಕಾದ, ವೇದದಲ್ಲೇ ಹೇಳಿದ ಧರ್ಮ.’ ಎನ್ನುತ್ತಾನೆ ಭೀಮಸೇನ.

[ಭೀಮಸೇನನ ಈ ಮಾತನ್ನು ನಾವು ಮಹಾಭಾರತದ ಸ್ತ್ರೀಪರ್ವದಲ್ಲಿ ಕಾಣಬಹುದು-‘ಶತ್ರೂಣಾಂ ತು ಪ್ರಹೃಷ್ಟಾನಾಂ ತ್ರಾಸಃ ಸಞ್ಜನಿತೋ ಮಯಾ । ಸ ಪ್ರತಿಜ್ಞಾಮಕರವಂ ಪಿಬಾಮ್ಯಸೃಗರೇರಿತಿ । ರುಧಿರಂ ನಾತಿಚಕ್ರಾಮ ದನ್ತೋಷ್ಠಾದಮ್ಬ ಮಾ ಶುಚಃ’ (೧೪.೧೫-೧೬) ‘ಮಾ ಕೃಥಾ ಹೃದಿ ತನ್ಮಾತರ್ನ ತತ್ ಪೀತಂ ಮಯಾSನಘೇ (೧೪.೧೮) ]

No comments:

Post a Comment