ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, July 3, 2023

Mahabharata Tatparya Nirnaya Kannada 28-26-32

ತತಸ್ತು ಶಲ್ಯಂ ಸಮುದೀರ್ಯ್ಯಮಾಣಂ ದೃಷ್ಟ್ವಾ ರಣೇ ಭೀಮಸೇನಸ್ತರಸ್ವೀ ।

ನ್ಯವಾರಯದ್ ಬಾಣವರೈರನೇಕೈಶ್ಚಕಾರ ಚೈನಂ ವಿರಥಂ ಕ್ಷಣೇನ ॥೨೮.೨೬॥

 

ತದನಂತರ ನುಗ್ಗುತ್ತಿರುವ ಶಲ್ಯನನ್ನು ಕಂಡ ಪರಾಕ್ರಮಿಯಾದ ಭೀಮಸೇನನು ಅನೇಕ ಬಾಣಗಳಿಂದ ಅವನನ್ನು ತಡೆದನು. ಶಲ್ಯನನ್ನು ಭೀಮಸೇನ ಕ್ಷಣದಲ್ಲಿ ರಥಹೀನನನ್ನಾಗಿ ಮಾಡಿದನು.  

 

ಆಸ್ಥಾಯ ಚಾನ್ಯಂ ರಥಮಾಪತನ್ತಂ ಪುನಶ್ಚ ಶಲ್ಯಂ ಭೃಶಮೇವ ಮರ್ಮ್ಮಸು ।

ನಿರ್ಭಿದ್ಯ ಬಾಣೈರ್ವಿರಥಂ ಚಕಾರ ಪುನಸ್ತೃತೀಯಂ ಚ ರಥಂ ರುರೋಜ ॥೨೮.೨೭॥

 

ಪುನಃ ಇನ್ನೊಂದು ರಥವನ್ನೇರಿ ಬರುತ್ತಿರುವ ಶಲ್ಯನ ಮರ್ಮಸ್ಥಾನದಲ್ಲಿ ಬಾಣಗಳಿಂದ ಹೊಡೆದ ಭೀಮಸೇನ, ಮತ್ತೆ ಅವನನ್ನು ರಥಹೀನನನ್ನಾಗಿ ಮಾಡಿದನು. ಹೀಗೆ ಪುನಃ ರಥವನ್ನೇರಿ ಬಂದ ಶಲ್ಯನ ಮೂರನೆಯ ರಥವನ್ನು ಕೂಡಾ ಭೀಮಸೇನ ನಾಶಮಾಡಿದನು.

 

ಆತ್ತಾನ್ಯಾತ್ತಾನ್ಯಾಯುಧಾನ್ಯಸ್ಯ ಭೀಮಃ ಸರ್ವಾಣಿ ಚಿಚ್ಛೇದ ಬಿಭೇದ ಚಾಸ್ಯ।

ಮರ್ಮ್ಮಾಣಿ ಬಾಣೈರ್ನ್ನಿತರಾಂ ಪುನಶ್ಚ ಸ ಮುಷ್ಟಿಮುದ್ಯಮ್ಯ ಜಗಾಮ ಧರ್ಮ್ಮಜಮ್ ॥೨೮.೨೮॥

 

ಶಲ್ಯ ಆಯುಧವನ್ನು ತೆಗೆದುಕೊಂಡಾಗಲೆಲ್ಲಾ ಭೀಮಸೇನನು ಅವನ ಎಲ್ಲಾ ಆಯುಧಗಳನ್ನು ಕತ್ತರಿಸಿ,  ಅವನ ಮರ್ಮಸ್ಥಾನಗಳನ್ನು ಬಾಣಗಳಿಂದ ಸೀಳಿದನು. ಶಲ್ಯನು ಬೇರೆ ದಾರಿ ಕಾಣದೇ ಕೈಯನ್ನು ಎತ್ತಿಕೊಂಡು(ಮುಷ್ಟಿಕಟ್ಟಿಕೊಂಡು) ಧರ್ಮರಾಜನನ್ನು ಮುಷ್ಟಿಯಿಂದಲೇ ಕೊಲ್ಲುತ್ತೇನೆಂದು ಅವನನ್ನು ಕುರಿತು ಹೋದನು.

 

ತಂ ಭೀಮಭಿನ್ನಮರ್ಮ್ಮಾಣಂ ವಿವರ್ಮ್ಮಾಣಂ ನಿರಾಯುಧಮ್ ।

ಶ್ವಾಸಮಾತ್ರಾವಶಿಷ್ಟಂ ಚ ಮರಣಾಯೈವ ಕೇವಲಮ್ ॥೨೮.೨೯॥

 

ಆತ್ಮಾನಮಭಿಗಚ್ಛನ್ತಂ ದೃಷ್ಟ್ವಾSನ್ಯಂ ರಥಮಾಸ್ಥಿತಃ ।

ಹನ್ತುಕಾಮೋ ರಣೇ ವೀರಮಮೋಘಾಂ ಶಕ್ತಿಮಾದದೇ ॥೨೮.೩೦॥

 

ಭೀಮಸೇನನಿಂದ ಭೇದಿಸಲ್ಪಟ್ಟ ಮರ್ಮಸ್ಥಾನಗಳುಳ್ಳ, ಕವಚರಹಿತನಾದ, ನಿರಾಯುಧನಾದ, ಉಸಿರು ಮಾತ್ರ ಉಳಿದಿರುವ, ಕೇವಲ ಸಾಯಬೇಕೆಂದು ತನ್ನನ್ನು ಕುರಿತು ಬರುತ್ತಿರುವ ಶಲ್ಯನನ್ನು ಕಂಡು, ಇನ್ನೊಂದು ರಥವನ್ನೇರಿದ ಧರ್ಮರಾಜನು, ವೀರಗ್ರೇಸರ ಶಲ್ಯನನ್ನು ಕೊಲ್ಲಬೇಕೆಂದು ಬಯಸಿ, ಎಂದೂ ವ್ಯರ್ಥವಾಗದ ಶಕ್ತ್ಯಾಯುಧವನ್ನು(ಈಟಿಯನ್ನು) ತೆಗೆದುಕೊಂಡ.

 

ದಿವ್ಯಾಸ್ತ್ರೈರಪಿ ಸಂಯೋಜ್ಯ ತಾಂ ತದಾ ಧರ್ಮ್ಮನನ್ದನಃ ।

ಸತ್ಯಧರ್ಮ್ಮಫಲೈಶ್ಚೈವ ಚಿಕ್ಷೇಪಾಸ್ಯ ಹೃದಿ ತ್ವರನ್ ॥೨೮.೩೧॥

 

ಧರ್ಮರಾಜನು ಆ ಶಕ್ತಿಯನ್ನು ಶ್ರೇಷ್ಠವಾದ ಅಸ್ತ್ರ ಮಂತ್ರಗಳಿಂದ ಅಭಿಮಂತ್ರಣಮಾಡಿ, ಸತ್ಯದಿಂದಲೂ, ಧರ್ಮದಿಂದಲ್ಲೂ,  ಅವುಗಳ ಪುಣ್ಯಗಳಿಂದಲೂ ಕೂಡಿಸಿ (‘ನಾನು ಸತ್ಯವನ್ನು ನುಡಿದದ್ದೇ ಆದರೆ, ಇಲ್ಲಿಯ ತನಕ ಧರ್ಮವನ್ನು ಮಾಡಿದ್ದೇ ಆದರೆ, ಈ ಅಸ್ತ್ರವು ಶಲ್ಯನನ್ನು ಕೊಲ್ಲಲಿ’ ಎನ್ನುವ ಫಲದಿಂದ ಈಟಿಯನ್ನು  ಅಭಿಮಂತ್ರಣ ಮಾಡಿ) ಶಲ್ಯನ ಹೃದಯದಲ್ಲಿ ಶೀಘ್ರದಲ್ಲಿ ಎಸೆದನು.   

 

ಸ ಭಿನ್ನಹೃದಯೋ ಭೂಮೌ ಪಪಾತಾಭಿಮುಖೋ ನೃಪಮ್ ।

ಸತ್ಯಧರ್ಮ್ಮರತಃ ಶಲ್ಯ ಇನ್ದ್ರಸ್ಯಾತಿಥಿತಾಮಗಾತ್ ॥೨೮.೩೨॥

 

ಆ ಶಲ್ಯನು ಸೀಳಲ್ಪಟ್ಟ ಎದೆಯುಳ್ಳವನಾಗಿ,  ಧರ್ಮರಾಜನಿಗೆ ಅಭಿಮುಖವಾಗಿ ಭೂಮಿಯಲ್ಲಿ ಬಿದ್ದನು. ಹೀಗೆ ಸತ್ಯ-ಧರ್ಮದಲ್ಲಿ ರಥನಾಗಿರುವ ಶಲ್ಯನು ಇಂದ್ರನ ಅತಿಥಿಯಾದನು(ಇಂದ್ರಲೋಕವನ್ನು ಹೊಂದಿದನು). 

No comments:

Post a Comment